ಬಲ್ಲಿರೇನಯ್ಯ? ಯಾರೆಂದುಕೊಂಡಿದ್ದೀರಿ?
ಲೋಕರಾವಣ…
ತ್ರಿಕೂಟಾಚಲದ ನೆತ್ತಿಯ ಮೇಲೆ ನಿಂತಿದ್ದೇನೆ.
ಸುತ್ತ ವಿಸ್ತಾರವಾದ ಜಲರಾಶಿ.
ಅದರ ನಟ್ಟ ನಡುವೆ ಥಳ ಥಳಿಸುತ್ತಿರುವ ಮಹಾನಗರಿ.
ಅದೇ ಲಂಕೆ.
ಬರಿದೇ ಲಂಕೆ ಎನ್ನಬಹುದೇ?
ಇಲ್ಲ, ಸುವರ್ಣ ಲಂಕೆ.
ಅದರ ಒಂದೊಂದು ಗೋಪುರವೂ ನನ್ನ ಸಾಧನೆಯ ಪ್ರತೀಕ.
ಹೌದು.
ಸುವರ್ಣ ಲಂಕಾಧೀಶ್ವರನೆನಿಸಿದ ದಶಕಂಠ ರಾವಣ ನಾನು.
ನನ್ನನ್ನು ಆವರಿಸಿರುವುದು ವಿಸ್ತಾರವಾದ ವೈಭವ.
ಅಲ್ಲ, ವೈಭವದ ವಿಸ್ತಾರ.
ಪಾತಾಳದ ಅಜ್ಞಾತವಾದ ಕತ್ತಲ ಕೂಪವೆಲ್ಲಿ?
ಈ ಪ್ರಖರ ಬೆಳಕಿನಲ್ಲಿ ಮೀಯುತ್ತಿರುವ ಮಹಾನಗರಿ ಎಲ್ಲಿ?
ಸಾಧನೆ ಅಂದರೆ ಇದು.
ಸಾಹಸ ಅಂದರೆ ಇದು.
ಭಲಾ ದಶಕಂಠ! ಸಾಹಸಕ್ಕೆ ಇನ್ನೊಂದು ಹೆಸರೇ ರಾವಣ.
ಈ ಹೆಸರು ಬಂದದ್ದೂ ಸಾಹಸದಿಂದಲೇ.
ಪಾತಾಳದ ಆಳದಲ್ಲಿ ನನ್ನ ಪಾದ.
ಅಷ್ಟೂ ಲೋಕಗಳು ನನ್ನ ಪದಾಕ್ರಾಂತವಾಗಿವೆ.
ಅಂತರಕ್ಷದಾಚೆಗೆ ಸ್ವರ್ಗದ ಎತ್ತರದಲ್ಲಿ ನನ್ನ ಮಣಿ ಮುಕುಟ.
ಸುಮ್ಮನೆ ಚತುರ್ದಶ ಭುವನದಲ್ಲಣ ಅಂದರೇನು, ನನ್ನ ಕುರಿತು?
ಕಥೆ ಆರಂಭವಾಗುವುದೇ ಹೀಗೆ. ಸ್ವಗತದೊಂದಿಗೆ. ಲಂಕಾಧಿಪತಿ ರಾವಣನ ಸ್ವಗತ.
ಸ್ವಗತದ ರೂಪದಲ್ಲೇ ಸಾಗುವ ಕಾದಂಬರಿ ಇಡೀ ರಾಮಾಯಣದ ಸಮಗ್ರ ಕಥೆಯನ್ನೇ ಓದುಗನ ಕಣ್ಣ ಮುಂದಕ್ಕೆ ತರುತ್ತದೆ.
ರಾಮಾಯಣ ಶ್ರೀರಾಮನನ್ನೇ ಕೇಂದ್ರಬಿಂದುವಾಗಿ ಇರಿಸಿಕೊಂಡು ಮುಂದಕ್ಕೆ ಸಾಗುವ ಮಹಾಕಾವ್ಯ. ರಾಮನ ಹೆಜ್ಜೆಗಳ
ಜಾಡಿನಲ್ಲೇ ಇಡೀ ರಾಮಾಯಣದ ಕಥೆ ಸಾಗುತ್ತದೆ.
