My Blog List

Monday, February 17, 2020

ಅಮಿತ್ ಶಾ ನಿವಾಸಕ್ಕೆ ಶಾಹೀನ್ ಬಾಗ್ ಪ್ರತಿಭಟನಕಾರರ ಜಾಥಾ ಅಮಾನತು

ಅಮಿತ್ ಶಾ ನಿವಾಸಕ್ಕೆ ಶಾಹೀನ್ ಬಾಗ್ ಪ್ರತಿಭಟನಕಾರರ ಜಾಥಾ ಅಮಾನತು
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು 2020 ಫೆಬ್ರುವರಿ 16ರ ಭಾನುವಾರ ಪೊಲೀಸರು ಅನುಮತಿ ನೀಡದ ಕಾರಣ ಗೃಹ ಸಚಿವ ಅಮಿತ್ ಶಾ ನಿವಾಸದತ್ತ ತೆರಳಲು ಉದ್ದೇಶಿಸಿದ್ದ ಜಾಥಾವನ್ನು ಅಮಾನತುಗೊಳಿಸಿ,  ಶಾಹೀನಾ ಬಾಗ್ನಲ್ಲಿಯೇ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಶಾಹೀನ್ ಬಾಗ್ ಬಾಗ್ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರ ಭೇಟಿಗಾಗಿ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ, ಅವರ ಸಂದರ್ಶನಕ್ಕೆ ಸಮಯ ನಿಗದಿಯಾಗದೇ ಜಾಥಾ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಅವರೊಂದಿಗೆ ಸದ್ಯ ಮಾತುಕತೆ ಮುಂದುವರೆಸಿದ್ದೇವೆ. ಅವರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ ಮೀನಾ ತಿಳಿಸಿದರು.

ಪ್ರತಿಭಟನಾಕಾರರು ಜಾಥಾ ನಡೆಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಶಾಹೀನ್ ಬಾಗ್ ನಿಂದ ಗೃಹ ಸಚಿವರ ನಿವಾಸದವರೆಗೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.

ಜಾಥಾವನ್ನು ವೃದ್ಧ ಮಹಿಳೆಯರು ಮುನ್ನಡೆಸುತ್ತಿದ್ದು ಅವರನ್ನು ಶಾಹೀನ್ ಬಾಗ್ ದಾದಿಗಳು ಎಂದು ಕರೆಯಲಾಗುತ್ತಿದೆ. ಸದ್ಯ ಅವರೇ ಪೊಲೀಸರೊಂದಿಗೆ ಮಾತುಕತೆಯಲ್ಲಿ ತೊಡಗಿದ್ಧಾರೆ.

ಮಾತುಕತೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸರು ಪ್ರತಿಭಟನೆ ವೇಳೆ ಶಿಷ್ಟಾಚಾರ ಉಲ್ಲಂಘಿಸುವುದಿಲ್ಲ ಮತ್ತು ಗೃಹ ಸಚಿವರ ಭೇಟಿಗೆ ಅವಕಾಶ ಸಿಗುವವರೆಗೆ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ ಎಂದು ಹೇಳಿದರು.

ಸಿಎಎ ವಿಚಾರವಾಗಿ ಯಾರಿಗೆಲ್ಲ ಚರ್ಚೆ ಮಾಡುವ ಉದ್ದೇಶವಿದೆಯೋ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಸಿಎಎ ವಿರೋಧಿ ಹೋರಾಟಗಾರರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಭಾನುವಾರ ಅವರ ನಿವಾಸಕ್ಕೆ ಜಾಥಾ ಹಮ್ಮಿಕೊಂಡಿದ್ದರು. ಆದರೆ, ಇನ್ನು ಮೂರು ದಿನಗಳಲ್ಲಿ ಭೇಟಿ ಅವಕಾಶ ನೀಡುವುದಾಗಿ ಗೃಹಸಚಿವ ಅಮಿತ್ ಶಾ ತಿಳಿಸಿದ್ದರು.

No comments:

Advertisement