My Blog List

Monday, October 19, 2020

ಭಾರತದ ಪ್ರದೇಶಕ್ಕೆ ಬಂದ ಚೀನೀ ಯೋಧನ ಸೆರೆ

 ಭಾರತದ ಪ್ರದೇಶಕ್ಕೆ ಬಂದ ಚೀನೀ ಯೋಧನ ಸೆರೆ

ನವದೆಹಲಿ/ ಲಡಾಖ್: ಲಡಾಖ್ ಚುಮಾರ್- ಡೆಮ್ಚೋಕ್ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ ಚೀನಾದ ಯೋಧನೊಬ್ಬನನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದ ಘಟನೆ ಘಟಿಸಿದೆ.

ಚೀನೀ ಯೋಧ ಕಣ್ತಪ್ಪಿನಿಂದ ಭಾರತೀಯ ಭೂ ಪ್ರದೇದ ಒಳಕ್ಕೆ ಬಂದಿರಬಹುದು ಎಂದು ಮೂಲಗಳು ತಿಳಿಸಿವೆ. ಶಿಷ್ಟಾಚಾರದ ಪ್ರಕಾರ ಸೂಕ್ತ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಯೋಧನನ್ನು ಚೀನೀ ಸೇನೆಗೆ ಒಪ್ಪಿಸಲಾಗುತ್ತದೆ ಎಂದು ಭಾರತೀಯ ಸೇನೆ 2020 ಅಕ್ಟೋಬರ್ 19ರ ಸೋಮವಾರ ಹೇಳಿತು.

ಪ್ರಸ್ತುತ ಭಾರತ ಸೇನೆಯ ವಶದಲ್ಲಿರುವ ಯೋಧನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್) ಕಾರ್ಪೊರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿದೆ. ಪೂರ್ವ ಲಡಾಖ್ನಲ್ಲಿ ನೈಜ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಓಡಾಡುತ್ತಿದ್ದಾಗ ಭಾರತೀಯ ಭದ್ರತಾ ಪಡೆಗಳು ಅವರನ್ನು ವಶಕ್ಕೆ ಪಡೆದವು ಎಂದು ಸುದ್ದಿ ಮೂಲಗಳು ಹೇಳಿವೆ.

ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಣ ಗಡಿ ಘರ್ಷಣೆಯ ಮಧ್ಯೆ ಚೀನೀ ಯೋಧ ಭಾರತೀಯ ಗಡಿಯೊಳಕ್ಕೆ ಪ್ರವೇಶಿಸಿದ ಘಟನೆ ಘಟಿಸಿದೆ. ಮೇ ಆರಂಭದಲ್ಲಿ ಪ್ರಾರಂಭವಾದ ಐದು ತಿಂಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟು ಉಲ್ಬಣಗೊಂಡ ನಂತರ, ಭಾರತ ಮತ್ತು ಚೀನಾದ ಸೈನ್ಯಗಳು ಪೂರ್ವ ಲಡಾಖ್  ಎಲ್ಎಸಿಯ ಉದ್ದಕ್ಕೂ ಡೆಮ್ಚಾಕ್ ವಲಯವನ್ನು ಒಳಗೊಂಡಂತೆ ತಲಾ ೫೦,೦೦೦ ಸೈನಿಕರನ್ನು ನಿಯೋಜಿಸಿವೆ.

೬ನೇ ಯಾಂತ್ರಿಕೃತ ಕಾಲಾಳುಪಡೆ ವಿಭಾಗದವನು ಎಂದು ಹೇಳಲಾಗುತ್ತಿರುವ ಸೈನಿಕನನ್ನು ಗೂಢಚರ್ಯೆ ಕಾರ್ಯಾಚರಣೆಯಲ್ಲಿದ್ದಾನೆಯೇ ಎಂದು ಸೇನೆಯು ಪ್ರಶ್ನಿಸುತ್ತಿದೆ. ಯೋಧನ ಬಳಿ ನಾಗರಿಕ ಮತ್ತು ಮಿಲಿಟರಿ ದಾಖಲೆಗಳಿದ್ದವು ಎಂದು ಮೂಲಗಳು ತಿಳಿಸಿವೆ.

