Monday, October 12, 2020

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಖುಷ್ಬೂ ಸುಂದರ್

 ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಖುಷ್ಬೂ ಸುಂದರ್

ನವದೆಹಲಿ:  ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಟಿ ಖುಷ್ಬೂ ಸುಂದರ್ ೨೦೨೦ ಅಕ್ಟೋಬರ್ ೧೨ ರ ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಖುಷ್ಬೂ ಪಕ್ಷವನ್ನು ಸೇರಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಅವರು ಖುಷ್ಬೂ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು, ಸರಿಯಾದ ದಿಕ್ಕಿನಲ್ಲಿ ದೇಶವನ್ನು ಕರೆದೊಯ್ಯಲು ನಮಗೆ ಪ್ರಧಾನಿ ನರೇಂದ್ರ ಮೋದಿಯಂತಹ ವ್ಯಕ್ತಿಯ ಅಗತ್ಯವಿದೆ ಎಂದು ಬಿಜೆಪಿ ಸೇರ್ಪಡೆಯ ಬಳಿಕ ಖುಷ್ಬೂ ಹೇಳಿದರು.

ಖಷ್ಬೂ ಅವರು ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು.

ಖಷ್ಬೂ ಪಕ್ಷ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿದ ಸಿ.ಟಿ ರವಿ, ‘ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಖುಷ್ಬೂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿರುಮುರುಗನ್ ಅವರ ನೇತೃತ್ವದಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ ನಾವು ತಮಿಳುನಾಡಿನ ಜನರಿಗಾಗಿ (ತಮಿಳ್ ಮಕ್ಕಳ್) ಶ್ರಮಿಸಲಿದ್ದೇವೆ ಎಂದು ಹೇಳಿದರು.

"ಬಿಜೆಪಿಯಿಂದ ನನ್ನ ನಿರೀಕ್ಷೆ ನನಗೆ ಪಕ್ಷವು ಏನು ನೀಡಲಿದೆ ಎಂಬುದರ ಬಗ್ಗೆ ಅಲ್ಲ, ಆದರೆ ದೇಶದ ಜನರಿಗೆ ಯಾವ ಪಕ್ಷವು ಏನು ಮಾಡಲಿದೆ ಎಂಬುದರ ಬಗ್ಗೆ. ನೀವು ೧೨೮ ಕೋಟಿ ಜನರು ಒಬ್ಬ ವ್ಯಕ್ತಿಯನ್ನು ನಂಬುವಾಗ ಮತ್ತು ಅವರು ನಮ್ಮ ಪ್ರಧಾನ ಮಂತ್ರಿಯಾಗಿದ್ದಾಗ, ಅವರು ಏನನ್ನಾದರೂ ಸರಿಯಾಗಿ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಖುಷ್ಬೂ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಖುಷ್ಬೂ ಅವರು ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುವ ತಮ್ಮಂತಹ ಜನರನ್ನು "ಪಕ್ಷದೊಳಗೆ ಉನ್ನತ ಮಟ್ಟದಲ್ಲಿ ಕುಳಿತಿರುವ ಕೆಲವು ಶಕ್ತಿಗಳ ಮೂಲಕ ನಿಗ್ರಹಿಸಲಾಗುತ್ತಿದೆ ಎಂದು ಬರೆದಿದ್ದರು.

"ನೆಲದ ವಾಸ್ತವತೆ ಅಥವಾ ಸಾರ್ವಜನಿಕ ಮಾನ್ಯತೆಯೊಂದಿಗೆ ಯಾವುದೇ ಸಂಪರ್ಕವಿಲ್ಲದ ಜನರು ನಿಯಮಗಳನ್ನು ನಿರ್ದೇಶಿಸುತ್ತಿದ್ದಾರೆ ಎಂದೂ ಖುಷ್ಬೂ ಪತ್ರದಲ್ಲಿ ಬರೆದಿದ್ದರು.

ಅಷ್ಟರಲ್ಲಿ, ಸುಂದರ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರ ಹುದ್ದೆಯಿಂದ "ತತ್ ಕ್ಷಣದಿಂದಲೇ ಕಿತ್ತು ಹಾಕಲಾಗಿದೆ ಎಂದು ಪಕ್ಷ ಘೋಷಿಸಿತು.

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಬೆಳವಣಿಗೆಗಳು ನಡೆದಿವೆ. ಸ್ಥಳೀಯ ವರದಿಗಳ ಪ್ರಕಾರ, ೨೦೧೯ ಲೋಕಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡಲಾಗಿಲ್ಲ ಎಂದು ಖುಷ್ಬೂ ಅಸಮಾಧಾನಗೊಂಡಿದ್ದು, ೨೦೨೧ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಸ್ಥಾನ ನೀಡುವುದಾಗಿ ಭರವಸೆ ನೀಡಿದೆ ಎನ್ನಲಾಗಿದೆ.

ಖುಷ್ಬೂ ಅವರ ನಿರ್ಗಮನದಿಂದ ಪಕ್ಷದಲ್ಲಿ ಯಾವುದೇ ಶೂನ್ಯ ಉಂಟಾಗುವುದಿಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಮುಖಂಡ ಕೆ.ಎಸ್.ಅಳಗಿರಿ ಹೇಳಿದರು.

ಕಳೆದ ಆರು ತಿಂಗಳಿನಿಂದ ಆಕೆಯ (ಖುಷ್ಬೂ) ಚಟುವಟಿಕೆಗಳು ಪಕ್ಷದ ನಂಬಿಕೆಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದ್ದವು. ಅವರು ನಮ್ಮ ನಾಯಕ ರಾಹುಲ್ ಗಾಂಧಿ ಜಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಜನರು ಆಕೆಯನ್ನು ನಟಿಯಾಗಿ ಮಾತ್ರ ನೋಡಿದ್ದಾರೆ ಹೊರತು ರಾಜಕಾರಣಿಯಾಗಿ ನೋಡಲಿಲ್ಲ ಎಂದು ಅವರು ನುಡಿದರು.

ಖುಷ್ಬೂ ಸುಂದರ್ ಅವರು ಜುಲೈ ತಿಂಗಳಲ್ಲಿ ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬೆಂಬಲಿಸಿದಾಗ ಕಾಂಗ್ರೆಸ್ ಜೊತೆಗಿನ ಬಿರುಕಿನ ವದಂತಿಗಳು ಹರಡಿದ್ದವು. ಪಕ್ಷದ ಮುಖಂಡ ರಾಹುಲ್ ಗಾಂಧಿಯವರ ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳಿಗಾಗಿ ಕ್ಷಮೆಯಾಚಿಸುವುದಾಗಿಯೂ ಅವರು ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಕಾಂಗ್ರೆಸ್ ಹಿರಿಯ ನಾಯಕರ ಟೀಕೆಗೆ ಆಹ್ವಾನ ನೀಡಿತು. ಖುಷ್ಬೂ ಅವರ ಟೀಕೆಗಳು ಅವರ ಅಪಕ್ವತೆಯನ್ನು ತೋರಿಸುತ್ತವೆ ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ ಹೇಳಿದ್ದರು.

೨೦೧೦ರಲ್ಲಿ ಖುಷ್ಬೂ ಡಿಎಂಕೆ ಸೇರಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, ೨೦೧೪ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್ ಸಿಗಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇರುವಾಗಲೇ ಇದೀಗ ಖುಷ್ಬೂ ಬಿಜೆಪಿ ಸೇರಿದ್ದಾರೆ.

ಮುಂಬೈಯ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ೯೦ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ತಾರಾ ನಟರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ಅನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ನಡೆಸಿದರು.

No comments:

Advertisement