ಗ್ರಾಹಕರ ಸುಖ-ದುಃಖ

My Blog List

Friday, November 6, 2020

ಟ್ರಂಪ್ ಮಾಜಿ ವ್ಯೂಹತಜ್ಞ ಸ್ಟೀವ್ ಬ್ಯಾನೋನ್ ಟ್ವಿಟ್ಟರಿನಿಂದ ಔಟ್

 ಟ್ರಂಪ್ ಮಾಜಿ ವ್ಯೂಹತಜ್ಞ  ಸ್ಟೀವ್ ಬ್ಯಾನೋನ್ ಟ್ವಿಟ್ಟರಿನಿಂದ ಔಟ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಮಾಜಿ ಮುಖ್ಯ ಸಮರ ತಂತ್ರಜ್ಞ ಸ್ಟೀವ್ ಬ್ಯಾನೋನ್ ಅವರನ್ನು ಅಮೆರಿಕ ಸರ್ಕಾರದ ಮುಖ್ಯ ಸಾಂಕ್ರಾಮಿಕ ತಜ್ಞ ಡಾ. ಆಂಥೋಣಿ ಫೌಸಿ ಮತ್ತು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಅವರ ತಲೆ ಕಡಿಯುವಂತೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಟ್ವಿಟ್ಟರಿನಿಂದ ಕಾಯಂ ಆಗಿ 2020 ನವೆಂಬರ್ 06ರ ಶುಕ್ರವಾರ ಅಮಾನತುಗೊಳಿಸಲಾಯಿತು.

ಅಮೆರಿಕದ ಪ್ರಜೆಗಳು ನವೆಂಬರ್ ೩ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕಾಗಿ ಇನ್ನೂ ಕಾಯುತ್ತಿರುವಾಗಲೇ ಕ್ರಮ ಕೈಗೊಳ್ಳಲಾಗಿದೆ.

ಬ್ಯಾನೋನ್ ಅವರು ತಮ್ಮ ವಿವಾದಾತ್ಮಕ ಸ್ಟೀವ್ ಬ್ಯಾನೋನ್ಸ್ ವಾರ್ ರೂಮ್ ಯುಟ್ಯೂಬ್ ವಿಡಿಯೋದಲ್ಲಿ ತಮ್ಮ ಹೇಳಿಕೆ ನೀಡಿದ್ದರು. ಬಲಪಂಥೀಯ ನಾಯಕ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಗೆದ್ದರೆ ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕುರಿತಾಗಿ ವಿಡಿಯೋದಲ್ಲಿ ಮಾತನಾಡಿದ್ದರು.

ಸಹಚರ ಜ್ಯಾಕ್ ಮ್ಯಾಕ್ಸೀ ಜೊತೆಗೆ ಮಾತನಾಡುತ್ತಿದ್ದ ಬ್ಯಾನೋನ್, ಟ್ರಂಪ್ ಅವರು ಪುನರಾಯ್ಕೆಯಾದ ತತ್ ಕ್ಷಣವೇ ಮೊದಲು ಮಾಡಬೇಕಾದ ಕೆಲಸ ರೇ ಮತ್ತು ಫೌಸಿ ಅವರನ್ನು ತರಾಟೆಗೆ ತೆಗೆದುಕೊಳ್ಳುವುದು ಎಂದು ಹೇಳಿದರು. ಅಷ್ಟಕ್ಕೆ ನಿಲ್ಲದ ಬ್ಯಾನೋನ್ ನಾನು ವಾಸ್ತವವಾಗಿ ಟ್ಯೂಡೋರ್ ಇಂಗ್ಲೆಂಡ್ ಕಾಲಕ್ಕೆ ಹೋಗಬಯಸುತ್ತೇನೆ. ಅವರ ತಲೆಗಳನ್ನು ಭರ್ಜಿಗೆ ಹಾಕುತ್ತೇನೆ. ಹೌದು, ಫೆಡರಲ್ ಅಧಿಕಾರಿಗಳಿಗೆ ಎಚ್ಚರಿಕೆಯಾಗಿ, ನಾನು ಅವುಗಳನ್ನು ಶ್ವೇತಭವನದ ಎರಡು ಮೂಲೆಗಳಲ್ಲಿ ತೂಗಾಡಿಸುತ್ತೇನೆ ಎಂದು ಹೇಳಿದ್ದರು.

