Friday, January 31, 2020

ಕೇರಳದಲ್ಲಿ ಭಾರತದ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆ

ಕೇರಳದಲ್ಲಿ ಭಾರತದ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆ
ವುಹಾನ್ನಿಂದ ಮರಳಿದ ಕೇರಳ ವಿದ್ಯಾರ್ಥಿನಿಗೆ ಸೋಂಕು, ದೃಢ ಪಡಿಸಿದ ಆರೋಗ್ಯ ಸಚಿವಾಲಯ
ನವದೆಹಲಿ:  ಚೀನಾದ ವುಹಾನ್ ನಗರದಿಂದ ಭಾರತಕ್ಕೆ ವಾಪಸಾಗಿರುವ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ದೃಢ ಪಡಿಸಿತು. ಇದರೊಂದಿಗೆ ಕೇರಳದಲ್ಲಿ ಭಾರತದ ಮೊದಲ ಕೊರೋನಾವೈರಸ್ ಪ್ರಕರಣ ಪತ್ತೆಯಾಯಿತು.
ವುಹಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ನೂತನ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಬಗ್ಗೆ ಕೇರಳದಿಂದ ವರದಿಯಾಗಿದೆ.

ರೋಗಿಗೆ
ಕೊರೋನಾವೈರಸ್ ಸೋಂಕು ತಗುಲಿರುವುದು ಖಾತರಿಯಾಗಿದ್ದು ಆಕೆಯನ್ನು ಆಸ್ಪತ್ರೆಯಲ್ಲಿ ಏಕಾಂಗಿವಾಸದಲ್ಲಿ ಇರಿಸಲಾಗಿದೆ ಎಂದು ಅರೋಗ್ಯ ಸಚಿವಾಲಯ ಹೇಳಿತು.
ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದ್ದು, ಆಕೆಯ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಕೇರಳ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಮಧ್ಯಾಹ್ನ ಗಂಟೆಗೆ ತುರ್ತು ಸಭೆ ಕರೆದಿದ್ದರು.

ರಾಜ್ಯದ ಎಲ್ಲ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜಿನಲ್ಲಿಏಕಾಂಗಿ ವಾಸ ವಾರ್ಡ್ಗಳನ್ನು ಸಜ್ಜುಗೊಳಿಸಲಾಗಿದೆ. ದೇಶದ ಪ್ರಪ್ರಥಮ ಕೊರೋನಾವೈರಸ್ ಕೇರಳದಲ್ಲಿ ಪತೆಯಾದ ಬಳಿಕ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಯಿತು.
ಕೇರಳದಲ್ಲಿ ಒಟ್ಟು ೮೦೬ ಜನರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಮಧ್ಯೆ, ದೆಹಲಿಯ ರಾಮಮನೋಹರ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಮೂವರು ರೋಗಿಗಳನ್ನು ಗುರುವಾರ ಕೊರೋನಾವೈರಸ್ ಸೋಂಕು ಇಲ್ಲವೆಂದು ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮೂರೂ ಮಂದಿಯ ಮೇಲೆ  ಅವರು ಉಸಿರಾಟದ ಸಮಸ್ಯೆ ಬಗ್ಗೆ ದೂರಿದ ಬಳಿಕ ಸೋಮವಾರದಿಮದ ವೈದ್ಯಕೀಯ ಚಿಕಿತ್ಸೆಗಾಗಿ ತೀವ್ರ ನಿಗಾ ಇಡಲಾಗಿತ್ತು.

ಕ್ರಮವಾಗಿ ೨೪, ೩೪ ಮತ್ತು ೪೮ರ ಹರೆಯದ ಮೂವರು ರೋಗಿಗಳಲ್ಲಿ, ಒಬ್ಬ ರೋಗಿ ವಿದ್ಯಾರ್ಥಿಯಾಗಿದ್ದರೆ, ಇತರ ಇಬ್ಬರು ಚೀನಾಕ್ಕೆ ವ್ಯವಹಾರ ನಿಮಿತ್ತ ತೆರಳಿ ವಾಪಸಾಗಿದ್ದರುಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಮೀನಾಕ್ಷಿ ಭಾರದ್ವಾಜ್ ಹೇಳಿದರು.

ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬುಧವಾರ ಚೀನಾಕ್ಕೆ ಪ್ರವಾಸ ಮಾಡದಂತೆ ಭಾರತದ ನಾಗರಿಕರಿಗೆ ಸಲಹೆ ಮಾಡಿತ್ತು.

ಚೀನಾದ ವುಹಾನ್ ನಗರದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಮಾರಣಾಂತಿಕ  ಕೊರೋನಾವೈರಸ್ ಹಾವಳಿ ಆರಂಭವಾದ ಬಳಿಕ ಭಾರತವು ೨೮ ಮಾದರಿಗಳನ್ನು ಈವರೆಗೆ ಪರೀಕ್ಷಿಸಿದೆ.

೧೧ ಮಿಲಿಯನ್ (.೧೦ ಕೋಟಿ) ಜನಸಂಖ್ಯೆ ಇರುವ ಚೀನಾದ ವುಹಾನ್ ನಗರದಲ್ಲಿ ಮಾರಕ ಕೊರೋನಾವೈರಸ್ ವ್ಯಾಧಿ ಮೊತ್ತ ಮೊದಲಿಗೆ ಪತ್ತೆಯಾಗಿದ್ದು, ಬಳಿಕ ವಿಶ್ವದ ಹಲವಾರು ರಾಷ್ಟ್ರಗಳಿಗೆ ಹರಡಿದೆ.

ಚೀನಾ ಒಂದರಲ್ಲೇ ಕಳೆದೆರಡು ತಿಂಗಳುಗಳಲ್ಲಿ ೧೭೦ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ. ೧೭೦೦ಕ್ಕೂ ಹೆಚ್ಚು ಪ್ರಕರಣಗಳು ಚೀನಾ ಒಂದರಲ್ಲೇ ದಾಖಲಾಗಿವೆ.

ಜಗತ್ತಿನಾದ್ಯಂತ ಆರೋಗ್ಯ ಅಧಿಕಾರಿಗಳು ವೈರಸ್ ಜಾಗತಿಕ ಮಟ್ಟದಲ್ಲಿ ಮಹಾಮಾರಿಯಾಗಿ ಬೆಳೆಯದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚೀನಾದ ಬಳಿಕ ಈಗಾಗಲೇ ಆಸ್ಟ್ರೇಲಿಯಾ, ಫ್ರಾನ್ಸ್, ಅಮೆರಿಕ ಮತ್ತು ಏಷ್ಯಾದ ಹಲವಾರು ದೇಶಗಳಲ್ಲಿಕೊರೋನಾವೈರಸ್ತನ್ನ ಕಬಂಧಬಾಹುವನ್ನು ಚಾಚಿದೆ.

No comments:

Advertisement