My Blog List

Friday, November 6, 2020

ಅಮೆರಿಕದ ೪೬ನೇ ಅಧ್ಯಕ್ಷ ಜೋ ಬಿಡೆನ್

 ಅಮೆರಿಕದ ೪೬ನೇ ಅಧ್ಯಕ್ಷ ಜೋ ಬಿಡೆನ್

ಜಾರ್ಜಿಯಾ, ಪೆನ್ಸಿಲ್ವೇನಿಯಾದಲ್ಲೂ ಗೆಲುವು, ಕೋರ್ಟ್ ಸಮರದತ್ತ ಟ್ರಂಪ್

ವಾಷಿಂಗ್ಟನ್: ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರು ೧೯೯೨ರಿಂದ ರಿಪಬ್ಲಿಕನ್ ಭದ್ರಕೋಟೆಯಾಗಿದ್ದ ಜಾರ್ಜಿಯಾ ರಾಜ್ಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದೆ ಹಾಕಿ ಮುಂದಕ್ಕೆ ಸಾಗುವುದರ ಜೊತೆಗೆ ಪೆನ್ಸಿಲ್ವೇನಿಯಾದಲ್ಲೂ ೨೦ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿದ್ದಾರೆ. ಇದರೊಂದಿಗೆ ೨೭೩ ಮತಗಳನ್ನು ಗೆದ್ದಿರುವ ಜೋ ಬಿಡೆನ್ ಅವರು ಅಮೆರಿಕದ ೪೬ನೇ ಅಧ್ಯಕ್ಷರಾಗಲಿದ್ದಾರೆ ಎಂದು ಡಿಸಿಷನ್ ಡೆಸ್ಕ್ ಎಚ್ ಕ್ಯೂ (ಡಿಡಿಎಚ್ ಕ್ಯೂ) 2020 ನವೆಂಬರ್ 06ರ ಶುಕ್ರವಾರ ಹೇಳಿತು.

ಆದರೆ, ಚುನಾವಣೆ ಮುಗಿದಿಲ್ಲ ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರ್ಜಿಯಾದಲ್ಲಿ ಮತಗಳ ಮರುಎಣಿಕೆಗೆ ಆಗ್ರಹಿಸಿದ್ದು, ಮತಗಳ ಮರುಎಣಿಕೆ ನಡೆಸುವುದಾಗಿ ಜಾರ್ಜಿಯಾ ರಾಜ್ಯ ಪ್ರಕಟಿಸಿದೆ. ಮಧ್ಯೆ, ಬಿಡೆನ್ ಪಡೆದ ಮತಗಳ ಶಾಸನಬದ್ಧತೆಯನ್ನು ಪ್ರಶ್ನಿಸಲು ಟ್ರಂಪ್ ಪ್ರಚಾರಕರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಶ್ವೇತಭವನದ ಅಧಿಕಾರವನ್ನು ಪಡೆದುಕೊಳ್ಳಲು ಬೇಕಾಗಿರುವ ೨೭೦ ಎಲೆಕ್ಟೋರಲ್ ಕಾಲೇಜು ಮತಗಳನ್ನು ಗಳಿಸಲು ಬಿಡೆನ್ ಅವರಿಗೆ ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡಾ ಅಥವಾ ನಾತ್ ಕರೋಲಿನಾ ನಾಲ್ಕು ರಾಜ್ಯಗಳ ಪೈಕಿ ಯಾವುದಾದರೂ ಒಂದು ರಾಜ್ಯದ ಬೆಂಬಲ ಲಭಿಸಿದರೆ ಸಾಕಾಗಿತ್ತು.

