Sunday, February 23, 2020

ಕೊರೋನಾವೈರಸ್: ಐಎಎಫ್ ವಿಮಾನಕ್ಕೆ ಅನುಮತಿ ವಿಳಂಬಿಸುತ್ತಿರುವ ಚೀನಾ

ಕೊರೋನಾವೈರಸ್: ಭಾರತೀಯ ನೆರವು, ದೇಶೀಯರ ತೆರವು ಯತ್ನ
ಐಎಎಫ್ ವಿಮಾನಕ್ಕೆ ಅನುಮತಿ ವಿಳಂಬಿಸುತ್ತಿರುವ ಚೀನಾ
ನವದೆಹಲಿ: ನೆರೆರಾಷ್ಟ್ರವಾದ ಚೀನಾದಲ್ಲಿ ಕೊರೋನಾವೈರಸ್ ಸೋಂಕಿನಿಂದ ಬಾಧಿತರಾಗಿರುವ ವ್ಯಕ್ತಿಗಳಿಗೆ ಪರಿಹಾರ ಸಾಮಗ್ರಿ ಒಯ್ಯಲು ಮತ್ತು ಸೋಂಕಿನ ಕೇಂದ್ರವಾಗಿರುವ ವುಹಾನ್ ನಗರದಿಂದ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರುವ ಉದ್ದೇಶದಿಂದ ತನ್ನ ವಾಯುಪಡೆ ವಿಮಾನ ಕಳುಹಿಸುವ ಭಾರತದ ಪ್ರಸ್ತಾಪಕ್ಕೆ ಅನುಮತಿ ನೀಡುವುದನ್ನು ಚೀನಾ ವಿಳಂಬಿಸುತ್ತಿದೆ ಎಂದು ಅಧಿಕೃತ ಮೂಲಗಳು 2020 ಫೆಬ್ರುವರಿ 22ರ ಶನಿವಾರ ತಿಳಿಸಿದವು.

ಭಾರತವು ಸಿ-೧೭ ಸೇನಾ ಸಾರಿಗೆ ವಿಮಾನವನ್ನು ವುಹಾನ್ ನಗರಕ್ಕೆ ಫೆಬ್ರುವರಿ ೨೦ರಂದೇ ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಚೀನಾವು ಇನ್ನೂ ಅನುಮತಿ ನೀಡದ ಕಾರಣ ವಿಮಾನವು ಭಾರತದಿಂದ ಗಗನಕ್ಕೆ ಏರಲು ಸಾಧ್ಯವಾಗಿಲ್ಲ.

ಚೀನಾವು ಉದ್ದೇಶಪೂರ್ವಕವಾಗಿಯೇ ತೆರವು ವಿಮಾನದ ಪ್ರವೇಶಕ್ಕೆ ಅನುಮತಿ ಮಂಜೂರಾತಿಯನ್ನು  ವಿಳಂಬಗೊಳಿಸುತ್ತಿದೆಎಂದು ಉನ್ನತ ಮೂಲವೊಂದು ತಿಳಿಸಿತು.

ವಿಮಾನವು ವೈದ್ಯಕೀಯ ನೆರವಿನ ಸಾಮಗ್ರಿಗಳ ಭಾರೀ ಸರಕನ್ನು ಚೀನಾಕ್ಕೆ ಒಯ್ಯಲು ಮತ್ತು ವುಹಾನ್ ನಗರದಿಂದ ಭಾರತೀಯರನ್ನು ಮರಳಿ ಕರೆತರುವ ಉದ್ದೇಶವನ್ನು ಹೊಂದಿದೆ ಎಂದು ಮೂಲ ಹೇಳಿತು.

ವಿಮಾನ ಪ್ರವೇಶಕಕ್ಕೆ ಅನುಮತಿ ನೀಡುವಲ್ಲಿ ಯಾವುದೇ ವಿಳಂಬವಾಗುತ್ತಿಲ್ಲ ಎಂದು ಚೀನಾ ಕಡೆಯ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ, ಆದರೆ ಇನ್ನೂ ಅನುಮತಿಯನ್ನು ಏಕೆ ನೀಡಲಾಗಿಲ್ಲ ಎಂಬುದಕ್ಕೆ ಯಾವುದೇ ವಿವರಣೆಯೂ ಲಭಿಸುತ್ತಿಲ್ಲ ಎಂದು ಮೂಲಗಳು ಹೇಳಿದವು.

ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರಿಗೆ ತಿಂಗಳ ಆದಿಯಲ್ಲಿ ಬರೆಯಲಾಗಿದ್ದ ಪತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ಸವಾಲು ಎದುರಿಸುವಲ್ಲಿ ಚೀನಾದ ಜನರು ಮತ್ತು ಸರ್ಕಾರಕ್ಕೆ ಭಾರತದ ಬೆಂಬಲವನ್ನು ವ್ಯಕ್ತ ಪಡಿಸಿದ್ದರು ಮತ್ತು ದೇಶಕ್ಕೆ ನೆರವು ಒದಗಿಸುವ ಇಂಗಿತ ವ್ಯಕ್ತ ಪಡಿಸಿದ್ದರು.

ಬಳಿಕ ಭಾರತವು ಉಭಯ ರಾಷ್ಟ್ರಗಳ ನಡುವಣ ೭೦ನೇ ರಾಜತಾಂತ್ರಿಕ ಬಾಂಧವ್ಯವದ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ವ್ಯಕ್ತಪಡಿಸಿದ್ದ ಬದ್ಧತೆಯನ್ನು ಅನುಸರಿಸಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿತ್ತು.