ಇತ್ತೀಚಿಗೆ ಸೀತೆಯನ್ನೇ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಈ ಕಥೆಯನ್ನು
ಬರೆದಿರುವುದೂ ಉಂಟು.
ಆದರೆ ಕಾವ್ಯದ ಖಳನಾಯಕ ಎನಿಸಿದ ರಾವಣನ ದೃಷ್ಟಿಯಲ್ಲಿ ಈ ಕಾವ್ಯ ಬಂದ ಉದಾಹರಣೆ ಇಲ್ಲವೆನ್ನಬಹುದು.
ಆದರೆ ಇದು ರಾವಣನನ್ನೇ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಬರೆದಿರುವ ಕಾದಂಬರಿ- ʼಲೋಕ ರಾವಣʼ.
ಸಾಹಿತಿ ಹಾಗೂ ಯಕ್ಷಗಾನ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರ್ ಅವರು ಬರೆದಿರುವ ಈ ಕಾದಂಬರಿಯಲ್ಲಿ ಯಕ್ಷಗಾನ ಅರ್ಥಗಾರಿಕೆಯ ಪ್ರಭಾವ ಗಾಢವಾಗಿದೆ. ಅದೇ ಕೃತಿಯ ವಿಶೇಷತೆ ಕೂಡಾ ಅಂದರೆ ತಪ್ಪಲ್ಲ. ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಗಳು ಪಾತ್ರದ ಒಳಹೊಕ್ಕು ಆ ಪಾತ್ರದ ಹಿನ್ನೆಲೆ ಮುನ್ನೆಲೆಗಳನ್ನೆಲ್ಲ ತಮ್ಮ ಮಾತಿನ ಮಂಟಪದ ಮೂಲಕವೇ ಶ್ರೋತೃಗಳ ಮನಕ್ಕೆ ತಲುಪಿಸುತ್ತಾರೆ. ಇಲ್ಲಿ ಕೂಡಾ ಕಲ್ಚಾರ್ ಅವರು ರಾವಣನ ಸ್ಮೃತಿ ಪಟಲದಿಂದ ಸ್ವಗತದ ಮೂಲಕ ಇಡೀ ರಾಮಾಯಣದ ಪಾತ್ರಧಾರಿಗಳ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ.
ರಾವಣನ ಸ್ವಗತದಲ್ಲಿ ರಾಮನ ಪೂರ್ವಜರ ಕಥೆ, ಸೀತೆಯ ಕಥೆ, ವಾಲಿ ಸುಗ್ರೀವರ
ಕಥೆ, ಹನುಮಂತನ ಕಥೆ, ವೇದವತಿಯ ಕಥೆ, ಇಂದ್ರಜಿತು, ಕುಂಭಕರ್ಣ, ಅತಿಕಾಯರ ಕಥೆಗಳೆಲ್ಲ ಸಾಂದರ್ಭಿಕವಾಗಿ
ಅನಾವರಣಗೊಳ್ಳುತ್ತವೆ. ಈ ಕಥೆಗಳು ಕಾದಂಬರಿಯ ಓಘಕ್ಕೆ ಪೂರಕವಾಗಿಯೇ ಸಾಗುತ್ತವೆ. ಹೀಗಾಗಿ ಕಾದಂಬರಿ
ಎಲ್ಲೂ ಸೆಳೆತ ಕಳೆದುಕೊಳ್ಳುವುದಿಲ್ಲ.
ಸಂಪೂರ್ಣ ಕಥೆಯನ್ನು ಕಥೆಗಾರರು ಲಂಕಾಧಿಪತಿ ರಾವಣನ ದೃಷ್ಟಿಯಿಂದ ಬರೆದಿದ್ದಾರೆ.
ಹಾಗಂತ ಅವರೇ ಹೇಳುವ ಹಾಗೆ ಇದು ರಾವಣನ ದಾರ್ಷ್ಟ್ಯದ ಸಮರ್ಥನೆಯಲ್ಲ. ಆತ ಹುಟ್ಟಿನಿಂದ ಮಹಾತಪಸ್ವಿಯಾದ
ವಿಶ್ರವಸ್ಸಿನ ಮಗ. ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು.
