Friday, December 25, 2020

ಕೃಷಿ ಕಾಯ್ದೆ: ವಿಪಕ್ಷ ರಾಜಕೀಯ ಎತ್ತಿ ತೋರಿಸಿದ ಪ್ರಧಾನಿ ಮೋದಿ

 ಕೃಷಿ ಕಾಯ್ದೆ: ವಿಪಕ್ಷ ರಾಜಕೀಯ ಎತ್ತಿ ತೋರಿಸಿದ ಪ್ರಧಾನಿ ಮೋದಿ

ನವದೆಹಲಿ: ರಾಜಸ್ಥಾನ, ಅಸ್ಸಾಮ್ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಗಳಲ್ಲಿ, ರೈತರು ಕೃಷಿ ಸುಧಾರಣಾ ಕಾನೂನುಗಳಿಗೆ ಬೆಂಬಲ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಡಿಸೆಂಬರ್ 25ರ ಶುಕ್ರವಾರ ದೇಶಾದ್ಯಂತದ ರೈತರನ್ನು ಉದ್ದೇಶಿಸಿ ಮಾಡಿದ ತಮ್ಮ ವಾಸ್ತವಿಕ ಭಾಷಣದಲ್ಲಿ ಹೇಳಿದರು.

ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಕೋಟಿ ರೈತರಿಗೆ ೧೮,೦೦೦ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಿದ ಬಳಿಕ ರೈತರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.

ಕಳೆದ ಕೆಲವು ದಿನಗಳಲ್ಲಿ ಅಸ್ಸಾಮಿನಿಂದ ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದವರೆಗೆ, ಪಂಚಾಯತ್ ಚುನಾವಣೆಗಳು ನಡೆದಿವೆ, ಇವುಗಳಲ್ಲಿ ಹೆಚ್ಚಿನ ಗ್ರಾಮೀಣ ಪ್ರದೇಶಗಳು ಮತ ಚಲಾಯಿಸಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇವು ಗ್ರಾಮೀಣ ಚುನಾವಣೆಯಾಗಿದ್ದು, ಇದರಲ್ಲಿ ರೈತರ ಧ್ವನಿ ಕೇಳುತ್ತದೆ. ಇಷ್ಟೊಂದು ಪ್ರಚಾರದ ಹೊರತಾಗಿಯೂ, ಎಲ್ಲೆಲ್ಲಿ ಚುನಾವಣೆಗಳು ನಡೆದವೋ ಅಲ್ಲೆಲ್ಲ ಜನರು ಆಂದೋಲನ [ಕೃಷಿ ಕಾನೂನುಗಳಿಗೆ ವಿರುದ್ಧವಾಗಿ] ಮುನ್ನಡೆಸುತ್ತಿರುವವರನ್ನು ತಿರಸ್ಕರಿಸಿದ್ದಾರೆ. ಅವರು ತಮ್ಮ ಮತಪತ್ರಗಳ ಮೂಲಕ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿದರು.

ಕೃಷಿ ವಲಯವನ್ನು ಉದಾರೀಕರಣಗೊಳಿಸಲು ಸರ್ಕಾರ ಅಂಗೀಕರಿಸಿದ ಹೊಸ ಕಾನೂನುಗಳ ವಿರುದ್ಧ ದೆಹಲಿಯ ಸುತ್ತಲೂ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ನಡುವೆಯೂ, ಬಿಜೆಪಿ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿದೆ.

ರೈvರು ನಡೆಸುತ್ತಿರುವ ಆಂದೋಲನವನ್ನು ರಾಜಕೀಯ ಪ್ರೇರಿತ ಎಂದು ತಾವು ಕರೆದದ್ದು ಏಕೆ ಎಂಬುದಕ್ಕೆ ಪುರಾವೆಗಳನ್ನು ನೀಡಿದ ಪ್ರಧಾನಿಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೃಷಿ ಕಾಯ್ದೆಗಳಲ್ಲಿ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಚಳವಳಿ ಪ್ರಾರಂಭವಾಯಿತು ಎಂದು ಹೇಳಿದರು.

"ನಂತರ ರಾಜಕೀಯ ವ್ಯಕ್ತಿಗಳು ಅಲ್ಲಿಂದ ಜಿಗಿದರು, ಪ್ರಸ್ತುತ ಜೈಲಿನಲ್ಲಿರುವ ಹಿಂಸಾಚಾರದ ಆರೋಪ ಹೊತ್ತಿರುವ ಕೆಲವು ಜನರ ಬಿಡುಗಡೆಗಾಗಿ ಅವರು ಒತ್ತಾಯಿಸಲು ಪ್ರಾರಂಭಿಸಿದರು, ಬಳಿಕ ಅವರು ಟೋಲ್ ಪ್ಲಾಜಾಗಳ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು ಎಂದು ಮೋದಿ ಹೇಳಿದರು.