ಭಾರತವು ಸ್ವತಃ ಕೊರತೆ ಎದುರಿಸುತ್ತಿದ್ದರೂ, ಅಗತ್ಯದ ಹೊತ್ತಿನಲ್ಲಿ ನೆರವಾಗುವ ಭಾರತದ ಮಾನವೀಯ ಧರ್ಮಕ್ಕೆ ಅನುಗುಣವಾಗಿ ವೈದ್ಯಕೀಯ ಪರಿಕರಗಳನ್ನು ಒದಗಿಸಲು ಮುಂದಾಗಿದೆಎಂದು ಮೂಲವು ಹೇಳಿತು.

ಭಾರತವು ಸಂಗ್ರಹಿಸಿ ಇಟ್ಟಿರುವ ವೈದ್ಯಕೀಯ ಪರಿಕರಗಳ ಸರಕಿನಲ್ಲಿ ಕೈಗವಸುಗಳು, ಸರ್ಜಿಕಲ್ ಮಾಸ್ಕ್ಗಳು, ಫೀಡಿಂಗ್ ಪಂಪ್ಗಳು ಮತ್ತು ಡಿಫೈಬ್ರಿಲೇಟರುಗಳು ಸೇರಿವೆ. ಇವುಗಳ ಅಗತ್ಯವಿರುವ ಬಗ್ಗೆ ಚೀನಾ ಕಡೆಯ ಅಧಿಕಾರಿಗಳು ಸುಳಿವು ನೀಡಿದ್ದರು.

ಭಾರತದ ರಾಷ್ಟ್ರೀಯ ವಾಹಕವಾದ ಏರ್ ಇಂಡಿಯಾ ಈಗಾಗಲೇ ವುಹಾನ್ ನಗರದಿಂದ ಎರಡು ಪ್ರತ್ಯೇಕ ವಿಮಾನಗಳ  ಮೂಲಕ ೬೪೦ ಮಂದಿ ಭಾರತೀಯರನ್ನು ತೆರವುಗೊಳಿಸಿ ಭಾರತಕ್ಕೆ ಮರಳಿ ಕರೆತಂದಿದೆ.. ಅಂದಾಜಿನ ಪ್ರಕಾರ ಇನ್ನೂ ೧೦೦ಕ್ಕೂ ಹೆಚ್ಚು ಭಾರತೀಯರು ವುಹಾನ್ ನಗರದಲ್ಲಿ ವಾಸವಾಗಿದ್ದಾರೆ. ಸಾಕಷ್ಟು ರಾಷ್ಟ್ರಗಳು ಭಾರೀ ಪ್ರಮಾಣದಲ್ಲಿ ಕೊರೋನಾವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ತಮ್ಮ ನಾಗರಿಕರನ್ನು ಚೀನಾದಿಂದ ಹಿಂದಕ್ಕೆ ಕರೆಸಿಕೊಂಡಿವೆ ಮತ್ತು ತಮ್ಮ ಪ್ರಜೆಗಳನ್ನು ಚೀನಾಕ್ಕೆ ಪಯಣಿಸದಂತೆ ನಿರ್ಬಂಧಗಳನ್ನು ಹೇರಿವೆ.

ಭಾರತದ ನಾಗರಿಕರು ವುಹಾನ್ ನಗರದಲ್ಲಿ ವಿಮಾನಕ್ಕಾಗಿ ಸುದೀರ್ಘ ಕಾಲದಿಂದ ಕಾದಿದ್ದಾರೆ. ವಿಳಂಬವು ಅವರಲ್ಲಿ ಮತ್ತು ಭಾರತದಲ್ಲಿರುವ ಅವರ ಕುಟುಂಬ ಸದಸ್ಯರಲ್ಲಿ ಅಪಾರ ಮಾನಸಿಕ ಯಾತನೆ ತಳಮಳವನ್ನು ಹುಟ್ಟು ಹಾಕಿದೆ ಎಂದು ಮೂಲಗಳು ಹೇಳಿವೆ.

ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳ ಪರಿಹಾರ ಮತ್ತು ತೆರವು ವಿಮಾನಗಳ ಹಾರಾಟಕ್ಕೆ ಚೀನಾ ಅನುಮತಿ ನೀಡಿದೆ, ಆದರೆ ಭಾರತದ ವಿಚಾರದಲ್ಲಿ ಮಾತ್ರ ಇನ್ನೂ ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಬಲ ಸೂಚಕವಾಗಿ ನಾವು ಒದಗಿಸಬಯಸಿರುವ ಭಾರತೀಯ ನೆರವಿನ ಬಗ್ಗೆ ಅವರಿಗೆ ಆಸಕ್ತಿ ಇಲ್ಲವೇ? ವುಹಾನ್ ನಗರದಿಂದ ನಮ್ಮ ರಾಷ್ಟ್ರೀಯರನ್ನು ತೆರವುಗೊಳಿಸುವ ಮಾರ್ಗಕ್ಕೆ ಅವರು ಏಕೆ ಅಡಚಣೆ ಒಡ್ಡುತ್ತಿದ್ದಾರೆ ಮತ್ತು ನಮಗೆ ತೊಂದರೆ ಮತ್ತು ಮಾನಸಿಕ ಸಂಕಟ ಉಂಟು ಮಾಡುತ್ತಿದ್ದಾರೆ?’ ಎಂದು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.

No comments:

Advertisement