Saturday, December 26, 2020

ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣ: ಹೈಕೋರ್ಟಿಗೆ ಕಸ್ಟಮ್ಸ್ ?

 ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣ: ಹೈಕೋರ್ಟಿಗೆ ಕಸ್ಟಮ್ಸ್ ?

ತಿರುವನಂತಪುರ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಭೇಟಿ ಮಾಡಲು ತನ್ನ ಅಧಿಕಾರಿಗಳಿಗೆ ಅವಕಾ ನಿರಾಕರಿಸಿರುವ ರಾಜ್ಯ ಜೈಲು ಇಲಾಖೆಯ ನಿರ್ಧಾರದ ವಿರುದ್ಧ ಕೇರಳ ಹೈಕೋರ್ಟ್ ಮೆಟ್ಟಿಲೇರಲು ಕಸ್ಟಮ್ಸ್ ಇಲಾಖೆ ಯೋಜಿಸುತ್ತಿದೆ ಎಂದು ಸುದ್ದಿ ಮೂಲಗಳು  2020 ಡಿಸೆಂಬರ್ 26ರ ಶನಿವಾರ ತಿಳಿಸಿವೆ.

ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ- ಕೋಫೆಪೊಸಾ ಅಡಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಮಹಿಳಾ ಸೆರೆಮನೆಯಲ್ಲಿ ಇರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಮುಖ್ಯ ಆರೋಪಿಯನ್ನು ಭೇಟಿ ಮಾಡುವ ಯಾರೇ ವ್ಯಕ್ತಿಗಳ ಬಗ್ಗೆ ತನಗೆ ತಿಳಿಸಬೇಕು ಮತ್ತು ಕಸ್ಟಮ್ಸ್ ಅಧಿಕಾರಿಯೊಬ್ಬರು ಅಂತಹ ಸಂದರ್ಶಕರ ಜೊತೆಗಿರುತ್ತಾರೆ ಎಂದು ಕಸ್ಟಮ್ಸ್ ಇಲಾಖೆ ಇತ್ತೀಚೆಗೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಆದರೆ ಇದನ್ನು ನಿರಾಕರಿಸಿದ ಜೈಲು ಇಲಾಖೆ ಕಳೆದ ವಾರ ಆರೋಪಿಯ ಸಂಬಂಧಿಕರೊಂದಿಗೆ ಸೆರೆಮನೆಗೆ ಬಂದ ಕಸ್ಟಮ್ಸ್ ಅಧಿಕಾರಿಯನ್ನು ವಾಪಸ್ ಕಳುಹಿಸಿತ್ತು. ಇಂತಹ ಕ್ರಮವು ಹೊಸ ಪೂರ್ವನಿದರ್ಶನವನ್ನು ಸೃಷ್ಟಿಸುತ್ತದೆ ಮತ್ತು ಜೈಲು ಅಧಿಕಾರಿಗಳನ್ನು ಭ್ರಮ ನಿರಸನಗೊಳಿಸುತ್ತದೆ ಎಂದು ರಾಜ್ಯ ಜೈಲು ಮುಖ್ಯಸ್ಥ ರಿಷಿರಾಜ್ ಸಿಂಗ್ ಹೇಳಿದ್ದಾರೆ.

ಆದರೆ ಇದು ಉನ್ನತ ಮಟ್ಟದ ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕಸ್ಟಮ್ಸ್ ಅಧಿಕಾರಿಗಳು ಭಯಪಡುತ್ತಾರೆ.

ನಾವು ಈಗಾಗಲೇ ಕೋಫೆಪೊಸಾ ಮಂಡಳಿಗೆ ಬಗ್ಗೆ ಮಾಹಿತಿ ನೀಡಿದ್ದೇವೆ. ನಾವು ಮುಂದಿನ ವಾರ ಹೈಕೋರ್ಟ್‌ಗೆ ಹೋಗುತ್ತೇವೆ. ಆಕೆ ಈಗಾಗಲೇ ಗಂಭೀರ ಬೆದರಿಕೆಗಳನ್ನು ಎದುರಿಸುತ್ತಿರುವುದಾಗಿ ದೂರು ನೀಡಿದ್ದಾರೆ ಮತ್ತು ಕೆಲವರು ಆಕೆಯನ್ನು ಜೈಲಿನಲ್ಲಿ ಭೇಟಿಯಾಗಿ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಇಲಾಖೆ ಸುಪ್ರೀಂ ಕೋರ್ಟಿನ ಮೊರೆ ಹೋಗಬೇಕಾಗಬಹುದು ಎಂದು ಅವರು ಹೇಳಿದರು.

ನಡೆಯುತ್ತಿರುವ ತನಿಖೆಗೆ ರಾಜ್ಯ ಪೊಲೀಸರು ಮತ್ತು ಜೈಲು ಅಧಿಕಾರಿಗಳು ಸಂಪೂರ್ಣವಾಗಿ ಸಹಕರಿಸುತ್ತಿಲ್ಲ ಎಂದೂ ಅವರು ಹೇಳಿದರು.

ಆದರೆ ಜೈಲು ಇಲಾಖೆ ಸಾಮಾನ್ಯ ಜೈಲು ಕಾರ್ಯವಿಧಾನಗಳು ಮತ್ತು ಕಾನೂನುಗಳು ಕೋಫೆಪೊಸಾ ಬಂಧಿತರಿಗೂ ಅನ್ವಯವಾಗುತ್ತವೆ ಮತ್ತು ಅಧಿಕಾರಿಗಳನ್ನು ಪ್ರತಿ ಬಾರಿ ಸಂದರ್ಶಕರೊಂದಿಗೆ ಅನುಮತಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಡಿಸೆಂಬರ್ ಮೊದಲ ವಾರದಲ್ಲಿ, ಸ್ವಪ್ನಾ ಸುರೇಶ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಕೊಚ್ಚಿಯಲ್ಲಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ತಿಳಿಸಿತ್ತು ಮತ್ತು ಜೈಲಿನಲ್ಲಿ ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೂ ವಿಶೇಷ ರಕ್ಷಣೆ ಒದಗಿಸಬೇಕು ಕೋರಿದ್ದಾರೆ.

