Friday, February 21, 2020

ನಿರ್ಭಯಾ ಪ್ರಕರಣ: ಅಪರಾಧಿ ವಿನಯ್‌ಗೆ ಈಗ ಖಿನ್ನತೆಯಂತೆ.!

ನಿರ್ಭಯಾ ಪ್ರಕರಣ: ಅಪರಾಧಿ ವಿನಯ್ಗೆ ಈಗ ಖಿನ್ನತೆಯಂತೆ.!
ಮತ್ತೆ ಕೋಟ್ ಕಟ್ಟೆಗೆ ಕೇಸ್, ಜೈಲು ಅಧಿಕಾರಿಗಳಿಗೆ ನೋಟಿಸ್
ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಮಾರ್ಚ್ ೩ರಂದು ಗಲ್ಲಿಗೇರಿಸಲು ಹೊಸದಾಗಿ ಡೆತ್ ವಾರಂಟ್ ಹೊರಡಿಸಲಾಗಿದ್ದರೂ, ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮ  2020 ಫೆಬ್ರುವರಿ 20ರ ಗುರುವಾರ ಮತ್ತೆ ಕೋರ್ಟ್ ಕಟ್ಟೆ ಏರಿದ. ಬಾರಿ  ಆತನಿಗೆ ಮಾನಸಿಕ ಅಸ್ವಸ್ಥತೆ ಖಿನ್ನತೆ ಮತ್ತು ತಲೆ ಮತ್ತು ಕೈಗಳಿಗೆ ಆಗಿರುವ ಗಾಯಗಳಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಯಿತು.

ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ವಿನಯ್ ಕುಮಾರ್ ಶರ್ಮ ಪರ ಸಲ್ಲಿಸಿದ ಅರ್ಜಿಗೆ ಶನಿವಾರದ ಒಳಗೆ ಉತ್ತರ ನೀಡುವಂತೆ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೆರೆಮನೆ ಅಧಿಕಾರಿಗಳ ಪ್ರಕಾರ, ಶರ್ಮ ತಿಹಾರ್ ಸೆರೆಮನೆಯಲ್ಲಿನ ತನ್ನ ಕೊಠಡಿಯಲ್ಲಿ ತಲೆಯನ್ನು ಗೋಡೆಗೆ ಸ್ವತಃ ಜಜ್ಜಿಕೊಂಡು ಗಾಯಮಾಡಿಕೊಂಡಿದ್ದಾನೆ. ಸೆರೆಮನೆಯ ೩ನೇ ಸಂಖ್ಯೆಯ ಸೆಲ್ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ಘಟಿಸಿದೆ, ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸೆರೆಮನೆಯೊಳಗೇ ಅದಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿನಯ್ ಶರ್ಮನ ಅರ್ಜಿಯ ವಿಚಾರಣೆ ಕಾಲದಲ್ಲಿ ಪ್ರಾಸೆಕ್ಯೂಷನ್ ಅರ್ಜಿಯು ವಿಚಾರಣೆ ಯೋಗ್ಯವೇ ಅಲ್ಲ ಎಂದು ಹೇಳಿ ಅದನ್ನು ತಿರಸ್ಕರಿಸುವಂತೆ ಮನವಿ ಮಾಡಿತು. ವಿನಯ್ ಶರ್ಮ ತನ್ನ ತಾಯಿ ಸೇರಿದಂತೆ ಜನರನ್ನು ಗುರುತಿಸುತ್ತಿಲ್ಲ  ಎಂದು ಶರ್ಮ ಪರ ವಕೀಲರು ವಾದಿಸಿದರು.

ಕುಟುಂಬ ಸದಸ್ಯರ ಮನವಿ ಮೇರೆಗೆ ಸೆರೆಮನೆಗೆ ಭೇಟಿ ನೀಡಿದ್ದುದಾಗಿ ಶರ್ಮ ಪರ ವಕೀಲರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ತಾವು ಭೇಟಿ ನೀಡಿದಾಗ, ಶರ್ಮ ತಲೆಗೆ ಗಂಭೀರ ಗಾಯವಾಗಿರುವುದು, ಬಲ ತೋಳಿನಲ್ಲಿ ಮುರಿತ ಮತ್ತು ಪ್ಲಾಸ್ಟರ್ ಹಾಕಿದ್ದು ಕಂಡಿತು. ಆತ ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಯಿಂದ ನರಳುತ್ತಿದ್ದಾನೆ ಎಂದು ಅರ್ಜಿಯಲ್ಲಿ ತಿಳಿಸಲಾಯಿತು. 

ಶರ್ಮನಿಗೆ ತನ್ನ ವಕೀಲರು ಮತ್ತು ತಾಯಿಯನ್ನು ಕೂಡಾ ಗುರುತಿಸಲು ಸಾಧ್ಯವಾಗಲಿಲ್ಲ ಎಂದೂ ಅರ್ಜಿ ತಿಳಿಸಿತು.

ಶರ್ಮನಿಗೆ ದೀರ್ಘ ಕಾಲದಿಂದ ನಿದ್ದೆ ಕಡಿಮೆಯಾಗಿದೆ ಮತ್ತು ಆತನನ್ನು ಹಿರಿಯ ಮಾನಸಿಕ ತಜ್ಞರಿಗೂ ತೋರಿಸಲಾಗಿತ್ತು ಎಂದೂ ಅರ್ಜಿ ಪ್ರತಿಪಾದಿಸಿತು.

ವಿಚಾರಣಾ ನ್ಯಾಯಾಲಯವು ಮಾರ್ಚ್ ೩ರಂದು ಬೆಳಗ್ಗೆ ಗಂಟೆಗೆ ನಿರ್ಭಯಾ ಪ್ರಕರಣದ ಎಲ್ಲ ನಾಲ್ಕು ಮಂದಿ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತ, ವಿನಯ್ ಮತ್ತು ಅಕ್ಷಯ್ ಕುಮಾರ್ ಅವರನ್ನು  ಗಲ್ಲಿಗೇರಿಸುವಂತೆ ಫೆಬ್ರುವರಿ ೧೭ರಂದು ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿತ್ತು. ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವಂತೆ ಡೆತ್ ವಾರಂಟ್ ಹೊರಡಿಸಿದ್ದು ಇದು ಮೂರನೇ ಬಾರಿಯಾಗಿತ್ತು.

No comments:

Advertisement