ಜಾರ್ಜಿಯಾ ರಾಜ್ಯದಿಂದ ಬಂದ ಇತ್ತೀಚಿನ ಫಲಿತಾಂಶದ ಪ್ರಕಾರ ಬಿಡೆನ್ ಅವರು ಶುಕ್ರವಾರ ಬೆಳಗ್ಗೆ ೯೧೭ ಮತಗಳಿಂದ ಟ್ರಂಪ್ ಅವರನ್ನು ಹಿಂದಕ್ಕೆ ತಳ್ಳಿದ್ದಾರೆ. ಮಾಜಿ ಉಪಾಧ್ಯಕ್ಷ ಬಿಡೆನ್ ಅವರು ಚುನಾವಣಾ ರಾತ್ರಿಯಿಂದ ಈವರೆಗೂ ಜಾರ್ಜಿಯಾದಲ್ಲಿ ಟ್ರಂಪ್ ಅವರಿಗಿಂತ ಹಿಂದಿದ್ದರು. ಹಲವು ನೂರು ಸಾವಿರ ಮತಗಳ ಅಂತರದೊಂದಿಗೆ ಪ್ರಾಥಮಿಕ ಮುನ್ನಡೆ ಗಳಿಸಿದ್ದ ಟ್ರಂಪ್ ಅವರ ಬಲ ಮೇಲ್ ಮೂಲಕ ಬಂದ ಮತಪತ್ರಗಳ ಲೆಕ್ಕ ಆರಂಭಿಸಿದ ಬಳಿಕ ಕುಸಿಯಲಾರಂಭಿಸಿತು. ಬಹುತೇಕ ಮೇಲ್ ಮತಗಳು ಡೆಮಾಕ್ರಟಿಕ್ ಅಭ್ಯರ್ಥಿಯ ಕೈ ಹಿಡಿದವು. ಪೆನ್ಸಿಲ್ವೇನಿಯಾದಿಂದ ರಾತ್ರಿ ಬಂದ ವರದಿಗಳ ಪ್ರಕಾರ ಅಲ್ಲೂ ಬಿಡೆನ್ ಟ್ರಂಪ್ ಅವರನ್ನು ಹಿಂದೆ ಹಾಕಿ ಮುಂದಕ್ಕೆ ಸಾಗಿದರು.

ಮತಗಳ ಮರುಎಣಿಕೆ ಹಾಗೂ ಸಂಭಾವ್ಯ ಕಾನೂನು ಸಮರದ ಜೊತೆಗೆ ಇನ್ನೂ ಸಾಕಷ್ಟು ಸಂಖ್ಯೆಯ ಮತಪತ್ರಗಳ ಎಣಿಕೆ ನಡೆಯಬೇಕಾಗಿರುವುದರಿಂದ ಫಲಿತಾಂಶ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಸಾಗರದಾಚೆ ನಿಯೋಜಿತರಾಗಿರುವ ಸೇನಾ ಸಿಬ್ಬಂದಿಯ ಮತಗಳೂ ಸೇರಿದಂತೆ ಭಾರೀ ಸಂಖ್ಯೆಯ ಮತಗಳನ್ನು ಇನ್ನೂ ಎಣಿಕೆ ಮಾಡಲಾಗಿಲ್ಲ.

ಚಾರಿತ್ರಿಕವಾಗಿ ಕೆಂಪು ಕೋಟೆಯಾಗಿದ್ದ ಜಾರ್ಜಿಯ ಸಮರಾಂಗಣದಲ್ಲಿ ಗೆಲುವು ಸಾಧಿಸಿದರೆ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಿಂದ ಉಚ್ಚಾಟಿಸುವ ಹಂತಕ್ಕೆ ಜೋ ಬಿಡೆನ್ ಅವರು ಬಂದು ನಿಂತಂತಾಗುತ್ತದೆ. ಕೋವಿಡ್-೧೯ ಸಾಂಕ್ರಾಮಿಕದ ಮಧ್ಯೆ ನಡೆದ ಚುನಾವಣೆಯಲ್ಲಿ ತಮ್ಮ ಓಟದ ಗತಿಯನ್ನು ಹೀಗೆಯೇ ಹಿಡಿದಿಟ್ಟುಕೊಂಡು ಮುಂದೆ ಸಾಗಿದರೆ ಶ್ವೇತಭವನವನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವ ಟ್ರಂಪ್ ಭರವಸೆ ನುಚ್ಚುನೂರಾಗುತ್ತದೆ ಮತ್ತು ಜೋ ಬಿಡೆನ್ ಅವರನ್ನು ಚುನಾಯಿತ ಅಧ್ಯಕ್ಷ ಎಂಬುದಾಗಿ ಘೋಷಿಸಲಾಗುತ್ತದೆ.

ಎಲೆಕ್ಟೋರಲ್ ಕಾಲೇಜು ಮತಗಳಲ್ಲಿ ಬಿಡೆನ್ ಅವರು ೨೬೪ ಮತಗಳಲ್ಲಿ ಮುನ್ನಡೆ ಪಡೆದಿದ್ದರೆ, ಟ್ರಂಪ್ ೨೧೩ ಮತಗಳಲ್ಲಿ ಮುಂದಿದ್ದಾರೆ. ಇನ್ನೂ ಲೆಕ್ಕಹಾಕಲು ಬಾಕಿ ಉಳಿದಿರುವ ರಾಜ್ಯಗಳ ಪೈಕಿ ಒಂದು ರಾಜ್ಯದಲ್ಲಿ ಜಯಗಳಿಸುವ ಮೂಲಕ ಅಗತ್ಯವಿರುವ ೨೭೦ ಮತಗಳನ್ನು ಗಳಿಸುವತ್ತ ಜೋ ಮುನ್ನಡೆಯಲ್ಲಿದ್ದಾರೆ ಎಂದು ಟಿವಿ ಚಾನೆಲ್‌ಗಳು ಹೇಳುತ್ತಿವೆ.

