ರಾಜಮಾತೆ ವಿಜಯರಾಜೇ ಸಿಂಧಿಯಾ ವಿಶೇಷ ನಾಣ್ಯ ಬಿಡುಗಡೆ
ನವದೆಹಲಿ: ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾದ ವಿಜಯರಾಜೇ ಸಿಂಧಿಯಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೦ ಅಕ್ಟೋಬರ್ ೧೨ರ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ೧೦೦ ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ ಮಾಡಿದರು..
ವಿಜಯರಾಜೇ ಸಿಂಧಿಯಾ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಮಾತೆ ಸಿಂಧಿಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಮಾಡುವ ಮೂಲಕ ದೇಶವು ರಾಜಮಾತೆ ಸಿಂಧಿಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು..
ಸಮಾರಂಭದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ೧೦೦ ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ್ದು, ಈ ವಿಶೇಷ ನಾಣ್ಯವನ್ನು ಹಣಕಾಸು ಸಚಿವಾಲಯ ಮುದ್ರಿಸಿದೆ.
ಧೀಮಂತ ನಾಯಕಿಗೆ ಗೌರವ ಸಲ್ಲಿಸಿದ ಮೋದಿ, ರಾಜಮಾತಾ ಸಿಂಧಿಯಾ ಅವರ ಜೀವನ ಮತ್ತು ಕಾರ್ಯ ಸದಾ ಬಡವರ ಆಕಾಂಕ್ಷೆಗಳೊಂದಿಗೆ ಬೆಸೆದುಕೊಂಡಿತ್ತು ಮತ್ತು ಅವರ ಜೀವನವು ಜನಸೇವಗೆ ಮೀಸಲಾಗಿತ್ತು. ಕಳೆದ ಶತಮಾನದಲ್ಲಿ ಭಾರತಕ್ಕೆ ನಿರ್ದೇಶನ ನೀಡಿದ ಮತ್ತು ಭಾರತೀಯ ರಾಜಕಾರಣದ ಪ್ರತಿಯೊಂದು ಪ್ರಮುಖ ಹಂತಕ್ಕೂ ಸಾಕ್ಷಿಯಾದ ವ್ಯಕ್ತಿಗಳಲ್ಲಿ ಸಿಂಧಿಯಾ ಒಬ್ಬರು ಎಂದು ಹೇಳಿದರು.
ರಾಜಮಾತೆ ವಿಜಯರಾಜೆ ಸಿಂಧಿಯಾ ಅವರ ಗೌರವಾರ್ಥ ೧೦೦ ರೂಪಾಯಿ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.
ವಿಜಯರಾಜೆಯವರ ಪುಸ್ತಕವನ್ನು ಉಲ್ಲೇಖಿಸಿದ ಪ್ರಧಾನಿಯವರು, ಪುಸ್ತಕದಲ್ಲಿ ತಮ್ಮನ್ನು ಗುಜರಾತಿನ ಯುವ ನಾಯಕನೆಂದು ಪರಿಚಯಿಸಲಾಗಿತ್ತು. ಇಂದು ಇಷ್ಟು ವರ್ಷಗಳ ನಂತರ ತಾನು ದೇಶದ ಪ್ರಧಾನ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಭಾರತವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದವರಲ್ಲಿ ರಾಜಮಾತೆ ವಿಜಯರಾಜೇ ಸಿಂಧಿಯಾ ಕೂಡಾ ಒಬ್ಬರು. ಅವರೊಬ್ಬ ನಿರ್ಣಾಯಕ ನಾಯಕಿ ಮತ್ತು ಕುಶಲ ಆಡಳಿತಗಾರರಾಗಿದ್ದರು. ವಿದೇಶಿ ಬಟ್ಟೆಗಳನ್ನು ಸುಡುವುದು, ತುರ್ತುಪರಿಸ್ಥಿತಿ ಮತ್ತು ರಾಮ ಮಂದಿರ ಆಂದೋಲನ ಮುಂತಾದ ಭಾರತ ರಾಜಕಾರಣದ ಪ್ರತಿಯೊಂದು ಪ್ರಮುಖ ಹಂತಕ್ಕೂ ಅವರು ಸಾಕ್ಷಿಯಾಗಿದ್ದರು ಎಂದು ಪ್ರಧಾನ ಮಂತ್ರಿ ಹೇಳಿದರು. ಈಗಿನ ಪೀಳಿಗೆಯು ರಾಜಮಾತೆಯ ಜೀವನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ಅವರ ಬಗ್ಗೆ ಮತ್ತು ಅವರ ಅನುಭವಗಳ ಬಗ್ಗೆ ಪದೇ ಪದೇ ಪ್ರಸ್ತಾಪಿಸುವುದು ಅವಶ್ಯಕ ಎಂದು ಅವರು ಒತ್ತಿ ಹೇಳಿದರು.
