My Blog List

Saturday, December 14, 2019

ಪೌರತ್ವ ಕಾಯ್ದೆ: ಅಸ್ಸಾಮಿನಲ್ಲಿ ೧೦೦೦ ಜನರ ಬಂಧನ

ಪೌರತ್ವ ಕಾಯ್ದೆ: ಅಸ್ಸಾಮಿನಲ್ಲಿ ೧೦೦೦ ಜನರ ಬಂಧನ
ಶಿಲ್ಲಾಂಗ್ ಭೇಟಿ ರದ್ದು ಪಡಿಸಿದ ಅಮಿತ್ ಶಾ
ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಗಳು ಈಶಾನ್ಯ ರಾಜ್ಯಗಳಾದ ಅಸ್ಸಾಮ್, ಮೇಘಾಲಯದಲ್ಲಿ  2019 ಡಿಸೆಂಬರ್ 13ರ ಶುಕ್ರವಾರವೂ ಮುಂದುವರೆದಿದ್ದು, ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲೂ ಹಿಂಸಾಚಾರದ ಘಟನೆಗಳು ನಡೆದವು. ಅಮೆರಿಕ ಮತ್ತು ಫ್ರಾನ್ಸ್ ತಮ್ಮ ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದು, ಗೃಹ ಸಚಿವ ಅಮಿತ್ ಶಾ ಅವರು  2019 ಡಿಸೆಂಬರ್ 15ರ ಭಾನುವಾರದ ತಮ್ಮ ಶಿಲ್ಲಾಂಗ್ ಭೇಟಿಯನ್ನು ರದ್ದುಪಡಿಸಿದರು.

ರಾತ್ರಿಯವೇಳೆಗೆ ಅಸ್ಸಾಮಿನಲ್ಲಿ ಸುಮಾರು ೧೦೦೦ ಜನರನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅಸ್ಸಾಮ್ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದರು.
ಭಾನುವಾರ ಶಿಲಾಂಗ್ನಲ್ಲಿ ಈಶಾನ್ಯ ಪೊಲೀಸ್ ಅಕಾಡೆಮಿಗೆ ಅಮಿತ್ ಶಾ ಅವರು ಭೇಟಿ ನೀಡಬೇಕಾಗಿತ್ತು. ಇದೀಗ ಶಾ ಅವರು ಶನಿವಾರ ಮತ್ತು ಸೋಮವಾರ ಜಾರ್ಖಂಡ್ಗೆ ಭೇಟಿ ನೀಡಲಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮೆರವಣಿಗೆ ನಡೆಸಿದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸೆಗೆ ತಿರುಗಿದಾಗ ಪೊಲೀಸರು ಅವರ ಮೇಲೆ ಬೆತ್ತ ಪ್ರಹಾರ ಮಾಡಿದರು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಬೆಲ್ದಂಗಾ ರೈಲು ನಿಲ್ದಾಣ ಸಮುಚ್ಚಯಕ್ಕೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದು ಸ್ಥಳಕ್ಕೆ ಆರ್ ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.

ಜಿಲ್ಲೆಯ ಹಲವಾರು ಅಲ್ಪಸಂಖ್ಯಾತ ಸಂಘಟನೆಗಳು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘಟನೆಯು ಸಂಸತ್ ಚಲೋ ಮೆರವಣಿಗೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು  ನಿಗಮವು ಪಟೇಲ್ ಚೌಕ, ಜನಪಥ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಿತು.

ಅಸ್ಸಾಮಿನ ದೀಬ್ರುಗಢದಲ್ಲಿ ಗುರುವಾರ ಸಂಭವಿಸಿದ ಗೋಲಿಬಾರ್ ವೇಳೆಯಲ್ಲಿ ಗಾಯಗೊಂಡಿದ್ದ ಬಿಜೇಂದ್ರ ಪಾಂಗಿಂಗ್ ಎಂಬ ೩೦ರ ಹರೆಯದ ವ್ಯಕ್ತಿ ಶುಕ್ರವಾರ ಗಾಯಗಳ ಪರಿಣಾಮವಾಗಿ ಮೃತನಾಗಿರುವುದಾಗಿ ವರದಿಗಳು ತಿಳಿಸಿವೆ. ದಿಬ್ರುಗಢದಲ್ಲಿ ಶುಕ್ರವಾರ ಮಧ್ಯಾಹ್ನ ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಗುರುವಾರ ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು.

ಏನಿದ್ದರೂ, ಅಸ್ಸಾಮಿನಲ್ಲಿ ಶುಕ್ರವಾರ ರಾತ್ರಿಯವೇಳೆಗೆ ೧೦೦೦ ಮಂದಿಯನ್ನು ಬಂಧಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೇಳಿದರು.

No comments:

Advertisement