My Blog List

Monday, February 17, 2020

ಚೀನಾದಿಂದ ಮರಳಿದ ಭಾರತದ ಎಲ್ಲ ೪೦೬ ಮಂದಿ ಕೊರೋನಾವೈರಸ್ ಮುಕ್ತ

ಚೀನಾದಿಂದ ಮರಳಿದ ಭಾರತದ ಎಲ್ಲ ೪೦೬ ಮಂದಿ ಕೊರೋನಾವೈರಸ್ ಮುಕ್ತ
ಸೋಮವಾರದಿಂದ  ಹಂತಹಂತವಾಗಿ ಮನೆಗಳಿಗೆ ವಾಪಸ್  
ನವದೆಹಲಿ: ಮಾರಕ ಕೊರೋನಾವೈರಸ್ ವ್ಯಾಧಿಯ ಕೇಂದ್ರವಾಗಿದ್ದ ಚೀನಾದ ವುಹಾನ್ ನಗರದಿಂದ ಭಾರತಕ್ಕೆ ಮರಳಿ ಕರೆತರಲಾಗಿದ್ದ ಎಲ್ಲ ೪೦೬ ಮಂದಿ ಕೂಡಾ ಕೊರೋನಾವೈರಸ್ ಸೋಂಕಿನಿಂದ ಮುಕ್ತರಾಗಿರುವುದಾಗಿ ಅಂತಿಮ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ವರದಿಗಳು 2020 ಫೆಬ್ರುವರಿ 16ರ ಭಾನುವಾರ ತಿಳಿಸಿದವು.  ಅವರೆಲ್ಲರನ್ನೂ ಭಾರತಕ್ಕೆ ಕರೆತಂದ ಬಳಿಕ ವ್ಯಾಧಿ ಸೋಂಕಿನ ಶಂಕೆಯಿಂದ ಪ್ರತ್ಯೇಕವಾಗಿ ಏಕಾಂತವಾಸದಲ್ಲಿ ಇರಿಸಲಾಗಿತ್ತು.

ಎಲ್ಲರನ್ನೂ  2020 ಫೆಬ್ರುವರಿ 17ರ ಸೋಮವಾರದಿಂದ ಹಂತ ಹಂತವಾಗಿ ಅವರವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು.

ಇಂಡೋ ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಏಕಾಂತವಾಸದಲ್ಲಿ ಇರಿಸಿದ್ದ ಎಲ್ಲ ೪೦೬ ಮಂದಿಯ ಅಂತಿಮ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿತ್ತು. ಇದಕ್ಕೂ ಮುನ್ನ  ಕನಿಷ್ಠ ಎರಡು ಬಾರಿ ನಡೆಸಲಾಗಿದ್ದ ಪರೀಕ್ಷೆಗಳ ಸಂದರ್ಭದಲ್ಲೂ ಅವರಲ್ಲಿ ವ್ಯಾಧಿಯ ಸೋಂಕು ಕಂಡು ಬಂದಿರಲಿಲ್ಲ ಎಂದು ವರದಿ ಹೇಳಿತು.

ಮೂರು ದಿನಗಳ ಮುನ್ನ ಫೆಬ್ರುವರಿ ೧೩ರಂದು ಚೀನಾದಿಂದ ತೆರವುಗೊಳಿಸಲಾದ ೬೫೪ ಮಂದಿಯನ್ನು ಮಾನೆಸರದಲ್ಲಿ ಮತ್ತು ಐಟಿಬಿಪಿ ಶಿಬಿರಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲ ಪರೀಕ್ಷೆಗಳಲ್ಲೂ ಅವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಹೇಳಿದರು.

