ಕಾಬೂಲಿನಲ್ಲಿ ಉಗ್ರ ದಾಳಿ: 8 ಜನರ ಸಾವು
ಕಾಬೂಲ್: ಕಾಬೂಲ್ ನಗರದಲ್ಲಿ ಉಗ್ರಗಾಮಿಗಳು 2020 ನವೆಂಬರ್ 21ರ ಶನಿವಾರ ಬೆಳಗ್ಗೆ ನಡೆಸಿದ ರಾಕೆಟ್ ದಾಳಿಯಲ್ಲಿ ಎಂಟು ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
‘ಉಗ್ರಗಾಮಿಗಳು ಒಟ್ಟು ೨೩ ರಾಕೆಟ್‌ಗಳನ್ನು ಉಡಾಯಿಸಿದ್ದರು. ಈ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದರು. ೩೧ ಮಂದಿ ಗಾಯಗೊಂಡರು’ ಎಂದು ಆಂತರಿಕಾ ಭದ್ರತಾ ಸಚಿವಾಲಯದ ವಕ್ತಾರ ತಾರಿಕ್ ಅರಿಯಾನ್ ಹೇಳಿದರು.
‘ತಾಲಿಬಾನ್ ಉಗ್ರರು ಈ ಕೃತ್ಯವನ್ನು ಎಸಗಿದ್ದಾರೆ’ ಎಂದು ಅವರು ಆಪಾದಿಸಿದರು.
‘ರಾಯಭಾರ ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳಿರುವ ಹಸಿರು ವಲಯವನ್ನೇ ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಶನಿವಾರ ಬೆಳಗ್ಗೆ ೯ ಗಂಟೆ ಸುಮಾರಿಗೆ ರಾಕೆಟ್ ದಾಳಿ ನಡೆಸಿದ್ದರು. ಆದರೆ ದುರದೃಷ್ಟವಶಾತ್ ಈ ರಾಕೆಟ್‌ಗಳು ಜನವಸತಿ ಪ್ರದೇಶಗಳಲ್ಲಿ ಬಿದ್ದವು’ ಎಂದು ಅವರು ಮಾಹಿತಿ ನೀಡಿದರು.
ರಾಕೆಟ್ ದಾಳಿಯಿಂದಾಗಿ ಬೃಹತ್ ಕಟ್ಟಡಗಳ ಗೋಡೆಗಳಿಗೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ತಾಲಿಬಾನ್ ಸೇರಿದಂತೆ ಯಾವ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಕಾಬೂಲ್ ನಗರದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಹಾಗೂ ಇತರೆಡೆ ಇತ್ತೀಚೆಗೆ ನಡೆದಿದ್ದ ಉಗ್ರಗಾಮಿ ದಾಳಿಯಲ್ಲಿ ಸುಮಾರು ೫೦ ಮಂದಿ ಅಸು ನೀಗಿದ್ದರು.
‘ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ನಡೆದಿರುವ ರಾಕೆಟ್ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ. ನಾವು ಸಾರ್ವಜನಿಕ ಸ್ಥಳಗಳ ಮೇಲೆ ಕಣ್ಣುಮುಚ್ಚಿಕೊಂಡು ದಾಳಿ ನಡೆಸುವವರಲ್ಲ’ ಎಂದು ತಾಲಿಬಾನಿನ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
No comments:
Post a Comment