My Blog List

Sunday, September 27, 2020

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ನಿಧನ

 ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ನಿಧನ

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು 2020 ಸೆಪ್ಟೆಂಬರ್ 27 ಭಾನುವಾರ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಸಿಂಗ್ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜಸ್ವಂತ್ ಸಿಂಗ್(೮೨) ಅವರನ್ನು ಕಳೆದ ಜೂನ್ ತಿಂಗಳಲ್ಲೇ ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈದಿನ ಬೆಳಗಿನ ಜಾವ ಸುಮಾರು :೫೫ಕ್ಕೆ ಜಸ್ವಂತ್ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು.

ಕೇಂದ್ರದ ಹಣಕಾಸು ಸಚಿವ, ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿರುವ ಜಸ್ವಂತ್ ಸಿಂಗ್, ಬಿಜೆಪಿಯ ಹಿರಿಯ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು.

೧೯೫೦-೬೦ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಜಸ್ವಂತ್ ಸಿಂಗ್, ರಾಜಕೀಯ ಕ್ಷೇತ್ರದತ್ತ ಆಕರ್ಷಿತರಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ಮೋದಿ ಶೋಕ:

ಜಸ್ವಂತ್ ಸಿಂಗ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಅತ್ಯಂತ ಶ್ರದ್ಧೆಯಿಂದ ದೇಶಸೇವೆಗೈದಿರುವ ಜಸ್ವಂತ್ ಸಿಂಗ್ ಆದರ್ಶಗಳು ಸದಾ ನಮ್ಮೊಂದಿಗೆ ಇರಲಿವೆ ಎಂದು ಕಂಬನಿ ಮಿಡಿದರು.

ಮೊದಲು ಸೇನೆಯಲ್ಲಿ ಹಾಗೂ ನಂತರ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಜಸ್ವಂತ್ ಸಿಂಗ್ ಸದಾ ಸ್ಮರಣೀಯರುಎಂದು ಪ್ರಧಾನಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದರು.

ಅಲ್ಲದೇ ಜಸ್ವಂತ್ ಪುತ್ರ ಮನ್ವೇಂದ್ರ ಸಿಂಗ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ದು:ಖದ ಘಳಿಗೆಯಲ್ಲಿ ತಾವು ಜಸ್ವಂತ್ ಸಿಂಗ್ ಅವರ ಕುಟುಂಬ ವರ್ಗದೊಂದಿಗೆ ಇರುವುದಾಗಿ ಪ್ರಧಾನಿ ಮೋದಿ ಹೇಳಿದರು.

ಜಸ್ವಂತ್ ಸಿಂಗ್ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದರು.

No comments:

Advertisement