Thursday, December 5, 2019

ಪಿ ಚಿದಂಬರಂಗೆ ಸುಪ್ರೀಂ ಜಾಮೀನು, ತಿಹಾರ್ ಜೈಲಿನಿಂದ ಬಿಡುಗಡೆ

ಪಿ ಚಿದಂಬರಂಗೆ ಸುಪ್ರೀಂ ಜಾಮೀನು,
ತಿಹಾರ್ ಜೈಲಿನಿಂದ ಬಿಡುಗಡೆ
ನವದೆಹಲಿ: ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠವು  ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರು ಮಾಡಿದ  ಜಾಮೀನಿನ ಅನ್ವಯ 2019 ಬುಧವಾರ ರಾತ್ರಿ ತಿಹಾರ್ ಸೆರೆಮನೆಯಿಂದ  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಬಿಡುಗಡೆ ಮಾಡಲಾಗಿದ್ದು,೭೪ರ ಹರೆಯದ ನಾಯಕ ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾಗಲಿದ್ದಾರೆ.

ರಾತ್ರಿಯ ವೇಳೆಗೆ ತಿಹಾರ್ ಸೆರೆಮನೆಯಿಂದ ಹೊರಬರುತ್ತಿದ್ದಂತೆಯೇ ಚಿದಂಬರಂ  ಅವರು ‘೧೦೬ ದಿನಗಳ ಸೆರೆವಾಸದ ಬಳಿಕ ಸೆರೆಮನೆಯ ಹೊರಗೆ ಸ್ವಾತಂತ್ರ್ಯ ಗಾಳಿಯನ್ನು ಸೇವಿಸಲು ನನಗೆ ಖುಷಿಯಾಗುತ್ತಿದೆ. ಇಷ್ಟು ದಿನದಲ್ಲಿ ನನ್ನ ವಿರುದ್ಧ ಒಂದೇ ಒಂದು ದೋಷಾರೋಪವನ್ನೂ ಹೊರಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ತಮ್ಮ ತಂದೆ ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾಗುವರು ಎಂದು ಚಿದಂಬರಂ ಬಿಡುಗಡೆ ವೇಳೆಯಲ್ಲಿ ಹಾಜರಿದ್ದ ಪುತ್ರ ಕಾರ್ತಿ ಚಿದಂಬರಂ ಅವರು ಮಾಧ್ಯಮ ಒಂದಕ್ಕೆ ತಿಳಿಸಿದರು.  ಪಿ. ಚಿದಂಬರಂ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ.

ಚಿದಂಬರಂ ಅವರಿಗೆ ಜಾಮೀನು ಮಂಜೂರಾತಿಯೊಂದಿಗೆ ನಿರಾಳತೆ ಲಭಿಸುತ್ತಿದ್ದಂತೆಯೇ ಕಾರ್ತಿ ಚಿದಂಬರಂ ಅವರುಫ್ಯೂ, ಕಡೆಗೂ ೧೦೬ ದಿನಗಳ ಬಳಿಕಎಂದು ಟ್ವೀಟ್ ಮಾಡಿದರು.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್ ಪೀಠವು 2019 ಡಿಸೆಂಬರ್ 04ರ ಬುಧವಾರ ಬೆಳಗ್ಗೆ ಪಿ. ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿತು. ಆದರೆ ಪೂರ್ವಾನುಮತಿ ಇಲ್ಲದೆ ದೇಶದಿಂದ ಹೊರ ಹೋಗದಂತೆ ಅವರಿಗೆ ನಿರ್ದೇಶನ ನೀಡಿತು.

ಎರಡು ಲಕ್ಷ ರೂಪಾಯಿಗಳ ವೈಯಕ್ತಿಕ ಮುಚ್ಚಳಿಕೆ (ಬಾಂಡ್) ಮತ್ತು ಅಷ್ಟೇ ಮೊತ್ತದ ಇನ್ನೆರಡು ಭದ್ರತಾ ಖಾತರಿಗಳನ್ನು ನೀಡುವಂತೆಯೂ ಸುಪ್ರೀಂಕೋರ್ಟ್ ಅವರಿಗೆ ಸೂಚಿಸಿತು.

