ನಿವೃತ್ತ ನೌಕರರಿಗೆ ಸಂಜೀವಿನಿ: ಮದ್ರಾಸ್ ಹೈಕೋರ್ಟಿನ ಈ ತೀರ್ಪು
2025ರ ಜೂನ್ 28ರಂದು ಬೆಂಗಳೂರಿನ ಪತ್ರಿಕಾ ಸಂಸ್ಥೆಗಳ ಹಿರಿಯ
ಪತ್ರಕರ್ತರ ನಿಯೋಗವೊಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ
ಮಾಡಿ ಉದ್ಹೋಗಿಗಳ ಭವಿಷ್ಯನಿಧಿ ಸಂಸ್ಥೆಯ (ಈಪಿಎಫ್ ಒ) ಅಧಿಕ ಪಿಂಚಣಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು
ಬಗೆ ಹರಿಸುವಂತೆ ಮನವಿ ಸಲ್ಲಿಸಿತ್ತು.
ಅಧಿಕ ಪಿಂಚಣಿ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ
ಶೀಘ್ರವೇ ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸಿ ಪರಿಹರಿಸಲು ಯತ್ನಿಸುವುದಾಗಿ ಅವರು ಭರವಸೆ ಕೊಟ್ಟರು.
ಆ ಬಳಿಕ ಮೂರು ತಿಂಗಳುಗಳು ಕಳೆದಿವೆ. ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಸಚಿವರು ಕೈಗೊಂಡ ಯಾವುದೇ
ಕ್ರಮದ ಬಗ್ಗೆ ಈವರೆಗೂ ವರದಿಗಳು ಬಂದಿಲ್ಲ.
ಆದರೆ, ಜುಲೈ 2025 ರ ಲೋಕಸಭಾ ಅಧಿವೇಶನದಲ್ಲಿ,
ನವೆಂಬರ್ 2022 ರ ಇಪಿಎಫ್
ಒ ವರ್ಸಸ್ ಸುನೀಲ್ ಕುಮಾರ್ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ
ಹೆಚ್ಚಿನ ಪಿಂಚಣಿಗಾಗಿ ಬಂದ ಅರ್ಜಿಗಳ ಸ್ಥಿತಿಗತಿ ಕುರಿತು ಕರಂದ್ಲಾಜೆ ಅವರು ಸಂಸತ್ತಿಗೆ ಮಾಹಿತಿ
ನೀಡಿದರು.
ಅದರಂತೆ, ಜುಲೈ 16, 2025 ರವರೆಗೆ ಸ್ವೀಕರಿಸಿದ 15.24 ಲಕ್ಷ ಅರ್ಜಿಗಳ ಪೈಕಿ,
ಶೇ. 98.5% ಕ್ಕಿಂತ ಹೆಚ್ಚು ಅರ್ಜಿಗಳನ್ನು
ಇಪಿಎಫ್‌ಒ (EPFO)
ವಿಲೇವಾರಿ ಮಾಡಿದೆ.
ಆದರೆ ವಿಲೇವಾರಿಯ ವೈಖರಿ ನೋಡಿ.
ಸಚಿವರ ಉತ್ತರದ
ಪ್ರಕಾರ ಒಟ್ಟು 15.24 ಲಕ್ಷ
ಅರ್ಜಿಗಳಲ್ಲಿ,
11,01,582 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಹೆಚ್ಚಿನ
ಪಿಂಚಣಿಗಾಗಿ 4,00,573
ಬೇಡಿಕೆ ಪತ್ರಗಳನ್ನು ನೀಡಲಾಗಿದೆ.
