My Blog List

Wednesday, December 2, 2020

ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಬಂಧನ

 ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಬಂಧನ

ಚೆನ್ನೈ: ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರನ್ನು ಮಹಿಳಾ ನ್ಯಾಯಾಧೀಶರು ಮತ್ತು ನ್ಯಾಯಾಧೀಶರ ಪತ್ನಿಯರ ವಿರುದ್ಧ ಪ್ರಯೋಗಿಸಿದ ಅವಾಚ್ಯ ಪದಗಳಿಗಾಗಿ 2020 ಡಿಸೆಂಬರ್ 2ರ ಬುಧವಾರ ಬಂಧಿಸಲಾಯಿತು. ಕರ್ಣನ್ ಅವರು ಬಳಸಿದ ಅವಾಚ್ಯ ಪದಗಳ ಕುರಿತ ವಿಡಿಯೋವನ್ನು ಯುಟ್ಯೂಬಿನಲ್ಲಿ ಪ್ರಕಟಿಸಲಾಗಿತ್ತು

ಹೈಕೋರ್ಟಿನ ಮಾಜಿ ನ್ಯಾಯಮೂರ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದರು.

ಕರ್ಣನ್ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳ ಪತ್ನಿಯರ ವಿರುದ್ಧ ಮಾನಹಾನಿಕರ ಮತ್ತು ಆಕ್ರಮಣಕಾರಿ ಟೀಕೆಗಳನ್ನು ಮಾಡಿದ್ದಾರೆ ಮತ್ತು ವಿಡಿಯೋವನ್ನು ಅಂತರ್ಜಾಲದಲ್ಲಿ (ಆನ್ ಲೈನ್) ಅಪ್‌ಲೋಡ್ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಪೊಲೀಸರಿಗೆ ಛೀಮಾರಿ ಹಾಕಿತ್ತು.

೨೦೧೭ ರಲ್ಲಿ, ಮಾಜಿ ನ್ಯಾಯಮೂರ್ತಿ ಕರ್ಣನ್ ಅವರು ಜೈಲು ಶಿಕ್ಷೆ ಅನುಭವಿಸಿದ ಮೊದಲ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದರು. ನ್ಯಾಯಾಂಗ ನಿಂದನೆಗಾಗಿ, ಕಲ್ಕತ್ತಾ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಅವರಿಗೆ ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿತ್ತು.

ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸುಪ್ರೀಂ ಕೋರ್ಟಿನ ಏಳು ನ್ಯಾಯಮೂರ್ತಿಗಳ ಪೀಠವು ಅವರನ್ನು ವಶಕ್ಕೆ ಪಡೆಯುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿತ್ತು. ಆದರೆ ಕರ್ಣನ್ ತಲೆಮರೆಸಿಕೊಂಡು ಹಲವು ವಾರಗಳ ಕಾಲ ಬಂಧನದಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ ಕರ್ಣನ್ ಅವರ ಮೊಬೈಲ್ ಫೋನಿನ ಜಾಡು ಹಿಡಿದು ಅವರನ್ನು ಬಂಧಿಸಲಾಗಿತ್ತು.

ಸುಪ್ರೀಂ ಕೋರ್ಟಿಗೆ ಹಾಜರಾದ ಮೊದಲ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ಎಂಬ ಕುಖ್ಯಾತಿಯೂ ಕರ್ಣನ್ ಅವರದಾಗಿತ್ತು. ಕರ್ಣನ್ ಅವರನ್ನು ಮೊದಲು ೨೦೦೯ ರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ  ನೇಮಿಸಲಾಗಿತ್ತು. ಅವರನ್ನು ೨೦೧೬ ರಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಹಿರಿಯ ನ್ಯಾಯಮೂರ್ತಿಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕರ್ಣನ್ ಪತ್ರ ಬರೆದಿದ್ದರು.

ಮಾಜಿ ನ್ಯಾಯಮೂರ್ತಿ ೨೦೧೮ ರಲ್ಲಿ ತಾವೇ ಸ್ಥಾಪಿಸಿದ್ದ ಭ್ರಷ್ಟಾಚಾರ ವಿರೋಧಿ ಡೈನಾಮಿಕ್ ಪಕ್ಷದ (ಎಸಿಡಿಪಿ) ಅಭ್ಯರ್ಥಿಯಾಗಿ ಕಳೆದ ವರ್ಷ ರಾಷ್ಟ್ರೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

No comments:

Advertisement