Wednesday, December 11, 2019

ಬನಾರಸ್ ಹಿಂದು ವಿಶ್ವವಿದ್ಯಾಲಯದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ರಾಜೀನಾಮೆ

ಬನಾರಸ್ ಹಿಂದು ವಿಶ್ವವಿದ್ಯಾಲಯದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ರಾಜೀನಾಮೆ
ಲಕ್ನೋ: ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ (ಬಿಎಚ್ಯು) ಸಂಸ್ಕೃತ ವಿದ್ಯಾ ಧರ್ಮ ಶಾಖೆಗೆ ನೇಮಕಗೊಂಡಿದ್ದ ಮುಸ್ಲಿಮ್ ಪ್ರೊಫೆಸರ್ ಫಿರೋಜ್ ಖಾನ್ ಅವರು ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಬಳಿಕ 2019 ಡಿಸೆಂಬರ್ 10ರ ಮಂಗಳವಾರ ರಾಜೀನಾಮೆ ನೀಡಿದರು.

ಹಿಂದೂಯೇತರ ವ್ಯಕ್ತಿ ಸದರಿ ಶಾಖೆಯಲ್ಲಿ ಸಂಸ್ಕೃತ ವಿಷಯವನ್ನು ಬೋಧಿಸುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸಿದ್ದರು.

ಇದೀಗ ಫಿರೋಜ್ ಖಾನ್ ಅವರು ವಿಶ್ವ ವಿದ್ಯಾಲಯದ ಇತರ ವಿವಿಧ ವಿಭಾಗಗಳಲ್ಲಿ ಸಂಸ್ಕೃತ ಬೋಧನೆ ಮಾಡಲಿದ್ದಾರೆ.

ವಿಶ್ವ ವಿದ್ಯಾಲಯದ ಆಡಳಿತ ಮತ್ತು ಸುಮಾರು ಒಂದು ತಿಂಗಳಿನೀಂದ ಧರಣಿ ನಡೆಸುತ್ತಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮಧ್ಯೆ ನಡೆದ ಸಂಧಾನ ಮಾತುಕತೆಗಳ ಬಳಿಕ ವಿಶ್ವ ವಿದ್ಯಾಲಯವು ಪ್ರೊಫೆಸರ್ ಖಾನ್ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಬಂದಿತು.

ವಿಶ್ವ ವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ಶಾಖೆಯು ಧರ್ಮ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿಭಾಗವಾದ್ದರಿಂದ ಹಿಂದೂಯೇತರ ಪ್ರಾಧ್ಯಾಪಕರು ಇಲ್ಲಿ ಬೋಧನೆ ಮಾಡಬಾರದು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಚಳವಳಿಗೆ ಇಳಿದಿದ್ದರು.

ಪ್ರೊಫೆಸರ್ ಫಿರೋಜ್ ಖಾನ್ ಅವರ ವರ್ಗಾವಣೆಯನ್ನು ಖಚಿತ ಪಡಿಸಿರುವ ಬಿಎಚ್ಯು ಆಡಳಿತವು ಅವರನ್ನು ಕಲಾ ವಿಭಾಗದ ಸಂಸ್ಕೃತ ಶಾಖೆಗೆ ವರ್ಗಾವಣೆ ಮಾಡಿದೆ. ಇಲ್ಲಿ ಕೇವಲ ಭಾಷೆಯನ್ನು ಮಾತ್ರ ಬೋಧಿಸಲಾಗುತ್ತದೆ.

ವಿಶ್ವ ವಿದ್ಯಾಲಯದ ಮೂರು ಶಾಖೆಗಳಲ್ಲಿ ಸಂಸ್ಕೃತವನ್ನು ಬೋಧಿಸಲಾಗುತ್ತದೆ. ಮೂರೂ ಶಾಖೆಗಳು ಸಂದರ್ಶನ ಮಾಡಿದ್ದ ಪ್ರೊಫೆಸರ್ ಖಾನ್ ಅವರು ಇದೀಗ ವಿದ್ಯಾ ಧರ್ಮ ಶಾಖೆಯನ್ನು ತ್ಯಜಿಸಿ, ಕಲಾ ವಿಭಾಗದಲ್ಲಿ ಸಂಸ್ಕೃತ ಕಲಿಸಲು ನಿರ್ಧರಿಸಿದ್ದಾರೆ.

ಪ್ರೊಫೆಸರ್ ಖಾನ್ ಅವರು ಇಲ್ಲಿಗೆ ರಾಜೀನಾಮೆ ನೀಡಿದ್ದಾರೆ. ಅವರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಬೋಧಿಸುವ ಇನ್ನೊಂದು ವಿಭಾಗದಲ್ಲಿ ಆಸಕ್ತಿ ವ್ಯಕ್ತ ಪಡಿಸಿದ್ದಾರೆಎಂದು ಖಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಪ್ರೊಫೆಸರ್ ಕೌಶಲೇಂದ್ರ ಪಾಂಡೆ ಹೇಳಿದರು.

ಅವರು ಸಂಸ್ಕೃತ ವಿಭಾಗದ ಕಲಾ ಶಾಖೆಯನ್ನು ಸೇರುವರು.. ಶಿಕ್ಷಕನಾಗಿ ಅವರಿಗೆ ಬೇರೆ ಅವಕಾಶ ಲಭಿಸಿರುವುದು ಒಳ್ಳೆಯದು ಎಂದಷ್ಟೇ ಹೇಳಲು ನಾನು ಬಯಸುತ್ತೇನೆಎಂದು ಪ್ರೊಫೆಸರ್ ಪಾಂಡೆ ನುಡಿದರು.

