Wednesday, October 7, 2020

ಪ್ರತಿಭಟನೆ ಹೆಸರಲ್ಲಿ ರಸ್ತೆ, ಸಾರ್ವಜನಿಕ ಸ್ಥಳ ಆಕ್ರಮಿಸಲಾಗದು: ಸುಪ್ರೀಂಕೋರ್ಟ್

 ಪ್ರತಿಭಟನೆ ಹೆಸರಲ್ಲಿ  ರಸ್ತೆ,  ಸಾರ್ವಜನಿಕ ಸ್ಥಳ
ಆಕ್ರಮಿಸಲಾಗದು: ಸುಪ್ರೀಂಕೋರ್ಟ್

ನವದೆಹಲಿ: ’ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಸ್ಥಳ, ರಸ್ತೆಗಳನ್ನು ಅನಿರ್ದಿಷ್ಟ ಕಾಲ ಆಕ್ರಮಿಸಲಾಗದು ಎಂದು ಶಾಹೀನ್ ಬಾಗ್ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2020 ಅಕ್ಟೋಬರ್ 07 ಬುಧವಾರ ಮಹತ್ವದ ತೀರ್ಪು ನೀಡಿತು.

ಶಾಹೀನ್ ಬಾಗ್ ಪ್ರತಿಭಟನೆಯ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

ನ್ಯಾಯಮೂರ್ತಿಗಳಾದ ಸಂಜಯ್ ಕೆ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವgನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಪ್ರತಿಭಟನೆಯ ಹಕ್ಕನ್ನು ಚಲಾಯಿಸಲು ಸಾರ್ವಜನಿಕ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವುದಕ್ಕೆ ಕಾನೂನು ಅನುಮತಿ ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

"ಶಾಹೀನ್ ಬಾಗ್ ಇರಲಿ ಅಥವಾ ಬೇರೆಡೆಯೇ ಇರಲಿ, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನು ಅನಿರ್ದಿಷ್ಟವಾಗಿ ಆಕ್ರಮಿಸಲಾಗದು. ಇದು ಇತರರಿಗೆ ಅನಾನುಕೂಲ ಉಂಟು ಮಾಡುತ್ತದೆ ಎಂದು ನ್ಯಾಯಾಧೀಶರು ತೀರ್ಪಿನ ಆದೇಶದ ಭಾಗವನ್ನು ಓದುತ್ತಾ ತಿಳಿಸಿದರು.

ಪ್ರತಿಭಟನೆಯ ಹಕ್ಕನ್ನು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾಗಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಪ್ರತಿಭಟನೆಗಳು ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಡೆಯಬೇಕು ಎಂದು ನ್ಯಾಯಪೀಠ ಹೇಳಿತು.

ದೆಹಲಿಯ ಶಾಹೀನ್ ಬಾಗ್ ಪ್ರದೇಶದ ಉದ್ದಕ್ಕೂ ಸಾರ್ವಜನಿಕ ರಸ್ತೆಯನ್ನು ತೆರವುಗೊಳಿಸುವಲ್ಲಿ ದೆಹಲಿ ಪೊಲೀಸ್ ಮತ್ತು ಆಡಳಿತ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ವಕೀಲ ಅಮಿತ್ ಸಾಹ್ನಿ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಪೀಠ ತನ್ನ ತೀರ್ಪು ನೀಡಿತು.

ರಾಷ್ಟ್ರೀಯ ರಾಜಧಾನಿ ಪ್ರದೇಶವಾಗಿರುವ (ಎನ್ಸಿಆರ್) ದೆಹಲಿಯನ್ನು ಇತರ ನಗರಗಳೊಂದಿಗೆ ಸಂಪರ್ಕಿಸುವ ಅಪಧಮನಿಯ ರಸ್ತೆಯನ್ನು ನಿರ್ಬಂಧಿಸಿದ್ದರಿಂದ ಲಕ್ಷಾಂತರ ಪ್ರಯಾಣಿಕರು ಎದುರಿಸಿದ ಅನಾನುಕೂಲತೆಯತ್ತ  ಸಾಹ್ನಿ ಗಮನಸೆಳೆದಿದ್ದರು.

ರಸ್ತೆ ತೆರವುಗೊಳಿಸಲು ತನ್ನ ಅಧಿಕಾರ ವ್ಯಾಪ್ತಿಯ ಒಳಗೆ ಕಾರ್ಯನಿರ್ವಹಿಸುವಂತೆ ಹೈಕೋರ್ಟ್ ನಿರ್ದೇಶಿಸಿದ ನಂತರವೂ ದೆಹಲಿ ಪೊಲೀಸರು ಏನೂ ಮಾಡದೇ ಇರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸುವ ಮೂಲಕ ಪೀಠವು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

ಆಡಳಿತವು ಸಾರ್ವಜನಿಕ ಸ್ಥಳಗಳನ್ನು ಅಡೆತಡೆಗಳಿಂದ ಮುಕ್ತವಾಗಿರಿಸಿಕೊಳ್ಳಬೇಕು ಮತ್ತು ಅವರು ನ್ಯಾಯಾಲಯದ ಆದೇಶಕ್ಕಾಗಿ ಕಾಯಲು ಸಾಧ್ಯವಿಲ್ಲ ಅಥವಾ ಪ್ರತಿಭಟನಾಕಾರರೊಂದಿಗೆ ಕೊನೆಯಿಲ್ಲದ ಮಾತುಕತೆ ನಡೆಸಲೂ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

ಕಳೆದ ವರ್ಷ ಸಂಸತ್ ಅಂಗೀಕರಿಸಿದ್ದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ದೆಹಲಿಯ ಶಾಹೀನ್ ಬಾಗ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧದ ಪ್ರತಿಭಟನೆಗಳನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತ್ತು.

"ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಜೊತೆ ಜೊತೆಯಾಗಿ ಸಾಗುತ್ತವೆ. ಆದರೆ, ಮಾದರಿಯ ಪ್ರತಿಭಟನೆಗಳು ಸ್ವೀಕಾರಾರ್ಹ ಅಲ್ಲ ಎಂದು ಪೀಠ ಒತ್ತಿ ಹೇಳಿತು.

"ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಅದನ್ನು ಗೊತ್ತುಪಡಿಸಿದ ಸ್ಥಳಗಳಲ್ಲಿ ಮಾತ್ರ ನಡೆಸಬಹುದು" ಎಂದು ನ್ಯಾಯಾಲಯ ಹೇಳಿತು.

ಸೆಪ್ಟೆಂಬರ್ ೨೧ ರಂದು ನಡೆದ ಕೊನೆಯ ವಿಚಾರಣೆಯಲ್ಲಿ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

"ನಾವು ಪ್ರತಿಭಟಿಸುವ ಮತ್ತು ರಸ್ತೆಗಳನ್ನು ನಿರ್ಬಂಧಿಸುವ ಹಕ್ಕನ್ನು ಸಮತೋಲನಗೊಳಿಸಬೇಕಾಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಸಂಸತ್ತಿನಲ್ಲಿ ಮತ್ತು ರಸ್ತೆಗಳಲ್ಲಿ ಪ್ರತಿಭಟನೆಗಳು ನಡೆಯಬಹುದು. ಆದರೆ ರಸ್ತೆಗಳಲ್ಲಿ ನಡೆಯುವಾಗ ಅದು ಶಾಂತಿಯುತವಾಗಿ ಇರಬೇಕು ಪೀಠ ಹೇಳಿತು.

"ಸಾರ್ವತ್ರಿಕ ನೀತಿ" ಇರಲು ಸಾಧ್ಯವಿಲ್ಲ, ಏಕೆಂದರೆ ಸಂದರ್ಭಗಳು ಪ್ರಕರಣದಿಂದ "ಬದಲಾಗಬಹುದು ಎಂದು ನ್ಯಾಯಾಲಯವು ಹಿಂದೆ ಗಮನಿಸಿತ್ತು.

ದೆಹಲಿಯ ಶಾಹೀನ್ ಬಾಗ್ ಕಳೆದ ವರ್ಷ ಸಿಎಎ ವಿರೋಧಿ ಪ್ರತಿಭಟನೆಗಳ ಕೇಂದ್ರಬಿಂದುವಾಗಿತ್ತು, ಅಲ್ಲಿ ಪ್ರತಿಭಟನಾಕಾರರು-ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು - ಮೂರು ತಿಂಗಳಿಗಿಂತ ಹೆಚ್ಚು ಕಾಲ ರಸ್ತೆಗಳನ್ನು ಅತಿಕ್ರಮಿಸಿ ಕುಳಿತುಕೊಂಡಿದ್ದರು.

ಶಾಹೀನ್ ಬಾಗ್ ಪ್ರತಿಭಟನೆಗಳು ವಿಶ್ವಾದ್ಯಂತ ಗಮನ ಸೆಳೆದಿದ್ದವು. ಮತ್ತು ಚಳವಳಿಯ ಮುಖವಾದ ೮೨ ವರ್ಷದ ಬಿಲ್ಕಿಸ್ ದಾದಿಯನ್ನು "೨೦೨೦ ೧೦೦ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಟೈಮ್ ಮ್ಯಾಗಜಿನ್  ಗೌರವಿಸಿತ್ತು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರು ಧಾರ್ಮಿಕ ಕಿರುಕುಳದಿಂದ ಪಾರಾಗಲು ಮತ್ತು ೨೦೧೫ ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಪೌರತ್ವವನ್ನು ಪಡೆಯಲು ಅರ್ಹರಾಗುತ್ತಾರೆ ಎಂಬುದಾಗಿ ಹೇಳುವ ವಿವಾದಾತ್ಮಕ ಪೌರತ್ವ ಕಾನೂನು "ಮುಸ್ಲಿಂ ವಿರೋಧಿ ಎಂದು ಆಪಾದಿಸಿ ಪ್ರತಿಭಟನೆಗಳು ನಡೆದಿದ್ದವು.

ಕೊರೋನವೈರಸ್ ಸಾಂಕ್ರಾಮಿಕ ತೀವ್ರಗೊಂಡ ಬಳಿಕ ಕಳೆದ ಮಾರ್ಚ್ ತಿಂಗಳಲ್ಲಿ ಭಾರತ ಸರ್ಕಾರವು ಕಟ್ಟು ನಿಟ್ಟಾದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಜಾರಿಗೊಳಿಸಿದ ಬಳಿಕ ಪ್ರತಿಭಟನೆಗಳು ತಣ್ಣಗಾಗಿದ್ದವು.

No comments:

Advertisement