ಜನಸಾಮಾನ್ಯರಿಂದ ತಿರಸ್ಕರಿಸಲ್ಪಟ್ಟ ಕೆಲವು ರಾಜಕೀಯ ಪಕ್ಷಗಳು ಮುಗ್ಧ ರೈತರನ್ನು ದಾರಿತಪ್ಪಿಸುತ್ತಿವೆ ಮತ್ತು ಸರ್ಕಾರ ಮತ್ತು ರೈತರ ನಡುವೆ ಮಾತುಕತೆ ನಡೆಯದಂತೆ ತಡೆಯುತ್ತಿವೆ ಎಂದು ಅವರು ಪ್ರತಿಪಾದಿಸಿದರು.

ರೈತರ ಪ್ರತಿಯೊಂದು ವಿಷಯದ ಬಗ್ಗೆಯೂ ಸರ್ಕಾರ ಮುಕ್ತ ಹೃದಯದಿಂದ ಮಾತನಾಡಲು ಸಿದ್ಧವಾಗಿದೆ. ಸರ್ಕಾರವು ರೈತರ ಪರವಾಗಿದೆ ಮತ್ತು ಯಾವುದೇ ರೀತಿಯ ಚರ್ಚೆಗೆ ಸಿದ್ಧವಿದೆ ಎಂದು ನಮ್ಮನ್ನು ವಿರೋಧಿಸುವವರಿಗೆ ಹೇಳಲು ನಾನು ಬಯಸುತ್ತೇನೆ. ಆದರೆ, ಚರ್ಚೆಯು ಉತ್ತಮ ವಾದಗಳ ಮೇಲೆ ಮತ್ತು ವಾಸ್ತವಾಂಶಗಳನ್ನು ಆಧರಿಸಿ ನಡೆಯಬೇಕು ಎಂದು ಮೋದಿ ಹೇಳಿದರು.

ಮೋದಿಯವರ ಭಾಷಣವನ್ನು ದೇಶದ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಸಾರ ಮಾಡಲಾಯಿತು.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಹಲವಾರು ಸದಸ್ಯರು, ಮತ್ತು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಗುಜರಾತಿನಲ್ಲಿ ವಿಜಯ್ ರೂಪಾನಿ ಅವರಂತಹ ಹಲವಾರು ಮುಖ್ಯಮಂತ್ರಿಗಳು ಪ್ರಧಾನಿಯವರ ವರ್ಚುವಲ್ ಭಾಷಣವನ್ನು ಆಲಿಸಿದರು.

ವಿರೋಧ ಪಕ್ಷಗಳ ಬೂಟಾಟಿಕೆಯನ್ನು ಪ್ರಶ್ನಿಸಿದ ಮೋದಿ, ರೈತರ ಪರವಾಗಿ ಧ್ವನಿ ಎತ್ತುತ್ತಿರುವವರು ಕೇರಳದಲ್ಲಿ ಮಂಡಿಗಳು ಇಲ್ಲದಿರುವುದರ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಅಥವಾ ಬಂಗಾಳದ ರೈತರು ಕೇಂದ್ರದಿಂದ ಹಣವನ್ನು ಪಡೆಯದಿರುವ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಿಲ್ಲ? ಎಂದು ಕೇಳಿದರು.