ಹೀಗೆ ತಿರಸ್ಕರಿಸಿದ ಅರ್ಜಿಗಳನ್ನು
ಇಪಿಎಫ್ಒ ಮೂರು ರೀತಿಯಾಗಿ ವಿಂಗಡಿಸಿದೆ. 1) ಆರ್.ಸಿ. ಗುಪ್ತಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್
ನೀಡಿದ್ದ ಹಿಂದಿನ ತೀರ್ಪಿನ ಬಳಿಕ ಅಧಿಕ ಪಿಂಚಣಿ ನೀಡುತ್ತಿದ್ದ ಪ್ರಕರಣಗಳು, 2) ತಾನು ಹೊರಡಿಸಿದ್ದ
2014ರ ಸುತ್ತೋಲೆಗೆ ಮುನ್ನ ನಿವೃತ್ತರಾದ ಉದ್ಯೋಗಿಗಳು ಮತ್ತು 3) 2014ರ ಸುತ್ತೋಲೆಯ ಬಳಿಕ ನಿವೃತ್ತರಾದ
ಉದ್ಯೋಗಿಗಳು.
ಆರ್.ಸಿ. ಗುಪ್ತಾ ಮತ್ತು ಇತರರು
ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಬಳಿಕ ಅಧಿಕ ಪಿಂಚಣಿ ಪಡೆಯಲಾರಂಭಿಸಿದ್ದ ಹಲವಾರು
ನಿವೃತ್ತ ಉದ್ಯೋಗಿಗಳಿಗೆ ಅಧಿಕ ಪಿಂಚಣಿ ಸ್ಥಗಿತಗೊಳಿಸಲು ಭವಿಷ್ಯನಿಧಿ ಸಂಸ್ಥೆ ನೀಡಿದ ಕಾರಣ- ವಿನಾಯಿತಿ
ಪಡೆದ ಟ್ರಸ್ಟ್‌ಗಳ ನಿಯಮಗಳು ಹೆಚ್ಚಿನ ವೇತನವನ್ನು ಆದರಿಸಿ ನಿವೃತ್ತಿ ವೇತನ ನಿಧಿಗೆ ವಂತಿಗೆ ಪಾವತಿಸಲು
ನಿವೃತ್ತ ಉದ್ಯೋಗಿಗಳಿಗೆ ಅನುಮತಿ ನೀಡುವುದಿಲ್ಲ. ಮಾಲೀಕರು ಟ್ರಸ್ಟ್ ನಿಯಮಾವಳಿಗಳನ್ನು ಉಲ್ಲಂಘಿಸಿ
ಜಂಟಿ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿತ್ತು.
ಇನ್ನು 2014ರ ಸುತ್ತೋಲೆಗೆ ಮುನ್ನ
ನಿವೃತ್ತರಾದ ಉದ್ಯೋಗಿಗಳ ಪಿಂಚಣಿ ಅರ್ಜಿಗಳನ್ನು ತಿರಸ್ಕರಿಸಲು ಭವಿಷ್ಯನಿಧಿ ಸಂಸ್ಥೆ ಆಧರಿಸಿದ್ದು
ಸುಪ್ರೀಂಕೋರ್ಟ್ 2022ರಲ್ಲಿ
ಸುನೀಲ್ ಕುಮಾರ್ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ ಒಂದು ಪ್ಯಾರಾವನ್ನು. ಅದರ ಪ್ರಕಾರ
2014ರ ಸೆಪ್ಟೆಂಬರ್ 1ನೇ ದಿನಾಂಕಕ್ಕೆ ಮುಂಚಿತವಾಗಿ ನಿವೃತ್ತರಾದ ಉದ್ಯೋಗಿಗಳು ನಿವೃತ್ತಿಗೆ ಮುನ್ನ
ಇಪಿಎಫ್ ಒ ಪಿಂಚಣಿ ನಿಯಮಾವಳಿ 11(3)ರ ಪ್ರಕಾರ ಅಧಿಕ ಪಿಂಚಣಿಗಾಗಿ ಉದ್ಯೋಗದಾತರ ಜೊತೆಗೆ ಜಂಟಿ ಅರ್ಜಿ ಸಲ್ಲಿಸಿರಬೇಕು,
ಮತ್ತು ಅದನ್ನು ಇಪಿಎಫ್ ಒ ಅಧಿಕಾರಿ ತಿರಸ್ಕರಿಸಿರಬೇಕು ಎಂಬ ವಾದವನ್ನು.