ರಾಷ್ಟ್ರದಲ್ಲಿ ಕೊರೋನಾವೈರಸ್ ಸೋಂಕು ಕಂಡು ಬಂದ ಮೂರು ಪ್ರಕರಣಗಳು ಮಾತ್ರ ಕೇರಳದಿಂದ ವರದಿಯಾಗಿತ್ತು. ಅವರೆಲ್ಲರೂ ವುಹಾನ್ ನಗರಕ್ಕೆ ಅಧ್ಯಯನಕ್ಕಾಗಿ ಹೋಗಿದ್ದ ವಿದ್ಯಾರ್ಥಿಗಳಾಗಿದ್ದರು.  ಅವರ ಪೈಕಿ ಒಬ್ಬರನ್ನು ಈಗಾಗಲೇ ಅಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿನಿಗೆ ಚಿಕಿತ್ಸೆಯ ಬಳಿಕ ಸೋಂಕು ಇಲ್ಲ ಎಂಬುದು ಖಚಿತವಾಗಿದ್ದು, ಇತರ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಸಚಿವರು ನುಡಿದರು.

ಚೀನಾದಿಂದ ಮರಳಿ ಕರೆತರಲಾದ ತನ್ನ ನಾಗರಿಕರನ್ನು ಏಕಾಂಗಿವಾಸದಲ್ಲಿ ಇರಿಸಲು ಸರ್ಕಾರವು ಮಾನೆಸರದಲ್ಲಿ ಮತ್ತು ಐಟಿಬಿಬಪಿ ಶಿಬಿರಗಳಲ್ಲಿ ವರ್ಷದ ಜನವರಿಯಲ್ಲಿ ವ್ಯವಸ್ಥೆ ಮಾಡಿತ್ತು. ಸರ್ಕಾರವು ವ್ಯವಸ್ಥೆ ಮಾಡಿದ ವಿಶೇಷ ವಿಮಾನಗಳ ಮೂಲಕ ಅವರನ್ನು ವುಹಾನ್ ನಗರದಿಂದ ತೆರವು ಮಾಡಲಾಗಿತ್ತು.

ಏಕಾಂತವಾಸಕ್ಕೆ ಗುರಿಪಡಿಸಲಾದ ಎಲ್ಲರನ್ನೂ ಮೊದಲು ತಜ್ಞ ವೈದ್ಯರ ತಂಡವು ತಪಾಸಣೆ ನಡೆಸಿ ಅವರಿಂದ ಮಾದರಿಗಳನ್ನು ಸಂಗ್ರಹಿಸಿತ್ತು. ಅವರಿಂದ ಸಂಗ್ರಹಿಸಲಾದ ಎಲ್ಲ ಮಾದರಿಗಳೂ ಅವರಲ್ಲಿ ವ್ಯಾಧಿಯ ಸೋಂಕು ಇಲ್ಲದೇ ಇರುವುದನ್ನು ಖಚಿತ ಪಡಿಸಿವೆ ಎಂದು ಸಚಿವರ ಹೇಳಿದರು.

ಐಟಿಬಿಪಿಯ ತಜ್ಞರ ತಂಡ ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರನ್ನು ಶಿಬಿರಗಳಿಗೆ ನಿಯೋಜಿಸಲಾಗಿತ್ತು.

ಐಸಿಎಂಆರ್ ಜಾಲದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾದ ಎಲ್ಲ ೫೧೦ ಮಾದರಿಗಳೂ ಸೋಂಕು ಮುಕ್ತವಾಗಿವುದನ್ನು ಪರೀಕ್ಷೆಗಳು ದೃಢಪಡಿಸಿರುವುದಾಗಿ ಆರೋಗ್ಯ ಸಚಿವಾಲಯವು ಇದಕ್ಕೆ ಮುನ್ನ ಫೆಬ್ರುವರಿ ೬ರಂದು ತಿಳಿಸಿತ್ತು.

ಚೀನಾದಿಂದ ತೆರವುಗೊಳಿಸಲಾದ ಎಲ್ಲ ಭಾರತೀಯರನ್ನು ಫೆಬ್ರುವರಿ ಮತ್ತು ೨ರಂದು ಎರಡುಏರ್ ಇಂಡಿಯಾ ಬಿ-೭೪೭ ವಿಮಾನಗಳ ಮೂಲಕ ಭಾರತಕ್ಕೆ ಕರೆತಂದು ಸರ್ಕಾರ ವ್ಯವಸ್ಥೆ ಮಾಡಿದ್ದ ಶಿಬಿರಗಳಲ್ಲಿ ಇರಿಸಲಾಗಿತ್ತು.

No comments:

Advertisement