My Blog List

Tuesday, January 14, 2020

ಡಿವೈಎಸ್‌ಪಿ ದೇವೀಂದರ್ ಸಿಂಗ್‌ಗೆ ಉಗ್ರರಿಂದ ೧೨ ಲಕ್ಷ ರೂ ಆಮಿಷ

ಡಿವೈಎಸ್ಪಿ ದೇವೀಂದರ್ ಸಿಂಗ್ಗೆ ಉಗ್ರರಿಂದ ೧೨ ಲಕ್ಷ ರೂ ಆಮಿಷ
ಬಂಧಿತ ಭಯೋತ್ಪಾದಕರ ಪ್ರಾಥಮಿಕ ತನಿಖೆಯಿಂದ ಬಹಿರಂಗ
ನವದೆಹಲಿ: ಭಯೋತ್ಪಾದಕರನ್ನು ತನ್ನ ವಾಹನದಲ್ಲೇ ಒಯ್ಯುತ್ತಿದ್ದಾಗ ಸೆರೆಹಿಡಿಯಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿವೈಎಸ್ಪಿ) ದೇವಿಂದರ್ ಸಿಂಗ್ ಅವರಿಗೆ ಭಯೋತ್ಪಾದಕರು ೧೨ ಲಕ್ಷ ರೂಪಾಯಿಗಳ ಆಮಿಷ ಒಡ್ಡಿದ್ದ ಹಾಗೂ ಉಗ್ರರಿಗೆ ಸಿಂಗ್ ತಮ್ಮ ನಿವಾಸದಲ್ಲೇ ವಸತಿ ಒದಗಿಸಿದ್ದ ಸ್ಫೋಟಕ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತು.

ಭಯೋತ್ಪಾದಕರನ್ನು ತನ್ನ ವಾಹನದಲ್ಲೇ ಒಯ್ದಿದ್ದ ಸಿಂಗ್, ತಾನು ಇಬ್ಬರು ಹಿಜ್ಬುಲ್ ಭಯೋತ್ಪಾದಕರನ್ನು ಶರಣಾಗತಿ ಮಾಡಿಸುವ ಸಲುವಾಗಿ ಕರೆದೊಯ್ಯುತ್ತಿದ್ದುದಾಗಿ ಪ್ರತಿಪಾದಿಸಿದ್ದರೂ, ಅವರ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಯಾವುದೇ ಸುಳಿವು ಕೂಡಾ ಇರಲಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿತು.

ತಮ್ಮ ಪ್ರಾಥಮಿಕ ತನಿಖೆಯ ವೇಳೆಯಲ್ಲಿ ಸಿಂಗ್ ಅವರು ತಾವು ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸೈಯದ್ ನವೀದ್ ಮುಷ್ತಾಖ್ ಮತ್ತು ಭಯೋತ್ಪಾದಕ ರಫಿ ರಾಥೆರ್ ಅವರನ್ನು ಶರಣಾಗತಿ ಮಾಡಿಸುವ ಸಲುವಾಗಿ ಕರೆದೊಯ್ಯುತ್ತಿದ್ದಾಗಿ ಪ್ರತಿಪಾದಿಸಿದ್ದಾರೆಬಹಿರಂಗ ಕಾರ್ಯಕರ್ತನಾಗಿದ್ದು ಬಳಿಕ ವಕೀಲನಾಗಿ ಬದಲಾಗಿದ್ದ ಇರ್ಫಾನ್ ಶಫಿ ಕೂಡಾ ಅವರ ಜೊತೆಗಿದ್ದ. ’ಅವರು (ಸಿಂಗ್) ಪ್ರತಿಪಾದನೆ ಮಾಡಿದ್ದಾರೆ, ಆದರೆ ನಾವು ತನಿಖೆ ನಡೆಸುತ್ತಿದ್ದೇವೆಎಂದು ತನಿಖಾಧಿಕಾರಿಗಳು 2020 ಜನವರಿ 13ರ  ಸೋಮವಾರ  ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಜಾಗೃತಾ ದಳ (ಇಂಟಲಿಜೆನ್ಸ್ ಬ್ಯೂರೋ -ಐಬಿ) ಸಂಸ್ಥೆಗಳ ಜಂಟಿ ತಂಡವೊಂದು ಸಿಂಗ್ ಮತ್ತು ಅವರ ಜೊತೆಗೆ ಬಂಧಿಸಲ್ಪಟಿರುವವರ ತನಿಖೆ ನಡೆಸುತ್ತಿವೆ. ವಿಚಾರಣೆ ಕಾಲದಲ್ಲಿ ಪ್ರಶ್ನಿಸಿದಾಗಶರಣಾಗತಿ ಯೋಜನೆಬಗ್ಗೆ ತಮಗೆ ಯಾವುದೇ ಅರಿವು ಇಲ್ಲ ಎಂಬುದಾಗಿ ಬಂಧಿತ ಭಯೋತ್ಪಾದಕರು ಉತ್ತರಿಸಿದ್ದಾರೆಎಂದು ಮೂಲಗಳು ಹೇಳಿವೆ.

