ಗ್ರಾಹಕರ ಸುಖ-ದುಃಖ

My Blog List

Tuesday, December 8, 2020

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

 ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ 2020 ಡಿಸೆಂಬರ್ 08ರ ಮಂಗಳವಾರ  ಅಂಗೀಕಾರಗೊಂಡಿತು.

ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದ ಕಾರಣ ಸಭಾಪತಿ ಮತ ವಿಭಜನೆ ಮಾಡಿದರು. ಮತಕ್ಕೆ ಹಾಕಿದಾಗ 37-21 ಮತಗಳ ಅಂತರದಲ್ಲಿ ಮಸೂದೆ ಅನುಮೋದನೆ ಪಡೆಯಿತು. ಧ್ವನಿ ಮತದ ಒಪ್ಪಿಗೆ ಬೇಡ, ಮತ ವಿಭಜನೆ ಮಾಡಿ ಎಂದು ವಿರೋಧ ಪಕ್ಷ  ಸದಸ್ಯರು ಒತ್ತಾಯಿಸಿದರು.

ಮತ ವಿಭಜನೆ ವೇಳೆ ಮರಿತಿಬ್ಬೇಗೌಡ ಅವರನ್ನು ಹೊರತುಪಡಿಸಿ ಉಳಿದೆಲ್ಲ ಜೆಡಿಎಸ್ ಸದಸ್ಯರು ಮಸೂದೆ ಪರ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು.

ಸದಸ್ಯರ ಮತ ವಿಭಜನೆ ನಡೆಸಿದ ಸಂದರ್ಭದಲ್ಲಿ ಪರ ಹಾಗೂ ವಿರುದ್ಧ ತಲೆ ಎಣಿಕೆ ನಡೆಸಿದ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ, ಎಡಭಾಗದ ನಾಲ್ಕನೇ ಸಾಲು ಎನ್ನುವ ಬದಲು ಎಡಭಾಗದ ನಾಲ್ಕನೇ ಸೋಲು ಎಂದು ಬಾಯ್ತಪ್ಪಿ ಹೇಳಿದರು. ಇಡೀ ಸದನ ನಗೆಗಡಲಲ್ಲಿ ತೇಲಿತು.

ಮುಂಗಾರು ಅಧಿವೇಶನದಲ್ಲಿ ಮಸೂದೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದರೂ, ವಿಧಾನಪರಿಷತ್ತಿನಲ್ಲಿ ಅಧಿವೇಶನದ ಕೊನೆಯದಿನ ತಡರಾತ್ರಿಯವರೆಗೂ ಚರ್ಚೆ ನಡೆದು, ಗದ್ದಲದ ಮಧ್ಯೆ ಸದನ ಮುಂದೂಡಿಕೆಯಾದ ಪರಿಣಾಮವಾಗಿ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ.

ಬಳಿಕ ಸರ್ಕಾರ ಎರಡನೇ ಬಾರಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಯನ್ನು ಜಾರಿಗೆ ತಂದಿತ್ತು.

ಮೊದಲನೆಯ ಸುಗ್ರೀವಾಜ್ಞೆ ವಿರುದ್ಧ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದ್ದ ಅರ್ಜಿದಾರರು ಎರಡನೇ ಸುಗೀವಾಜ್ಞೆ ವಿರುದ್ಧವೂ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್ ಸುಗ್ರೀವಾಜ್ಞೆಯ ಅಡಿಯಲ್ಲಿ ಕೈಗೊಳ್ಳಲಾಗುವ ಯಾವುದೇ ಕ್ರಮ ಹೈಕೋರ್ಟ್ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆಜ್ಞಾಪಿಸಿತ್ತು.

No comments:

Advertisement