ನಮಗೆ ವೈಯಕ್ತಿಕ ವೈರತ್ವ ಇಲ್ಲ ಎಂಬುದಾಗಿ ಪ್ರೊಫೆಸರ್ ಖಾನ್ ಅವರಿಗೆ ಹೇಳಲು ಬಯಸುತ್ತೇನೆ. ಅವರಿಗೆ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಶುಭಂ ತಿವಾರಿ ಹೇಳಿದರು.

ಪ್ರೊಫೆಸರ್ ಖಾನ್ ಅವರನ್ನು ನವೆಂಬರ್ ೫ರಂದು ಸಂಸ್ಕೃತ ವಿದ್ಯಾಧರ್ಮ ಶಾಖೆಗೆ ನಿಯೋಜಿಸಲಾಗಿತ್ತು. ಆದರೆ ಪ್ರತಿಭಟನೆಗಳ ಕಾರಣ ಪಾಠ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ವಿಶ್ವ ವಿದ್ಯಾಲಯ, ಶಾಖೆಯ ಕೆಲವು ಸದಸ್ಯರು ಮತ್ತು ಕೆಲವು ವಿದ್ಯಾರ್ಥಿಗಳು ಪ್ರೊಫೆಸರ್ ಖಾನ್ ಅವರ ಅಭ್ಯರ್ಥನವನ್ನು ಬೆಂಬಲಿಸಿದ್ದರು.

ಭಾರತದ ಅತ್ಯಂತ ಖ್ಯಾತ ಸಂಸ್ಕೃತ ವಿಧ್ವಾಂಸರಲ್ಲಿ ಒಬ್ಬರಾದ ಪ್ರೊಫೆಸರ್ ರಾಧಾವಲ್ಲಭ ತ್ರಿಪಾಠಿ ಅವರನ್ನು ಒಳಗೊಂಡಿದ್ದ ಸಮಿತಿಯು ಪ್ರೊಫೆಸರ್ ಖಾನ್ ಅವರನ್ನು ಆಯ್ಕೆ ಮಾಡಿ ಅವರು ಅತ್ಯಂತ ಅರ್ಹ ಅಭ್ಯರ್ಥಿ ಎಂಬುದಾಗಿ ಹೇಳಿತ್ತು.

ಸೋಮವಾರ ಪ್ರೊಫೆಸರ್ ಖಾನ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಇನ್ನೊಬ್ಬ ಸಂಸ್ಕೃತ ವಿಧ್ವಾಂಸರ ಮೇಲೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ದಾಳಿ ನಡೆದಿತ್ತು ಎಂದು ಆಪಾದಿಸಲಾಗಿದೆ. ಸಂಸ್ಕೃತ ವಿದ್ಯಾ ಧರ್ಮ ಶಾಖೆಯ  ಪ್ರೊಫೆಸರ್ ಲಾಲ್ ಶಾಂತಿ ಅವರು ತಮ್ಮ ಮೇಲೆ ಕಲ್ಲುಗಳನ್ನು ತೂರಲಾಯಿತು ಎಂದು ಹೇಳಿದ್ದರು.

ನಾನು ತರಗತಿಯಲ್ಲಿ ಕುಳಿತಿದ್ದಾಗ ವಿದ್ಯಾರ್ಥಿಗಳ ಗುಂಪೊಂದು ನುಗ್ಗಿ ಬಂದು ಕೀಳುಭಾಷೆಯಲ್ಲಿ ನನ್ನನ್ನು ನಿಂದಿಸತೊಡಗಿತು. ಶಾಖೆಗೆ ಮುಸ್ಲಿಮ್ ಪ್ರೊಫೆಸರ್ ನೇಮಕಾತಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಅವರು ನನ್ನನ್ನು ಆಗ್ರಹಿಸಿದರು. ಕೆಲವು ವಿದ್ಯಾರ್ಥಿಗಳು ನನ್ನತ್ತ ಕಲ್ಲುಗಳನ್ನು ತೂರಿದರು ಮತ್ತು ನನ್ನನ್ನು ಎಳೆದಾಡಿದರುಎಂದು ಪ್ರೊಫೆಸರ್ ಲಾಲ್ ಮಂಗಳವಾರ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಪ್ರೊಫೆಸರ್ ಸಲ್ವಿ ಅವರು ಸಹೋದ್ಯೋಗಿಯೊಬ್ಬರು ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿರುವುದಾಗಿ ಆಪಾದಿಸಿದರು., ಆದರೆ ಅವರ ಹೆಸರು ಹೇಳಲು ನಿರಾಕರಿಸಿದರು. ಆದಾಗ್ಯೂ, ಉಪ ಕುಲಪತಿಯವರಿಗೆ ಘಟನೆ ಬಗೆ ದೂರು ನೀಡಲಾಗಿದೆ ಎಂದು ಅವರು ನುಡಿದರು. ಪ್ರೊಫೆಸರ್ ಸಲ್ವಿ ಅವರನ್ನು ಟೀಕಿಸಿದ್ದ ಗುಂಪಿನ ವಿದ್ಯಾರ್ಥಿಯೊಬ್ಬರುನಾವು ಪ್ರೊಫೆಸರ್ ಖಾನ್ ಅವರನ್ನು ಬೆಂಬಲಿಸುವುದನ್ನು ನಿಲ್ಲಿಸಿ ಎಂದಷ್ಟೇ ಅವರಿಗೆ ಹೇಳಿದ್ದೇವೆಎಂದು ಪ್ರತಿಪಾದಿಸಿದರು.

ಪ್ರೊಫೆಸರ್ ಖಾನ್ ಅವರು ಕಳೆದ ಒಂದು ತಿಂಗಳಿನಿಂದ ಮಾಧ್ಯಮದ ಜೊತೆ ಮಾತನಾಡಿಲ್ಲ.

No comments:

Advertisement