ಯಾವುದೇ ಪತ್ರಿಕಾ ಸಂದರ್ಶನಗಳನ್ನು ನೀಡುವುದರಿಂದ ದೂರವಿರುವಂತೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆಯೂ ಚಿದಂಬರಂ ಅವರಿಗೆ ಆಜ್ಞಾಪಿಸಿದ ಸುಪ್ರೀಂಕೋರ್ಟ್ ಪೀಠವು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಅಥವಾ ಸಾಕ್ಷ್ಯಾಧಾರಗಳಲ್ಲಿ ಕೈಯಾಡಿಸುವುದರ ವಿರುದ್ಧ ಅವರನ್ನು ಎಚ್ಚರಿಸಿತು.

ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು ಆಗಸ್ಟ್ ೨೧ರಂದು ಬಂಧಿಸಿದಂದಿನಿಂದ ಚಿದಂಬರಂ ಅವರು ಸೆರೆಯಲ್ಲಿದ್ದರು.

ಅಕ್ಟೋಬರ್ ೨೨ರಂದು ಸುಪ್ರೀಂಕೋರ್ಟ್ ಚಿದಂಬರಂ ಅವರಿಗೆ ಸಿಬಿಐ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿತ್ತು. ಆದರೆ ಅದಕ್ಕೆ ಆರು ದಿನ ಮುಂಚಿತವಾಗಿಯೇ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತ್ತು.

ಐಎನ್ ಎಕ್ಸ್ ಮೀಡಿಯಾ ಪ್ರಕರಣವು ೨೦೦೭ರಲ್ಲಿ ಐಎನ್ಎಕ್ಸ್ ಮೀಡಿಯಾ ಸಮೂಹಕ್ಕೆ ೩೦೭ ಕೋಟಿ ರೂಪಾಯಿಗಳ ವಿದೇಶೀ ಹಣ ಪಡೆಯಲು ಅನುಮತಿ ನೀಡುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಆಗ ಚಿದಂಬರಂ ಅವರು ವಿತ್ತ ಸಚಿವರಾಗಿದ್ದರು.

೨೦೧೭ರಲ್ಲಿ ಪಿ. ಚಿದಂಬರಂ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿತ್ತು.  ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ vಡೆ ಕಾಯ್ದೆಯ ಅಡಿಯಲ್ಲಿ ೨೦೧೮ರಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು.

ಮಲ್ಲಿಕಾರ್ಜುನ ಖರ್ಗೆ ಸ್ವಾಗತ: ಈಮಧ್ಯೆ, ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ್ದನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಸ್ವಾಗತಿಸಿದರು.

ನ್ಯಾಯಾಲಯವು ಬಹಳ ವಿಳಂಬವಾಗಿ ತೀರ್ಪು ನೀಡಿದೆ. ಚಿದಂಬರಂ ಅವರು ಮೂರು ತಿಂಗಳುಗಳಿಂದ ಸೆರೆವಾಸ ಅನುಭವಿಸಿದ್ದಾರೆ. ಅವರು ಒಬ್ಬ ಆರ್ಥಿಕ ತಜ್ಞ, ರಾಜಕೀಯ ಧುರೀಣ, ಕಾನೂನು ತಜ್ಞ ಆಗಿದ್ದಾರೆ. ಅವರಿಗೆ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ನಡೆದಿದೆಎಂದು ಖರ್ಗೆ ಕಿಡಿಕಾರಿದರು.

ಐಟಿ, ಇಡಿಯಿಂದ ಚಿದಂಬರಂ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ತಡವಾಗಿಯಾದರೂ ಉತ್ತಮ ತೀರ್ಪು ಬಂದಿದೆ. ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಚಿದಂಬರಂ ಉತ್ತಮ ವ್ಯಕ್ತಿತ್ವ ಹೊಂದಿದವರುಎಂದು ಖರ್ಗೆ ನುಡಿದರು.

No comments:

Advertisement