ಇನ್ನು ಮೂರನೇ ವರ್ಗದವರಾದ 2014ರ
ಸೆಪ್ಟೆಂಬರ್ 1ರ ನಂತರ ನಿವೃತ್ತರಾದವರಿಗೆ ವಿನಾಯಿತಿ ಪಡೆದ ಟ್ರಸ್ಟ್ ನಿಯಮಾಳಿಗಳ ಪ್ರಕಾರ ಅಧಿಕ
ವೇತನದ ಮೇಲೆ ವಂತಿಗೆ ಪಾವತಿ ಮಾಡಲು ಟ್ರಸ್ಟ್ ನಿಯಮಗಳು ಅನುಮತಿಸುವುದಿಲ್ಲ. ಟ್ರಸ್ಟ್ ನಿಯಮವನ್ನು
ಉಲ್ಲಂಘಿಸಿ ಅವರು ಮಾಲೀಕರೊಂದಿಗೆ ಜಂಟಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಇಪಿಎಫ್
ಒ ತೆಗೆದುಕೊಂಡಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಅವರಿಗೆ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಇದೇ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು. ಸುಪ್ರೀಂಕೋರ್ಟ್
ನೀಡಿದ 2022ರ ತೀರ್ಪಿನಲ್ಲಿ
ಉಲ್ಲೇಖವೇ ಇರದ ಈ ಟ್ರಸ್ಟ್ ನಿಯಮಾವಳಿಯ ವಿಚಾರವೇ ಸುಪ್ರೀಂಕೋರ್ಟ್ ತೀರ್ಪಿನ ಜಾರಿಗೆ ಅಡ್ಡಿಯಾಗುವುದಿದ್ದರೆ,
ಕೇಂದ್ರ ಸರ್ಕಾರದ ಮಟ್ಟದಲ್ಲಿ ಅದನ್ನು ಬಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನು ಹಿರಿಯ
ಪತ್ರಕರ್ತರ ನಿಯೋಗ ಮಂಡಿಸಿತ್ತು.
ಆದರೆ 15 ಲಕ್ಷ
ಅರ್ಜಿಗಳ ಪೈಕಿ 11 ಲಕ್ಷ
ಅರ್ಜಿಗಳನ್ನು ತಿರಸ್ಕರಿಸಲು ಇಪಿಎಫ್ ಒ ನೀಡಿದ ಕಾರಣಗಳು ಬಡ ನಿವೃತ್ತ ನೌಕರರ ಜಂಘಾ ಬಲವನ್ನು ಉಡುಗಿಸಿದೆ
ಎಂದರೆ ಅತಿಶಯೋಕ್ತಿ ಅಲ್ಲ. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬ ಮಾತು ಶತಾಯಗತಾಯ ನಿಜ ಮಾಡಲು ಹೊರಟಿಸುವ
ಭವಿಷ್ಯ ನಿಧಿ ಸಂಸ್ಥೆಗೆ ತಿಳಿ ಹೇಳುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು ಸುಳ್ಳಲ್ಲ.
ಮತ್ತೆ ಕೋರ್ಟೇ ಬರಬೇಕಾಯಿತು..!
ಗುಪ್ತಾ ಮತ್ತು ಇತರರು ಪ್ರಕರಣದಲ್ಲಿ
ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಪಡೆಯುತ್ತಿದ್ದ ಅಧಿಕ ಪಿಂಚಣಿಯನ್ನು ಇಪಿಎಫ್‌ಒ ಸ್ಥಗಿತಗೊಳಿಸಿದಾಗ
ಅಂತಹ 69 ಉದ್ಯೋಗಿಗಳು ಕೇರಳ ಹೈಕೋರ್ಟಿನ ಮೆಟ್ಟಿಲೇರಿದರು. 2025ರ ಮಾರ್ಚ್ 24ರಂದು ಕೋರ್ಟ್ ಮಧ್ಯಂತರ
ತೀರ್ಪೊಂದನ್ನು ನೀಡಿ ಅವರಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ತಡೆ ಹಿಡಿಯಬಾರದು ಎಂದು ಆಜ್ಞಾಪಿಸಿದೆ.