ಸಾರ್ವಜನಿಕ ಸೇವೆಗೆ ಬೇಕಾಗಿರುವುದು ರಾಷ್ಟ್ರದ ಮೇಲಿನ ಪ್ರೀತಿ ಮತ್ತು ಪ್ರಜಾಪ್ರಭುತ್ವದ ಮನೋಧರ್ಮ. ಈ ತತ್ವ, ಆದರ್ಶಗಳನ್ನು ಅವರ ಜೀವನದಲ್ಲಿ ಕಾಣಬಹುದು. ರಾಜಮಾತೆಯವರಿಗೆ ಸಾವಿರಾರು ಮಂದಿ ಕೆಲಸಗಾರರರು ಇದ್ದರು, ಭವ್ಯವಾದ ಅರಮನೆ ಇತ್ತು ಮತ್ತು ಎಲ್ಲಾ ಸೌಲಭ್ಯಗಳನ್ನು ಅವರು ಹೊಂದಿದ್ದರು. ಆದರೆ ಜನಸಾಮಾನ್ಯರ ಹಿತಕ್ಕಾಗಿ, ಬಡವರ ಆಕಾಂಕ್ಷೆಗಳಿಗಾಗಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟರು. ಅವರು ಯಾವಾಗಲೂ ಜನರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು. ರಾಜಮಾತೆಯು ರಾಷ್ಟ್ರದ ಭವಿಷ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರು ದೇಶದ ಮುಂದಿನ ಪೀಳಿಗೆಗಾಗಿ ತಮ್ಮ ಎಲ್ಲ ಸಂತೋಷವನ್ನು ತ್ಯಾಗ ಮಾಡಿದ್ದರು. ರಾಜಮಾತೆಯವರು ಸ್ಥಾನ ಮತ್ತು ಪ್ರತಿಷ್ಠೆಗಾಗಿ ಬದುಕಲಿಲ್ಲ, ರಾಜಕೀಯ ಕೂಡ ಮಾಡಲಿಲ್ಲ ಎಂದು ಪ್ರಧಾನಿ ಹೇಳಿದರು.
ರಾಜಮಾತೆಯವರು ವಿನಯದಿಂದಲೇ ಅನೇಕ ಸ್ಥಾನಗಳನ್ನು ತಿರಸ್ಕರಿಸಿದ ಕೆಲವು ಸಂದರ್ಭಗಳನ್ನು ಪ್ರಧಾನಿ ನೆನಪಿಸಿಕೊಂಡರು. ಜನ ಸಂಘದ ಅಧ್ಯಕ್ಷರಾಗುವಂತೆ ಅಟಲ್ ಜಿ ಮತ್ತು ಅಡ್ವಾಣಿ ಜಿ ಅವರು ಒಮ್ಮೆ ಒತ್ತಾಯಿಸಿದರು. ಆದರೆ ಜನ ಸಂಘದಲ್ಲಿ ಕಾರ್ಯಕರ್ತರಾಗಿಯೇ ಸೇವೆ ಸಲ್ಲಿಸಲು ಅವರು ಬಯಸಿದರು ಎಂದು ಅವರು ಹೇಳಿದರು.
ರಾಜಮಾತೆಯವರು ತಮ್ಮ ಸಹಚರರನ್ನು ಹೆಸರಿನಿಂದ ಗುರುತಿಸಲು ಇಷ್ಟಪಡುತ್ತಿದ್ದರು ಮತ್ತು ಕೆಲಸಗಾರರ ಬಗೆಗಿನ ಈ ಭಾವನೆ ಎಲ್ಲರ ಮನಸ್ಸಿನಲ್ಲೂ ಇರಬೇಕು. ಹೆಮ್ಮೆಯ ಬದಲು ಗೌರವವು ರಾಜಕೀಯದ ತಿರುಳಾಗಿರಬೇಕು ಎಂದು ಪ್ರಧಾನಿ ಹೇಳಿದರು. ರಾಜಮಾತೆಯವರನ್ನು ಆಧ್ಯಾತ್ಮಿಕ ವ್ಯಕ್ತಿತ್ವ ಎಂದು ಪ್ರಧಾನಿ ಬಣ್ಣಿಸಿದರು.
ಸಿಂಧಿಯಾ ಅವರು ಹೋರಾಟ ನಡೆಸಿದ ರಾಮ ಜನ್ಮಭೂಮಿ ಮಂದಿರದ ಕನಸು ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಈಡೇರಿರುವುದು ಕಾಕತಾಳೀಯ ಎಂದು ಪ್ರಧಾನಿ ಹೇಳಿದರು. ಆತ್ಮನಿರ್ಭರ ಭಾರತದ ಯಶಸ್ಸು ದೃಢ, ಸುರಕ್ಷಿತ ಮತ್ತು ಸಮೃದ್ಧ ಭಾರತವನ್ನು ಸಾಕಾರಗೊಳಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
No comments:
Post a Comment