My Blog List

Friday, January 10, 2020

ಪೌರತ್ವ ಕಾಯ್ದೆ: ಹಿಂಸಾಚಾರ ನಿಂತ ಬಳಿಕವೇ ಅರ್ಜಿಗಳ ವಿಚಾರಣೆ

ಪೌರತ್ವ ಕಾಯ್ದೆ: ಹಿಂಸಾಚಾರ ನಿಂತ ಬಳಿಕವೇ ಅರ್ಜಿಗಳ ವಿಚಾರಣೆತುರ್ತು ಆಲಿಕೆಗೆ ಸುಪ್ರೀಂ ನಕಾರ
ನವದೆಹಲಿ: ೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ಸಿಂಧುತ್ವ ಪ್ರಶ್ನಿಸಿದ ಹಾಗೂ ಸಿಎಎ ಸಂವಿಧಾನಬದ್ಧ ಎಂಬುದಾಗಿ ಘೋಷಿಸಬೇಕು  ಎಂಬ ಕೋರಿಕೆ ಮಂಡಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಹಿಂಸಾಚಾರ ನಿಂತ ಬಳಿಕವೇ ನಡೆಸುವುದಾಗಿ ಸುಪ್ರೀಂಕೋರ್ಟ್ 2020 ಜನವರಿ 09ರ ಗುರುವಾರ ಸ್ಪಷ್ಟ ಪಡಿಸಿತು.

ದೇಶ ಪ್ರಸ್ತುತ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂತಹ ಅರ್ಜಿಗಳಿಂದ ಯಾವುದೇ ಸಹಾಯವಾಗುವುದಿಲ್ಲ. ಹೀಗಾಗಿ ಹಿಂಸಾಚಾರ ನಿಂತ ನಂತರವೇ ಸಿಎಎ ಕುರಿತ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ  ಬೋಬ್ಡೆ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬದ್ಧ ಎಂಬುದಾಗಿ ಘೋಷಿಸಬೇಕು. ಅಲ್ಲದೇ ಕಾನೂನಿನ ಕುರಿತು ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ವಿನೀತ್ ಧಾಂಡಾ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯನ್ನು ಸಿಜೆಐ ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ ಅವರ ಮುಂದೆ ಪ್ರಸ್ತಾಪಿಸಿದಾಗ ಸಿಜೆಐ ಬೋಬ್ಡೆ ಅವರು ಸ್ಪಷ್ಟನೆ ನೀಡಿದರು.

೨೦೧೪ರ ಡಿಸೆಂಬರ್ ೩೧ಕ್ಕೆ ಮುನ್ನ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸಲು ಪೌರತ್ವ ಕಾಯ್ದೆಗೆ ಮಾಡಲಾದ ೨೦೧೯ರ ತಿದ್ದುಪಡಿಗಳ ಸಿಂಧುತ್ವವನ್ನು ಪ್ರಶ್ನಿಸಿ ೬೦ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ.

ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳು ಕಾಯ್ದೆಯು ಧಾರ್ಮಿಕ ಅಸ್ಮಿತೆಯನ್ನು ಪೌರತ್ವಕ್ಕೆ ಜೋಡಿಸಿದ ಪರಿಣಾಮವಾಗಿ ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪದ ಉಲ್ಲಂಘನೆಯಾಗಿದೆ ಎಂದು ವಾದಿಸಿವೆ.

ಅರ್ಜಿಗಳ ಸಂಬಂಧವಾಗಿ ಸುಪ್ರೀಂಕೋರ್ಟ್ ಡಿಸೆಂಬರ್ ೧೮ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಸರ್ಕಾರವು ಜನವರಿ ೨ನೇ ವಾರದಲ್ಲಿ ನೋಟಿಸುಗಳಿಗೆ ಉತ್ತರ ನೀಡಬೇಕಾಗಿದೆ. ಅರ್ಜಿಗಳು ನ್ಯಾಯಾಲಯದಲ್ಲಿ ಜನವರಿ ೨೨ರಂದು ವಿಚಾರಣೆಗೆ ಬರಲಿವೆ.

ಮಧ್ಯೆ, ಸಿಎಎ ಅನುಷ್ಠಾನಕ್ಕೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ ಪೀಠ, ’ಕಾಯ್ದೆಯೊಂದನ್ನು ಸಂವಿಧಾನಬದ್ಧ ಎಂಬುದಾಗಿ ಘೋಷಿಸುವಂತೆ ಕೋರಿದ್ದು ಇದೇ ಪ್ರಥಮಎಂದು ಅಚ್ಚರಿ ಸೂಚಿಸಿತು.

