Thursday, December 24, 2020

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕಾಪ್ರಹಾರ

 ಪ್ರಧಾನಿ ಮೋದಿ ವಿರುದ್ಧ  ರಾಹುಲ್ ಗಾಂಧಿ ಟೀಕಾಪ್ರಹಾರ

ನವದೆಹಲಿ: ಒಂದು ತಿಂಗಳ ಕಾಲ ನಡೆದ ರೈತ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ಮೇಲೆ 2020 ಡಿಸೆಂಬರ್ 24ರ ಗುರುವಾರ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ’ಈಗ ಭಾರತದಲ್ಲಿ "ಪ್ರಜಾಪ್ರಭುತ್ವವಿಲ್ಲ" ಮತ್ತು ಪ್ರಧಾನ ಮಂತ್ರಿಯ ವಿರುದ್ಧ ಎತ್ತಿದವರೆಲ್ಲರಿಗೂ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. (ಆರ್ಎಸ್ಎಸ್ ಮುಖ್ಯಸ್ಥ) ಮೋಹನ್ ಭಾಗವತ್ಗೆ ಕೂಡಾ ಇದೇ ಗತಿಎಂದು ಚುಚ್ಚಿದರು.

ಬಂಡವಾಳಶಾಹಿಗಳನ್ನು ಸಂತೃಪ್ತ ಪಡಿಸಲು ಜಾರಿಗೆ ತರಲಾಗಿರುವ ಕೃಷಿ ಕಾಯ್ದೆಗಳನ್ನು ತತ್ ಕ್ಷಣ ರದ್ದು ಪಡಿಸಿಎಂದು ರಾಹುಲ್ ಆಗ್ರಹಿಸಿದರು.

"ಪ್ರಧಾನಿ ಮೋದಿ ಅವರು ತಮ್ಮ ಆಪ್ತರಾದ ಬಂಡವಾಳಶಾಹಿಗಳನ್ನು ಸಂತುಷ್ಟಿಗೊಳಿಸಲು ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ಅವರ ವಿರುದ್ಧ ನಿಲ್ಲುವ ಯಾರೇ ವ್ಯಕ್ತಿಗಳನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಗುತ್ತದೆ- ಅದು ರೈತರು, ಕಾರ್ಮಿಕರು ಅಥವಾ ಮೋಹನ ಭಾಗವತ್ ಆಗಿದ್ದರೂ ಸರಿಎಂದು ರಾಹುಲ್ ಗಾಂಧಿ ನುಡಿದರು.

"ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ. ಇದೆ ಎಂಬುದಾಗಿ ನಿಮ್ಮಲ್ಲಿ ಯಾರಾದರೂ ಭಾವಿಸಿದ್ದರೆ ಅದು ನಿಮ್ಮ ಕಲ್ಪನೆಯಲ್ಲಿ ಮಾತ್ರ ಇದೆಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸೆಪ್ಟೆಂಬರಿನಲ್ಲಿ ಜಾರಿಗೆ ಬಂದ ಕೃಷಿ ಕಾನೂನುಗಳ ಬಗ್ಗೆ ದೆಹಲಿ ಬಳಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರ ನಿಯೋಗದ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿದ್ದರು.

ರಾಷ್ಟ್ರಪತಿಯವರು ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕಾನೂನುಗಳ ಬಗ್ಗೆ ಚರ್ಚಿಸಲು ಸಂಸತ್ತಿನ ಜಂಟಿ ಅಧಿವೇಶ ಕರೆಯುವಂತೆ ಕಾಂಗ್ರೆಸ್ ಒತ್ತಾಯಿಸಿದೆ, ಕಾಯ್ದೆಗಳನ್ನು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಂಸತ್ತಿನ ಮೂಲಕ ನುಗ್ಗಿಸಲಾಗಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.

ರಾಷ್ಟ್ರಪತಿ ಭವನಕ್ಕೆ ಹೊರಟಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮೆರವಣಿಗೆಯನ್ನು ಪೊಲೀಸರು ತಡೆದರು ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಪಕ್ಷದ ಹಲವಾರು ಮುಖಂಡರನ್ನು ವಶಕ್ಕೆ ತೆಗೆದುಕೊಂಡು ಬಸ್ಸುಗಳಿಗೆ ಹತ್ತಿಸಲಾಯಿತು. ಆಗ ಕೆಲವೇ ಕೆಲವು ಕಾಂಗ್ರೆಸ್ ಮುಖಂಡರು ರಾಷ್ಟ್ರಪತಿ ಭವನದತ್ತ ಮುಂದುವರೆದರು.

ರಾಷ್ಟ್ರಪತಿಗಳ ಭೇಟಿಯ ನಂತರ ಮಾತನಾಡಿದ ರಾಹುಲ್ ಗಾಂಧಿ, ’ಕಾನೂನುಗಳು ಲಕ್ಷಾಂತರ ರೈತರ ಜೀವನೋಪಾಯವನ್ನು ಕಸಿದುಕೊಳ್ಳುತ್ತವೆ ಮತ್ತು ಅವುಗಳನ್ನು "ನಾಲ್ಕು ಅಥವಾ ಐದು ಉದ್ಯಮಿಗಳಿಗೆ" ಅನುಕೂಲಕರ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆಎಂದು ಹೇಳಿದರು.