ಬ್ಯಾನೋನ್ ಮತ್ತು ಮ್ಯಾಕ್ಸೀ ಅವರು ನಂತರ ಫಿಲಡಲ್ಫಿಯಾದ ಇಬ್ಬರು ಟೋರಿಗಳನ್ನು ಗಲ್ಲಿಗೇರಿಸಿದ್ದರ ವಾರ್ಷಿಕೋತ್ಸವ ಬಗ್ಗೆ ಮಾತನಾಡಿದ್ದರು. ದೇಶದ್ರೋಹಿಗಳಿಗೆ ನಾವು ಮಾಡುತ್ತಿದ್ದುದು ಹೀಗೆ ಎಂದು ಅವರು ಹೇಳಿದ್ದರು.

ವಿಡಿಯೋ ಬಲು ಬೇಗನೇ ವೈರಲ್ ಆಯಿತು. ಬೆನ್ನಲ್ಲೇ ಟ್ವಿಟ್ಟರಿನಂತಹ ಸಾಮಾಜಿಕ ಮಾಧ್ಯಮಗಳು ಬ್ಯಾನನ್ ಅವರ ಖಾತೆಯನ್ನು ಕಾಯಂ ಆಗಿ ಅಮಾನತುಗೊಳಿಸಿದವು. ಇದರ ಅರ್ಥವೇನೆಂದರೆ ಪುನಾರಂಭಿಸುವಂತೆ ಮನವಿ ಮಾಡಬಹುದಾಗಿದ್ದರೂ ಅದು ತಾನೇ ತಾನಾಗಿ ಪುನಸ್ಥಾಪನೆಗೊಳ್ಳುವುದಿಲ್ಲ.

ಯುಟ್ಯೂಬ್ ಕೂಡಾ ತನ್ನ ವೇದಿಕೆಯಿಂದ ವಿವಾದಾತ್ಮಕ ವಿಡಿಯೋವನ್ನು ಕಿತ್ತು ಹಾಕಿದೆ.

ಬಲಪಂಥೀಯ ಪ್ರಕಟಣೆಯಾದ ಬ್ರೀಟ್‌ಬಾರ್ಟ್ ಮಾಜಿ ಮುಖ್ಯ ಸಂಪಾದಕರಾಗಿದ್ದ ಬ್ಯಾನೋನ್ ಅವರು ಹೀಗೆ ವಿವಾದ ಹುಟ್ಟು ಹಾಕಿದ್ದು ಇದೇ ಮೊದಲೇನಲ್ಲ.

ಡೊನಾಲ್ಡ್ ಟ್ರಂಪ್ ಅವರ ೨೦೧೬g ಚುನಾವಣಾ ವಿಜಯದ ವಾಸ್ತುಶಿಲ್ಪಿಯಾಗಿದ್ದ ಬ್ಯಾನೋನ್, ಕಟ್ಟಾ ಮಡಿವಂತ ಹಾಗೂ ಯಹೋದ್ಯ ವಿರೋಧಿ ಹೇಳಿಕೆಗಾಗಿ ಆಗಸ್ಟ್ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದರು ಮತ್ತು  ವಂಚನೆ ಪ್ರಕರಣ ಒಂದರಲಿ ತಾವು ತಪ್ಪಿತಸ್ಥರಲ್ಲ ಎಂದು ಪ್ರತಿಪಾದಿಸಿದ್ದರು.

No comments:

Advertisement