ಆದರೂ, ಆತ ಯಾಕೆ ದುಷ್ಟನಾದ? ಲೋಕ ಪೀಡಕನಾದ? ಪರಸ್ತ್ರೀ ಅಪಹಾರಕ ಎಂದು
ರಾಮಾಯಣದಲ್ಲಿ ಚಿತ್ರಿತನಾದ? ಇದಕ್ಕೆಲ್ಲ ಕಾರಣ ಅವನ ಹುಟ್ಟೇ? ಸಂಸ್ಕಾರವೇ? ಅವನಿಗಾದ
ಕಹಿ ಅನುಭವಗಳೇ, ಅಥವಾ ಅವನ ವ್ಯಕ್ತಿತ್ವವೇ ಹಾಗೆಯೇ?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅವುಗಳಿಗೆ ಉತ್ತರ ಪಡೆಯಲು ಹೊರಟ
ಕಥೆಗಾರರು, ರಾವಣನ ಅಂತರಂಗ ಪ್ರವೇಶಿಸದೆ ಉತ್ತರ ದೊರೆಯಲಾರದು ಎಂಬ ತೀರ್ಮಾನಕ್ಕೆ ಬಂದು ʼರಾವಣನ
ಅಂತರಂಗ ಹೊಕ್ಕುʼ ಸ್ವಗತದ ಮೂಲಕ ಉತ್ತರ ಹುಡುಕುವ ಯತ್ನ ನಡೆಸಿದ್ದಾರೆ.
ಆ ಪ್ರಯತ್ನವೇ ಈ ಕಾದಂಬರಿ. ತಮ್ಮ ಪೌರಾಣಿಕ ಕಾದಂಬರಿ ʼಕವಚʼಕ್ಕೆ ಸಿಕ್ಕಿದ
ಪ್ರೋತ್ಸಾಹವೇ ಈ ಕೃತಿ ರಚನೆಗೆ ಅವರಿಗೆ ಪ್ರೇರಣೆ. ಇವುಗಳ ಹೊರತಾಗಿ ೧೧ ಕೃತಿಗಳನ್ನು ರಚಿಸಿರುವ ಕಲ್ಚಾರ್
ಮೂರು ದಶಕಗಳಿಂದ ತಾಳಮದ್ದಲೆಯಲ್ಲಿ ಸಕ್ರಿಯ. ಯಕ್ಷಗಾನ ವಲಯದಲ್ಲಿ ಉದ್ದಗಲಕ್ಕೂ ಬೇಡಿಕೆಯ ಅರ್ಥಧಾರಿ.
ಯಕ್ಷಗಾನ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಅವರು ಅನೇಕ ವೇಷಗಳಲ್ಲಿ ರಂಜಿಸಿದ್ದಾರೆ. ಪತ್ರಕರ್ತನಾಗಿ,
ಉಪನ್ಯಾಸಕನಾಗಿ ಸ್ವಯಂ ನಿವೃತ್ತಿ ಪಡೆದವರು. ವಿವಿಧ ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಯಲ್ಲೂ ಕ್ರಿಯಾಶೀಲ.
ʼಲೋಕ ರಾವಣʼ ಕೃತಿಯನ್ನು ಬೆಂಗಳೂರಿನ
ಚಾಮರಾಜಪೇಟೆಯ ವೀರಲೋಕ ಬುಕ್ಸ್ ಪ್ರಕಟಿಸಿದೆ. ೨೦೦ ಪುಟಗಳ ಕಾದಂಬರಿಯ ಬೆಲೆ ೨೫೦ ರೂಪಾಯಿ. ಕಲಾವಿದ
ರಾಜು ವಿಷ್ಣು ಆಕರ್ಷಕ ಮುಖಪುಟ ರಚಿಸಿದ್ದಾರೆ.
(ಮೇಲಿನ ಪುಸ್ತಕ ಪ್ರಪಂಚ ಪುಟ ಕ್ಲಿಕ್ ಮಾಡಿರಿ.)


No comments:
Post a Comment