Thursday, October 15, 2020

ಅರುಣಾಚಲ, ಲಡಾಖ್: ಚೀನಾಕ್ಕೆ ಭಾರತದ ಖಡಕ್ ಎಚ್ಚರಿಕೆ

 ಅರುಣಾಚಲ, ಲಡಾಖ್: ಚೀನಾಕ್ಕೆ ಭಾರತದ ಖಡಕ್ ಎಚ್ಚರಿಕೆ

ನವದೆಹಲಿ: ಗಡಿಯಲ್ಲಿ ಭಾರತ ರಚಿಸುತ್ತಿರುವ ಮೂಲಸೌಕರ್ಯ ಯೋಜನೆಗಳ ಬಗ್ಗೆ ಪದೇ ಪದೇ ದೂರುತ್ತಿರುವುದರ ವಿರುದ್ಧ ಚೀನಾಕ್ಕೆ 2020 ಅಕ್ಟೋಬರ್ 15ರ ಗುರುವಾರ ಖಡಕ್ ಖಂಡನೆ ವ್ಯಕ್ತ ಪಡಿಸಿದ ಭಾರತ ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿತು.

ಆಂತರಿಕ ವಿಷಯಗಳ ಬಗ್ಗೆ ಇತರ ದೇಶಗಳು ನಿರೀಕ್ಷಿಸುವಂತೆಯೇ ಭಾರತದ ಆಂತರಿಕ ವಿಷಯಗಳ ಬಗ್ಗೆ ಚೀನಾ ಪ್ರತಿಕ್ರಿಯಿಸಬಾರದು ಎಂದು ಭಾರತ ಸ್ಪಷ್ಟವಾಗಿ ಸಾರಿತು.

ಪೂರ್ವ ಲಡಾಖ್‌ನ ಐದು ತಿಂಗಳುಗಳ ಗಡಿ ಬಿಕ್ಕಟ್ಟಿನ ಬಳಿಕ ಚೀನಾದ ವಿದೇಶಾಂಗ ಸಚಿವಾಲಯವು ಭಾರತವು ಗಡಿಯಲ್ಲಿ ಮಾಡುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಚೀನಾ ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಭಾರತದಿಂದ ಕಠಿಣ ಸಂದೇಶದ ರವಾನೆಯಾಗಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್  ಅವರು ವಾರ ಗಡಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ದರು ಮತ್ತು ಸೇನೆ ನಿಯೋಜನೆಯೊಂದಿಗೆ ಮೂಲಸವಲತ್ತು ಅಭಿವೃದ್ಧಿ ಪಡಿಸುತ್ತಿರುವುದೇ ಉಭಯ ರಾಷ್ಟ್ರಗಳ ನಡುವಣ ಉದ್ವಿಗ್ನತೆಗೆ ಮೂಲ ಕಾರಣ ಎಂದು ವಿವರಿಸಲು ಮುಂದಾಗಿದ್ದರು.

"ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದರು.

"ಅರುಣಾಚಲ ಪ್ರದೇಶದ ಬಗ್ಗೆ ನಮ್ಮ ನಿಲುವನ್ನು ಹಲವಾರು ಬಾರಿ ಸ್ಪಷ್ಟಪಡಿಸಲಾಗಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ. ಅಂಶವನ್ನು ಉನ್ನತ ಮಟ್ಟದಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಚೀನಾಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ವಕ್ತಾರರು ಹೇಳಿದರು.

ಚೀನಾಕ್ಕೆ "ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಸ್ಥಾನಾಧಿಕಾರ ಇಲ್ಲ ಎಂದು ನೆನಪಿಸಿದ ನವದೆಹಲಿ, ಚೀನಾವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೈಹಾಕುವುವ ಬಗ್ಗೆ ಭಾರತವು ಸದಾ ಕಾಲವು ಸಂಯಮ ವಹಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿತು.

ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಅರುಣಾಚಲ ಪ್ರದೇಶವನ್ನು ಮಾನ್ಯ ಮಾಡುವುದಿಲ್ಲ ಎಂಬ ಚೀನಾದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಸ್ಥಾನಾಧಿಕಾರವೂ ಇಲ್ಲ ಎಂದು ಹೇಳಿತು.

"ಲಡಾಖ್, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಸ್ಥಾನಾಧಿಕಾರವಿಲ್ಲ ಎಂದು ಶ್ರೀವಾಸ್ತವ ಹೇಳಿದರು.

ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ೪೪ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಉದ್ಘಾಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಗಡಿ ಮೂಲಸೌಕರ್ಯ ಅಭಿವೃದ್ಧಿಯು ಉಭಯರ ನಡುವಣ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ ಎಂದು ಹೇಳಿದ್ದರು.

ಮೊದಲಿಗೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಅಕ್ರಮವಾಗಿ ಭಾರತವು ಸ್ಥಾಪಿಸಿರುವ ಅರುಣಾಚಲ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ನಾವು ಮಾನ್ಯ ಮಾಡುವುದಿಲ್ಲ. ಗಡಿ ಪ್ರದೇಶದ ಮಿಲಿಟರಿ ವಿವಾದವನ್ನು ಗುರಿಯಾಗಿರಿಸಿಕೊಂಡು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿ ಮಾಡುವುದಕ್ಕೆ ನಾವು ವಿರುದ್ಧವಾಗಿದ್ದೇವೆ ಎಂದು ಚೀನಾದ ವಕ್ತಾರರು ಹೇಳಿದ್ದರು.

ಗಡಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಮಾತನಾಡಿದ ಶ್ರೀವಾಸ್ತವ, ಜೀವನೋಪಾಯ, ಜನರ ಆರ್ಥಿಕ ಕಲ್ಯಾಣ ಸುಧಾರಣೆಗೆ ಮೂಲಸೌಕರ್ಯಗಳನ್ನು ರಚಿಸುವತ್ತ ಸರ್ಕಾರ ಗಮನಹರಿಸಿದೆ. "ಆರ್ಥಿಕ ಅಭಿವೃದ್ಧಿಗಾಗಿ ಗಡಿ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಭಾರತದ ಭದ್ರತೆ, ಕಾರ್ಯತಂತ್ರದ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ನಿರ್ದಿಷ್ಟ ಗಮನವನ್ನು ನೀಡುತ್ತದೆ ಎಂದು ಹೇಳಿದರು.

ಭಾರತ ಉದ್ಘಾಟಿಸಿದ ಸೇತುವೆಗಳನ್ನು ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಆಯಕಟ್ಟಿನ ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.

ಸೇತುವೆಗಳಲ್ಲಿ ಹೆಚ್ಚಿನವು ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಲಯಗಳಲ್ಲಿ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಸೈನ್ಯದ ಚಲನೆಯನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿವೆ. ಆದಾಗ್ಯೂ, ಉದ್ವಿಗ್ನ ಪರಿಸ್ಥಿತಿಯನ್ನು ಶಮನಿಸುವ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ.

No comments:

Advertisement