Wednesday, March 25, 2020

ಶ್ವೇತವಸ್ತ್ರಧಾರಿ ಆಸ್ಪತ್ರೆ ಸಿಬ್ಬಂದಿ ದೇವರಿಗೆ ಸಮಾನ: ಪ್ರಧಾನಿ ಮೋದಿ

ಶ್ವೇತವಸ್ತ್ರಧಾರಿ ಆಸ್ಪತ್ರೆ ಸಿಬ್ಬಂದಿ ದೇವರಿಗೆ ಸಮಾನ
ಅವರೊಂದಿಗೆ ದುರ್ವರ್ತನೆ ಸಲ್ಲದು: ಪ್ರಧಾನಿ ಮೋದಿ
ನವದೆಹಲಿ:  ಕೊರೋನವೈರಸ್ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ವಿಮಾನಯಾನ ಸಿಬ್ಬಂದಿ ಮತ್ತು ಅಗತ್ಯ ಸೇವೆಗಳ ಸಿಬ್ಬಂದಿಗಳ ವಿರುದ್ಧ ಕೆಲವರು  ದುರ್ವರ್ತನೆ ತೋರುತ್ತಿರುವ ವರದಿಗಳು ಬಂದಿರುವುದು ಬೇಸರ ಉಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ  2020 ಮಾರ್ಚ್ 25ರ  ಬುಧವಾರ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ ಸಚಿವರ ಮಧ್ಯೆ ಅಂತರ ಕಾಯ್ದುಕೊಳ್ಳುವ ಮೂಲಕ ದೇಶಕ್ಕೆ ಕೊರೋನಾವೈರಸ್ ವಿರೋಧಿ ಹೋರಾಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಸಾರಿದ ಪ್ರಧಾನಿ ಬಳಿಕ ತಮ್ಮ ಕ್ಷೇತ್ರವಾದ ವಾರಣಾಸಿಯ  ಜನರೊಂದಿಗೆ ವಿಡಿಯೋ ಕಾನ್ಫರೆನ್ಸ್  ಮೂಲಕ ಸಂವಹನ ನಡೆಸಿದರು.

‘ಆಸ್ಪತ್ರೆಗಳಲ್ಲಿ ಬಿಳಿ ಸಮವಸ್ತ್ರದಲ್ಲಿ ಕೆಲಸ ಮಾಡುವ ಆರೋಗ್ಯ ರಕ್ಷಣಾ ವೃತ್ತಿನಿರತರು  ಇಂದು ನಮಗೆ ದೇವರಿಗೆ ಸಮಾನರು.  ಅವರು ನಮ್ಮನ್ನು ರೋಗದಿಂದ ರಕ್ಷಿಸುತ್ತಿದ್ದಾರೆ.  ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅವರು  ನಮ್ಮನ್ನು ಉಳಿಸುತ್ತಿದ್ದಾರೆ" ಎಂದು ಅವರು  ಈ ಸಂದರ್ಭದಲ್ಲಿ ನುಡಿದರು.
ಮಾರಣಾಂತಿಕ ವೈರಸ್ ಶ್ರೀಮಂತರು ಮತ್ತು ಬಡವರ ನಡುವೆ  ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು  ಪ್ರಧಾನಿ  ಪ್ರತಿಪಾದಿಸಿದರು ಮತ್ತು ಜನರು ಮನೆಯಲ್ಲಿಯೇ ಇದ್ದು ಸಾಮಾಜಿಕ  ಅಂತರ ಕಾಯ್ದುಕೊಳ್ಳುವುದನ್ನು  ಅಭ್ಯಾಸ ಮಾಡಲು  ಸಲಹೆ ಮಾಡಿದರು.

