Sunday, January 19, 2020

ಪೌರತ್ವ: ರಾಹುಲ್‌ಗೆ ಅಮಿತ್ ಶಾ ಸವಾಲು

ಪೌರತ್ವ: ರಾಹುಲ್ಗೆ ಅಮಿತ್ ಶಾ ಸವಾಲು
ಪೌರತ್ವ ಕಿತ್ತುಕೊಳ್ಳುವುದನ್ನು ಸಾಬೀತು ಪಡಿಸಿ;  ಕಾಯ್ದೆ ಜಾರಿಗೊಳಿಸಿಯೇ ಸಿದ್ಧ
ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ  2020 ಜನವರಿ 18ರ ಶನಿವಾರ ಇಲ್ಲಿ ಸವಾಲು ಎಸೆದ ಕೇಂದ್ರ ಗೃಹ ಸಚಿವ ಅಮಿತ್ ಶಾ, ’ಯಾರು ಎಷ್ಟೇ ವಿರೋಧಿಸಿದರೂ ಕಾಯ್ದೆಯನ್ನು ಜಾರಿಗೊಳಿಸಿಯೇ ಸಿದ್ಧಎಂದು ಘೋಷಿಸಿದರು.

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಯ್ದೆಯನ್ನು ಆಮೂಲಾಗ್ರ ಓದಿ ಎಂದು ರಾಹುಲ್ ಗಾಂಧಿ ಅವರಿಗೆ ಸೂಚಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುವವರನ್ನುದಲಿತ ವಿರೋಧಿಗಳುಎಂಬುದಾಗಿ ಬಣ್ಣಿಸಿದ  ಶಾ, ’ರಾಹುಲ್ ಗಾಂಧಿಯವರು ಆಪಾದಿಸಿರುವಂತೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವ ಒಂದೇ ಒಂದು ವಿಧಿ ಕೂಡಾ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ನುಡಿದರು.

ನಾನು ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆಯುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ಓದಿ. ಭಾರತೀಯ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಒಂದೇ ಒಂದು ವಿಧಿ ಲಭಿಸಿದರೆ... ನಮ್ಮ ಪ್ರಹ್ಲಾದ ಜೋಶಿಯವರು (ಸಂಸದೀಯ ವ್ಯವಹಾರಗಳ ಸಚಿವ) ನಿಮ್ಮೊಂದಿಗೆ ಚರ್ಚಿಸಲು ಸಿದ್ಧರಿದ್ದಾರೆಎಂದು ಶಾ ಹೇಳಿದರು.

ಕಾಂಗ್ರೆಸ್ ಪಕ್ಷವು ಧರ್ಮದ ನೆಲೆಯಲ್ಲಿ ರಾಷ್ಟ್ರವನ್ನು ವಿಭಜಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಆಪಾದಿಸಿದರು.

ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜನತಾದಳ (ಜಾತ್ಯತೀತ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮೂಲಕ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಗಳನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ದೂರಿದರು.

ಕಾಯ್ದೆಯು ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ, ಹೊರತು ಯಾರ ಪೌರತ್ವವನ್ನು ಕೂಡಾ ಕಿತ್ತುಕೊಳ್ಳುವುದಿಲ್ಲ, ಬಗ್ಗೆ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಅವರು ನುಡಿದರು. ರಾಹುಲ್ ಬಾಬಾ (ರಾಹುಲ್ ಗಾಂಧಿ) ಎಷ್ಟೇ ಕಿರಿಚಾಡುತ್ತಿರಲಿ, ನಾವು ಕಾಯ್ದೆಯನ್ನು ಜಾರಿಗೆ ತಂದೇ ತರುತ್ತೇವೆಎಂದು ಶಾ ನುಡಿದರು.

ಕಿತ್ತೂರು ಚೆನ್ನಮ್ಮ ಇದೇ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದರು. ಇದೇ ಭೂಮಿಯಲ್ಲಿ ಸಂಗೊಳ್ಳಿ ರಾಯಣ್ಣ ಸಹ ಪ್ರಾಣಾರ್ಪಣೆ ಮಾಡಿದಾರೆ. ಗಂಗೂಬಾಯಿ ಹಾನಗಲ್ಲ, .ರಾ. ಬೇಂದ್ರೆ ಕೂಡಾ ಇದೇ ಭೂಮಿಯಿಂದ ಬಂದಿದ್ದಾರೆ. ಮೂರು ಸಾವಿರ ಮಠ ಮತ್ತು ಹಲವು ಸ್ವಾಮೀಜಿಗಳು, ಸಿದ್ಧಾರೂಢರು ನೆಲದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವವರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಇತರ ಧರ್ಮೀಯರ ಸ್ಥಿತಿ ನೋಡಿ ಅವರ ಹಕ್ಕಿನ ಬಗ್ಗೆಯೂ ಆಲೋಚಿಸಲಿ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಶೋಷಣೆ ನಡೆಯಿತು. ಶಿಕ್ಷಣ ಅವಕಾಶವನ್ನೇ ಕಿತ್ತುಕೊಂಡರು. ಇವರು ನಿಜವಾದ ಗಾಂಧಿ ಭಕ್ತರಾಗಿದ್ದರೆ ಅವರ ಆಶಯದಂತೆ ತಂದಿರುವ ಕಾಯ್ದೆಯನ್ನು ಬೆಂಬಲಿಸಲಿಎಂದು ಬಿಜೆಪಿ ನಾಯಕ ನುಡಿದರು.

ಸಿಎಎ ಎಂಬುದು ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು. ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಬೇಕಾಗಿದೆ. ರಾಹುಲ್ ಗಾಂಧಿಯವರೇ ಕಿವಿಗೊಟ್ಟು ಕೇಳಿಸಿಕೊಳ್ಳಿ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಯಿತು. ಕಾರ್ಯವನ್ನು ಮಾಡಿದ್ದು ನಿಮ್ಮದೇ ಪಕ್ಷ. ನಿಮ್ಮ ಮುತ್ತಾತ ನೆಹರೂ ಅವರೇ ಇದರ ಕಾರಣಕರ್ತರುಎಂದು ಅಮಿತ್ ಶಾ ಹೇಳಿದರು.

ನರೇಂದ್ರ ಮೋದಿ ಅವರು ೨ನೇ ಬಾರಿಗೆ ಪ್ರಧಾನಿಯಾದ ಬಳಿಕ ಹಲವು ಬದಲಾವಣೆಗಳಾಗಿವೆ. ೭೦ ವರ್ಷಗಳಲ್ಲಿ ಮಾಡಲಾಗದೇ ಇದ್ದ ಬದಲಾವಣೆಗಳನ್ನು ಅವರು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅವರಿಗೆ ಬಲ ತುಂಬುವ ಮೂಲಕ ನವಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಅಮಿತ್ ಶಾ ಕರೆ ಕೊಟ್ಟರು.

ಪೌರತ್ವ ಕಾಯ್ದೆ ವಿರೋಧಿಸುತ್ತಿರುವವರಿಗೆ ದೇಶದ ಇತಿಹಾಸದ ಅರಿವು ಇಲ್ಲ. ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಅವರು ಆಪಾದಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಹಲವಾರು ಬಿಜೆಪಿ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

No comments:

Advertisement