ತನ್ನ ಚಮರೀಮೃಗವನ್ನು (ಯಾಕ್) ಹುಡುಕುತ್ತಾ ಭಾರತದೊಳಗಿನ ಪ್ರದೇಶವನ್ನು ಪ್ರವೇಶಿಸಿರುವುದಾಗಿ ಯೋಧ ಹೇಳಿಕೊಂಡಿದ್ದಾನೆ, ಆತ ಏಕಾಂಗಿಯಾಗಿದ್ದು, ಆತನ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ಮೂಲಗಳು ಹೇಳಿವೆ.

ತೀವ್ರ ಚಳಿಯ ವಾತಾವರಣ ಮತ್ತು ಎತ್ತರ ಪ್ರದೇಶದ ಹವಾಗುಣದಿಂದ ರಕ್ಷಣೆ ನೀಡಲು ಬಂಧಿತ ಚೀನೀ ಯೋಧನಿಗೆ ಸೂಕ್ತ ವೈದ್ಯಕೀಯ ಸಹಕಾರ, ಆಮ್ಲಜನಕ, ಆಹಾರ ಹಾಗೂ ಬೆಚ್ಚನೆಯ ಉಡುಪು ನೀಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಕಣ್ಮರೆಯಾಗಿರುವ ಯೋಧನ ಸುಳಿವು ಪತ್ತೆಗಾಗಿ ಚೀನಾ ಸೇನೆಯಿಂದಲೂ ಮನವಿ ಬಂದಿದೆ. ಪ್ರಸ್ತುತ ಅನುಸರಿಸಲಾಗುತ್ತಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಚುಶೂಲ್-ಮೋಲ್ಡೊ ಪ್ರದೇಶದಲ್ಲಿ ಚೀನಾದ ಅಧಿಕಾರಿಗಳಿಗೆ ಅವರನ್ನು ಒಪ್ಪಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

ಜೂನ್ ೧೫ರಂದು ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕಮಾಂಡಿಂಗ್ ಆಫೀಸರ್ ಶ್ರೇಣಿಯ ಅಧಿಕಾರಿ ಸೇರಿದಂತೆ ೨೧ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು-ನೋವು ಸಂಭವಿಸಿತ್ತು. ಆದರೆ ಅದರ ವಿವರಗಳನ್ನು ಚೀನಾ ಬಹಿರಂಗಪಡಿಸಿಲ್ಲ.

ಉಭಯ ರಾಷ್ಟ್ರಗಳು ಸೇನೆ ಹಿಂಪಡೆಯುವ ಕುರಿತು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿವೆ. 

ಈವರೆಗೆ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಉಭಯ ದೇಶಗಳ ನಡುವೆ ಏಳು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ನಡೆದಿದೆ.

ಭಾರತ ಮತ್ತು ಚೀನಾ ಮುಂದಿನ ವಾರ ಲಡಾಖ್ ವಲಯದಲ್ಲಿ ಚಟುವಟಿಕೆ ನಿಷ್ಕ್ರಿಯಗೊಳಿಸುವ ಕುರಿತು ಎಂಟನೇ ಸುತ್ತಿನ ಮಿಲಿಟರಿ-ರಾಜತಾಂತ್ರಿಕ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಮಿಲಿಟರಿ ಕಮಾಂಡರ್ ಮಟ್ಟ ಮತ್ತು ರಾಜತಾಂತ್ರಿಕ ಮಟ್ಟಗಳಲ್ಲಿ ಸಂವಾದ ಮಾರ್ಗಗಳನ್ನು ಮುಕ್ತವಾಗಿಡಲು ಉಭಯ ಕಡೆಯವರು ನಿರ್ಧರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಕಸ್ಮಿಕ ಸಂದರ್ಭದಲ್ಲಿ ಅಥವಾ ವೈಯಕ್ತಿಕ ಕಮಾಂಡರ್ ಆಕ್ರಮಣಶೀಲತೆಯ ವರ್ತನೆ ಸಂದರ್ಭದಲ್ಲಿ ಘರ್ಷಣೆ ಉಲ್ಬಣಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲೂ ಮಾತುಕತೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ.

No comments:

Advertisement