ಆ ಪ್ರಕರಣ ಇನ್ನೂ ಮುಂದುವರೆಯುತ್ತಿದೆ.
ಈ ಮಧ್ಯೆ ಟ್ರಸ್ಟ್ ನಿಯಮಗಳನ್ನು
ಉಲ್ಲೇಖಿಸಿ ಅಧಿಕ ಪಿಂಚಣಿ ಕೋರಿಕೆಯ ತಮ್ಮ ಜಂಟಿ ಅರ್ಜಿಗಳನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ
ತಿರುಚಿರಾಪಳ್ಳಿಯ 86 ಮಂದಿ ಬಿಎಚ್ ಇಎಲ್ ನಿವೃತ್ತ ನೌಕರರು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠಕ್ಕೆ
ಅರ್ಜಿ ಸಲ್ಲಿಸಿದ್ದರು. ಬಿಎಚ್ ಇಎಲ್ ಸಂಸ್ಥೆಯು 'ನೌಕರರ ಭವಿಷ್ಯನಿಧಿ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್) ಮತ್ತು ಇತರೆ
ನಿಬಂಧನೆಗಳ ಕಾಯಿದೆ,
1952' ರ ಸೆಕ್ಷನ್ 17ರ ಅಡಿಯಲ್ಲಿ ವಿನಾಯಿತಿ ಪಡೆದ
ಸಂಸ್ಥೆಯಾಗಿದೆ.
ಈ ಅರ್ಜಿಯಲ್ಲಿ ಅವರು ಈ ಭವಿಷ್ಯ
ನಿಧಿ ಸಂಸ್ಥೆಯ ಈ ಮೂರು ಆದೇಶಗಳನ್ನು ಪ್ರಶ್ನಿಸಿದ್ದರು.
- ಹೆಚ್ಚಿನ ಪಿಂಚಣಿಗಾಗಿ ನೀಡಿದ್ದ
ಬೇಡಿಕೆ ನೋಟಿಸ್ ಅನ್ನು ಇಪಿಎಫ್‌ಒ ಹಿಂದಕ್ಕೆ ಪಡೆದ ಆದೇಶ.
- ಸುಪ್ರೀಂ ಕೋರ್ಟ್‌ನ ತೀರ್ಪಿಗೆ
ಅನುಗುಣವಾಗಿ ನೌಕರರ ಟ್ರಸ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲು ಅನುಮತಿ ನೀಡದ ಸುತ್ತೋಲೆ.
- ಹೆಚ್ಚಿನ ಪಿಂಚಣಿಗಾಗಿ ಸಲ್ಲಿಸಿದ ಜಂಟಿ
ಆಯ್ಕೆ ಅರ್ಜಿಯನ್ನು ನಿರಾಕರಿಸಿದ ಆದೇಶ.
ಈ
ಪ್ರಕರಣವು ಸುಪ್ರೀಂ ಕೋರ್ಟ್‌ನ ಮಹತ್ವದ 'ಇಪಿಎಫ್‌ಒ Vs. ಸುನಿಲ್ ಕುಮಾರ್ ಬಿ'
ತೀರ್ಪನ್ನು ಆಧರಿಸಿದೆ. ಈ ತೀರ್ಪಿನ ಪ್ರಕಾರ, ನೌಕರರು
ಪಿಂಚಣಿ ಯೋಜನೆಗೆ ತಮ್ಮ ಕೊಡುಗೆಯನ್ನು ನಿಜವಾದ ಸಂಬಳದ ಆಧಾರದ ಮೇಲೆ ಪಾವತಿಸಲು ಆಯ್ಕೆ
ಮಾಡಿಕೊಳ್ಳಬಹುದು.
