ಕೋವಿಡ್-19: ವಿಶ್ವಾದ್ಯಂತ ದಾಖಲೆ ಪ್ರಮಾಣದಲ್ಲಿ ಏರಿಕೆ
ನವದೆಹಲಿ: ಭಾರತದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ 2020 ಅಕ್ಟೋಬರ್ 30ರ ಶುಕ್ರವಾರ ೮೧ ಲಕ್ಷದ ಸಮೀಪಕ್ಕೆ ತಲುಪಿದೆ. ಕೇರಳದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಗೆ ಕಳೆದ ಒಂದು ದಿನದಲ್ಲಿ ವಿಶ್ವಾದ್ಯಂತವೂ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿದೆ.
ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೮,೬೪೮ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ೮೦,೮೮,೮೫೧ಕ್ಕೆ ಏರಿತು. ಆದರೆ ಸಕ್ರಿಯ ಪ್ರಕರಣಗಳು ೬,೦೦,೦೦೦ ಕ್ಕಿಂತ ಕೆಳಗಿಳಿದಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ ೯೧ನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಶುಕ್ರವಾರ ತಿಳಿಸಿದೆ.
೫೬೩ ಹೊಸ ಸಾವುಗಳೊಂದಿಗೆ ದೇಶದ ಕೋವಿಡ್-೧೯ ಸಾವಿನ ಸಂಖ್ಯೆ ೧,೨೧,೦೯೦ಕ್ಕೆ ಏರಿದೆ ಎಂದು ಬೆಳಗ್ಗೆ ೮ ಗಂಟೆಗೆ ನವೀಕರಿಸಿದ ಮಾಹಿತಿ ತೋರಿಸಿದೆ.
ಒಟ್ಟು ೭೩,೭೩,೩೭೫ ಜನರು ಕೋವಿಡ್-೧೯ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ, ಇದು ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಶೇಕಡಾ ೯೧.೧೫ ಕ್ಕೆ ಏರಿಸಿದೆ. ಇದೇ ವೇಳೆಗೆ ಕೊರೋನಾ ಸಾವಿನ ಪ್ರಮಾಣವು ಶೇಕಡಾ ೧.೫೦ಕ್ಕೆ ಇಳಿದಿದೆ. ದೇಶದಲ್ಲಿ ೫,೯೪,೩೮೬ ಕೊರೋನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೭.೩೫ ರಷ್ಟಿದೆ ಎಂದು ಮಾಹಿತಿ ತಿಳಿಸಿತು.
* ಜಾಗತಿಕವಾಗಿ ಹೊಸ ಪ್ರಕರಣಗಳಲ್ಲಿ ಅತಿ ಹೆಚ್ಚಿನ ಏಕದಿನ ಏರಿಕೆ. ಕಳೆದ ೨೪ ಗಂಟೆಗಳಲ್ಲಿ ಸುಮಾರು ೫.೪೬ ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಕೇವಲ ಯುರೋಪಿನಲ್ಲಿ ೨.೮ ಲಕ್ಷ ಪ್ರಕರಣಗಳು (ಶೇಕಡಾ ೫೧) ದಾಖಲಾಗಿವೆ.
* ಭಾರತದಲ್ಲಿ ಸಕ್ರಿಯ ಪ್ರಕರಣಗಳು ೬ ಲಕ್ಷಕ್ಕಿಂತ ಕಡಿಮೆಯಾಗಿದೆ.
* ಕೇರಳವು ಭಾರತದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳನ್ನು (೭,೦೦೦) ವರದಿ ಮಾಡಿದೆ.
* ದೆಹಲಿಯಲ್ಲಿ ಹೊಸ ಪ್ರಕರಣಗಳು ೫,೭೪೦ ಪ್ರಕರಣಗಳ ದಾಖಲಾತಿಯೊಂದಿಗೆ ಇದು ಗರಿಷ್ಠ ಏಕದಿನ ಏರಿಕೆಯಾಯಿತು. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೦,೦೦೦ ದಾಟಿದೆ.
* ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ಮತ್ತು ಇತರ ನಗರಗಳು (ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ ಮತ್ತು ಫರಿದಾಬಾದ್) ೮೬೭ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
* ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಈಗ ೨೫ ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು.
