Wednesday, July 8, 2020

ಪಾಕ್ ಹೊಸ ರಾಗ: ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಜಾಧವ್ ನಿರಾಕರಿಸಿದ್ದಾರಂತೆ…!

ಪಾಕ್ ಹೊಸ ರಾಗ: ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಜಾಧವ್ ನಿರಾಕರಿಸಿದ್ದಾರಂತೆ…!

ಇಸ್ಲಾಮಾಬಾದ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ತೀರ್ಪಿನ ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಮತ್ತು ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ 2020 ಜುಲೈ 8ರ ಬುಧವಾರ ಹೇಳಿತು.

ತೀರ್ಪಿನ ಪುನರ್ ಪರಿಶೀಲನೆಗೆ ಮನವಿ ಮಾಡಿ ಅರ್ಜಿ ಸಲ್ಲಿಸಲು ಜೂನ್ ೧೭ರಂದು ಕುಲಭೂಷಣ್ ಜಾಧವ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದ್ದಾರೆಎಂದು ಹೆಚ್ಚುವರಿ ಅಟಾರ್ನಿ ಜನರಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿತು.

೨೦೧೭ರ ಏಪ್ರಿಲ್ ೧೭ರಂದು ಸಲ್ಲಿಸಲಾಗಿರುವ, ಇನ್ನೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರೆಸಲು ಜಾಧವ್ ಒಲವು ತೋರಿದ್ದಾರೆ. ಜಾಧವ್ ಅವರಿಗೆ ರಾಜತಾಂತ್ರಿಕ ನೆರವು ಒದಗಿಸಲು ಪಾಕಿಸ್ತಾನ ಸರ್ಕಾರವು ಎರಡನೇ ಬಾರಿಗೆ ಭಾರತಕ್ಕೆ ಅವಕಾಶ ನೀಡಲಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ಪಾಕಿಸ್ತಾನದ ಪ್ರಕಾರ, ೨೦೧೬ರ ಮಾರ್ಚ್ ೩ರಂದು ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಅವರಿಗೆ ೨೦೧೭ರ ಏಪಿಲ್ ತಿಂಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ೨೦೧೭ರ ಮೇ ತಿಂಗಳಲ್ಲಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿತ್ತು.

ಅಂತಾರಾಷ್ಟ್ರೀಯ ನ್ಯಾಯಾಲಯವು ಕಳೆದ ವರ್ಷ ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ, ಜಾಧವ್ ಅವರಿಗೆ  ರಾಜತಾಂತ್ರಿಕ ನೆರವು ಒದಗಿಸಲು ಭಾರತಕ್ಕೆ ಅವಕಾಶ ನೀಡುವಂತೆಯೂ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಿತ್ತು.

ಭಾರತಕ್ಕೆ ನೀಡಲಾಗಿದ್ದ ಮೊದಲ ಸುತ್ತಿನ ರಾಜತಾಂತ್ರಿಕ ನೆರವಿನ ಸಂದರ್ಭದಲ್ಲಿ ಜಾಧವ್ ಅವರು ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿಯಾದರು ಮತ್ತು ಈಗ ನಾವು ಅವರ ತಂದೆ ಮತ್ತು ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಿದ್ದೇವೆಎಂದು ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಮಹಾನಿರ್ದೇಶP ಜಾಹಿದ್ ಹಫೀಜ್ ಚೌಧರಿ  ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಇರ್ಫಾನ್, ಪಾಕಿಸ್ತಾನವು ವರ್ಷದ ಮೇ ತಿಂಗಳಲ್ಲಿ ೨೦೨೦ ಅಂತಾರಾಷ್ಟ್ರೀಯ ನ್ಯಾಯ ವಿಮರ್ಶೆ ಮತ್ತು ಪುನರ್ವಿಮರ್ಶೆ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದ್ದು, ಇದು ಒಂದು ನಿರ್ದಿಷ್ಟ ಅವಧಿಯೊಳಗೆ ಪುನರ್ ಪರಿಶೀಲನಾ ಅರ್ಜಿಗಳಿಗೆ ಅನುಮತಿ ನೀಡುತ್ತದೆಎಂದು ಹೇಳಿದರು.

