My Blog List

Saturday, March 14, 2020

ಕೋವಿಡ್-೧೯: ಇಂದು ಸಾರ್ಕ್ ನಾಯಕರ ವಿಡಿಯೋ ಕಾನ್ಫರೆನ್ಸ್

ಕೋವಿಡ್-೧೯: ಇಂದು ಸಾರ್ಕ್ ನಾಯಕರ ವಿಡಿಯೋ ಕಾನ್ಫರೆನ್ಸ್
ಪ್ರಧಾನಿ ಮೋದಿ ಸಲಹೆಗೆ ಪಾಕ್ ಸೇರಿ ಎಲ್ಲ ರಾಷ್ಟ್ರಗಳ ಸ್ಪಂದನೆ
ನವದೆಹಲಿ: ಮಹಾಮಾರಿ ಕೊರೋನಾವೈರಸ್ ಸೋಂಕು ನಿಗ್ರಹಕ್ಕಾಗಿ ಸಾರ್ಕ್ ನಾಯಕರ ವಿಡಿಯೋ ಕಾನ್ಫರೆನ್ಸ್ (ವಿಡಿಯೋ ಸಂವಾದ) ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಎಲ್ಲ ಸಾರ್ಕ್ ನಾಯಕರು ಸ್ಪಂದಿಸಿದ್ದು, 2020 ಮಾರ್ಚ್ ೧೫ರ ಭಾನುವಾರ ವಿಡಿಯೋ ಕಾನ್ಫರೆನ್ಸ್ ನಡೆಯುವ ನಿರೀಕ್ಷೆ ಇದೆ ಎಂದು ಸುದ್ದಿ ಮೂಲಗಳು  2020 ಮಾರ್ಚ್  14ರ ಶನಿವಾರ ತಿಳಿಸಿದವು.

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಎಲ್ಲ ಏಳೂ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಾಡಿದ್ದ ಸಲಹೆಯನ್ನು ಅನುಮೋದಿಸಿದ್ದಾರೆ. ಪಾಕಿಸ್ತಾನ ಕೂಡಾ ಸಲಹೆಗೆ ಒಪ್ಪಿಗೆ ಸೂಚಿಸಿದ್ದು ತನ್ನ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಳ್ಳುವರು ಎಂದು ಹೇಳಿತು.

೨೦೧೬ರಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗಸಭೆಯು ಕಾಶ್ಮೀರದ ಉರಿಯಲ್ಲಿ ನಡೆದ ಭಾರತದ ಸೇನಾ ಶಿಬಿರದ ಮೇಲೆ ನಡೆದ ಪಾಕ್ ಮೂಲದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ರದ್ದಾದ ಬಳಿಕ ಸಾರ್ಕ್ ಸಮೂಹವು ಬಹುತೇಕ ನಿಷ್ಕ್ರಿಯವಾಗಿತ್ತು. ಬಳಿಕ, ಭಾರತವು ಪ್ರಾದೇಶಿಕ ಸಹಕಾರ ವರ್ಧನೆಗಾಗಿ ಬಿಮ್ಸ್ಟೆಕ್ನಂತಹ ಪರ್ಯಾಯ ಸಮೂಹಗಳತ್ತ  ಮುಖ ಮಾಡಿತ್ತು.

ಸಾರ್ಕ್ ಸಮೂಹದ ಪ್ರಮುಖ ರಾಷ್ಟ್ರಗಳಾದ ಅಫ್ಘಾನಿಸ್ಥಾನ, ಭೂತಾನ್, ನೇಪಾಳ, ಮಾಲ್ದೀವ್ಸ್ ಮತ್ತು ಶ್ರೀಲಂಕಾ ದೇಶಗಳ ಉನ್ನತ ನಾಯಕರು ಕೋವಿಡ್ -೧೯ ನಿಯಂತ್ರಣಕ್ಕಾಗಿ ಜಂಟಿ ನೀತಿಯೊಂದನ್ನು ರೂಪಿಸುವ ಬಗೆಗೆ ಪ್ರಧಾನಿ ಮೋದಿ ಅವರು ಮುಂದಿಟ್ಟ ಸಲಹೆಯನ್ನು ಕೆಲವೇ ಗಂಟೆಗಳಲ್ಲಿ ಒಪ್ಪಿದ್ದರು. ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಆರೋಗ್ಯ ಸಲಹೆಗಾರ ಝಾಫರ್ ಮಿರ್ಜಾ ಅವರು ವಿಡಿಯೋ ಕಾನ್ಪರೆನ್ಸಿನಲ್ಲಿ ಪಾಲ್ಗೊಳ್ಳುವರು ಎಂದು ಪಾಕಿಸ್ತಾನವು ಶುಕ್ರವಾರ ಮಧ್ಯರಾತ್ರಿಯ ಬಳಿಕ ಪ್ರಕಟಿಸಿತ್ತು.