ಬಿಎಚ್‌ಇಎಲ್ ನೌಕರರು 01.09.2014 ರ
ನಂತರ ನಿವೃತ್ತರಾಗಿದ್ದು
, ಅವರ ಭವಿಷ್ಯನಿಧಿ (ಪ್ರಾವಿಡೆಂಟ್
ಫಂಡ್) ಟ್ರಸ್ಟ್ ನಿಯಮಗಳು ನೌಕರರ ನಿಜವಾದ ವೇತನದ ಮೇಲೆ ಕೊಡುಗೆಯನ್ನು
ಪಾವತಿಸಲು ಅವಕಾಶ ನೀಡುತ್ತದೆ.
ಇಪಿಎಫ್‌ಒ ಯೋಜನೆಯಿಂದ ವಿನಾಯಿತಿ ಪಡೆದ ಸಂಸ್ಥೆಗಳ (exempted
establishments) ನೌಕರರಿಗೂ ಇದು ಅನ್ವಯಿಸುತ್ತದೆ ಎಂದು
ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತದೆ.
ನೌಕರರಿಗೆ ಜಂಟಿ ಆಯ್ಕೆಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ನಾಲ್ಕು
ತಿಂಗಳ ಕಾಲಾವಕಾಶ ನೀಡಿತ್ತು.
ಇದನ್ನು ನಂತರ ಹಲವಾರು ಬಾರಿ 31.01.2025 ರವರೆಗೆ
ವಿಸ್ತರಿಸಲಾಯಿತು.
- ಇಷ್ಟೆಲ್ಲ
ಆದ ಬಳಿಕ ಹೆಚ್ಚಿನ ಪಿಂಚಣಿಗಾಗಿ ಕೊಡುಗೆ ಪಾವತಿಸಲು ಇಪಿಎಫ್‌ಒ ನೀಡಿದ
ಬೇಡಿಕೆ ನೋಟಿಸನ್ನು ವಾಪಸ್ ಪಡೆದಿರುವುದು, ಹೆಚ್ಚಿನ ಪಿಂಚಣಿಗಾಗಿ ಸಲ್ಲಿಸಿದ
ಜಂಟಿ ಆಯ್ಕೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಬಿಎಚ್‌ಇಎಲ್ ನೌಕರರ
ಟ್ರಸ್ಟ್ ನಿಯಮಗಳಿಗೆ ತಿದ್ದುಪಡಿ ತರಲು ನಿರಾಕರಿಸಿದ್ದನ್ನು 'ಸುನಿಲ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವೆಂದು ನೌಕರರು ವಾದಿಸಿದರು.
ಸುನಿಲ್ ಕುಮಾರ್ ಪ್ರಕರಣದಲ್ಲಿ
ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
·
ಅನ್ವಯಿಸುವಿಕೆ: 22.08.2014ರ ಅಧಿಸೂಚನೆಯು ಸಾಮಾನ್ಯ ಸಂಸ್ಥೆಗಳಂತೆ ವಿನಾಯಿತಿ ಪಡೆದ ಸಂಸ್ಥೆಗಳ (exempted
establishments) ನೌಕರರಿಗೂ ಸಮಾನವಾಗಿ ಅನ್ವಯಿಸುತ್ತದೆ.
