Saturday, May 10, 2008

ಇಂದಿನ ಇತಿಹಾಸ History Today ಮೇ 10

ಇಂದಿನ ಇತಿಹಾಸ

ಮೇ 10

`ಚಿ.ಮೂ.' ಎಂದೇ ಖ್ಯಾತರಾದ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಈದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂ ಗ್ರಾಮದಲ್ಲಿ ಕೊಟ್ಟೂರಯ್ಯ- ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು.


2007: ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಮೃತಧಾರಾ ಗೋಶಾಲೆಯನ್ನು ಸಚಿವ ನಾಗರಾಜ ಶೆಟ್ಟಿ ಲೋಕಾರ್ಪಣೆ ಮಾಡಿದರು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

2007: ಚೆನ್ನೈಯಲ್ಲಿ `ದಿನಕರನ್' ಪತ್ರಿಕಾ ಕಚೇರಿ ಮೇಲೆ ಡಿಎಂಕೆ ಕಾರ್ಯಕರ್ತರ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು.

2007: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯ (ನ್ಯಾಕ್) ಕಾರ್ಯಕಾರಿ ಮಂಡಳಿ ಅಧ್ಯಕ್ಷ ಪ್ರೊ. ಗೋವರ್ಧನ್ ಮೆಹ್ತಾ ಅವರು ರಸಾಯನ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ 2007ನೇ ಸಾಲಿನ ಪ್ರತಿಷ್ಠಿತ ಟ್ರೈಸ್ಟ್ ಸೈನ್ಸ್ ಪ್ರಶಸ್ತಿಗೆ ಆಯ್ಕೆಯಾದರು. ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಬಣ್ಣಿಸಲಾದ ಟ್ರೈಸ್ಟ್ ವಿಜ್ಞಾನ ಪ್ರಶಸ್ತಿಯು 50 ಸಾವಿರ ಅಮೆರಿಕನ್ ಡಾಲರ್ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2006: ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಹಾಗೂ ಮಾನ್ಯತೆ ಪಡೆದಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಡ್ಡಾಯ ಕನ್ನಡ ಕಲಿಕೆ ಪ್ರಸ್ತಾವವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮುಂದಿಟ್ಟರು. ಇದರೊಂದಿಗೆ ಪ್ರಾಥಮಿಕ ಹಂತದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಚರ್ಚೆಗೆ ಮತ್ತೆ ಚಾಲನೆ ದೊರೆಯಿತು.

2006: ನೇಪಾಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವು ದೊರೆ ಜ್ಞಾನೇಂದ್ರ ಅವರು 14 ತಿಂಗಳ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ವಿವಾದಾತ್ಮಕ ಸುಗ್ರೀವಾಜ್ಞೆಗಳನ್ನು ರದ್ದು ಪಡಿಸಲು ನಿರ್ಧರಿಸಿತು. ಪ್ರಧಾನಿ ಗಿರಿಜಾ ಪ್ರಸಾದ ಕೊಯಿರಾಲಾ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

2006: ನೇಪಾಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರು ತಮ್ಮ 14 ತಿಂಗಳ ಆಡಳಿತಾವದಿಯಲ್ಲಿ ಜಾರಿಗೊಳಿಸಿದ ವಿವಾದಾತ್ಮಕ ಮಾಧ್ಯಮ ಸುಗ್ರೀವಾಜ್ಞೆ ಸೇರಿ ಆರು ಆದೇಶಗಳನ್ನು ಅನೂರ್ಜಿತಗೊಳಿಸಿತು. ಮಾಧ್ಯಮ ಅಥವಾ ಉಗ್ರ ಪತ್ರಿಕಾ ಸುಗ್ರೀವಾಜ್ಞೆಯ ಮೂಲಕ ಪತ್ರಿಕಾ ಸ್ವಾತಂತ್ಯದ ಮೇಲೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿ, ದೊರೆ ಸರ್ಕಾರದ ವಿರುದ್ಧ ಬರೆದ ಪತ್ರಕರ್ತರಿಗೆ ಜೈಲು ಮತ್ತು ದಂಡ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿತ್ತು. ಈ ಕಾನೂನಿನಡಿ, ರಾಜಪ್ರಭುತ್ವ ಕುಟುಂಬವನ್ನು ಟೀಕಿಸುವ ಅಥವಾ ಉಗ್ರಗಾಮಿಗಳ ವರದಿಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಒಂದು ವರ್ಷ ಜೈಲು ಮತ್ತು ರೂ 500 ದಂಡಶಿಕ್ಷೆ ನಿರ್ಧರಿಸಲಾಗಿತ್ತು.

