Tuesday, August 18, 2020

ಮಧ್ಯಪ್ರದೇಶದಲ್ಲಿ ಸ್ಥಳೀಯರಿಗೆ ಮಾತ್ರ ಸರ್ಕಾರಿ ಉದ್ಯೋಗ

 ಮಧ್ಯಪ್ರದೇಶದಲ್ಲಿ ಸ್ಥಳೀಯರಿಗೆ ಮಾತ್ರ ಸರ್ಕಾರಿ ಉದ್ಯೋಗ

ಭೋಪಾಲ್: ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ದೇಶಾದ್ಯಂತ ಜನರು ಉದ್ಯೋಗ ಬಿಕ್ಕಟ್ಟು ಎದುರಿಸುತ್ತಿರುವಾಗ ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಜನರಿಗೆ ಮೀಸಲಿಡುವ ವಿವಾದಾಸ್ಪದ ನಿರ್ಧಾರವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2020 ಆಗಸ್ಟ್ 18ರ ಮಂಗಳವಾರ ಪ್ರಕಟಿಸಿದರು.

ನಿರ್ಧಾರವನ್ನು ಜಾರಿಗೆ ತರಲು ಶೀಘ್ರವೇ ಕಾನೂನು ಬದಲಾಯಿಸಲಾಗುವುದು ಎಂದು ಅವರು ಹೇಳಿದರು.

"ಮಧ್ಯಪ್ರದೇಶ ಸರ್ಕಾರ ಇಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ರಾಜ್ಯದ ಯುವಕರಿಗೆ ಮಾತ್ರ ನೀಡಲು ನಾವು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಮಧ್ಯಪ್ರದೇಶದ ಸಂಪನ್ಮೂಲಗಳು ಮಧ್ಯಪ್ರದೇಶದ ಮಕ್ಕಳಿಗೆ ಮಾತ್ರ" ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.


೨೭ ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿಯವರಿಂದ ಪ್ರಕಟಣೆ ಹೊರಬಿದ್ದಿದೆ. ಚುನಾವಣಾ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ.

ಮಧ್ಯಪ್ರದೇಶದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಚೌಹಾಣ್ ಹಿಂದೆ ಹೇಳಿದ್ದರು.

"ಮಧ್ಯಪ್ರದೇಶದ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು. ಉದ್ಯೋಗಾವಕಾಶಗಳು ಕೊರತೆಯಿರುವ ಸಮಯದಲ್ಲಿ ನಮ್ಮ ರಾಜ್ಯದ ಯುವಕರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ" ಎಂದು ಅವರು ಶನಿವಾರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದರು.

"ಸ್ಥಳೀಯ ಯುವಕರಿಗೆ ಅವರ ಹನ್ನೆರಡನೇ ತರಗತಿ ಮತ್ತು ಹನ್ನೆರಡನೆಯ ತರಗತಿಯ ಅಂಕಪಟ್ಟಿ ಆಧಾರದ ಮೇಲೆ ಉದ್ಯೋಗವನ್ನು ಖಾತ್ರಿಪಡಿಸುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಅವರು ನುಡಿದರು.

ಉದ್ಯೋಗಗಳಲ್ಲಿ ಒಬಿಸಿ ಕೋಟಾವನ್ನು ರಾಜ್ಯದಲ್ಲಿ ಶೇಕಡಾ ೧೪ ರಿಂದ ೨೭ ಕ್ಕೆ ಹೆಚ್ಚಿಸಿದ್ದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುವ ಬಗ್ಗೆಯೂ ಮುಖ್ಯಮಂತ್ರಿ ಮಾತನಾಡಿದ್ದರು. ಕ್ರಮವನ್ನು ಜಬಲ್ಪುರ ಹೈಕೋರ್ಟ್ ರದ್ದು ಪಡಿಸಿತ್ತು.