ದೊಡ್ಡ ಹೆಸರುಗಳನ್ನು ಹೇಳದಂತೆ ಆರೋಪಿಯ ಮೇಲೆ ಒತ್ತಡವಿದೆ ಮತ್ತು ವಿಷಯದಲ್ಲಿ ಕೆಲವು ಜನರು ಆಕೆಯನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ನಂತರ ಜೈಲಿನಲ್ಲಿದ್ದ ಆಕೆಗೆ ಸಾಕಷ್ಟು ಭದ್ರತೆ ಒದಗಿಸುವಂತೆ ನ್ಯಾಯಾಲಯ ಜೈಲು ಇಲಾಖೆಗೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ನಿರ್ದೇಶನದ ನಂತರ ಆಕೆ ಇರುವ ಸೆರೆಮನೆಗೆ ಹೆಚ್ಚಿನ ಭದ್ರತೆಯನ್ನು ಹಾಕಲಾಯಿತು.

ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಏಜೆನ್ಸಿಗಳು ಆಕೆ ಮಾಹಿತಿ ಬಹಿರಂಗ ಪಡಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಮತ್ತು ಬಳಿಕ ಆಕೆಯನ್ನು ಭೇಟಿ ಮಾಡುವ ಎಲ್ಲರ ಬಗ್ಗೆ ತನಗೆ ಮಾಹಿತಿ ನೀಡಬೇಕು ಮತ್ತು ಕಸ್ಟಮ್ಸ ಅಧಿಕಾರಿಯೊಬ್ಬರು ಸಂದರ್ಶಕರ ಜೊತೆಗೆ ಇರುತ್ತಾರೆ ಎಂದು ಕಸ್ಟಮ್ಸ್ ಇಲಾಖೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಆದರೆ ಇದಕ್ಕೆ ಅನುಮತಿ ಅನುಮತಿಸಲಾಗುವುದಿಲ್ಲ, ಅದು ತನ್ನ ಅಧಿಕಾರಿಗಳ ಸಮಗ್ರತೆಯನ್ನು ಪ್ರಶ್ನಿಸುತ್ತದೆ ಎಂದು ಜೈಲು ಇಲಾಖೆ ಹೇಳಿದೆ.

ಜುಲೈ ರಂದು ರಾಜ್ಯ ರಾಜಧಾನಿಯಲ್ಲಿರುವ ಯುಎಇ ದೂತಾವಾಸಕ್ಕೆ ರವಾನೆ ಮಾಡಾಗಿದ್ದ ಪ್ಯಾಕೇಜಿನಿಂದ ೩೦ ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡ ಬಳಿಕ ಚಿನ್ನದ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪ್ಯಾಕೇಜ್ ಸ್ವೀಕರಿಸಲು ಬಂದ ದೂತಾವಾಸದ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಸ್.ಸರೀತ್ ಕುಮಾರ್ ಅವರನ್ನು ಕಸ್ಟಮ್ಸ್ ಇಲಾಖೆ ಬಂಧಿಸಿತ್ತು.

ಐದು ದಿನಗಳ ನಂತರ ಇತರ ಇಬ್ಬರು ಶಂಕಿತರಾದ ಸ್ವಪ್ನಾ ಸುರೇಶ್ ಮತ್ತು ಅವರ ಸಹಚರ ಸಂದೀಪ್ ನಾಯರ್ ಅವರನ್ನು ಬೆಂಗಳೂರಿನಲ್ಲಿರುವ ಅಡಗುತಾಣದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಬಳಿಕ ಕೇರಳ ಮುಖ್ಯಮಂತ್ರಿಯವರ ಪ್ರಧಾನ ಕಾರ್‍ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಸ್ವಪ್ನಾ ಸುರೇಶ್ ಜೊತೆಗಿನ ಸಂಪರ್ಕಗಳ ವಿವರ ಹೊರಬಂದಾಗ ಬಂಧಿಸಲಾಗಿತ್ತು.

ತನಿಖೆಯ ಸಮಯದಲ್ಲಿ ಕಾನ್ಸುಲರ್ ಕಚೇರಿಯ ಮೂಲಕ ಕಳ್ಳಸಾಗಣೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ  ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಪ್ರಸ್ತುತ, ಐದು ಕೇಂದ್ರೀಯ ಏಜೆನ್ಸಿಗಳನ್ನು ಒಳಗೊಂಡ ಬಹು-ಏಜೆನ್ಸಿ ತಂಡವು ಪ್ರಕರಣದ ತನಿಖೆ ನಡೆಸುತ್ತಿದ್ದು, ೩೪ ಜನರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿಯ ಮತ್ತೊಬ್ಬ ಕಾರ್ಯದರ್ಶಿ ಸಿಎಂ ರವೀಂದ್ರನ್ ಮತ್ತು ರಾಜ್ಯ ಸಚಿವ ಕೆ ಟಿ ಜಲೀಲ್ ಅವರನ್ನು ಒಂದೆರಡು ಬಾರಿ ವಿಚಾರಣೆಗೆ ಗುರಿ ಪಡಿಸಿತ್ತು.

No comments:

Advertisement