ನ್ಯಾಯಾಲಯದ ಕೆಲಸ ಕಾಯ್ದೆಯೊಂದರ ಸಿಂಧುತ್ವವನ್ನು ನಿರ್ಧರಿಸುವುದು. ಅದನ್ನು ಸಂವಿಧಾನಬದ್ಧ ಎಂಬುದಾಗಿ ಘೋಷಿಸುವುದಲ್ಲಎಂದು ಪೀಠ ಹೇಳಿತು.

ರಾಷ್ಟ್ರವು ಅತ್ಯಂತ ಸಂಧಿಗ್ಧ ಸಮಯವನ್ನು ಎದುರಿಸುತ್ತಿದೆ. ಶಾಂತಿ ಸ್ಥಾಪನೆಗೆ ಪ್ರಯತ್ನವಾಗಬೇಕು. ಅರ್ಜಿಗಳು ನಿಟ್ಟಿನಲ್ಲಿ ಏನೂ ನೆರವು ನೀಡುವುದಿಲ್ಲಎಂದು ಪೀಠ ಹೇಳಿತು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿಲಾಗಿದೆ. ಆದರೆ ಇನ್ನೂ ಜಾರಿಗೆ ಬಂದಿಲ್ಲ. ಕಾನೂನು ಅನುಷ್ಠಾನಕ್ಕೆ ತಾವು ಇನ್ನೂ ನಿಯಮಾವಳಿಗಳನ್ನು ಅಂತಿಮಗೊಳಿಸಬೇಕಾಗಿದೆ ಎಂದು ಗೃಹ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ತಿಂಗಳು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ಹಿಂಸಾಚಾರಗಳು ಘಟಿಸಿದಾಗ ಕೂಡಾ ಸುಪ್ರೀಂಕೋರ್ಟ್ ಇಂತಹುದೇ ಹೇಳಿಕೆ ನೀಡಿತ್ತು. ಪ್ರತಿಭಟನೆಗಳು ನಿಂತ ಬಳಿಕ ಮಾತ್ರವೇ ನ್ಯಾಯಾಲಯ ಮಧ್ಯಪ್ರವೇಶ ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಆಗ ಹೇಳಿತ್ತು.

ಸಂವಿಧಾನ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರೀ ಪ್ರಮಾಣದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದು, ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿಯನ್ನು (ಎನ್ಆರ್ಸಿ) ಜೊತೆಗೂಡಿಸಿದಾಗ ಅದು ಭಾರತೀಯ ಮುಸ್ಲಿಮರನ್ನು ಪ್ರತ್ಯೇಕಿತರನ್ನಾಗಿ ಮಾಡಬಹುದು ಎಂಬ ಭೀತಿಗಳು ವ್ಯಕ್ತವಾಗಿದ್ದವು.

ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿದ್ದರೂ, ಬಿಜೆಪಿ ಆಳ್ವಿಕೆ ಇರುವ ಉತ್ತರಪ್ರದೇಶ, ಅಸ್ಸಾಂ ಮತ್ತು ಕರ್ನಾಟಕದಲ್ಲಿ ಪೊಲೀಸ್ ಗೋಲಿಬಾರ್ಗಳಿಗೆ ಸುಮಾರು ೨೫ ಮಂದಿ ಬಲಿಯಾಗಿದ್ದರು. ಪೊಲೀಸರು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಇರುವ ದೆಹಲಿಯಲ್ಲೂ ಹಿಂಸಾಚಾರಗಳು ಸಂಭವಿಸಿದ್ದವು.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವಿವಿದ್ಯಾಲಯದ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾಚಾರ ನಡೆಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿದ್ದು, ಅಲಹಾಬಾದ್ ಹೈಕೋರ್ಟ್ ಸ್ವ ಇಚ್ಛೆಯಿಂದ ಪ್ರಕರಣ ದಾಖಲಿಸಿ ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯದ ಪೊಲೀಸ್ ಹಿಂಸಾಚಾರದ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮಂಗಳವಾರ ನಿರ್ದೇಶನ ನೀಡಿತ್ತು.

No comments:

Advertisement