ಮಹಾಭಾರತ ಯುದ್ಧವನ್ನು ೧೮ ದಿನಗಳಲ್ಲಿ ಗೆದ್ದಿದ್ದಾರೆ ಆದರೆ ಕೊರೋನವೈರಸ್ ವಿರುದ್ಧದ ಯುದ್ಧ ಗೆಲ್ಲಲು ೨೧ ದಿನಗಳು ಬೇಕು ಎಂದು  ಮೋದಿ ೨೧ ದಿನಗಳ ರಾಷ್ಟ್ರವ್ಯಾಪಿ ಸ್ತಬ್ಧ ಸ್ಥಿತಿಯನ್ನು (ಲಾಕ್ ಡೌನ್) ಉಲ್ಲೇಖಿಸುತ್ತಾ ಹೇಳಿದರು.

ಸಾಮರ್ಥ್ಯ  ಉಳ್ಳವರು  ಈಗಿನ ಸಂಕಷ್ಟಮಯ ಪರಿಸ್ಥಿತಿಯಲ್ಲಿ 21 ದಿನಗಳವರೆಗೆ 9 ಕುಟುಂಬಗಳನ್ನು ನೋಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಇದು ನಿಜವಾದ ‘ನವರಾತ್ರಿ’ ಆಗುತ್ತದೆ ಎಂದು ನುಡಿದ ಪ್ರಧಾನಿ, ಸ್ತಬ್ಧ ಸ್ಥಿತಿಯ 21 ದಿನಗಳಲ್ಲಿ ಪ್ರಾಣಿ ಪಕ್ಷಿಗಳಿಗೂ ತೊಂದರೆಯಾಗುತ್ತದೆ, ಆದ್ದರಿಂದ ಅವುಗಳ ಬಗೆಗೂ ಕಾಳಜಿ ವಹಸಿಬೇಕು ಎಂದು ಮನವಿ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ವಾಟ್ಸಪ್ ಸಹಾಯವಾಣಿ
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು  ಕೊರೋನಾ ವೈರಸ್ ಕುರಿತು ನೈಜ ಮಾಹಿತಿಗಳನ್ನು ಪಡೆಯಲು ಸರ್ಕಾರವು ವಾಟ್ಸಪ್ ಸಹಯೋಗದೊಂದಿಗೆ ಸಹಾಯ ಕೇಂದ್ರವನ್ನು ಆರಂಭಿಸಿದೆ.  ವಾಟ್ಸಪ್ ಸಂಖ್ಯೆ 9013151515 ಇದನ್ನು ಬಳಸಿ ಈ ನೆರವು ಪಡೆಯಬಹುದು ಎಂದು ಪ್ರಧಾನಿ ಹೇಳಿದರು.

 ‘ಕೆಲವು ಸಂದರ್ಭಗಳಲ್ಲಿ ಜನರು ಮಹತ್ವದ ಸಂಗತಿಗಳ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ. ಇದುವೇ ಈಗ ಭಾರತದಲ್ಲಿ ಆಗುತ್ತಿರುವುದು. ವದಂತಿಗಳಿಗೆ ಕಿವಿಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಕೋವಿಡ್-೧೯ ವೈರಸ್ ಬಡವ, ಶ್ರೀಮಂತ ಎಂದು ತಾರತಮ್ಯ ಮಾಡುವುದಿಲ್ಲ. ಯೋಗ ಮಾಡುತ್ತಾರೆ, ಪ್ರತಿದಿನ ವ್ಯಾಯಾಮ ಮಾಡುತ್ತಾರೆ ಎಂಬ ಕಾರಣಕ್ಕೆ ಅಂತಹವರನ್ನು ವೈರಸ್ ಬಿಟ್ಟುಬಿಡುವುದಿಲ್ಲ’ ಎಂದು ಮೋದಿ ಹೇಳಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಶಿಯವರು ದೇಶದ ಜನರಿಗೆ ತಾಳ್ಮೆ, ಸಹಾನುಭೂತಿ ಮತ್ತು ಶಾಂತಿಯ ಪಾಠ ಹೇಳುವ ಮೂಲಕ ದಾರಿ ತೋರಬೇಕು ಎಂದು ಮೋದಿ ಹೇಳಿದರು.

