Saturday, October 31, 2020

ಕಾರ್ಗಿಲ್‌ಗೆ ಒಮರ್ ಅಬ್ದುಲ್ಲ ಬೇಟಿ, ರಹಸ್ಯ ಮಾತುಕತೆ

 ಕಾರ್ಗಿಲ್ಗೆ ಒಮರ್ ಅಬ್ದುಲ್ಲ ಬೇಟಿ, ರಹಸ್ಯ ಮಾತುಕತೆ

ಜಮ್ಮು: ಗುಪ್ಕರ್ ಘೋಷಣೆಗಾಗಿ ಜನತಾ ಮೈತ್ರಿಕೂಟ (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್- ಪಿಎಜಿಡಿ) ನಿಯೋಗದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಕಾರ್ಗಿಲ್ಗೆ ಭೇಟಿ ನೀಡಿದ್ದು, ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜೊತೆಗೆ ರಹಸ್ಯ ಮಾತುಕತೆಗಳನ್ನು ನಡೆಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ೨೦೧೯ರ ಆಗಸ್ಟ್ ೫ಕ್ಕೆ ಮುನ್ನ ಇದ್ದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವುದಕ್ಕಾಗಿ ಹೋರಾಟ ನಡೆಸಲು ಪಿಎಜಿಡಿಯನ್ನು ರಚಿಸಲಾಗಿದ್ದು, ಅದರ ಸದಸ್ಯರಾದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ನಾಸಿರ್ ಅಸ್ಲಂ ವನಿ, ಪಿಡಿಪಿ ನಾಯಕರಾದ ಗುಲಾಬ್ ನಬಿ ಲೋನ್ ಹಂಜುರಾ ಮತ್ತು ವಹೀದ್ ಪ್ಯಾರಾ ಹಾಗೂ ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಮುಜಾಫರ್ ಶಾ ಅವರೂ ನಿಯೋಗದಲ್ಲಿದ್ದರು.

ಶುಕ್ರವಾರ ಬೆಳಿಗ್ಗೆ, ನಿಯೋಗವು ಕಾರ್ಸ್ನಲ್ಲಿರುವ ಡ್ರಾಸ್ನಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿ ಅವರೊಂದಿಗೆ ಪಿಎಜಿಡಿ ಕಾರ್ಯಸೂಚಿಯ ಬಗ್ಗೆ ಚರ್ಚೆ ನಡೆಸಿತು.

ಅದರ ನಂತರ, ನಿಯೋಗವು ಕಾರ್ಗಿಲ್ ತಲುಪಿತು, ಅಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ನೊಂದಿಗೆ ಕಾರ್ಯಸೂಚಿ ಬಗ್ಗೆ ಚರ್ಚಿಸಿತು, ಕಳೆದ ವರ್ಷ ಆಗಸ್ಟ್ ರಂದು ರದ್ದು ಪಡಿಸಲಾದ ಸಂವಿಧಾನದ ೩೭೦ನೇ ವಿಧಿ ಮತ್ತು ೩೫- ವಿಧಿಗಳನ್ನು ಪುನಃಸ್ಥಾಪನೆ ಮಾಡಬೇಕು ಎಂಬ ಆಗ್ರಹ ಪಿಎಜಿಡಿಯದ್ದಾಗಿದೆ.

ಲಡಾಖ್ ಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವರನ್ನು ಜೊತೆಗೇ ಕರೆದೊಯ್ಯುವುದು ತಮ್ಮ ಉದ್ದೇಶವಾಗಿದೆ ಎಂದು ಒಮರ್ ಅಬ್ದುಲ್ಲ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ನಾವು ರಾಜಕೀಯವಾಗಿ, ಕಾನೂನುಬದ್ಧವಾಗಿ ಮತ್ತು ಮುಖ್ಯವಾಗಿ ಶಾಂತಿಯುತವಾಗಿ ಹೋರಾಡುತ್ತೇವೆ. ಪ್ರದೇಶದಲ್ಲಿ ಶಾಂತಿಯನ್ನು ಹದಗೆಡಿಸುವ ಉದ್ದೇಶ ನಮಗಿಲ್ಲ ಎಂದು ಪಿಎಜಿಡಿ ತನ್ನ ಗುರಿಯನ್ನು ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಕಾರ್ಗಿಲ್ ನಾಯಕರು ಪಿಎಜಿಡಿ ಸಭೆಗಳಲ್ಲಿ ಭಾಗವಹಿಸಬೇಕು ಎಂಬುದಾಗಿ ತಾನು ಬಯಸುವುದಾಗಿ ಒಮರ್ ನುಡಿದರು.

"ನಾವು ಹಿಂದಿನ ಸುತ್ತುಗಳಲ್ಲಿ ಕಾರ್ಗಿಲ್ ನಾಯಕತ್ವದೊಂದಿಗೆ ಸಂಪರ್ಕದಲ್ಲಿರಲಿಲ್ಲ. ನಾವು ಅವರೊಂದಿಗೆ ಮಾತನಾಡುವವರೆಗೆ ಅವರನ್ನು ಆಹ್ವಾನಿಸಲು ಹೇಗೆ ಸಾಧ್ಯವಿತ್ತು? ನಾವು ಇಂದು ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಅವರು ತಮ್ಮ ಪ್ರತಿನಿಧಿಗಳನ್ನು ಪಿಎಜಿಡಿ ಸಭೆಗಳಿಗೆ ಕಳುಹಿಸುತ್ತಾರೆಯೇ ಎಂದು ನೋಡಬಯಸುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಒಮರ್ ಉತ್ತರಿಸಿದರು.

ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಆರನೇ ಷೆಡ್ಯೂಲು ಪಡೆಯುವ ಅಭಿಯಾನದ ನೇತೃತ್ವ ವಹಿಸಿರುವ ಲೆಹ್ ಜಿಲ್ಲೆಯ ಅಪೆಕ್ಸ್ ಬಾಡಿ ಆಫ್ ಪೀಪಲ್ಸ್ ಮೂವ್ಮೆಂಟ್ ಜೊತೆಗೆ ಮಾತನಾಡುತ್ತೀರಾ ಎಂಬ ಪ್ರಶ್ನೆಗೆ, ನಾವು ಯಾರೊಂದಿಗೂ ಮಾತನಾಡಬಹುದು. ಯಾರೊಂದಿಗೆ ಮಾತನಾಡಲೂ ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಅಬ್ದುಲ್ಲ ನುಡಿದರು.

"ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ ನಿಯೋಗವು ಇಂದು ಮಧ್ಯಾಹ್ನ ಕಾರ್ಗಿಲ್ನಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ ನಾಯಕರನ್ನು ಭೇಟಿ ಮಾಡಿತು. ೨೦೧೯ ಆಗಸ್ಟ್ ಪೂರ್ವದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂಬ ವಿಚಾರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅಬ್ದುಲ್ಲ ಟ್ವೀಟ್ ಮಾಡಿದರು. 

No comments:

Advertisement