ಮಾರ್ಚ್ ತಿಂಗಳಲ್ಲಿ ಪತನಗೊಂಡ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಮಲನಾಥ್ ಅವರು ರಾಜ್ಯ ಕೈಗಾರಿಕಾ ಘಟಕಗಳಲ್ಲಿ ಶೇಕಡಾ ೭೦ ರಷ್ಟು ಉದ್ಯೋಗಗಳನ್ನು ರಾಜ್ಯದ ಜನರಿಗೆ ಮೀಸಲಿಡಲು ಕಾನೂನು ತರಲು ಪ್ರಯತ್ನಿಸುವುದಾಗಿ ತಾವು ನೀಡಿದ್ದ ಭರವಸೆಯನ್ನು ಚೌಹಾಣ್ ಅವರಿಗೆ ನೆನಪಿಸಿದರು. ಅವರು ರಾಜ್ಯದ ಜನರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇ ೭೦ ರಷ್ಟು ಮೀಸಲಾತಿ ಘೋಷಿಸಿದ್ದರು.

"ನಮ್ಮ ಸರ್ಕಾರ ಬರುವುದಕ್ಕೆ ಮುನ್ನ ನಿಮ್ಮ ೧೫ ವರ್ಷಗಳ ಆಡಳಿತದಲ್ಲಿ ನೀವು ಎಷ್ಟು ಯುವಕರಿಗೆ ಉದ್ಯೋಗ ನೀಡಿದ್ದೀರಿ?’ ಎಂದು ಕಮಲನಾಥ್ ಟ್ವೀಟ್ ಮೂಲಕ ಪ್ರಶ್ನಿಸಿದರು. "ಕನಿಷ್ಠ ಈಗ, ೧೫ ವರ್ಷಗಳ ನಂತರ ನೀವು ಉದ್ಯೋಗ ಬಿಕ್ಕಟ್ಟಿನ ಬಗ್ಗೆ ಎಚ್ಚರಗೊಂಡಿದ್ದೀರಿ ಮತ್ತು ರಾಜ್ಯದ ಜನರಿಗೆ ಉದ್ಯೋಗ ಕಾಯ್ದಿರಿಸುವ ನಮ್ಮ ನಿರ್ಧಾರವನ್ನು ಅನುಕರಿಸಿದ್ದೀರಿ. ಇದು ಕೇವಲ ಕಾಗದದ ಪ್ರಕಟಣೆಯಾಗಿ ಉಳಿಯಬಾರದು ಎಂದು ಕಮಲನಾಥ್ ಆಗ್ರಹಿಸಿದರು.

ಮಧ್ಯೆ, ಹೊರಗಿನವರಿಗೆ ಅವಕಾಶಗಳನ್ನು ರಾಜ್ಯಗಳು ನಿರಾಕರಿಸುವುದು ಸರಿಯಲ್ಲ ಎಂದು ಹಲವರು ನಿರ್ಧಾರವನ್ನು ಟೀಕಿಸಿದ್ದಾರೆ.

ಜೆ & ಕೆ (ಜಮ್ಮು ಮತ್ತು ಕಾಶ್ಮೀರ) ಹಾಗೂ ಲಡಾಖ್ನಲ್ಲಿ ಎಲ್ಲ ಜನರಿಗೂ ಉದ್ಯೋಗಗಳು. ಆದರೆ ಮಧ್ಯಪ್ರದೇಶದಲ್ಲಿ ಮಧ್ಯಪ್ರದೇಶದ ಜನರಿಗೆ ಮಾತ್ರ ಉದ್ಯೋಗಗಳು. ಅಲ್ಲಿ ಅಚ್ಚರಿ ಏನಿಲ್ಲ!’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮೂಲಕ ಛೇಡಿಸಿದ್ದಾರೆ.

ಕಳೆದ ೧೦ ವರ್ಷಗಳಲ್ಲಿ ಮಧ್ಯಪ್ರದೇಶದ ಜನಸಂಖ್ಯೆಯು ಶೇಕಡಾ ೧೦ ರಷ್ಟು ಏರಿಕೆಯಾಗಿದೆ ಆದರೆ ಸರ್ಕಾರಿ ಉದ್ಯೋಗಗಳು ಶೇಕಡಾ . ರಷ್ಟು ಕುಗ್ಗಿವೆ ಎಂದು ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. . ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳಲ್ಲಿ, ಸುಮಾರು ೯೩,೫೦೦ ಖಾಲಿ ಇವೆ ಎಂದು ಅವರು ಹೇಳುತ್ತಾರೆ.

No comments:

Advertisement