‘ವಾರಾಣಸಿಯ ಸಂಸದನಾಗಿ ನಾನು ಇಂತಹ ಸಂದರ್ಭದಲ್ಲಿ ನಿಮ್ಮ ಜತೆಗಿರಬೇಕಿತ್ತು. ಆದರೆ, ದೆಹಲಿಯಲ್ಲಿನ ಬೆಳವಣಿಗೆಗಳ ಬಗ್ಗೆ ನಿಮಗೆ ತಿಳಿದೇ ಇದೆ. ಇಲ್ಲಿ ವ್ಯಸ್ತನಾಗಿರುವುದರ ನಡುವೆಯೂ ವಾರಾಣಸಿಯ ನನ್ನ ಸಹೋದ್ಯೋಗಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಮೋದಿ ಹೇಳಿದರು.

ಕೊರೊನಾ ಹರಡುವಿಕೆ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅವರು ವಿವರಣೆ ನೀಡಿದರು. ಇದಕ್ಕೂ ಮುನ್ನ ನಡೆಸಿದ್ದ ಸಚಿವ ಸಂಪುಟ ಸಭೆಯಲ್ಲಿ ಸಚಿವರನಡುವೆ ಅಂತರ ಕಾಯ್ದುಕೊಳ್ಳುವ ಮೂಲಕ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ (ಸೋಷಿಯಲ್ ಡಿಸ್ಟೆನ್ಸಿಂಗ್) ಸಂದೇಶ ಸಾರಿದ್ದರು.

ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ೨೧ ದಿನ ದೇಶದಾದ್ಯಂತ ಸ್ತಬ್ಧಸ್ಥಿತಿ (ಲಾಕ್ ಡೌನ್) ಘೋಷಿಸಿದ್ದರು.

ಭಾರತದಲ್ಲಿ ಕೊರೊನಾವೈರಸ್- ಸೋಂಕು ಖಚಿತಪಟ್ಟಿರುವ  ಪ್ರಕರಣಗಳ ಸಂಖ್ಯೆ ೬೦೬ ಕ್ಕೆ ಏರಿದೆ. ಇದುವರೆಗೆ ೪೨ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ದೇಶಾದ್ಯಂತ ಈವರೆಗೆ 10 ಸಾವುಗಳು ವರದಿಯಾಗಿವೆ. ಏನಿದ್ದರೂ ಈವರೆಗೂ ಸೋಂಕಿನ ಸಮುದಾಯ ಪ್ರಸರಣದ ವರದಿಗಳು ಬಂದಿಲ್ಲ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ  ಅಗರ್ವಾಲ್  ತಿಳಿಸಿದರು.

ಕರ್ನಾಟಕದಲ್ಲಿ ಸೋಂಕು ಖಚಿತವಾಗಿರುವ ಪ್ರಕರಣಗಳ ಸಂಖ್ಯೆ 51ಕ್ಕೆ ಏರಿದೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು 4 ಮಂದಿಗೆ ಸೋಂಕು ತಗುಲಿದೆ. ಕೇರಳದಲ್ಲಿ 9 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು ಖಾತರಿಯಾಗಿದೆ.  ದೆಹಲಿಯಲ್ಲಿ 5 ಹೊಸ ಪ್ರಕರಣಗಳು ವರದಿಯಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಗತ್ಯ ಸೇವೆಗಳಿಗೆ ಇ-ಪಾಸ್ ಒದಗಿಸುವುದಾಗಿ ಪ್ರಕಟಿಸಿದರು. ಕರ್ನಾಟಕದ ಬೆಂಗಳೂರಿನಲ್ಲೂ ಅಗತ್ಯ ಸೇವೆ ಒದಗಿಸುವವರಿಗೆ ಪಾಸ್ ವಿತರಣೆ ಆರಂಭವಾಯಿತು.

No comments:

Advertisement