Monday, August 10, 2020

ಅಶೋಕ ಗೆಹ್ಲೋಟ್ ಪರ ಸಚಿನ್, ಬೆಂಬಲಿಗರ ಮತ?

 ಅಶೋಕ ಗೆಹ್ಲೋಟ್  ಪರ ಸಚಿನ್, ಬೆಂಬಲಿಗರ ಮತ?

ಪ್ರಿಯಾಂಕಾಗೆ ಫೋನ್, ಅಂತಿಮಸೂತ್ರ ಸೋನಿಯಾ ಕೈಯಲ್ಲಿ

ನವದೆಹಲಿ: ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಆಗಸ್ಟ್ ೧೪ ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಮೂಲಗಳ ಪ್ರಕಾರ, ಪೈಲಟ್ ಅವರು ಕಾಂಗ್ರೆಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವರಿಷ್ಠ ಮಂಡಳಿಯು ಬಂಡಾಯ ನಾಯಕನಿಗೆ ಭರವಸೆ ನೀಡಿದೆ ಮತ್ತು ಅಶೋಕ ಗೆಹ್ಲೋಟ್ ಶಿಬಿರಕ್ಕೆ ಅವರ ಬೆಂಬಲವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು "ಸಮನ್ವಯದ ಅಂತಿಮ ಸೂತ್ರ" ವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ಅಶೋಕ ಗೆಹ್ಲೋಟ್ ವಿರುದ್ಧ ಬಹಿರಂಗ ಬಂಡಾಯ ಘೋಷಿಸಿ, ೧೮ ಶಾಸಕರೊಂದಿಗೆ ತಮ್ಮ ಸರ್ಕಾರದ ಕೈಬಿಟ್ಟ ಪೈಲಟ್, ಕಳೆದ ತಿಂಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗದ ಕಾರಣ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದರು.

ಪೈಲಟ್ ಶಿಬಿರದಲ್ಲಿ ಇದ್ದ ಇತರ ಇಬ್ಬರು ಮಂತ್ರಿಗಳನ್ನೂ ಕ್ಯಾಬಿನೆಟ್‌ನಿಂದ ಕೈಬಿಡಲಾಯಿತು. ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷರಾಗಿ ಗೋವಿಂದ್ ಸಿಂಗ್ ದೋಟಾಸರ ಅವರನ್ನು ಕಾಂಗ್ರೆಸ್ ನೇಮಿಸಿತು.

ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಂಚು ಆಪಾದನೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ತಮಗೆ ಕಳುಹಿಸಿದ ನೋಟಿಸ್ ಬಗ್ಗೆ ಪೈಲಟ್ ತೀವ್ರ ಅಸಮಾಧಾನಗೊಂಡಿದ್ದರು ಎಂದು ಸಚಿನ್ ಬೆಂಬಲಿಗರು ಹೇಳಿದ್ದರು.

ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಕಾಲಾವಕಾಶ ನೀಡುವಂತೆ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸಚಿನ್ ಅವರಿಗೆ ನೋಟಿಸ್ ಕಳಿಸಿತ್ತು.

ಅದೇ ನೋಟಿಸುಗಳನ್ನು ಮುಖ್ಯಮಂತ್ರಿ ಗೆಹ್ಲೋಟ್, ಸರ್ಕಾರಿ ಮುಖ್ಯ ಸಚೇತಕ ಮಹೇಶ್ ಜೋಶಿ ಮತ್ತು ಇತರ ಕೆಲವು ಶಾಸಕರಿಗೆ ಕಳುಹಿಸಲಾಗಿತ್ತು. ಆದರೆ ಪೈಲಟ್ ಅವರನ್ನು ಅವಮಾನಿಸುವುದಕ್ಕಾಗಿಯೇ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಚಿನ್ ಪೈಲಟ್ ಆಪ್ತರು ದೂರಿದ್ದರು.

No comments:

Advertisement