Thursday, October 8, 2020

ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್‌ಗೆ

 ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್ಗೆ

ನವದೆಹಲಿ: ಅಮೆರಿಕದ ಕವಿ ಲೂಯಿ ಎಲಿಸಬೆತ್ ಗ್ಲಕ್ ಅವರು 2020 ಅಕ್ಟೋಬರ್ 08ರ ಗುರುವಾರ ೨೦೨೦ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.

೧೯೪೩ರ ಏಪ್ರಿಲ್ ೨೨ರಂದು ಜನಿಸಿದ ಗ್ಲಕ್ ಒಬ್ಬ ಅಮೇರಿಕನ್ ಕವಿ ಮತ್ತು ಪ್ರಬಂಧಕಾರ್ತಿಯಾಗಿದ್ದು, "ಸ್ನಿಗ್ಧ್ಧ ಸೌಂದರ್ಯದೊಂದಿಗೆ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ ೨೦೨೦ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ಪ್ರಕಟಿಸಲಾಯಿತು.

ಅಮೆರಿಕದಲ್ಲಿ ರಾಷ್ಟ್ರೀಯ ಮಾನವಿಕ ಪದಕ, ಪುಲಿಟ್ಜರ್ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿ, ಮತ್ತು ಬೊಲ್ಲಿಂಗನ್ ಪ್ರಶಸ್ತಿ ಸೇದಂತೆ ಅನೇಕ ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಗ್ಲಕ್ ಅವರು ಗೆದ್ದಿದ್ದಾರೆ.

ಅಮೆರಿಕದ ಕವಿ ಪ್ರಶಸ್ತಿ ವಿಜೇತರಾದ ಗ್ಲಕ್ ಅವರನ್ನಆತ್ಮಚರಿತ್ರೆಯ ಕವಿ ಎಂದು ಬಣ್ಣಿಸಲಾಗುತ್ತದೆ. ಪುರಾಣ, ಇತಿಹಾಸ ಅಥವಾ ಪ್ರಕೃತಿಯನ್ನು ಮತ್ತು ವೈಯಕ್ತಿಕ ಅನುಭವಗಳನ್ನು ನೀಡುವ ಅವರ ಕೃತಿಗಳು ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿವೆ.

ಗ್ಲಕ್ ನ್ಯೂಯಾರ್ಕ್ ನಗರದಲ್ಲಿ ಜನಿಸಿ, ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡಿನಲ್ಲಿ ಬೆಳೆದರು. ಪ್ರೌಢಶಾಲೆಯಲ್ಲಿದ್ದಾಗ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಬಳಲುತ್ತಿದ್ದರು. ಮುಂದೆ ಸಾರಾ ಲಾರೆನ್ಸ್ ಕಾಲೇಜು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತರಗತಿಗಳನ್ನು ತೆಗೆದುಕೊಂಡರು ಆದರೆ ಪದವಿ ಪಡೆಯಲಿಲ್ಲ. ಲೇಖಕಿಯಾಗಿ ಅವರ ವೃತ್ತಿಜೀವನದ ಜೊತೆಗೆ, ಅವರು ಹಲವಾರು ಸಂಸ್ಥೆಗಳಲ್ಲಿ ಕವನ ಶಿಕ್ಷಕರಾಗಿ ಅಕಾಡೆಮಿಕ್ ವೃತ್ತಿಜೀವನವನ್ನು ನಡೆಸಿದ್ದಾರೆ.

ಗ್ಲಕ್ ಅವರು ತಮ್ಮ ಕೃತಿಯಲ್ಲಿ, ಆಘಾತ, ಬಯಕೆ ಮತ್ತು ಪ್ರಕೃತಿಯ ಪ್ರಕಾಶಿಸುವ ಅಂಶಗಳನ್ನು ಕೇಂದ್ರೀಕರಿಸಿದ್ದಾರೆ. ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ, ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾಗಿದೆ. ಅವರ ಕವಿತೆಗಳಲ್ಲಿ, ಆತ್ಮಚರಿತ್ರೆ ಮತ್ತು ಶಾಸ್ತ್ರೀಯ ಪುರಾಣಗಳ ನಡುವಿನ ಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ಸಂಬಂಧವನ್ನು ವಿದ್ವಾಂಸರು ಗುರುತಿಸಿದ್ದಾರೆ.

ಪ್ರಸ್ತುತ, ಗ್ಲಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ಮೆಸಾಚ್ಯುಸೆಟ್ಸ್ ಕೇಂಬ್ರಿಜ್ನಲ್ಲಿ ವಾಸವಾಗಿದ್ದಾರೆ.

ಹಲವು ವರ್ಷಗಳ ವಿವಾದ ಮತ್ತು ಹಗರಣದ ನಂತರ ವರ್ಷ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪಗಳು ವಿಜೇತರನ್ನು ಆಯ್ಕೆ ಮಾಡುವ ರಹಸ್ಯ ಸಂಸ್ಥೆಯಾದ ಸ್ವೀಡಿಷ್ ಅಕಾಡೆಮಿಯನ್ನು ಬೆಚ್ಚಿಬೀಳಿಸಿದ ನಂತರ ೨೦೧೮ ರಲ್ಲಿ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಮತ್ತು ಇದು ಸದಸ್ಯರ ಸಾಮೂಹಿಕ ನಿರ್ಗಮನಕ್ಕೆ ನಾಂದಿ ಹಾಡಿತ್ತು.

ಕಳೆದ ವರ್ಷದ ಆಸ್ಟ್ರಿಯಾದ ಕಾದಂಬರಿಕಾರ ಪೀಟರ್ ಹ್ಯಾಂಡ್ಕೆ ಅವರ ಟೀಕೆಗಳ ಮಹಾಪೂರವನ್ನೇ ಹರಿಯಬಿಟ್ಟಿದ್ದರು. ಬಾಲ್ಕನ್ ಯುದ್ಧಗಳಲ್ಲಿ ಸರ್ಬಿಯಾದ ನಾಯಕ ಸ್ಲೊಬೊಡಾನ್ ಮಿಲೋಸೆವಿಕ್ ಅವರನ್ನು ಬೆಂಬಲಿಸಿದ ಮತ್ತು ಮತ್ತು ಆತನ ಸೇನೆಯ ದೌರ್ಜನ್ಯವನ್ನು ಗೌಣಗೊಳಿಸುವಲ್ಲಿ ಹೆಸರುವಾಸಿಯಾದ ಬರಹಗಾರನಿಗೆ ಹೇಗೆ ಪ್ರಶಸ್ತಿ ನೀಡಲಾಯಿತು ಎಂದು ಹಲವರು ಅಚ್ಚರಿ ಪಟ್ಟಿದ್ದರು.

ಆದರೆ, ಅಕಾಡೆಮಿ ಹ್ಯಾಂಡ್ಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತನ್ನ ಕ್ರಮವನ್ನು ಸಮರ್ಥಿಸಿ, ಕೇವಲ ಸಾಹಿತ್ಯಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಪಾದಿಸಿತ್ತು.

ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಮಹೋನ್ನತ ಕೆಲಸಕ್ಕಾಗಿ ವರ್ಷದ ನೊಬೆಲ್ ಪ್ರಶಸ್ತಿಗಳು ಇನ್ನೂ ಬರಬೇಕಾಗಿವೆ.

No comments:

Advertisement