My Blog List

Saturday, December 19, 2020

ವಿವೇಕ್ ದೋವಲ್ ಕ್ಷಮೆ ಕೋರಿದ ಜೈರಾಮ್ ರಮೇಶ್

 ವಿವೇಕ್ ದೋವಲ್ ಕ್ಷಮೆ ಕೋರಿದ ಜೈರಾಮ್ ರಮೇಶ್

ನವದೆಹಲಿ: ಕಳೆದ ವರ್ಷ ಜನವರಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಅವರ ಬಳಿ ದೆಹಲಿ ನ್ಯಾಯಾಲಯದ ಮುಂದೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು 2020 ಡಿಸೆಂಬರ್ 19ರ ಶನಿವಾರ ಕ್ಷಮೆ ಯಾಚಿಸಿದರು.

ವಿವೇಕ್ ದೋವಲ್ ಅವರು ರಮೇಶ್ ಮತ್ತು ತಮ್ಮ ವಿರುದ್ಧ ಲೇಖನ ಪ್ರಕಟಿಸಿದ್ದ ಕ್ಯಾರವಾನ್ ನಿಯತಕಾಲಿಕದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಜೈರಾಮ್ ರಮೇಶ್ ಅವರ ಕ್ಷಮಾಯಾಚನೆಯನ್ನು ವಿವೇಕ ದೋವಲ್ ಸ್ವೀಕರಿಸಿದ್ದಾರೆ.

ದಿ ಡಿ ಕಂಪೆನೀಸ್ ಶೀರ್ಷಿಕೆಯ ಲೇಖನ ನಿಯತಕಾಲಿಕದಲ್ಲಿ ಪ್ರಕಟವಾದ ನಂತರ ವಿವೇಕ್ ದೋವಲ್ ಅವರು ಜೈರಾಮ್ ರಮೇಶ್ ಮತ್ತು ದಿ ಕ್ಯಾರವಾನ್ ನಿಯತಕಾಲಿಕ ಮತ್ತು ಪತ್ರಕರ್ತ ಕೌಶಲ್ ಶ್ರಾಫ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

೨೦೧೯ ಜನವರಿಯಲ್ಲಿ ದೋವಲ್ ಅವರ ಕ್ರಿಮಿನಲ್ ಮಾನಹಾನಿ ದೂರನ್ನು ನ್ಯಾಯಾಲಯವು ಪರಿಗಣಿಸಿತ್ತು  ಮತ್ತು ರಮೇಶ್ ಅವರಿಗೆ ೨೦೧೯ರ ಮೇ ತಿಂಗಳಲ್ಲಿ ಜಾಮೀನು ನೀಡಲಾಗಿತ್ತು. ದಿ ಕ್ಯಾರವಾನ್ ನಿಯತಕಾಲಿಕ ಮತ್ತು ಶ್ರಾಫ್ ವಿರುದ್ಧ ಮಾನನಷ್ಟ ಮೊಕದ್ದಮೆ ಮುಂದುವರೆಯಲಿದೆ.

ತಮ್ಮ ಹೇಳಿಕೆಗಳು ಸುದ್ದಿ ಲೇಖನವೊಂದನ್ನು ಆಧರಿಸಿವೆ ಎಂದು ಕ್ಷಮೆಯಾಚಿಸುವಾಗ ರಮೇಶ್ ಹೇಳಿದರು. "ಬಹುಶಃ ಕೆಲವು ಸ್ವತಂತ್ರ ಪರಿಶೀಲನೆಯ ಅಗತ್ಯವಿದ್ದಿರಬಹುದು ಎಂದು ರಮೇಶ್ ಹೇಳಿದರು.

ಪ್ರಕರಣವನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಚಿನ್ ಗುಪ್ತಾ ಶನಿವಾರ ಆಲಿಸಿದರು.

೨೦೧೯ರ ಜನವರಿ ೧೭ರಂದು ಕಾಂಗ್ರೆಸ್ ನಾಯಕ ಪತ್ರಿಕಾಗೋಷ್ಠಿಯಲ್ಲಿ, ವಿವೇಕ್ ದೋವಲ್, ಅವರ ಕುಟುಂಬ ಮತ್ತು ಅವರ ಉದ್ಯಮ ಜಿಎನ್ ಏಷ್ಯಾ ಫಂಡ್ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದರು.

" ಹೇಳಿಕೆಗಳು ನಿಮ್ಮನ್ನು ತೀವ್ರವಾಗಿ ನೋಯಿಸಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಹೇಳಿಕೆಗಳು ಅಥವಾ ಆರೋಪಗಳು ಹಿಂದಿನ ದಿನ ಕ್ಯಾರವಾನ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವನ್ನು ಆಧರಿಸಿತ್ತು ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಪ್ರಕರಣ ಮುಂದುವರೆದಂತೆ, ಬಹುಶಃ ಕೆಲವು ಸ್ವತಂತ್ರ ಪರಿಶೀಲನೆಯ ಅಗತ್ಯವಿತ್ತು ಎಂದು ನಾನು ಅರಿತುಕೊಂಡೆ. ಆದಾಗ್ಯೂ, ಸಾರ್ವತ್ರಿಕ ಚುನಾವಣೆಗಳು ಹತ್ತಿರದಲ್ಲಿದ್ದವು, ಮತ್ತು ಲೇಖನದಲ್ಲಿ ಎದ್ದಿರುವ ಪ್ರಶ್ನೆಗಳು ಸಾರ್ವಜನಿಕವಾಗಿ ಹೈಲೈಟ್ ಆಗಲು ಸೂಕ್ತವೆಂದು ಅನಿಸಿತ್ತು. ಪುನರಾವಲೋಕನದಲ್ಲಿ, ನಿಮ್ಮ ಮತ್ತು ನಿಮ್ಮ ಕುಟುಂಬದ ವಿರುದ್ಧ ಕೆಲವು ಪ್ರಚೋದನೆಗಳನ್ನು ನೀಡುವಲ್ಲಿ ನಾನು ಅತಿರೇಕಕ್ಕೆ ಹೋಗಿರಬಹುದು ಎಂದು ವಿವೇಕ್ ದೋವಲ್ ಅವರಿಗೆ ಬರೆದ ಪತ್ರದಲ್ಲಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಹೀಗಾಗಿ, ಹೇಳಿಕೆಗಳಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉಂಟಾದ ಯಾವುದೇ ನೋವಿಗೆ ನಾನು  ಕ್ಷಮೆಯಾಚಿಸಲು ಬಯಸುತ್ತೇನೆ. ವೆಬ್ಸೈಟ್ನಲ್ಲಿ ಲಭ್ಯವಿರುವ ಪತ್ರಿಕಾ ಪ್ರಕಟಣೆಗಳಿಂದ ನನ್ನ ಪತ್ರಿಕಾಗೋಷ್ಠಿಯನ್ನು ತೆಗೆದುಹಾಕುವಂತೆ ನಾನು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತೇನೆ ಎಂದೂ ರಮೇಸ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

No comments:

Advertisement