·
ಹೆಚ್ಚುವರಿ ಆಯ್ಕೆ: ಈ
ತೀರ್ಪಿನ ಪ್ರಕಾರ,
ಈ ಹಿಂದೆ ಆಯ್ಕೆ ಮಾಡಿಕೊಳ್ಳದ ನೌಕರರು ಕೂಡ ಜಂಟಿ ಆಯ್ಕೆಯ ಮೂಲಕ
ಪರಿಷ್ಕೃತ ಪಿಂಚಣಿ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
·
ನಿವೃತ್ತಿಯ ದಿನಾಂಕ: 01.09.2014ಕ್ಕಿಂತ ಮೊದಲು ನಿವೃತ್ತರಾದವರಿಗೆ ಈ ತೀರ್ಪಿನ ಪ್ರಯೋಜನಗಳು ಲಭ್ಯವಿಲ್ಲ. ಆದರೆ, ಅವರು
ಈಗಾಗಲೇ ಅಧಿಕ ಪಿಂಚಣಿಯ ಆಯ್ಕೆಯನ್ನು ಹಿಂದಿನ ನಿಯಮದಂತೆ
ಚಲಾಯಿಸಿದ್ದರೆ, ತೀರ್ಪಿನ ಪ್ರಯೋಜನಗಳನ್ನು
ಪಡೆಯಬಹುದು.
ಅಂತಿಮವಾಗಿ, ಬಿಎಚ್‌ಇಎಲ್‌ನ
ಭವಿಷ್ಯನಿಧಿ ಟ್ರಸ್ಟ್ ನಿಯಮಗಳ ಪ್ರಕಾರ, ನೌಕರರು
ತಮ್ಮ ನಿಜವಾದ ವೇತನದ ಮೇಲೆ ಕೊಡುಗೆಗಳನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ. 'ನೌಕರರ ಭವಿಷ್ಯನಿಧಿ ಯೋಜನೆ,
1952ರ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್ ಸ್ಕೀಮ್, 1952' ) ನಿಯಮ 27-AA
ಯ ಅನುಬಂಧ 'ಎ' ನಲ್ಲಿನ ಷರತ್ತಿನ ಪ್ರಕಾರ, ಶಾಸನಬದ್ಧ
ಯೋಜನೆಯಲ್ಲಿ ತಿದ್ದುಪಡಿ ಮಾಡಿದಾಗ, ಅದು ನೌಕರರಿಗೆ ಹೆಚ್ಚು ಅನುಕೂಲಕರವಾಗಿದ್ದರೆ, ಟ್ರಸ್ಟ್
ನಿಯಮಗಳನ್ನು ಔಪಚಾರಿಕವಾಗಿ ತಿದ್ದುಪಡಿ ಮಾಡದೆ ಅದು ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟ ಸುಪ್ರೀಕೋರ್ಟ್
ಬಿಎಚ್ ಇ ಎಲ್ ನೌಕರರ ಅರ್ಜಿಗಳನ್ನು ಪುರಸ್ಕರಿಸಿ, ಅವರಿಗೆ ಅಧಿಕ ಪಿಂಚಣಿ ಒದಗಿಸಬೇಕು ಎಂದು ಆಜ್ಞಾಪಿಸಿತು.
2025ರ ಸೆಪ್ಟೆಂಬರ್ 2ರಂದು ನೀಡಿದ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದ ನ್ಯಾಯಮೂರ್ತಿ ಆರ್.
ವಿಜಯಕುಮಾರ್ ತೀರ್ಪು ಕೇವಲ ಬಿಎಚ್ ಇಎಲ್ ನೌಕರರಿಗೆ ಮಾತ್ರವೇ ಅಲ್ಲ, ವಿನಾಯಿತ ಭವಿಷ್ಯನಿಧಿ ಟ್ರಸ್ಟ್
ಗಳು ಇರುವ ಎಲ್ಲ ಸಂಸ್ಥೆಗಳ ನೌಕರರ ಪಾಲಿಗೂ ಒಂದು ಸಂಜೀವಿನಿ. ಅದನ್ನು ಅವರು ಬಳಸಿಕೊಳ್ಳಬೇಕು.
ಈ ತೀರ್ಪಿನ ಸಮಗ್ರ ಅಂಶಗಳನ್ನು ತಿಳಿಯಲು ಈ ಕೆಳಗಿನ ಎರಡು ವಿಡಿಯೋಗಳನ್ನು ಪೂರ್ತಿಯಾಗಿ ಕೊನೆಯವರೆಗೂ ನೋಡಿ.


No comments:
Post a Comment