My Blog List

Sunday, September 27, 2020

ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಒಪ್ಪಿಗೆ

 ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2020 ಸೆಪ್ಟೆಂಬರ್ 27ರ ಭಾನುವಾರ ಮೂರು ವಿವಾದಾತ್ಮಕ ಕೃಷಿ ಮಸೂದೆಗಳಿಗೆ ಅಂಕಿತ ಹಾಕಿದರು. ಮಸೂದೆಗಳು  ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿದೆ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಮಸೂದೆ, ಬೆಲೆ ಖಾತರಿ ಹಾಗೂ ಬೇಸಾಯ ಸೇವೆಗಳಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಹಾಗೂ ರಕ್ಷಣೆ),  ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ ಹಾಕಿದರು.

ಇದಕ್ಕೂ ಮುನ್ನ ವಿರೋಧ ಪಕ್ಷಗಳ ಸದಸ್ಯರ ಭಾರಿ ಗದ್ದಲ, ಪ್ರತಿಭಟನೆ ಮತ್ತು ವಿರೋಧದ ನಡುವೆಯೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳಿಗೆ ರಾಜ್ಯಸಭೆ ಧ್ವನಿಮತದ ಅಂಗೀಕಾರ ನೀಡಿತು.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಸೂದೆಗಳನ್ನು ಮಂಡಿಸಿದಾಗ ರಾಜ್ಯಸಭೆಯಲ್ಲಿ ಜೋರು ಗಲಾಟೆ ಆರಂಭವಾಯಿತು.

ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವಂತೆ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್ ಪ್ರಕಟಿಸಿದಾಗ ವಿರೋಧ ಪಕ್ಷಗಳ ಆಕ್ರೋಶ ಕಟ್ಟೆಯೊಡೆಯಿತು. 

ಘೋಷಣೆ ಕೂಗುತ್ತ ಸಭಾಪತಿ ಪೀಠದತ್ತ ನುಗ್ಗಿದ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಡೆರೆಕ್ ಒಬ್ರಿಯಾನ್,  ರೂಲ್ ಬುಕ್ ಎತ್ತಿಕೊಂಡರು. ಅವರನ್ನು ಸೇರಿಕೊಂಡ ವಿರೋಧ ಪಕ್ಷಗಳ ಸದಸ್ಯರು ಕೈಗೆ ಸಿಕ್ಕ ಮೈಕ್ರೊಫೋನ್ಗಳನ್ನು ಮುರಿದು ಹಾಕಿದರು. ಕಾಗದದ ಚೂರುಗಳನ್ನು ಹರಿದು ತೂರಿದರು. ಟೇಬಲ್ಗಳ ಮೇಲೆ ಹತ್ತಿ ನಿಂತು ಘೋಷಣೆ ಕೂಗತೊಗಿದರು. ಕೊನೆಗೆ ಸಭಾಪತಿ ಪೀಠದ ಮುಂದೆ ಧರಣಿ ಕುಳಿತರು.

ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸದನವನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಆದರೂ ಪ್ರತಿಭಟನಾನಿರತ ಸದಸ್ಯರು ಸದನದಿಂದ ಕದಲಲಿಲ್ಲ. ಗದ್ದಲ ಮತ್ತು ವಿರೋಧದ ನಡುವೆಯೇ ಉಪ ಸಭಾಪತಿ ಹರಿವಂಶ ಅವರು ಮಸೂದೆಗಳನ್ನು ಧ್ವನಿಮತಕ್ಕೆ ಹಾಕಿದರು.

No comments:

Advertisement