Friday, January 31, 2020

ನಿರ್ಭಯಾ ಪ್ರಕರಣ: ಅಕ್ಷಯ್ ಕ್ಯುರೇಟಿವ್ ಅರ್ಜಿಗೆ ಸುಪ್ರೀಂ ತಿರಸ್ಕಾರ

ನಿರ್ಭಯಾ ಪ್ರಕರಣ: ಅಕ್ಷಯ್ ಕ್ಯುರೇಟಿವ್
ಅರ್ಜಿಗೆ ಸುಪ್ರೀಂ ತಿರಸ್ಕಾರ
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು 2020 ಜನವರಿ 30ರ ಗುರುವಾರ ತಿರಸ್ಕರಿಸಿತು.

ತನ್ನ ಕೊಠಡಿಯಲ್ಲೇ ಅರ್ಜಿಯನ್ನು ಆಲಿಸಿದ ಬಳಿಕ ಗಲ್ಲು ಶಿಕ್ಷೆಯಿಂದ ಪಾರುಮಾಡುವಂತೆ ಕೋರಿರುವ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಮರಣದಂಡನೆಗೆ ತಡೆಯಾಜ್ಞೆ ನೀಡುವಂತೆ ಮಾಡಿದ ಅಕ್ಷಯ್ ಮನವಿಯಲ್ಲೂ ಯಾವುದೇ ಅರ್ಹತೆ ಇಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.

ನಾಲ್ಕೂ ಮಂದಿ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಈಗಾಗಲೇ ಫೆಬ್ರುವರಿ ೧ರ ದಿನಾಂಕವನ್ನು ನಿಗದಿ ಪಡಿಸಿ  ಡೆತ್ ವಾರಂಟ್ ಹೊರಡಿಸಲಾಗಿದೆ.

ದೆಹಲಿ ಕೋರ್ಟ್ ನಿರ್ದೇಶನ:   ಬೆಳವಣಿಗೆಯ ಮಧ್ಯೆ, ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡುವಂತೆ ನಿರ್ಭಯಾ ಪ್ರಕರಣದ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ ಮನವಿಗೆ ಉತ್ತರ ನೀಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ  2020 ಜನವರಿ 30ರ ಗುರುವಾರ  ಆಜ್ಞಾಪಿಸಿತು.

ವಿಶೇಷ ನ್ಯಾಯಾಧೀಶ ಎಕೆ ಜೈನ್ ಅವರು ಜನವರಿ ೩೧ರ  ಶುಕ್ರವಾರ ಬೆಳಗ್ಗೆ ೧೦ ಗಂಟೆ ಒಳಗಾಗಿ ತಮ್ಮ ಉತ್ತರವನ್ನು ಸಲ್ಲಿಸುವಂತೆ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಕ್ಷಿತ ಅಪರಾಧಿ ವಿನಯ್ ಕುಮಾರ್ ಪರ ವಕೀಲ .ಪಿ.ಸಿಂಗ್ ಅವರು ಇನ್ನೂ ಕೆಲವು ಶಿಕ್ಷಿತ ಅಪರಾಧಿಗಳು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಪಡೆಯಬೇಕಾಗಿರುವುದರಿಂದ ಗಲ್ಲು ಶಿಕ್ಷೆ ಜಾರಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಅರ್ಜಿಯು ನ್ಯಾಯದ ಅಪಹಾಸ್ಯ ಮತ್ತು ವಿಳಂಬ ತಂತ್ರ ಎಂದು ಪ್ರಾಸೆಕ್ಯೂಷನ್ ಹೇಳಿತು.

ಸುಪ್ರೀಂಕೋರ್ಟ್ ಈವರೆಗೆ ಅಕ್ಷಯ್ ಅರ್ಜಿ ಸೇರಿದಂತೆ ನಿರ್ಭಯಾ ಪ್ರಕರಣದ ಮೂವರು ಶಿಕ್ಷಿತ ಅಪರಾಧಿಗಳ ಕ್ಯುರೇಟಿವ್ ಅರ್ಜಿಗಳನ್ನು ತಿರಸ್ಕರಿಸಿದೆ. ಜನವರಿ ೧೪ರಂದು ಅದು ಮುಕೇಶ್ ಸಿಂಗ್ ಮತ್ತು ವಿನಯ್ ಶರ್ಮ ಕ್ಯೂರೇಟಿವ್ ಅರ್ಜಿಗಳನ್ನು ವಜಾಗೊಳಿಸಿತ್ತು.

No comments:

Advertisement