ಕೋವಿಡ್-೧೯ರ ಬೆದರಿಕೆಯನ್ನು ನಿವಾರಿಸಲು ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಮನ್ವಯಿತ ಯತ್ನಗಳ ಅಗತ್ಯ ಇದೆ. ಸಾರ್ಕ್ ಸದಸ್ಯ ರಾಷ್ಟ್ರಗಳು ವಿಷಯಕ್ಕೆ ಸಂಬಂಧಿಸಿದಂತೆ ನಡೆಸಲಿರುವ ವಿಡಿಯೋ ಕಾನ್ಫರೆನ್ಸಿನಲ್ಲಿ ಪಾಲ್ಗೊಳ್ಳಲು ನಮ್ಮ ಆರೋಗ್ಯ ಸಚಿವರು ಲಭ್ಯರಿರುತ್ತಾರೆ ಎಂಬ ಮಾಹಿತಿಯನ್ನು ನೀಡಿದ್ದೇವೆಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಕಚೇರಿಯ ವಕ್ತಾರ ಆಯಿಷಾ ಫರೂಖಿ ಟ್ವೀಟ್ ಮಾಡಿದರು.

ಪಾಕಿಸ್ತಾನದ ನಿರ್ಧಾರವನ್ನು ರಾಜತಾಂತ್ರಿಕ ಮಾಧ್ಯಮಗಳ ಮೂಲಕ ಭಾರತಕ್ಕೆ ತಿಳಿಸಲಾಗಿದೆ. ಪಾಕ್ ಪ್ರಧಾನಿಯವರು ತಮ್ಮ ಪರವಾಗಿ ಸಹಾಯಕರೊಬ್ಬರನ್ನು ಕಾನ್ಫರೆನ್ಸಿನಲ್ಲಿ ಪಾಲ್ಗೊಳ್ಳಲು ನಿಯೋಜಿಸಿದ್ದಾರೆಎಂದು ಅನಾಮಧೇಯರಾಗಿ ಉಳಿಯಬಯಸಿದ ಅಧಿಕಾರಿಯೊಬ್ಬರು ನುಡಿದರು.

ವಿಡಿಯೋ ಕಾನ್ಫರೆನ್ಸ್ ಭಾನುವಾರ ಮಧ್ಯಾಹ್ನ ನಡೆಯುವ ನಿರೀಕ್ಷೆ ಇದೆ. ಅದಕ್ಕೆ ಸಂಬಂಧಿಸಿದಂತೆ ವ್ಯವಸ್ಥೆ ಹಾಗೂ ಕಾರ್ಯಸೂಚಿಯನ್ನು ಆಖೈರುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಸರತ್ತು ಸಾರ್ಕ್ನ್ನು ಪುನರುಜ್ಜೀವನಗೊಳಿಸುವುದು ಎಂದು ಭಾವಿಸಲಾಗದು. ಇದು ಸಮಾನ ಸವಾಲನ್ನು ನಿಭಾಯಿಸಲು ಪ್ರಾದೇಶಿಕ ರಾಷ್ಟ್ರಗಳನ್ನು ಒಗ್ಗೂಡಿಸುವ ಗುರಿ ಹೊಂದಿರುವ ಕ್ರಮವಷ್ಟೆಎಂದು ಗುರುತು ಬಹಿರಂಗ ಪಡಿಸಲು ಇಚ್ಛಿಸದ ವ್ಯಕ್ತಿ ನುಡಿದರು.

ವಿಡಿಯೋ ಕಾನ್ಫರೆನ್ಸಿನಲ್ಲಿ ಕೇವಲ ಪ್ರಧಾನಿಯ ಆರೋಗ್ಯ ಸಲಹೆಗಾರರು ಮಾತ್ರವೇ ಪಾಲ್ಗೊಳ್ಳುವಂತೆ ಕೈಗೊಳ್ಳಲಾಗಿರುವ ಪಾಕಿಸ್ತಾನದ ನಿರ್ಧಾರವು ಭಾರತದ ಜೊತೆಗೆ ಉನ್ನತ ಮಟ್ಟದ ಮಾತುಕತೆ ನಡೆಸುವ ಬಗೆಗಿನ ಅದರ ನಿರಾಸಕ್ತಿಯನ್ನು ಪ್ರತಿಬಿಂಬಿಸಿದೆ.

ಪಾಕಿಸ್ತಾನವನ್ನು ಹೊರತು ಪಡಿಸಿ, ಉಳಿದ ಆರೂ ಸಾರ್ಕ್ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರೇ ವಿಡಿಯೋ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕಸಾರ್ಕ್ ನಾಯಕತ್ವವು ಕೊರೋನಾವೈರಸ್ ವಿರುದ್ಧ ಹೋರಾಟಕ್ಕೆ ಪ್ರಬಲ ತಂತ್ರ ರೂಪಿಸಬೇಕು ಮತ್ತು ತಮ್ಮ ಪ್ರಜೆಗಳನ್ನು ಆರೋಗ್ಯವಂತರಾಗಿ ಇರಿಸುವ ಮಾರ್ಗಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಬೇಕುಎಂದು ಸಲಹೆ ಮಾಡಿದ್ದರು.

No comments:

Advertisement