Monday, August 17, 2020

ಬಾರಾಮುಲ್ಲಾ: ಇಬ್ಬರು ಭಯೋತ್ಪಾದಕರ ಬೇಟೆ

 ಬಾರಾಮುಲ್ಲಾ: ಇಬ್ಬರು ಭಯೋತ್ಪಾದಕರ ಬೇಟೆ

ಭದ್ರತಾ ಪಡೆಗಳ ಮೇಲಿನ ದಾಳಿಗೆ ಪ್ರತೀಕಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು 2020 ಆಗಸ್ಟ್ 17ರ ಸೋಮವಾರ ಬೇಟೆಯಾಡಿ ಯೋಧರ ಮೇಲಿನ ದಾಳಿಯ ಸೇಡು ತೀರಿಸಿಕೊಂಡವು.

ಬಾರಾಮುಲ್ಲಾ ಜಿಲ್ಲೆಯ  ಕ್ರೀರಿ ಪ್ರದೇಶದಲ್ಲಿ ಸೋಮವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಸೈನಿಕರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮೇಲೆ ದಾಳಿ ನಡೆಸಿ ಅವರನ್ನು ಹುತಾತ್ಮರನ್ನಾಗಿಸಿದ ಬೆನ್ನಲ್ಲೇ ತನ್ನ ಕಾರ್‍ಯಾಚರಣೆಯನ್ನು ತ್ವರಿತಗೊಳಿಸಿದ ಭದ್ರತಾ ಪಡೆಗಳು ಬಾರಾಮುಲ್ಲಾ ಜಿಲ್ಲೆಯಲ್ಲಿ  ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿವೆ.

ಸಿಆರ್ ಪಿಎಫ್ ಮತ್ತು ಪೊಲೀಸರ ಜಂಟಿ ಗಸ್ತು ತಂಡದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಬೆನ್ನಟ್ಟಿದ್ದು, ಪರಿಣಾಮವಾಗಿ ಗುಂಡಿನ ಘರ್ಷಣೆ ಆರಂಭವಾಗಿತ್ತು.

ಇನ್ನೂ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು (ಒಟ್ಟು ಇಬ್ಬರ ಹತ್ಯೆಯಾಗಿದೆ). ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದರು.

ದಾಳಿ ನಡೆದ ಕೂಡಲೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ಭಯೋತ್ಪಾದಕರನ್ನು ಬೆನ್ನಟ್ಟಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಭದ್ರತಾ ಪಡೆಗಳ ಜೊತೆಗೆ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಮತ್ತು ಗುಂಡಿನ ಘರ್ಷಣೆಯ ಸಮಯದಲ್ಲಿ ಭಯೋತ್ಪಾದಕರು ಹತರಾದರು ಎಂದು ಅವರು ಹೇಳಿದರು.

ಲಷ್ಕರ್--ತೊಯ್ಬಾ (ಎಲ್ ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರು ದಾಳಿ ನಡೆಸಿದ್ದರೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹತ್ತಿರದ ದಟ್ಟವಾದ ಹಣ್ಣಿನ ತೋಟಗಳಿಂದ ಮೂವರು ಉಗ್ರರು ಬಂದು, ಗಸ್ತು ತಂಡದ ಮೇಲೆ ಯದ್ವಾತದ್ವ ಗುಂಡು ಹಾರಿಸಲಾರಂಭಿಸಿದರು, ಇದರಲ್ಲಿ ನಮ್ಮ ಮೂವರು ಯೋಧರು (ಇಬ್ಬರು ಸಿಆರ್‌ಪಿಎಫ್) ಮತ್ತು ಒಬ್ಬ ಜಮ್ಮು -ಕಾಶ್ಮೀರ ಪೊಲೀಸ್) ಹುತಾತ್ಮರಾದರು. ಎಲ್‌ಇಟಿ ದಾಳಿ ನಡೆಸಿದೆ ಎಂದು ತೋರುತ್ತದೆ. ನಾವು ಶೀಘ್ರದಲ್ಲೇ ಅವರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತೇವೆಎಂದು ಕುಮಾರ್ ಇದಕ್ಕೆ ಮುನ್ನ ತಿಳಿಸಿದ್ದರು.

"ನಾವು ಪ್ರದೇಶವನ್ನು ಸುತ್ತುವರೆದಿದ್ದೇವೆ ಮತ್ತು ಹುಡುಕಾಟಗಳು ನಡೆಯುತ್ತಿವೆ. ಶೀಘ್ರದಲ್ಲೇ ಅವರ ಸದ್ದqಗುವುದು ಎಂದು ನಾವು ಭಾವಿಸುತ್ತೇವೆ ಅವರು ಹೇಳಿದ್ದರು.

ಭಯೋತ್ಪಾದಕರು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಂಡು, ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿ ನಂತರ ಸ್ಥಳದಿಂದ ಪಲಾಯನ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, ಕುಮಾರ್ಇದು ಕಳವಳಕಾರಿ ವಿಷಯವಾಗಿದೆ, ಆದರೆ ಪಡೆಗಳು ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತವೆ ಎಂದು ಹೇಳಿದರು.

ನಾಕಾ ಪಾಯಿಂಟ್‌ನಲ್ಲಿ ಇರುವ ಪಡೆಗಳ ಸಂಖ್ಯೆ ಕಡಿಮೆ ಮತ್ತು ಸಾಮಾನ್ಯವಾಗಿ ಅವರು (ಉಗ್ರರು) ನಾಗರಿಕ ದುಸ್ತಿನಲ್ಲಿ ಅಮಾಯಕರಂತೆ ಬಂದು ನಂತರ ಪಡೆಗಳ ಮೇಲೆ ಗುಂಡು ಹಾರಿಸುತ್ತಾರೆ. ನಾವು ಹಲವಾರು ಬಾರಿ ನಷ್ಟವನ್ನು ಅನುಭವಿಸಿದ್ದೇವೆ ಮತ್ತು ಅವರು ಕೆಲವು ಬಾರಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ, ಶೀಘ್ರದಲ್ಲೇ ನಾವು ತಂತ್ರಕ್ಕೆ ಪ್ರತಿತಂತ್ರ ಕಂಡುಕೊಳ್ಳುತ್ತೇವೆ ಮತ್ತು ಸಮಸ್ಯೆಯನ್ನು ಕೊನೆಗೊಳಿಸುತ್ತೇವೆ ಎಂದು ಅವರು ನುಡಿದರು.

ಕಳೆದ ಮೂರು ದಿನಗಳಲ್ಲಿ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಎರಡನೇ ದಾಳಿ ಇದು. ಆಗಸ್ಟ್ ೧೪ ರಂದು ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಇದೇ ರೀತಿಯ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿ, ಇನ್ನೊಬ್ಬರು ಗಾಯಗೊಂಡಿದ್ದರು.

No comments:

Advertisement