Monday, August 10, 2020

ಪ್ರವಾಹ: ಕೇಂದ್ರ - ರಾಜ್ಯ ಇಲಾಖಾ ಸಮನ್ವಯಕ್ಕೆ ಪ್ರಧಾನಿ ಮೋದಿ ಕರೆ

 ಪ್ರವಾಹ: ಕೇಂದ್ರ - ರಾಜ್ಯ ಇಲಾಖಾ ಸಮನ್ವಯಕ್ಕೆ
ಪ್ರಧಾನಿ ಮೋದಿ ಕರೆ

ನವದೆಹಲಿ: ಪ್ರವಾಹ ಮುನ್ಸೂಚನೆ ನೀಡುವ ಶಾಶ್ವತ ವ್ಯವಸ್ಥೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯಗಳ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯ ಇದೆ ಮತ್ತು ಪ್ರವಾಹ ಮುನ್ಸೂಚನೆ ಮತ್ತು ಎಚ್ಚರಿಕೆ ವ್ಯವಸ್ಥೆ ಸುಧಾರಿಸಲು ನವೀನ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 10ರ ಸೋಮವಾರ ಸೂಚನೆ ನೀಡಿದರು.

ಪ್ರವಾಹದಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದ ಮುಖ್ಯಮಂತ್ರಿಗಳ ಜೊತೆಗೆ ಆನ್‌ಲೈನ್ ಮೂಲಕ ಪ್ರಧಾನಿ ವರ್ಚುವಲ್ ಸಭೆ ನಡೆಸಿದರು.

ಪ್ರಸ್ತುತ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಭಾರಿ ಮಳೆ ಮುನ್ಸೂಚನೆ ಹಾಗೂ ಅನಾಹುತದ ಎಚ್ಚರಿಕೆಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಮೋದಿ ಸೂಚಿಸಿದರು ಎಂದು ಪ್ರಧಾನಿಯವರ ಕಚೇರಿ ಪ್ರಕಟಣೆ ತಿಳಿಸಿತು.

ಸಿಡಿಲು, ಪ್ರವಾಹದಂತಹ ಸಂದರ್ಭದಲ್ಲಿ ಒಂದು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲು ಬೇಕಾಗುವಂತಹ ವ್ಯವಸ್ಥೆ ನಿರ್ಮಾಣಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ಕೋವಿಡ್-೧೯ ಪಿಡುಗಿನ ಕಾರಣ, ರಕ್ಷಣಾ ಚಟುವಟಿಕೆಯ ಸಂದರ್ಭದಲ್ಲೂ ಎಲ್ಲರೂ ಮುಖಗವಸು, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆಯೂ ರಾಜ್ಯಗಳು ಎಚ್ಚರಿಕೆ ವಹಿಸಬೇಕುಎಂದು ಪ್ರಧಾನಿ ನುಡಿದರು.

ಸಂತ್ರಸ್ತರಿಗೆ ನೀಡುವ ಪರಿಹಾರ ವಸ್ತುಗಳಲ್ಲಿ ಮುಖಗವಸು, ಸ್ಯಾನಿಟೈಸರ್ ಹಾಗೂ ಹ್ಯಾಂಡ್‌ವಾಶ್‌ಗಳೂ ಇರಬೇಕು. ಹಿರಿಯರಿಗೆ, ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ರೂಪಿಸಬೇಕುಎಂದು ಪ್ರಧಾನಿ ನುಡಿದರು.

ಕೊರೋನಾ ಪಿಡುಗು ಇಲ್ಲದೇ ಹೋಗಿದ್ದರೆ, ನೆರೆ ಸಂಕಷ್ಟಕ್ಕೆ ಈಡಾದ ಎಲ್ಲ ರಾಜ್ಯಗಳಿಗೂ ತಾವು ಖುದ್ದಾಗಿ ಭೇಟಿ ನೀಡುತ್ತಿದ್ದೆ ಎಂದು ಮೋದಿ ಸಭೆಯಲ್ಲಿ ಉಲ್ಲೇಖಿಸಿದರು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಿಳಿಸಿದರು.

ನೇಪಾಳದ ವಿರುದ್ಧ ಅಸಮಾಧಾನ: ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಪಾಳದ ವಿರುದ್ಧ ಅಸಮಾಧಾನ ಸೂಚಿಸಿದರು.

ನೇಪಾಳದಲ್ಲಿ ಉಗಮವಾಗುವ ಕೆಲ ನದಿಗಳಿಗೆ ಅಣೆಕಟ್ಟಿನಿಂದ ಹೆಚ್ಚಿನ ನೀರು ಹರಿಸಿದ ಕಾರಣ ಬಿಹಾರದ ನೂರಾರು ಹಳ್ಳಿಗಳು ಪ್ರವಾಹದಿಂದ ಮುಳುಗಡೆಯಾಗಿವೆ. ‘ಕಳೆದ ಕೆಲ ವರ್ಷದಿಂದ ನೇಪಾಳದ ಪೂರ್ಣ ಸಹಕಾರ ಬಿಹಾರದ ಅಧಿಕಾರಿಗಳಿಗೆ ದೊರೆಯುತ್ತಿಲ್ಲ. ತತ್‌ಕ್ಷಣವೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕುಎಂದು ನಿತೀಶ್ ಒತ್ತಾಯಿಸಿದರು.  

ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ರಕ್ಷಣಾ ಪ್ರಯತ್ನಗಳ ಕುರಿತು ಪ್ರಧಾನಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರಕ್ಷಣಾ ಸಚಿವ, ಆರೋಗ್ಯ ಸಚಿವ, ಗೃಹ ವ್ಯವಹಾರಗಳ ರಾಜ್ಯ ಸಚಿವರು ಮತ್ತು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು ಮತ್ತು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಉತ್ತಮವಾಗಿ ಪ್ರವಾಹ ಮುನ್ಸೂಚನೆ ನೀಡುವ ಪ್ರಯತ್ನವನ್ನು ಏಜೆನ್ಸಿಗಳಾದ ಭಾರತ ಹವಾಮಾನ ಇಲಾಖೆ (ಐಎಂಡಿ) ಮತ್ತು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ನೀಡುತ್ತಿವೆ ಎಂದು ಪ್ರಧಾನಿ ಹೇಳಿದ್ದು, ಮಳೆ ಮತ್ತು ನದಿ ಮಟ್ಟದ ಮುನ್ಸೂಚನೆ ಮಾತ್ರವಲ್ಲದೆ ಪ್ರವಾಹದ ಸ್ಥಳ, ನಿರ್ದಿಷ್ಟ ಮುನ್ಸೂಚನೆಯನ್ನು ಸಹ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯಗಳು ನೀಡಿದ ಸಲಹೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿವಿಧ ವಿಪತ್ತುಗಳನ್ನು ಎದುರಿಸುವಲ್ಲಿ ರಾಜ್ಯ ರ್ಕಾರಗಳಿಗೆ ತನ್ನ ಬೆಂಬಲ ನೀಡುವುದನ್ನು ಕೇಂದ್ರವು ಮುಂದುವರಿಸುವುದಾಗಿ ಭರವಸೆ ನೀಡಿದರು.

No comments:

Advertisement