ಜಾರ್ಜಿಯಾ, ನೆವಾಡಾ ಮತ್ತು ಅರಿಝೋನಾ ಮೂರು ರಾಜ್ಯಗಳಲ್ಲಿ ಯಾವುದಾದರೂ ಎರಡು ರಾಜ್ಯಗಳೂ ಅಥವಾ ಪೆನ್ಸಿಲ್ವೇನಿಯಾದಲ್ಲಿ ಜಯ ಗಳಿಸುವ ಮೂಲಕ ಭಾರತೀಯ ಮೂಲಕ ಕಮಲಾ ಹ್ಯಾರಿಸ್ ಅವರ ಚುನಾವಣಾ ಸಂಗಾಗಿ ಜೋ ಬಿಡೆನ್ ಅಧ್ಯಕ್ಷ ಸ್ಥಾನಕ್ಕೆ ಏರಬಲ್ಲರು. ಫಾಕ್ಸ್ ನ್ಯೂಸ್ ಮತ್ತು ಎಪಿ ಅರಿಝೋನಾದಲ್ಲಿ ಬಿಡೆನ್ ಗೆಲ್ಲಬಹುದು ಎಂದು ಊಹಿಸಿದ್ದರೂ, ಸಿಎನ್‌ಎನ್ ಇನ್ನೂ ಇದನ್ನು ಹೇಳಿಲ್ಲ. ಟ್ರಂಪ್ ಅವರು ಮುಂದಕ್ಕೆ ಬರಲು ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ಹೆಚ್ಚು ಮತ ಗಳಿಸುವುದರ ಜೊತೆಗೆ ನೆವಾಡಾ ಅಥವ ಅರಿಝೋನಾದಲ್ಲಿ ಬಿಡೆನ್ ಅವರನ್ನು ಹಿಂದಕ್ಕೆ ಹಾಕಬೇಕಾಗಿದೆ.

ಟ್ರಂಪ್ ಪ್ರಚಾರಕರಿಂದ ವಂಚನೆ ಹಾಟ್‌ಲೈನ್ ಸ್ಥಾಪನೆ

ಮಧ್ಯೆ, ಟ್ರಂಪ್ ಪರ ಪ್ರಚಾರಕರು ಆರೋಪಿತ ಮತಗಳ ವಂಚನೆ ಬಗೆಗಿನ ಒಳಬರುವ ಕರೆಗಳನ್ನು ಆಲಿಸಲು ವಂಚನೆ ಹಾಟ್ ಲೈನ್ಗಳನ್ನು ಸ್ಥಾಪಿಸಿದ್ದಾರೆ ಎಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ.

ಅರಿಂಗ್ಟನ್‌ನ ತಮ್ಮ ಕೇಂದ್ರ ಕಚೇರಿಯಲ್ಲಿ ಇಡೀ ಕೊಠಡಿಯಲ್ಲೇ ಹಾಟ್ ಲೈನ್ ಸ್ಥಾಪಿಸಲಾಗಿದೆ ಎಂದು ವರದಿ ಹೇಳಿದೆ. ಮತಗಳ ಎಣಿಕೆ ಪ್ರಕ್ರಿಯೆಯು ಚುನಾವಣೆಯನ್ನು ತಮ್ಮಿಂದ ಕದಿಯವ ಸಂಚಿನ ಭಾಗವಾಗಿದೆ ಎಂದು ಟ್ರಂಪ್ ಅವರು ಆಪಾದಿಸಿದ್ದು, ತಮ್ಮ ಪ್ರತಿಪಾದನೆಯನ್ನು ಸಮರ್ಥಿಸುವ ಸಾಕ್ಷ್ಯಾಧಾರ ಸಂಗ್ರಹಿಸಲು ಹಾಟ್ ಲೈನ್ ಸ್ಥಾಪಿಸಲಾಗಿದೆ ಎಂದು ವರದಿ ಹೇಳಿದೆ.

ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಗೆದ್ದರೂ, ಗೆಲುವಿನ ಕಾನೂನು ಬದ್ಧತೆಗಾಗಿ ಜೋ ಬಿಡೆನ್ ಅವರು ಹೋರಾಟ ಮಾಡಬೇಕಾಗಿ ಬರಬಹುದು ಎಂದು ಮೂಲಗಳು ಹೇಳಿವೆ.

No comments:

Advertisement