ವಿರೋಧ ಪಕ್ಷದಲ್ಲಿರುವವರು ಬಗ್ಗೆ ಏಕೆ ಮೌನವಾಗಿದ್ದಾರೆ? ದೇಶದ ಜನರಿಂದ ತಿರಸ್ಕೃತರಾಗಿರವ ರಾಜಕೀಯ ಪಕ್ಷಗಳು ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ಅಲ್ಲಿ ಅವರು ಸೆಲ್ಫಿಗಳನ್ನು ಕ್ಲಿಕ್ ಮಾಡುತ್ತಿದ್ದಾರೆ. ಪಕ್ಷಗಳು ಪಶ್ಚಿಮ ಬಂಗಾಳದ ರೈತರ ಬಗ್ಗೆ ಏಕೆ ಮಾತನಾಡಬಾರದು? ಕೇರಳದಲ್ಲಿ ವಿಷಯವನ್ನು ಏಕೆ ಎತ್ತಬಾರದು? ನೀವು ಯಾವ ರೀತಿಯ ರಾಜಕೀಯ ಮಾಡುತ್ತಿದ್ದೀರಿ? ವದಂತಿಗಳು ಮತ್ತು ಪುರಾಣಗಳನ್ನು ಹರಡಲು ಮತ್ತು ಕೆಲವೊಮ್ಮ ನಿಮ್ಮ ಬಲೆಗೆ ಬೀಳುವ ಮುಗ್ಧ ರೈತರನ್ನು ದಾರಿ ತಪ್ಪಿಸಲು ಮಾತ್ರ ನೀವು ರಾಜಕೀಯ ಮಾಡುತ್ತಿದ್ದೀರಿ ಎಂದು ಮೋದಿ ಕುಟುಕಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಪ್ರತ್ಯೇಕಿಸಿ ದಾಳಿ ಮಾಡಿದ ಮೋದಿ, ’ಇಡೀ ದೇಶದ ರೈತರು ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯಿಂದ ಲಾಭ ಪಡೆಯುತ್ತಿರುವಾಗ ಪಶ್ಚಿಮ ಬಂಗಾಳ ಸರ್ಕಾರವು ಯೋಜನೆಯನ್ನು ತಡೆದು ತನ್ನ ರಾಜ್ಯದ ೭೦ ಲಕ್ಷ ರೈತರು ಲಾಭ ಪಡೆಯದಂತೆ ಮಾಡಿರುವುದಕ್ಕಾಗಿ ನನಗೆ ಬೇಸರವಿದೆ. ಅನೇಕ ರೈತರು ನೇರವಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರದ ಕಿತಾಪತಿ ವಿರುದ್ಧ ದೂರು ನೀಡಿದ್ದಾರೆ ಆದರೂ ರಾಜ್ಯ ಸರ್ಕಾರವು ತುಟಿ ಬಿಚ್ಚುತ್ತಿಲ್ಲ ಎಂದು ಪ್ರಧಾನಿ ಟಾಂಗ್ ನೀಡಿದರು.

ರೈತರನ್ನು ಉದ್ದೇಶಿಸಿ ನೇರವಾಗಿ ಮಾತನಾಡಿದ ಮೋದಿ, ಕೆಲವು ಟೀಕೆಗಳ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು ಮತ್ತು ಹೊಸ ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿವೆ ಎಂದು ಹೇಳಿದರು.

ನೀವು ಅದನ್ನು ಎಂಎಸ್‌ಪಿಯಲ್ಲಿ ಮಂಡಿಯಲ್ಲಿ ಮಾರಾಟ ಮಾಡಲು ಬಯಸಿದರೆ, ನೀವು ಮಾಡಬಹುದು. ನಿಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಅಥವಾ ಅದನ್ನು ವ್ಯಾಪಾರಿಗಳು ಅಥವಾ ಬೇರೆ ಪ್ರದೇಶದಲ್ಲಿ ಮಾರಾಟ ಮಾಡಲು ಬಯಸಿದರೆ ಹಾಗೆ ಮಾಡಬಹುದು. ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡಲು ಆಯ್ಕೆ ಪಡೆಯುತ್ತಿದ್ದರೆ, ಸಮಸ್ಯೆ ಏನು?’ ಎಂದು ಮೋದಿ ಕೇಳಿದರು.

ಗುತ್ತಿಗೆ ಕೃಷಿಗೆ ಪ್ರವೇಶಿಸುವವರು ತಮ್ಮ ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಕಳೆದುಕೊಳ್ಳುವ ಅಪಾಯವಿದೆ ಎಂಬ ಆತಂಕವನ್ನೂ ಅವರು ಅಳಿಸಿಹಾಕಿದರು.

೨೦೧೪ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ತಮ್ಮ ಸರ್ಕಾರವು ಜಗತ್ತಿನಾದ್ಯಂತ ಕೃಷಿ ಮಾಡುವ ಉತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡಿದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚಿಸಲು ಮತ್ತು ಹೂಡಿಕೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲುಪ್ರತಿ ಹನಿ ನೀರಿಗೆ ಹೆಚ್ಚಿನ ಬೆಳೆ ಎಂಬ ಪರಿಕಲ್ಪನೆಗಳನ್ನು ಬಳಸಿದೆ ಎಂದು ಪ್ರಧಾನಿ ಹೇಳಿದರು.

ಒಂದು ತಿಂಗಳ ಹಿಂದೆ ದೆಹಲಿಯ ಹೊರವಲಯದಲ್ಲಿ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ಪ್ರಾರಂಭವಾದ ಬಳಿಕ, ಕಳೆದ ಒಂದು ವಾರದೊಳಗೆ ರೈತರನ್ನು ಪ್ರಧಾನಿಯವರು ತಲುಪಿದ್ದು ಇದು ಎರಡನೇ ಬಾರಿಯಾಗಿದೆ.

No comments:

Advertisement