ಸಿಂಗ್ ಅವರು ಹಣಕ್ಕೆ ಬದಲಾಗಿ ಭಯೋತ್ಪಾದಕರಿಗೆ ಬನಿಹಾಲ್ ಸುರಂಗ ದಾಟಲು ನೆರವು ನೀಡುವ ಭರವಸೆ ಕೊಟ್ಟಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಒಪ್ಪಿಕೊಳ್ಳಲಾಗಿದ್ದ ಮೊತ್ತ ೧೨ ಲಕ್ಷ ರೂಪಾಯಿಗಳು. ಸ್ವತಃ  ಡಿವೈಎಸ್ಪಿ ಅವರೇ ಚಲಾಯಿಸುತ್ತಿದ್ದುದರಿಂದ  ಕಾರನ್ನು ಯಾರೂ ತಡೆಯಲಾರರು ಎಂಬ ಭರವಸೆಯಿಂದ ಸಿಂಗ್ ಸ್ವತಃ ಕಾರಿನಲ್ಲೇ ಕುಳಿತಿದ್ದರುಎಂದು ಅಧಿಕಾರಿಗಳು ನುಡಿದರು.

ಸಿಂಗ್ ಅವರಿಗೆ ಹಿಜ್ಬುಲ್ ಭಯೋತ್ಪಾದಕರ ಶರಣಾಗತಿ ವ್ಯವಸ್ಥೆ ಮಾಡುವ ಯಾವುದೇ ಅಧಿಕಾರ ಇರಲಿಲ್ಲ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಪೊಲೀಸ್ ಅಥವಾ ತನಿಖಾ ಸಂಸ್ಥೆಗಳಲ್ಲಿ ಯಾರಿಗೂ ತಮ್ಮ ಯೋಜನೆಗಳ ಬಗ್ಗೆ ಅವರು ಸುಳಿವು ನೀಡಿರಲಿಲ್ಲಎಂದು ಮೂಲಗಳು ಹೇಳಿವೆ.

ದಕ್ಷಿಣ ಕಾಶ್ಮೀರದ ಏಪಲ್ ಆರ್ಚರ್ಡ್ಸ್ನಲ್ಲಿ ಇತ್ತಿಚೆಗೆ ನಡೆದಿದ್ದ ಟ್ರಕ್ ಚಾಲಕರ ಹತ್ಯೆ ಪ್ರಕರಣದ ಮುಖ್ಯ ಆರೋಪಿಯಾದ ಮುಷ್ತಾಖ್ ಮತ್ತು ಸಹಚರನಿಗೆ ಆಶ್ರಯ ನೀಡಿ ಜಮ್ಮುವಿಗೆ ಸುರಕ್ಷಿತವಾಗಿ ದಾಟಿಸಲು, ಮಾಜಿ ಪೊಲೀಸ್ ಪೇದೆಯಾಗಿದ್ದ ನವೀದ್ ಮುಷ್ಕಾಖ್ ಯಾನೆ ಬಾಬು ಮತ್ತು ಆತನ ಸಹಚರರು ಸಿಂಗ್ಗೆ ಹಣದ ಆಮಿಷ ಒಡ್ಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ಸೇನೆ ಮತ್ತು ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಾಗ, ಭಯೋತ್ಪಾದಕರನ್ನು ಬನಿಹಾಲ್ ದಾಟಿಸಲು ನೆರವು ನೀಡಿದ್ದ ಹಾಗೂ ಅವರಿಗೆ ಜಮ್ಮುವಿನಲ್ಲಿ ಆಶ್ರಯ ಒದಗಿಸಿದ್ದ ಇತರ ಕನಿಷ್ಠ ಐದು ಪ್ರಕರಣಗಳಲ್ಲಿ ಸಿಂಗ್ ಅವರು ಶಾಮೀಲಾಗಿದ್ದುದನ್ನು  ಕೂಡಾ ಪ್ರಾಥಮಿಕ ತನಿಖೆ ಬಯಲಿಗೆಳೆದಿದೆ.