* ಅಮೆರಿಕವು ಸಾರ್ವಕಾಲಿಕ ದಾಖಲೆ ಅಂದರೆ ೯೧,೫೦೦ ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
* ಹದಿನೈದು ದೇಶಗಳು ೧೦,೦೦೦ ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ೧೫ ದೇಶಗಳಲ್ಲಿ ಹತ್ತು ದೇಶಗಳು ಯುರೋಪಿನವರು.
* ಇಟಲಿ (೨೬.೮ ಸಾವಿರ), ಸ್ಪೇನ್ (೨೩.೬ ಸಾವಿರ), ಬೆಲ್ಜಿಯಂ (೨೧ ಸಾವಿರ) , ಪೋಲೆಂಡ್ (೨೦ ಸಾವಿರ), ಜರ್ಮನಿ (೧೮.೭ ಸಾವಿರ), ರಷ್ಯಾ (೧೭.೭ ಸಾವಿರ) ಅತಿ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದೆ
* ಭಾರತದ ಕೋವಿಡ್ ೧೯ ಒಟ್ಟು ಸಂಖ್ಯೆಯು ಆಗಸ್ಟ್ ೭ರಂದು ೨೦ ಲಕ್ಷ, ಆಗಸ್ಟ್ ೨೩ರಂದು ೩೦ಲಕ್ಷ, ಸೆಪ್ಟೆಂಬರ್ ೫ರಂದು ೪೦ ಲಕ್ಷಗಳನ್ನು ದಾಟಿದೆ. ಸೆಪ್ಟೆಂಬರ್ ೨೮ ರಂದು ೬೦ ಲಕ್ಷ, ಅಕ್ಟೋಬರ್ ೧೧ ರಂದು ೭೦ ಲಕ್ಷವನ್ನು ದಾಟಿ ಅಕ್ಟೋಬರ್ ೨೯ ರಂದು ೮೦ ಲಕ್ಷವನ್ನು ದಾಟಿದೆ.
ಐಸಿಎಂಆರ್ ಪ್ರಕಾರ, ಅಕ್ಟೋಬರ್ ೨೯ ರವರೆಗೆ ಒಟ್ಟು ೧೦,೭೭,೨೮,೦೮೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ೧೧,೬೪,೬೪೮ ಮಾದರಿಗಳನ್ನು ಗುರುವಾರ ಪರೀಕ್ಷಿಸಲಾಗಿದೆ. ೫೬೩ ಹೊಸ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೧೫೬, ಪಶ್ಚಿಮ ಬಂಗಾಳದಿಂದ ೬೧, ಛತ್ತೀಸ್ ಗಢದಿಂದ ೫೩, ಕರ್ನಾಟಕದಿಂದ ೪೫, ತಮಿಳುನಾಡಿನಿಂದ ೩೫, ದೆಹಲಿಯಿಂದ ೨೭ ಮತ್ತು ಕೇರಳದಿಂದ ೨೬ ಮಂದಿ ಸೇರಿದ್ದಾರೆ.
ದೇಶದಲ್ಲಿ ಈವರೆಗೆ ಒಟ್ಟು ೧,೨೧,೦೯೦ ಸಾವುಗಳು ಸಂಭವಿಸಿವೆ, ಮಹಾರಾಷ್ಟ್ರದಿಂದ ೪೩,೭೧೦, ಕರ್ನಾಟಕದಿಂದ ೧೧,೦೯೧, ತಮಿಳುನಾಡಿನಿಂದ ೧೧,೦೫೩, ಉತ್ತರಪ್ರದೇಶದಿಂದ ೬,೯೮೩, ಪಶ್ಚಿಮ ಬಂಗಾಳದಿಂದ ೬,೭೨೫, ಆಂಧ್ರಪ್ರದೇಶದಿಂದ ೬,೬೫೯, ದೆಹಲಿಯಿಂದ ೬,೪೨೩ ಪಂಜಾಬ್ ಮತ್ತು ಗುಜರಾತ್ನಿಂದ ೩,೭೦೫. ೭೦ ರಷ್ಟು ಸಾವುಗಳು ಸಹ ಆರೋಗ್ಯ ಸಮಸ್ಯೆಗಳ ಕಾರಣ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಒತ್ತಿಹೇಳಿದೆ.
No comments:
Post a Comment