"ಯುವಕರು ಮತ್ತು ದೇಶದ ಎಲ್ಲಾ ಜನರು ತಿಳಿದುಕೊಳ್ಳಬೇಕಾದ ಅಂಶವೆಂದರೆ, ಪ್ರಧಾನ ಮಂತ್ರಿ ಏನೂ ತಿಳಿಯದ ಅಸಮರ್ಥ ವ್ಯಕ್ತಿ, ಅವರು ತಮ್ಮ ಆಪ್ತರಾದ ಬಂಡವಾಳಶಾಹಿಗಳಿಗೆ ಮಾತ್ರ ಕಿವಿಗೊಡುತ್ತಾರೆ. ಅವರು ಏನು ಹೇಳಿದರೂ ಅದನ್ನು ಮಾಡುತ್ತಾರೆಎಂದು ರಾಹುಲ್ ಟೀಕಿಸಿದರು.

ಪ್ರಿಯಾಂಕಾ ಪೊಲೀಸ್ ವಶಕ್ಕೆ: ಇದಕ್ಕೂ ಮುನ್ನ ರಾಹುಲ್ ಗಾಂಧಿ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಹೊರಟಿದ್ದಾಗ ಪೊಲೀಸರು ಪಕ್ಷದ ಇತರ ಮುಖಂಡರ ಜೊತೆಗೆ ತಡೆದು ವಶಕ್ಕೆ ತೆಗೆದುಕೊಂಡರು.

" ಸರ್ಕಾರದ ವಿರುದ್ಧದ ಯಾವುದೇ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಯ ಅಂಶಗಳು ಎಂದು ವರ್ಗೀಕರಿಸಲಾಗಿದೆ. ರೈತರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲು ನಾವು ಮೆರವಣಿಗೆಯನ್ನು ಕೈಗೊಂಡಿದ್ದೇವೆಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕೆಲವೊಮ್ಮೆ ಅವರು (ಸರ್ಕಾರ) ನಾವು ತುಂಬಾ ದುರ್ಬಲರಾಗಿದ್ದೇವೆಂದು ಹೇಳುತ್ತಾರೆ, ಪ್ರತಿಪಕ್ಷಗಳಾಗಲೂ ನಮಗೆ ಅರ್ಹತೆ ಇಲ್ಲ ಎನ್ನುತ್ತಾರೆ ಮತ್ತು ಕೆಲವೊಮ್ಮೆ, ನಾವು ತುಂಬಾ ಶಕ್ತಿಶಾಲಿಗಳು, ನಾವು ಒಂದು ತಿಂಗಳ ಕಾಲ ಗಡಿಯಲ್ಲಿ (ದೆಹಲಿಯ) ಲಕ್ಷಾಂತರ ರೈತರ ಶಿಬಿರವನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ನಾವು ಏನೆಂದು ಅವರು ಮೊದಲು ನಿರ್ಧರಿಸಬೇಕುಎಂದು ಪ್ರಿಯಾಂಕಾ ಕುಟುಕಿದರು.

ಅವರು (ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು) ರೈತರಿಗೆ ಬಳಸುವ ಹೆಸರುಗಳನ್ನು ಬಳಸುವುದುಪಾಪದ ಕೆಲಸವಾಗುತ್ತದೆಎಂದು ಪ್ರಿಯಾಂಕಾ ಹೇಳಿದರು. "ಸರ್ಕಾರ ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯುತ್ತಿದ್ದರೆ, ಸರ್ಕಾರವು ಮಹಾಪಾಪಿಎಂದು ಕಾಂಗ್ರೆಸ್ ನಾಯಕಿ ನುಡಿದರು.

ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್ ಮತ್ತು ಅಧೀರ್ ರಂಜನ್ ಚೌಧರಿ ಅವರೊಂದಿಗೆ ಅಧ್ಯಕ್ಷ ಕೋವಿಂದ್ ಅವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, " ಕೃಷಿ ಕಾನೂನುಗಳು ರೈತ ವಿರೋಧಿ ಎಂದು ನಾನು ರಾಷ್ಟ್ರಪತಿಗೆ ಹೇಳಿದೆ. ಕಾನೂನುಗಳ ವಿರುದ್ಧ ರೈತರು ಎದ್ದು ನಿಂತಿರುವುದನ್ನು ಇಡೀ  ದೇಶವು ನೋಡಿದೆ" ಎಂದು ಹೇಳಿದರು.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ರೈತರು ಮನೆಗೆ ಹಿಂದಿರುಗುವುದಿಲ್ಲ ಎಂದು ನಾನು ಪ್ರಧಾನ ಮಂತ್ರಿಗೆ ಹೇಳಲು ಬಯಸುತ್ತೇನೆ. ಸರ್ಕಾರ ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆಯಬೇಕು ಮತ್ತು ಕಾನೂನುಗಳನ್ನು ಹಿಂಪಡೆಯಬೇಕು. ವಿರೋಧ ಪಕ್ಷಗಳು ರೈತರು ಮತ್ತು ಕಾರ್ಮಿಕರೊಂದಿಗೆ ನಿಲ್ಲುತ್ತವೆಎಂದು ರಾಹುಲ್ ನುಡಿದರು.

ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ತಡೆಯಲು ಪ್ರಯತ್ನಿಸಿದ ವಿರೋಧ ಪಕ್ಷಗಳು ಹಿಂದೆ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದವು. ಮಸೂದೆಗಳನ್ನು ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದ್ದರು.

ಆದಾಗ್ಯೂ, ರಾಷ್ಟ್ರಪತಿಯವರು ಮೂರು ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರು. ಡಿಸೆಂಬರ್ ರಂದು ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡಿದ್ದ ಪ್ರತಿಪಕ್ಷಗಳ ನಿಯೋಗದಲ್ಲಿ ರಾಹುಲ್ ಗಾಂಧಿಯವರೂ ಇದ್ದರು.

No comments:

Advertisement