Saturday, December 26, 2020

ಡಿಸೆಂಬರ್ ೨೯ ರಂದು ಮಾತುಕತೆ ಪುನಾರಂಭ: ರೈತರ ಪ್ರಸ್ತಾಪ

 ಡಿಸೆಂಬರ್ ೨೯ ರಂದು ಮಾತುಕತೆ ಪುನಾರಂಭ: ರೈತರ ಪ್ರಸ್ತಾಪ

ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟಿಸುತ್ತಿರುವ  ರೈತ ಸಂಘಗಳು ಬಿಕ್ಕಟ್ಟು ಇತ್ಯರ್ಥದ ಸಲುವಾಗಿ ಸರ್ಕಾರದೊಂದಿಗೆ ತಮ್ಮ ಸಂವಾದವನ್ನು ಪುನಾರಂಭ ಮಾಡಲು  2020 ಡಿಸೆಂಬರ್ 26ರ ಶನಿವಾರ  ನಿರ್ಧರಿಸಿದ್ದು, ಮುಂದಿನ ಸುತ್ತಿನ ಮಾತುಕತೆಗೆ ಡಿಸೆಂಬರ್ ೨೯ನೇ ದಿನಾಂಕದ ಪ್ರಸ್ತಾಪ ಮಾಡಿವೆ.

ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ೪೦ ರೈತ ಸಂಘಗಳ ಮಾತೃ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ವಿಧಾನಗಳು ಮತ್ತು ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಗ್ಗೆ ಖಾತರಿ ನೀಡುವ ವಿಧಾನಗಳು ಮಾತುಕತೆ ಪುನರಾರಂsಕ್ಕೆ ಸರ್ಕಾರದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಹೇಳಿದರು.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಡಿಸೆಂಬರ್ ೩೦ ರಂದು ಕುಂಡ್ಲಿ-ಮನೇಸರ್-ಪಾಲ್ವಾಲ್ (ಕೆಎಂಪಿ) ಹೆದ್ದಾರಿಯಲ್ಲಿ ರೈತರ ಟ್ರಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದೂ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ದರ್ಶನ್ ಪಾಲ್ ಹೇಳಿದರು.

"ದೆಹಲಿ ಮತ್ತು ದೇಶದ ಇತರ ಭಾಗಗಳಿಂದ ಜನರು ಪ್ರತಿಭಟನಾಕಾರ ರೈತರೊಂದಿಗೆ ಹೊಸ ವರ್ಷವನ್ನು ಆಚರಿಸುವಂತೆ ವಿನಂತಿಸುತ್ತೇವೆ" ಎಂದು ಪಾಲ್ ಹೇಳಿದರು.

ಮತ್ತೊಬ್ಬ ರೈತ ಮುಖಂಡ ರಾಜಿಂದರ್ ಸಿಂಗ್, "ನಾವು ಸಿಂಗುವಿನಿಂದ ಟಿಕ್ರಿ ಮೂಲಕ ಕೆಎಂಪಿಗೆ ಮೆರವಣಿಗೆ ನಡೆಸುತ್ತೇವೆ. ಸುತ್ತಮುತ್ತಲಿನ ರಾಜ್ಯಗಳ ರೈತರು ತಮ್ಮ ಟ್ರಾಲಿಗಳು ಮತ್ತು ಟ್ರಾಕ್ಟರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಲು ನಾವು ಕೋರುತ್ತೇವೆ ಎಂದು ಹೇಳಿದರು.

ಕೆಎಂಪಿ ಹೆದ್ದಾರಿಯನ್ನು ನಿರ್ಬಂಧಿಸಲು ಸರ್ಕಾರ ಬಯಸದಿದ್ದರೆ, ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸುವುದಾಗಿ ಅವರು ಮೊದಲೇ ಘೋಷಿಸುವುದು ಉತ್ತಮ ಎಂದು ರಾಜೀಂದರ್ ಸಿಂಗ್ ನುಡಿದರು.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ ಅಗರವಾಲ್ ಅವರಿಗೆ ಬರೆದ ಪತ್ರದಲ್ಲಿ, "ರೈತರ ಪ್ರತಿನಿಧಿಗಳು ಮತ್ತು ಭಾರತ ಸರ್ಕಾರದ ನಡುವಿನ ಮುಂದಿನ ಸಭೆ ೨೦೨೦ ಡಿಸೆಂಬರ್ ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಬೇಕೆಂದು ನಾವು ಪ್ರಸ್ತಾಪಿಸುತ್ತೇವೆ ಎಂದು ಮೋರ್ಚಾ ತಿಳಿಸಿದೆ.