"ಅರ್ಜಿಗಳನ್ನು ಇಸ್ಲಾಮಾಬಾದ್ ಹೈಕೋರ್ಟ್ ಮುಂದೆ ಸಲ್ಲಿಸಬಹುದು" ಎಂದು ಇರ್ಫಾನ್ ವಿವರಿಸಿದರು.ಇದನ್ನು ಸ್ವತಃ ಜಾಧವ್ ಅಥವಾ ನಿಯೋಜಿತ ಪ್ರತಿನಿದಿ ಇಲ್ಲವೇ ಭಾರತೀಯ ಹೈಕಮಿಷನ್ ಕಾನ್ಸುಲರ್ ಅಧಿಕಾರಿ ಸಲ್ಲಿಸಬಹುದು ಎಂದು ಇರ್ಫಾನ್ ನುಡಿದರು.

"ಜೂನ್ ೧೭ ರಂದು ನಾವು ಜಾಧವ್ ಅವರ ಅಪರಾಧವನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ಆಹ್ವಾನಿಸಿದ್ದೆವು ಮತ್ತು ಅವರಿಗೆ ಕಾನೂನು ಪ್ರಾತಿನಿಧ್ಯವನ್ನು ನೀಡಿದ್ದೆವು. ಆದರೆ ಅವರು ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದರು ಮತ್ತು ಬಾಕಿ ಇರುವ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಅನುಸರಿಸಲು ಆದ್ಯತೆ ನೀಡಿದರು" ಎಂದು ಇರ್ಫಾನ್ ಹೇಳಿದರು.

ಅರ್ಜಿಯನ್ನು ಸಲ್ಲಿಸಲು ಮತ್ತು ಗಡುವಿನ ಮೊದಲು ಪುನರ್ ಪರಿಶೀಲನೆಗಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಭಾರತೀಯ ಹೈಕಮಿಷನ್ಗೆ ಸರ್ಕಾರ ಪದೇ ಪದೇ ಪತ್ರ ಬರೆದಿದೆ ಎಂದು ಅವರು ಹೇಳಿದರು.

"ಪಾಕಿಸ್ತಾನವು ತನ್ನ ಅಂತಾರಾಷ್ಟ್ರೀಯ ಕಟ್ಟುಪಾಡುಗಳನ್ನು ಸಂಪೂರ್ಣವಾಗಿ ಅರಿತುಕೊಂಡಿದೆ ಮತ್ತು ಐಸಿಜೆ ತೀರ್ಪನ್ನು ಅಕ್ಷರಶಃ ಪಾಲಿಸಲು ಬದ್ಧವಾಗಿದೆ" ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಜಾರಿ ನಿಟ್ಟಿನಲ್ಲಿ ಭಾರತವು ಸೂಕ್ತ ಕಾನೂನು ಕ್ರಮವನ್ನು ಅನುಸರಿಸುತ್ತದೆ ಪಾಕಿಸ್ತಾನದ ನ್ಯಾಯಾಲಯಗಳೊಂದಿಗೆ ಸಹಕರಿಸುತ್ತದೆ ಎಂದು ತಾವು ಹಾರೈಸುವುದಾಗಿ ಅವರು ನುಡಿದರು.

ಜಾಧವ್ ವಿರುದ್ಧದ ಆರೋಪಗಳನ್ನು ಭಾರತ ತಿರಸ್ಕರಿಸಿದೆ ಮತ್ತು ಅವರು ವ್ಯವಹಾರ ನಡೆಸುತ್ತಿದ್ದ ಇರಾನಿನ ಚಬಹಾರ್ ಬಂದರಿನಿಂದ ಪಾಕಿಸ್ತಾನಿ ಅಧಿಕಾರಿಗಳು ಅವರನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿದೆ.

ಜುಲೈ ೧೭ರ ತೀರ್ಪಿನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಅವರಿಗೆ ವಿಧಿಸಲಾದ ಮರಣದಂಡನೆ ಜಾರಿ ವಿರುದ್ಧ ತಾನು ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.

No comments:

Advertisement