ಸಿಂಗ್ ಅವರ ಖಾಸಗಿ ವಾಹನದಲ್ಲಿ ಪ್ರಯಾಣ ಮಾಡುವುದಕ್ಕೆ ಮುನ್ನ ಭಯೋತ್ಪಾದಕರು ಸಿಂಗ್ ನಿವಾಸದಲ್ಲೇ ವಾಸವಾಗಿದ್ದರು ಎಂದೂ ಅಧಿಕಾರಿಗಳು ಹೇಳಿದರು. ಮಾಜಿ ವಕೀಲ ಮೀರ್ ಪಾಕಿಸ್ತಾನಕ್ಕೆ ಐದು ಬಾರಿ ಭೇಟಿ ನೀಡಿದ್ದು, ಆತ ಅಲ್ಲಿನ ಉಗ್ರಗಾಮಿ ಪ್ರಚೋದಕರ ಜೊತೆಗೆ ನಿಯಮಿತ ಸಂಪರ್ಕ ಇಟ್ಟುಕೊಂಡಿದ್ದ ಎಂದೂ ತನಿಖೆಗಾರರು ಹೇಳಿದರು.

ಭಯೋತ್ಪಾದಕರು ಗಣರಾಜ್ಯೋತ್ಸವ ಮುನ್ನಾದಿನ ಯಾವುದಾದರೂ ದಾಳಿ ನಡೆಸಲು ಯೋಜಿಸಿದ್ದರೇ ಮತ್ತು ಇಂತಹ ಯೋಜನೆ ಬಗ್ಗೆ ಸಿಂಗ್ಗೆ ಅರಿವಿತ್ತೇ ಎಂಬುದನ್ನು ಪತ್ತೆ ಹಚ್ಚು ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಗೂಢಚಾರಿಕೆ ಸಲುವಾಗಿ ಭಯೋತ್ಪಾದಕರ ಗುಂಪುಗಳಲ್ಲಿ ಪೊಲೀಸ್ ಸಿಬ್ಬಂದಿ ನುಸುಳಿಕೊಳ್ಳುವ ಕ್ರಮ ಇದೆ, ಆದರೆ ಸಿಂಗ್ ಹೆಸರು ಹಿಂದೆಯೂ ಇಂತಹ ವ್ಯವಹಾರಗಳಲ್ಲಿ ಕೇಳಿಬಂದಿರುವುದರಿಂದ ಪ್ರಕರಣ ಅಧಿಕಾರಿಗಳ ಹುಬ್ಬೇರಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಆತ ಮಾಡಿದ್ದು ಸಂಪೂರ್ಣವಾಗಿ ಅಕ್ರಮವಾಗಿದೆಯಾದ್ದರಿಂದ ಈಗ ಆತನನ್ನು ಭಯೋತ್ಪಾದಕನಂತೆಯೇ ಪರಿಗಣಿಸಿ ವಿಚಾರಣೆಗೆ ಗುರಿಪಡಿಸಲಾಗಿದೆಎಂದು ಅಧಿಕಾರಿಯೊಬ್ಬರು ನುಡಿದರು.

ಹಿಂದೆ ಸಂಸತ್ತಿನ ಮೇಲೆ ದಾಳಿ ನಡೆಸಿದ್ದಕ್ಕಾಗಿ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ ಗುರು ತನ್ನ ಲಿಖಿತ ಪ್ರಮಾಣಪತ್ರದಲ್ಲಿ ದೆಹಲಿಯಲ್ಲಿ ದಾಳಿ ನಡೆಸಲು ಭಯೋತ್ಪಾದಕರನ್ನು ಕರೆದೊಯ್ಯುವಂತೆ, ದೆಹಲಿಯಲ್ಲಿ ಫ್ಲಾಟ್ ಬಾಡಿಗೆಗೆ ಪಡೆಯುವಂತೆ ಮತ್ತು ಭಯೋತ್ಪಾದಕರ ಬಳಕೆಗಾಗಿ ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಖರೀದಿಸುವಂತೆ ತನಗೆ ಸಿಂಗ್ ಒತ್ತಡ ಹಾಕಿದ್ದುದಾಗಿ ತಿಳಿಸಿದ್ದ.

೨೦೦೧ರಲ್ಲಿ ಭಯೋತ್ಪಾದಕರು ಇದೇ ಬಿಳಿ ಅಂಬಾಸಿಡರ್ ಕಾರನ್ನು ಸಂಸತ್ ಮೇಲಿನ ದಾಳಿ ಕಾಲದಲ್ಲಿ ಬಳಸಿದ್ದರು.

೨೦೧೫ರಲ್ಲಿ ಟ್ರಕ್ ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪ ಸಿಂಗ್ ವಿರುದ್ಧ ಕೇಳಿ ಬಂದಿತ್ತು. ಹಣ ಕೊಡದೇ ಇದ್ದಲ್ಲಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಸಿಂಗ್ ಟ್ರಕ್ ಚಾಲಕರನ್ನು ಬೆದರಿಸುತ್ತಿದ್ದುದಾಗಿ ಆಪಾದಿಸಲಾಗಿತ್ತು.

No comments:

Advertisement