"ನಮ್ಮೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿರುದರಿಂದ ಮತ್ತು ದಿನಾಂಕ ಮತ್ತು ನಮ್ಮ ಸಮಸ್ಯೆಗಳನ್ನು ಕೇಳಲು ಬಯಸಿರುವುದರಿಂದ ನಾವು ಡಿಸೆಂಬರ್ ೨೯ ರಂದು ಮಾತುಕತೆ ನಡೆಸಲು ಪ್ರಸ್ತಾಪಿಸಿದ್ದೇವೆ. ಈಗ, ಚೆಂಡು ಸರ್ಕಾರದ ಅಂಗಳದಲ್ಲಿದೆ ಎಂದು ಭಾರತೀಯ ಕಿಸಾನ್ ಕೇಂದ್ರ ಮುಖಂಡ ರಾಕೇಶ್ ಟಿಕಾಯತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪತ್ರದ ಪ್ರಕಾರ, ಪ್ರತಿಭಟನಾ ನಿರತ ಸಂಘಗಳು ಪ್ರಸ್ತಾಪಿಸಿರುವ ಕಾರ್ಯಸೂಚಿಯಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಆಸುಪಾಸಿನ ಪ್ರದೇಶಗಳ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಸುಗ್ರೀವಾಜ್ಞೆ ೨೦೨೦ ರಲ್ಲಿ ರೈತರನ್ನು ದಂಡ ವಿಧಿಸುವ ನಿಬಂಧನೆಗಳಿಂದ ಹೊರಗಿಡಲು ಸೂಕ್ತ ತಿದ್ದುಪಡಿಗಳನ್ನು ಮಾಡುವುದು ಪ್ರತಿಭಟನಾ ನಿರತ ಸಂಘಗಳು ಪ್ರಸ್ತಾಪಿಸಿರುವ ಕಾರ್‍ಯಸೂಚಿಯಲ್ಲಿ ಇರಬೇಕು ಎಂದು ರೈತ ಸಂಘಗಳು ಸರ್ಕಾರಕ್ಕೆ ಬರೆದಿರುವ ಪತ್ರ ತಿಳಿಸಿದೆ.

ರೈತರ ಹಿತಾಸಕ್ತಿಗಳನ್ನು ಕಾಪಾಡುವ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ ರಲ್ಲಿನ ಬದಲಾವಣೆಗಳು ಮುಂದಿನ ಸುತ್ತಿನ ಸಂವಾದದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದೂ ರೈತ ಸಂಘಗಳು ಒತ್ತಾಯಿಸಿವೆ.

ವಾರದ ಆರಂಭದಲ್ಲಿ, ಅಗರವಾಲ್ ಅವರು ೪೦ ಪ್ರತಿಭಟನಾ ನಿರತ ರೈತ ಸಂಘಗಳಿಗೆ ಪತ್ರ ಬರೆದು ಹೊಸ ಮಾತುಕತೆಗೆ ಆಹ್ವಾನಿಸಿದ್ದರು,

ಆದರೆ ಎಂಎಸ್‌ಪಿಗೆ ಸಂಬಂಧಿಸಿದ ಯಾವುದೇ ಹೊಸ ಬೇಡಿಕೆಯನ್ನು ಕಾರ್ಯಸೂಚಿಯಲ್ಲಿ ಸೇರಿಸುವುದು "ತಾರ್ಕಿಕ" ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದು ಮೂರು ಹೊಸ ಕೃಷಿ ಕಾನೂನುಗಳ ವ್ಯಾಪ್ತಿಯಿಂದ ಹೊರಗಿದೆ ಎಂದು ಅಗರವಾಲ್ ತಿಳಿಸಿದ್ದರು.

"ದುರದೃಷ್ಟವಶಾತ್, ನಿಮ್ಮ (ಅಗರವಾಲ್) ಪತ್ರವು ಹಿಂದಿನ ಸಭೆಗಳಲ್ಲಿ ನಡೆದ ಚರ್ಚೆಗಳ ಬಗೆಗಿನ ನಿಜವಾದ ಸಂಗತಿಗಳನ್ನು ನಿಗ್ರಹಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಸರ್ಕಾರದ ಪ್ರಯತ್ನವನ್ನು ಮುಂದುವರೆಸಿದೆ. ಮೂರು ಕೇಂದ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಾವು ಸತತವಾಗಿ ಒತ್ತಾಯಿಸಿದ್ದೇವೆ, ಆದರೆ ನಾವು ಕಾಯ್ದೆಗಳಿಗೆ ತಿದ್ದುಪಡಿ ತರುವಂತೆ ಕೇಳಿರುವುದಾಗಿ ಬಿಂಬಿಸುವ ಮೂಲಕ ನಮ್ಮ ನಿಲುವನ್ನು ವಿರೂಪಗೊಳಿಸಲು ಸರ್ಕಾರವು ಯತ್ನಿಸಿದೆ ಎಂದು ಪತ್ರ ಹೇಳಿದೆ.

