Wednesday, December 30, 2020

ನೇಪಾಳ ರಾಜಕೀಯ: ಮೂಗು ತೂರಿಸಹೊರಟ ಚೀನಾಕ್ಕೆ ಮುಖಭಂಗ

 ನೇಪಾಳ ರಾಜಕೀಯ: ಮೂಗು ತೂರಿಸಹೊರಟ ಚೀನಾಕ್ಕೆ ಮುಖಭಂಗ

ನವದೆಹಲಿ: ಬಣಗಳ ಘರ್ಷಣೆಯಿಂದ ಬಳಲುತ್ತಿರುವ ಆಡಳಿತ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು (ಎನ್‌ಸಿಪಿ) ಒಗ್ಗೂಡಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಯೋಜಿಸಿದ ಚೀನಾದ ನಿಯೋಗವು ಎನ್‌ಸಿಪಿ ಧುರೀಣರನ್ನು ಒಗ್ಗೂಡಿಸುವ ತನ್ನ ಯತ್ನದಲ್ಲಿ ಯಶಸ್ಸು ಕಾಣದೆ ಕೈ ಕೈ ಹಿಸುಕಿಕೊಂಡು 2020 ಡಿಸೆಂಬರ್ 30ರ ಬುಧವಾರ ತನ್ನ ನೇಪಾಳ ಭೇಟಿಯನ್ನು ಮುಕ್ತಾಯಗೊಳಿಸಿದೆ.

ಇದರೊಂದಿಗೆ ನೇಪಾಳ ರಾಜಕೀಯದಲ್ಲಿ ಮೂಗು ತೂರಿಸಲು ಯತ್ನಿಸಿದ ಚೀನಾಕ್ಕೆ ಭಾರೀ ಮುಖಭಂಗವಾದಂತಾಗಿದೆ.

ನಾಲ್ಕು ದಿನಗಳ ಭೇಟಿಯ ಅವಧಿಯಲ್ಲಿ ಕ್ಸಿ ಜಿನ್ ಪಿಂಗ್ ಪ್ರಾಯೋಜಿತ ನಿಯೋಗಕ್ಕೆ ತನ್ನ ಉದ್ದೇಶವನ್ನು ಈಡೇರಿಸಲು ಅಥವಾ ಮುಂದಿನ ವರ್ಷಕ್ಕೆ ನಿಗದಿಯಾಗಿರುವ ರಾಷ್ಟ್ರೀಯ ಚುನಾವಣೆಗಳಿಗಾಗಿ ಕಮ್ಯುನಿಸ್ಟರ ನೇತೃತ್ವದ ಪರ್ಯಾಯ ಮೈತ್ರಿಯನ್ನು ರೂಪಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಕಮ್ಯುನಿಸ್ಟ್ ಪಕ್ಷದ ನಾಯಕರ ನಾಲ್ಕು ಸದಸ್ಯರ ಪ್ರಮುಖ ತಂಡದ ನೇತೃತ್ವ ವಹಿಸಿದ್ದ ಕಮ್ಯುನಿಸ್ಟ್ ಪಕ್ಷದ ಚೀನಾದ ಕೇಂದ್ರ ಸಮಿತಿಯ ಅಂತಾರಾಷ್ಟ್ರೀಯ ವಿಭಾಗದ ಉಪ-ಮಂತ್ರಿ ಗುಯೋ ಯೆಝೊವು ಅವರು ನೇಪಾಳ ಕಮ್ಯುನಿಸ್ಟ್ ಪಕ್ಷದ ನಾಯಕರೊಂದಿಗೆ ಸಭೆಗಳನ್ನು ನಡೆಸಿದ ಬಳಿಕ ಬುಧವಾರ ಬೆಳಗ್ಗೆ ಕಠ್ಮಂಡುವಿನ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿದರು.

ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಅವರ ಇಬ್ಬರು ಪ್ರಧಾನ ಪ್ರತಿಸ್ಪರ್ಧಿಗಳಾದ ಮಾಜಿ ಪ್ರಧಾನ ಮಂತ್ರಿಗಳಾದ ಪುಷ್ಪ ಕಮಲ್ ದಹಲ್ ಅಕಾ ಪ್ರಚಂಡ ಮತ್ತು ಮಾಧವ ನೇಪಾಳ ಅವರ ಜೊತೆ ಚೀನೀ ನಿಯೋಗ ಕಳೆದ ನಾಲ್ಕು ದಿನಗಳ ಕಾಲ ವ್ಯಾಪಕ ಮಾತುಕತೆ ನಡೆಸಿತ್ತು.

ಪ್ರಚಂಡ ಮತ್ತು ಮಾಧವ ನೇಪಾಳ ನೇತೃತ್ವದ ಬಣದ ಸವಾಲಿಗೆ ಪ್ರತಿಯಾಗಿ ಡಿಸೆಂಬರ್ ೨೦ ರಂದು ಸದನವನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಶಿಫಾರಸು ಮಾಡುವ ಮೂಲಕ ಪ್ರಧಾನಿ ಕೆ.ಪಿ. ಒಲಿ ಶರ್ಮ ಪ್ರತಿಸವಾಲು ಎಸೆದಿದ್ದಾರೆ.

ಸಂಸತ್ ವಿಸರ್ಜನೆಯ ಬಳಿಕು ದೂರದರ್ಶನದ ಭಾಷಣದಲ್ಲಿ ಪ್ರಧಾನಿ, ತಮ್ಮ ನಿರ್ಧಾರವು ಸಂಸತ್ತಿನಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲು ಹೊರಟಿದ್ದ ತಮ್ಮ ಪ್ರತಿಸ್ಪರ್ಧಿಗಳ ಕೈ ಕಟ್ಟಿ ಹಾಕುವ ಮುಂಜಾಗರೂಕತಾ ಕ್ರಮ ಎಂದು ವಿವರಿಸಿದ್ದರು.

ಪಿಎಂ ಒಲಿಯವರ ಕ್ರಮವು ೨೦೧೮ ರಲ್ಲಿ ರೂಪುಗೊಂಡ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಾರ್ಟಿಯ (ಎನ್‌ಸಿಪಿ) ಔಪಚಾರಿಕ ವಿಭಜನೆಗೆ ವೇದಿಕೆಯಾಗಿದೆ. ಪ್ರಧಾನಿ ಒಲಿ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಏಕೀಕೃತ ಮಾರ್ಕ್ಸ್‌ವಾದಿ -ಲೆನಿನಿಸ್ಟ್) ಮತ್ತು ಪ್ರಚಂಡ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ- (ಮಾವೋವಾದಿ ಕೇಂದ್ರ) ವಿಲೀನದಿಂದ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಾರ್ಟಿ ರೂಪುಗೊಂಡಿತ್ತು. ೨೦೧೮ರ ವಿಲೀನವನ್ನು ಚೀನಾದ ಗುವೊ ಯೆಝೊವು ಸುಗಮಗೊಳಿಸಿದ್ದರು.

ಚೀನೀ ನಿಯೋಗದ ೨೦೧೮ರ ಫೆಬ್ರುವರಿ ಭೇಟಿಯು ಬಳಿಕ ಎನ್‌ಸಿಪಿಗೆ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡಿದೆ ಎಂದು ನೇಪಾಳೀ ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಗುವಾ ಯೆಝೊವು ನೇತೃತ್ವದ ಚೀನೀ ತಂಡವು ನಾಲ್ಕು ದಿನಗಳ ಭೇಟಿಯ ಸಮಯದಲ್ಲಿ ನೇಪಾಳದ ರಾಜಕೀಯದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹಲವಾರು ಆಯ್ಕೆಗಳನ್ನು ಮುಂದಿಟ್ಟಿತ್ತು ಎಂದು ನೇಪಾಳೀ ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಚೀನೀ ನಿಯೋಗದ ಆಯ್ಕೆಗಳಲ್ಲಿ ಮೊದಲನೆಯದು, ಪ್ರಧಾನಿ ಒಲಿ ಮುಂದುವರಿಕೆಗೆ ಎನ್‌ಸಿಪಿಯ ಪ್ರಚಂಡ-ಮಾಧವ ನೇಪಾಳ ಬಣದಿಂದ ಭರವಸೆ ಪಡೆದುಕೊಂಡು ೨೭೫ ಸದಸ್ಯರ ಪ್ರತಿನಿಧಿ ಸಭೆಯ ವಿಸರ್ಜನೆ ಶಿಫಾರಸನ್ನು ತದ್ದು ಪಡಿಸುವಂತೆ ಪ್ರಧಾನಿ ಒಲಿ ಅವರ ಮನವೊಲಿಕೆ ಯತ್ನ. ಆದರೆ ಪ್ರಧಾನ ಮಂತ್ರಿ ಒಲಿ ಅವರು ಇದಕ್ಕೆ ಒಪ್ಪಲಿಲ್ಲ. ಪ್ರಚಂಡ, ಮಾಧವ ನೇತೃತ್ವದ ನೇಪಾಳ ಬಣವು ತನ್ನ ಸರ್ಕಾರವನ್ನು ಕೆಳಗಿಳಿಸಿ ತಾನು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ ಎಂಬುದು ಒಲಿ ಅವರ ಅಚಲ ನಂಬಿಕೆಯಾಗಿತ್ತು.

ಆದಾಗ್ಯೂ, ಉಭಯ ಕಡೆಯ ನಡುವಣ ಕಗ್ಗಂಟಿಗೆ ಹೊಸ ಚುನಾವಣೆಗಳೇ ಪರಿಹಾರ ಎಂದು ಗುಯೋ ಯೆಝೊವು ನೇತೃತ್ವದ ನಿಯೋಗಕ್ಕೆ ಪಿಎಂ ಒಲಿ ತಿಳಿಸಿದರು ಎನ್ನಲಾಗಿದೆ.

ಪ್ರಚಂಡ ಮತ್ತು ಮಾಧವ ನೇಪಾಳ ಕೂಡಾ ಚೀನಾದ ತಂಡಕ್ಕೆ ಯಾವುದೇ ಬದ್ಧತೆಯನ್ನು ನೀಡಲು ಒಪ್ಪಲಿಲ್ಲ, ಮೊದಲು ಸಂಸತ್ತನ್ನು ವಿಸರ್ಜಿಸುವ ಆದೇಶವನ್ನು ಪ್ರಧಾನಿ ಒಲಿ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಸಂಸತ್ ವಿಸರ್ಜನೆಯ ನಿರ್ಧಾರವನ್ನು ರದ್ದು ಪಡಿಸಿದರೆ, ಪ್ರಧಾನಿ ಒಲಿ ಅವರನ್ನು ಹೊರತು ಪಡಿಸಿದ ಕಮ್ಯೂನಿಸ್ಟ್ ಪಕ್ಷದ ನೇತೃತ್ವದ ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆ ಬಗೆಗೂ ಗುಯೋ ಯೆಝೊವು ಅವರ ತಂಡವು ಪರಿಶೋಧಿಸಿತು. ನಿಟ್ಟಿನಲ್ಲಿ ಎನ್‌ಸಿಪಿಯ ಪ್ರತಿಸ್ಪರ್ಧಿಗಳಾದ ಜನತಾ ಸಮಾಜಬಾದಿ ಪಕ್ಷದ ಮುಖ್ಯಸ್ಥ ಬಾಬುರಾಮ್ ಭಟ್ಟಾರಾಯ್ ಮತ್ತು ಶೇರ್ ಬಹದ್ದೂರ್ ಡ್ಯೂಬಾ ಅವರ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಪ್ರಚಂಡ-ಮಾಧವ ನೇಪಾಳ ಅವರಿಗೆ ಬೆಂಬಲ ಪಡೆಯುವ ಸಾಧ್ಯತೆಯನ್ನು ಚೀನೀ ತಂಡವು ಗಮನಿಸಿತ್ತು. ಪರ್ಯಾಯವು ಪ್ರಧಾನಿ ಒಲಿ ಅವರನ್ನು ಗುರಿಯಾಗಿಸುವ ವಿರೋಧ ಪಕ್ಷಗಳ ಗುರಿಗೆ ಅನುಗುಣವಾಗಿತ್ತು.

ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಬಹುಮತವನ್ನು ಪಡೆಯಬಹುದಾದ ಸಂದರ್ಭದಲ್ಲಿ ಸದನವನ್ನು ವಿಸರ್ಜಿಸಲು ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಕಾರಣಕ್ಕೆ ಸಂಸತ್ತಿನ ವಿಸರ್ಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಒಂದು ಡಜನ್‌ಗೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟ್ ಪರಿಶೀಲಿಸುತ್ತಿದೆ.

ಎನ್‌ಸಿಪಿಯ ಎರಡೂ ಬಣಗಳೊಂದಿಗಿನ ಅವರ ಸಂಭಾಷಣೆಯಲ್ಲಿ, ಏಪ್ರಿಲ್ ೩೦ ಮತ್ತು ಮೇ ೧೦ ರಂದು ಎರಡು ಹಂತಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳಲ್ಲಿ ಪ್ರಧಾನಿ ಒಲಿ ಮತ್ತು ಪ್ರಚಂಡ ಬಣಗಳು ಜಂಟಿಯಾಗಿ ಸ್ಪರ್ಧಿಸಿ ಜನರಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ತಿಳಿಸುವ ಸಾಧ್ಯತೆಯನ್ನು ಕೂಡಾ ಚೀನಾ ತಂಡವು ಯೋಚಿಸಿತ್ತು. ಮುಂದಿನ ಸರ್ಕಾರವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಚುನಾವಣಾ ತೀರ್ಪು ನಿರ್ಧರಿಸಲಿ ಎಂಬ ಸಲಹೆಯನ್ನೂ ಚೀನೀ ನಿಯೋಗ ಮುಂದಿಟ್ಟಿತ್ತು. ಆದರೆ ಪ್ರಧಾನಿ ಒಲಿ ಅದನ್ನು ಖಂಡ ತುಂಡವಾಗಿ ನಿರಾಕರಿಸಿದರು.

ನೇಪಾಳದಲ್ಲಿ ಗುವೊ ಯೆಝೊವು ಅವರ ತಂಡವು ನೇಪಾಳ ಕಮ್ಯೂನಿಸ್ಟ್ ಪಕ್ಷದ ಉಭಯ ಶಿಬಿರಗಳ ಎರಡನೇ ಪೀಳಿಗೆಯ ಮುಖಂಡರನ್ನೂ ತಲುಪುವ ಯತ್ನ ನಡೆಸಿತ್ತು ಮತ್ತು ಪಕ್ಷವನ್ನು ಒಗ್ಗೂಡಿಸಲು ತಮ್ಮ ಹಿರಿಯರನ್ನು ಆಗ್ರಹಿಸುವಂತೆ ನಿಯೋಗವು ಎರಡನೇ ಪೀಳಿಗೆಯ ನಾಯಕರಿಗೆ ಸಲಹೆ ಮಾಡಿತು. ನಿಯೋಗ ಭೇಟಿ ಮಾಡಿದ ಎರಡನೇ ಪೀಳಿಗೆಯ ಎನ್‌ಸಿಪಿ ನಾಯಕರಲಿ  ಮಾಜಿ ಮಂತ್ರಿಗಳಾದ ಘಾನ್ಶ್ಯಾಮ್ ಭೂಸಾಲ್, ಯೋಗೇಶ್ ಭಟಾರಾಯ್ ಮತ್ತು ಪ್ರಚಂಡ ಶಿಬಿರದ ಜನಾರ್ದನ್ ಶರ್ಮಾ ಸೇರಿದ್ದರು. ಪ್ರಧಾನಿ ಒಲಿ ಅವರ ಶಿಬಿರದಿಂದ, ತಂಡವು ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ, ಇಂಧನ ಸಚಿವ ಬರ್ಸಮಾನ್ ಪುನ್ ಮತ್ತು ಸ್ಥಾಯಿ ಸಮಿತಿ ಸದಸ್ಯ ಶಂಕರ್ ಪೋಖ್ರೆಲ್ ಅವರನ್ನು ಭೇಟಿಯಾಗಿತ್ತು. ಆದರೆ ತಂಡದ ಪ್ರಯತ್ನವೂ ಫಲಿಸಲಿಲ್ಲ ಎಂದು ಮೂಲಗಳು ಹೇಳಿವೆ.

No comments:

Advertisement