Tuesday, January 14, 2020

ಆರು ಪ್ರಮುಖ ವಿರೋಧ ಪಕ್ಷಗಳು ಗೈರು, ಕೇಂದ್ರ ವಿರುದ್ಧ ಹರಿಹಾಯ್ದ ಸೋನಿಯಾ

 ಆರು ಪ್ರಮುಖ ವಿರೋಧ ಪಕ್ಷಗಳು ಗೈರು, ಕೇಂದ್ರ ವಿರುದ್ಧ ಹರಿಹಾಯ್ದ ಸೋನಿಯಾ
ನವದೆಹಲಿ: ಆರು ಪ್ರಮುಖ ಪ್ರತಿಪಕ್ಷಗಳ ಪಕ್ಷಗಳ ಗೈರುಹಾಜರಿ ಮಧ್ಯೆ  2020 ಜನವರಿ 13ರ  ಸೋಮವಾರ   ನಗರದಲ್ಲಿ ೨೦ ವಿರೋಧ ಪಕ್ಷಗಳ ಸಭೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಪ್ರಬಲ ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತ್ವತದ ತೃಣಮೂಲ ಕಾಂಗ್ರೆಸ್, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ, ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷ, ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ - ಪ್ರಮುಖ ವಿರೋಧ ಪಕ್ಷಗಳ ಗೈರು ಹಾಜರಿ ಶಕ್ತಿ ಪ್ರದರ್ಶನವಾಗಬೇಕಾಗಿದ್ದ ಸಮಾವೇಶದಲ್ಲಿ ಎದ್ದು ಕಂಡಿತು.

ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪುನಃ ವಹಿಸಿಕೊಂಡ ಸೋನಿಯಾಗಾಂಧಿ ಅವರುಕೇಂದ್ರ ಸರ್ಕಾರದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಕಾರ್ಯಕ್ರಮವು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಜಾರಿ ನಿಟ್ಟಿನಲ್ಲಿ ಮೊದಲ ಹೆಜ್ಜೆಎಂದು ಬಣ್ಣಿಸಿದರು.

ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸರ ಪಕ್ಷಪಾತದ ಆಘಾತಕಾರಿ ಮತ್ತು ಮಾರಕ ದಮನ ಕಾರ್ಯಾಚರಣೆಯನ್ನುಕಟುವಾಗಿ ಟೀಕಿಸಿದ ಸೋನಿಯಾ,  ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್ಆರ್ಸಿ ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಪ್ರತಿಭಟನೆಗಳಿಗೆ ಕಾರಣವಾಗಿದ್ದರೂ, ಇವು ಜನರ ವ್ಯಾಪಕ ಭ್ರಮನಿರಸನ ಮತ್ತು ಸಿಟ್ಟನ್ನು ಪ್ರತಿಫಲಿಸಿದ್ದು ಈಗ ಬಹಿರಂಗಕ್ಕೆ ಬಂದಿದೆ  ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದಲ್ಲಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದೂ ಸೋನಿಯಾ ಆಪಾದಿಸಿದರು.

ಸರ್ಕಾರವು ದಮನ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ದ್ವೇಷ ಹರಡಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ದೇಶ ಎಂದೂ ಕಾಣದಂತಹ ಪರಿಸ್ಥಿತಿಯನ್ನು ಈಗ ಎದುರಿಸುತ್ತಿದೆಎಂದು ಅವರು ನುಡಿದರು.

ಸರ್ಕಾರದ ಇಬ್ಬರು ನಾಯಕರ ದ್ವಂದ್ವ ಹೇಳಿಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕಿ, ’ಅವರು ತಮ್ಮ ಪ್ರಚೋದನಾಕಾರಿ ಹೇಳಿಕೆಗಳನ್ನು ಮುಂದುವರೆಸುತ್ತಿದ್ದಾರೆ ಮತ್ತು ಸರ್ಕಾರದಿಂದ ನಡೆಯುತ್ತಿರುವ ದಮನಕಾರ್ ಹಾಗೂ ಹಿಂಸಾಚಾರದ ಬಗ್ಗೆ ಸೂಕ್ಷ್ಮತೆ ಕಳೆದುಕೊಂಡಿದ್ದಾರೆಎಂದು ದೂರಿದರು.

ಜಾಮಿಯಾ (ಮಿಲ್ಲಿಯಾ ಇಸ್ಲಾಮಿಯಾ), ಬಿಎಚ್ಯು (ಬನಾರಸ್ ಹಿಂದು ವಿಶ್ವವಿದ್ಯಾಲಯ), ಅಲಹಾಬಾದ್ ವಿಶ್ವ ವಿದ್ಯಾಲಯ ಮತ್ತು ಎಎಂಯು (ಅಲಿಘಡ ಮುಸ್ಲಿಮ್ ವಿಶ್ವ ವಿದ್ಯಾಲಯ) ಹಾಗೂ ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಬಳಿಕ  ಜೆಎನ್ಯು ನಲ್ಲಿ ನಡೆದ ಬಿಜೆಪಿ ಪ್ರಚೋದಿತ ಭಯಾನಕ ಘಟನೆಯನ್ನು ಇಡೀ ದೇಶವೇ ಕಂಡಿದೆಎಂದು ಸೋನಿಯಾ ಹೇಳಿದರು.

ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರ ನೋಂದಣಿಯು (ಎನ್ಆರ್ಸಿ) ತಿರುಗುಬಾಣವಾದ ಬಳಿಕ ಮೋದಿ-ಶಾ ಸರ್ಕಾರವು ಈಗ ಎನ್ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಕಸರತ್ತಿನ ಕಡೆಗೆ ಗಮನ ಕೇಂದ್ರೀಕರಿಸಿದ್ದು, ಕೆಲ ತಿಂಗಳುಗಳಲ್ಲೇ ಅದು ಆರಂಭವಾಗಲಿದೆ ಎಂದು ಸೋನಿಯಾ ಗಾಂಧಿ ನುಡಿದರು.

ಗೃಹ ಸಚಿವರ ಸ್ಪಷ್ಟನೆಗೆ ವಿರುದ್ಧವಾಗಿ, ರಾಷ್ಟ್ರವ್ಯಾಪಿ ಎನ್ಆರ್ಸಿಗೆ ಇದು ಮುನ್ನುಡಿ ಬರೆಯಲಿದೆ ಎಂಬುದು ಸ್ಪಷ್ಟವಾಗಿದೆಎಂದು ಕಾಂಗ್ರೆಸ್ ನಾಯಕಿ ಹೇಳಿದರು.

ಆರ್ಥಿಕ ಚಟುವಟಿಕೆಯ ಕುಸಿತವು ಈಗ ರಾಷ್ಟ್ರವು ಪ್ರಸ್ತುತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಪ್ರಗತಿ ಮತ್ತು ಬೆಳವಣಿಗೆ ನಿಧಾನವಾಗಿದ್ದು ಸಮಾಜದ ಎಲ್ಲ ವರ್ಗಗಳು ಅದರಲ್ಲೂ ವಿಶೇಷವಾಗಿ ಬಡವರು ಮತ್ತು ತುಳಿತಕ್ಕೆ ಒಳಗಾದವರನ್ನು ಕಾಡುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ನುಡಿದರು.

ರಾಷ್ಟ್ರದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಿ ವಿರೋಧ ಪಕ್ಷಗಳ ತಂತ್ರಗಾರಿಕೆಯನ್ನು ರೂಪಿಸುವ ಸಲುವಾಗಿಯೇ ಸೋನಿಯಾ ಅವರು ಸಮಾವೇಶಗೊಳಿಸಿದ ವಿಪಕ್ಷ ನಾಯಕರ ಸಭೆಯಲ್ಲಿ ಆರು ಪ್ರಮುಖ ವಿರೋಧ ಪಕ್ಷಗಳು ತಮ್ಮದೇ ಆದ ಕಾರಣಗಳಿಗಾಗಿ ಪಾಲ್ಗೊಳ್ಳಲಿಲ್ಲ.
ಕಾಂಗ್ರೆಸ್ ಪಕ್ಷವು ತಮ್ಮ ಬಗ್ಗೆ ಮಾಡಿದ ಟೀಕೆಗಳಿಗಾಗಿ ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಮಿತ್ರ ಪಕ್ಷವಾಗಿರುವ ಡಿಎಂಕೆಯು ರಾಜ್ಯದ ಸ್ಥಳೀಯ ಕಾಂಗ್ರೆಸ್ ನಾಯಕರ ಟೀಕೆಗಳಿಗಾಗಿ ಸಿಟ್ಟಿಗೆದ್ದು ಸಭೆಯನ್ನು ಬಹಿಷ್ಕರಿಸಿತು.

ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಸಭೆಯಿಂದ ದೂರ ಉಳಿದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಮೈತ್ರಿ ಮಾಡಿಕೊಂಡ ಶಿವಸೇನೆಯು ತನ್ನನ್ನು ಔಪಚಾರಿಕವಾಗಿ ಆಹ್ವಾನಿಸಿಲ್ಲ ಎಂಬ ಕಾರಣ ನೀಡಿ ಸಭೆಗೆ ಗೈರಾಯಿತು. ಆದರೆ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಾಲಿ ರೂಪದಲ್ಲಿ ತಾನು ಮಹಾರಾಷ್ಟ್ರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿತು.

ಭಾರತ ಬಂದ್ ವೇಳೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಜೊತೆ ಮುನಿಸಿಕೊಂಡ ಮಮತಾ ಬ್ಯಾನರ್ಜಿ, ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಕರೆದ ಸಭೆಯನ್ನು ಬಹಿಷ್ಕರಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಂದ್ ಹಿಂಸೆಗೆ ತಿರುಗಿದ್ದಕ್ಕೆ ಪ್ರತಿಕ್ರಿಯಿಸಿದ ಮಮತಾ, ಕಾಂಗ್ರೆಸ್ ಮತ್ತು ಎಡರಂಗಗಳ ದ್ವಿಮುಖ ನೀತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು.

No comments:

Advertisement