"ನಿಮ್ಮ ಪತ್ರದಲ್ಲಿ ನೀವು ಹೇಳಿದಂತೆ, ರೈತರನ್ನು ಗೌರವಯುತವಾಗಿ ಆಲಿಸುವ ಬಗ್ಗೆ ನೀವು ಪ್ರಾಮಾಣಿಕರಾಗಿದ್ದರೆ, ಹಿಂದಿನ ಸಭೆಗಳ ಬಗ್ಗೆ ಸರ್ಕಾರವು ತಪ್ಪು ಮಾಹಿತಿ ನೀಡುವುದರಲ್ಲಿ ತೊಡಗಬಾರದು. ರೈತರ ಚಳವಳಿಯನ್ನು ಕೆಣಕಲು ಮತ್ತು ಅಪಚಾರ ಮಾಡಲು ಇಡೀ ರಾಜ್ಯ ಯಂತ್ರೋಪಕರಣಗಳು ಪ್ರಾರಂಭಿಸಿದ ಅಭಿಯಾನವು ತಕ್ಷಣವೇ ನಿಲ್ಲಬೇಕು ಎಂದು "ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪತ್ರದಲ್ಲಿ ತಿಳಿಸಿದೆ.

ಸೆಪ್ಟೆಂಬರಿನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿ ಸಾವಿರಾರು ರೈತರು ಮೂರು ತಿಂಗಳಿನಿಂದ  ದೆಹಲಿ ಗಡಿಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರಗಳಲ್ಲಿ ಶಿಬಿರ ಹೂಡಿದ್ದಾರೆ.

ಸರ್ಕಾರವು ಕಾನೂನುಗಳನ್ನು ರೈತರಿಗೆ ಸಹಾಯ ಮಾಡುವ ಪ್ರಮುಖ ಸುಧಾರಣೆಗಳೆಂದು ಸಮರ್ಥಿಸಿದೆ. ಆದರೆ ಪ್ರತಿಭಟನಾ ನಿರತ ಸಂಘಗಳು ಸರ್ಕಾರದ ಕ್ರಮಗಳು ಮಂಡಿ ಮತ್ತು ಎಂಎಸ್‌ಪಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ರೈತರನ್ನು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳ ಕರುಣೆಗೆ ಬಿಡುತ್ತವೆ ಎಂದು ಆಪಾದಿಸಿವೆ.

ಬುಧವಾರ, ಸಂಯುಕ್ತ ಕಿಸಾನ್ ಮೋರ್ಚಾವು ತಾವು ಈಗಾಗಲೇ ತಿರಸ್ಕರಿಸಿರುವ "ಅರ್ಥಹೀನ" ತಿದ್ದುಪಡಿಗಳ ಪ್ರಸ್ತಾಪವನ್ನು ಪುನರಾವರ್ತಿಸಬಾರದು ಆದರೆ ಮಾತುಕತೆ ಪುನರಾರಂಭಕ್ಕಾಗಿ ಲಿಖಿತವಾಗಿ "ದೃಢ ಪ್ರಸ್ತಾಪ" ವನ್ನು ತರಬೇಕೆಂದು ಸರ್ಕಾರವನ್ನು ಕೋರಿತ್ತು.

ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರದ ಮಾತುಕತೆಯಲ್ಲಿ ರಾಜಕೀಯ ಕಾರ್ಯಸೂಚಿಯನ್ನು ಹೊಂದಿರುವವರನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತೀವ್ರವಾಗಿ ದೂಷಿಸಿದರು ಮತ್ತು ಮಾತುಕತೆಗಳನ್ನು ಆಧರಿಸಿರುವವರೆಗೆ, ಅದನ್ನು ವಿರೋಧಿಸುವವರು ಸೇರಿದಂತೆ ಎಲ್ಲರೊಂದಿಗೆ ಸಂವಾದ ನಡೆಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪ್ರತಿಪಾದಿಸಿದರು.

ಕೃಷಿ ಸಮಸ್ಯೆಗಳು, ಸಂಗತಿಗಳು ಮತ್ತು ತರ್ಕ. ಸೆಪ್ಟೆಂಬರಿನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಕೇಂದ್ರವು ಪ್ರತಿಪಾದಿಸಿದೆ. ಅದು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ಹೇಳಿದೆ.

ಆದಾಗ್ಯೂ, ಪ್ರತಿಭಟನಾ ನಿರತ ರೈತರು ಹೊಸ ಕಾನೂನುಗಳು ಎಂಎಸ್‌ಪಿಯ ಸುರಕ್ಷತೆಯನ್ನು  ಮತ್ತು "ಮಂಡಿ" (ಸಗಟು ಮಾರುಕಟ್ಟೆ) ವ್ಯವಸ್ಥೆಯನ್ನು ತೊಡೆದುಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ರೈತರನ್ನು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಕರುಣೆಗೆ ತಳ್ಳುತ್ತವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

No comments:

Advertisement