2006: ಭಾರತ ಮತು ಇಸ್ರೇಲ್ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತದಲ್ಲಿ ಪರಸ್ಪರ ಸಹಕರಿಸುವ ಸಲುವಾಗಿ ಮೂರು ವರ್ಷಗಳ ಕಾಲ ಮಹತ್ವದ ಕಾರ್ಯ ಯೋಜನೆ ರೂಪಿಸುವ ಐತಿಹಾಸಿಕ ಒಪ್ಪಂದಕ್ಕೆ ಇಸ್ರೇಲಿನ ಟೆಲ್ ಅವೀವಿನಲ್ಲಿ ಸಹಿ ಹಾಕಿದವು. ಭಾರತ ಸರ್ಕಾರದ ಕೃಷಿ ಸಚಿವ ಶರದ್ ಪವಾರ್ ಮತ್ತು ಇಸ್ರೇಲ್ ಸರ್ಕಾರದ ಕೃಷಿ ಸಚಿವ ಶಲಾಮ್ ಸೈಮ್ಹಾನ್ ಅವರು ರಾತ್ರಿ ಇಲ್ಲಿ ಈ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ.

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1977: ಕಲಾವಿದೆ ದಿವ್ಯಾ ರಾಘವನ್ ಜನನ.

1957: ಕಲಾವಿದೆ ಉಮಾಶ್ರೀ ಜನನ.

1949: ಕಲಾವಿದ ದ್ವಾರಕಾನಾಥ್ ಜನನ.

1940: ಬ್ರಿಟಿಷ್ ಪ್ರಧಾನಿ ನೆವಿಲ್ ಚೆಂಬರ್ಲಿನ್ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯಾಗಿ ವಿನ್ ಸ್ಟನ್ ಚರ್ಚಿಲ್ ಅಧಿಕಾರಕ್ಕೆ ಏರಿದರು.

1940: ಕಲಾವಿದ ರಾಘವೇಂದ್ರರಾವ್ ಎಸ್ ಜನನ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಎಂ. ರಂಗಯ್ಯ- ಪುಟ್ಟ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1933: `ಚಿ.ಮೂ.' ಎಂದೇ ಖ್ಯಾತರಾದ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಈದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂ ಗ್ರಾಮದಲ್ಲಿ ಕೊಟ್ಟೂರಯ್ಯ- ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಚಿ.ಮೂ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಜನತೆ ಪ್ರೀತಿ ಗೌರವಗಳಿಂದ ಅವರಿಗೆ ಅರ್ಪಿಸಿದ ಗೌರವ ಗ್ರಂಥ `ಸಂಶೋಧನೆ'.

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ ನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. 1844, 1849, 1850 ಹಾಗೂ 1852ರಲ್ಲಿ ಸಣ್ಣ ಪ್ರಮಾಣದ ದಂಗೆಗಳು ನಡೆದರೂ 1857ಕ್ಕೆ ಹೋಲಿಸಿದರೆ ಅವುಗಳಿಗೆ ಲಭಿಸಿದ ಮಹತ್ವ ಅತ್ಯಂತ ಕಡಿಮೆ.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು.

1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement