Sunday, March 29, 2020

ದಿಗ್ಬಂಧ ಅನಿವಾರ್ಯವಾಗಿತ್ತು, ತೊಂದರೆಗಾಗಿ ಕ್ಷಮಿಸಿ: ಪ್ರಧಾನಿ

ದಿಗ್ಬಂಧ ಅನಿವಾರ್ಯವಾಗಿತ್ತು, ತೊಂದರೆಗಾಗಿ ಕ್ಷಮಿಸಿ: ಪ್ರಧಾನಿ, ಕೊರೋನಾ ಮಾರಿ ಗೆದ್ದವರ ಕಥೆ ಹೇಳಿದ ಮೋದಿ
ನವದೆಹಲಿ: ರಾಷ್ಟವ್ಯಾಪಿ ದಿಗ್ಬಂಧನ (ಲಾಕ್ ಡೌನ್) ನಿರ್ಧಾರ ಬಿಟ್ಟು ಬೇರೆ ದಾರಿ ಇರಲಿಲ್ಲ, ನಿಮಗೆ ತೊಂದರೆಯಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 29ರ ಭಾನುವಾರ ದೇಶದ ಜನತೆಗೆ ಮನವಿ ಮಾಡಿದರು.

ಭಾನುವಾg ತಮ್ಮ ಜನಪ್ರಿಯ ಮನ್ ಕೀ ಬಾತ್ ಬಾನುಲಿ ಪ್ರಸಾರ ಭಾಷಣ ಮಾಡಿದ ಪ್ರಧಾನಿ, ದೇಶದಲ್ಲಿ  ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್  ಸೋಂಕನ್ನು ತಡೆಗಟ್ಟಲು ದಿಗ್ಬಂಧನ ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯನ್ನು ಗೆದ್ದ ಇಬ್ಬರ ಕಥೆಯನ್ನು ಹೇಳಿ ಕಥೆ ಜನರಿಗೆ ಪ್ರೇರಣೆ ನೀಡಬೇಕು ಎಂದು ನುಡಿದರು.

ದಿಗ್ಬಂಧನ ನಿಯಮಗಳನ್ನು ಮುರಿದರೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಇದೇ ಕೋವಿಡ್-೧೯ ಪ್ರಕರಣಗಳ ಪರೀಕ್ಷೆ ನಡೆಸುತ್ತಿರುವ ವೈದ್ಯರನ್ನು ಉಲ್ಲೇಖಿಸಿದ ಪ್ರಧಾನಿ, ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು ಸದಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪರಿವಾರವನ್ನು ನೆನಪಿಸಿಕೊಳ್ಳಿ. ಎಲ್ಲ ಮುನ್ನೆಚ್ಚರಿಕೆಗಳನ್ನು ತಪ್ಪದೆ ಪಾಲಿಸಿ ಎಂದು ಕಿವಿಮಾತು ಹೇಳಿದರು.

ಹಣದ ಆಸೆ ಬಿಟ್ಟು, ಜೀವದಯೆಯಿಂದ ವೈದ್ಯರು ಕೆಲಸ ಮಾಡಬೇಕು ಎಂದು ಚರಕರು ಹೇಳಿದ್ದರು. ಈಗಿನ ವೈದ್ಯರು ಅದನ್ನು ಪಾಲಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಮೋದಿ, ಆಶಾ ಕಾರ್ಯಕರ್ತೆಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್ಗಳ ಬಗ್ಗೆ ದೇಶ ಕಾಳಜಿ ವಹಿಸಿದೆ. ನಮ್ಮ ನರ್ಸ್ ಸೋದರಿಯರು ಫ್ಲಾರೆನ್ಸ್ ನೈಂಟಿಗೇಲ್ ಪ್ರತಿಪಾದಿಸಿದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದಿಗ್ಬಂಧನ ಕಾಲದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿರುವ ಜನರ ಬಗ್ಗೆ   ಪ್ರಧಾನಿ ಕಾಳಜಿ ವ್ಯಕ್ತಪಡಿಸಿದರು.  ನಮ್ಮ ದೇಶದಲ್ಲಿ ಸಾಕಷ್ಟು ಜನರು ನಿಜ ಜೀವನದ ಹೀರೊಗಳಾಗಿ ಹೊರಹೊಮ್ಮುತ್ತಿದ್ದಾರೆ. ಸಂಕಷ್ಟ ಪರಿಸ್ಥಿತಿಯಲ್ಲಿಯೂ ದಿನಸಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಚಾಲಕರು ಅವಶ್ಯಕ ವಸ್ತುಗಳ ಸಾಗಣೆಗೆ ಶ್ರಮಿಸುತ್ತಿದ್ದಾರೆ. ಬ್ಯಾಂಕುಗಳನ್ನು ತೆರೆಯಲು ಸಿಬ್ಬಂದಿ ಹಿಂಜರಿಯುತ್ತಿಲ್ಲ. ಅವರೆಲ್ಲರಿಗೂ ನಮ್ಮ ಧನ್ಯವಾದಗಳು ಎಂದು ನುಡಿದರು.

ಸೋಂಕಿತರ ಅವಹೇಳನ ಬೇಡ: ಕೊರೋನಾ ಸೋಂಕು ದೃಢ ಪಟ್ಟಿರುವವರನ್ನು ಕೀಳಾಗಿ ಕಾಣಬೇಡಿ. ಇದರಲ್ಲಿ ಅವರ ತಪ್ಪು ಏನೂ ಇಲ್ಲ. ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಕಾರಣಕ್ಕಾಗಿ ಮಾತ್ರ ಅವರನ್ನು ದೈಹಿಕವಾಗಿ ಪ್ರತ್ಯೇಕವಾಗಿ ಇರಿಸಬೇಕಾಗಿದೆ. ಭಾವನಾತ್ಮಕವಾಗಿ ಅವರನ್ನು ದೂರ ಮಾಡಬೇಡಿ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಗುಣಮುಖರಾಗಲು ನೆರವಾಗಿ ಎಂದು ಮೋದಿ ಒತ್ತಿ ಹೇಳಿದರು.

ಸದುಪಯೋಗ ಮಾಡಿಕೊಳ್ಳಿ: ಜನರು ದಿಗ್ಬಂಧನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. ಅವಧಿಯಲ್ಲಿ ಹಲವರು ಇಷ್ಟದ ಪುಸ್ತಕಗಳನ್ನು ಓದುತ್ತಿದ್ದಾರೆ. ಸಂಗೀತ ಅಭ್ಯಾಸ ಆರಂಭಿಸಿದ್ದಾರೆ. ಹಳೆಯ ಸ್ನೇಹಿತರೊಂದಿಗೆ ಮಾತನಾಡಲು ಶುರು ಮಾಡಿದ್ದಾರೆ. ನೀವು ಇಂಥದ್ದೇನಾದರೂ ಮಾಡಬಹುದು ಎಂದು ಪ್ರಧಾನಿ ಸಲಹೆ ಮಾಡಿದರು.

ಬಡವg ಬಗ್ಗೆ ಕಾಳಜಿ ವಹಿಸಿ: ಬಡವರನ್ನು ಪ್ರೀತಿಯಿಂದ ನೋಡಿಕೊಳ್ಳೋಣ. ಮೊದಲು ಅವರ ಹೊಟ್ಟೆ ತುಂಬಿಸಲು ಯತ್ನಿಸೋಣ. ಇದು ನಮ್ಮ ಸಂಸ್ಕೃತಿ. ಇಂದು ಎಲ್ಲ ಭಾರತೀಯರು ಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದೇ ಭಾರತೀಯ ಕಷ್ಟಪಟ್ಟು ದುಡಿದು ದೇಶವನ್ನು ಕಟ್ಟುತ್ತಾನೆ ಎಂಬ ಆಶಯವನ್ನು ಪ್ರಧಾನಿ ಮೋದಿ ವ್ಯಕ್ತ ಪಡಿಸಿದರು.
ಕೊರೊನಾ ವಿರುದ್ಧದ ಯುದ್ದವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ದೇಶದ ಜನರಲಿ ಪ್ರಧಾನಿ ಭರವಸೆ ತುಂಬಿದರು.

ಕೊರೋನಾ ಸೋಂಕು ಗೆದ್ದವರ ಕಥೆ:  ಕೊರೋನಾಸೋಂಕು ಖಚಿತವಾದರೂ ಅದನ್ನು ಎದುರಿಸಿ ಗೆದ್ದ ಕಥೆಯನ್ನು ಪ್ರಚಾರ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಅವರ ಕಥೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ರಾಮಗಾಂಪಾ ತೇಜಾ ಹೈದರಾಬಾದ್ ಮೂಲದ ಐಟಿ ಮೊದಲು ಪರೀಕ್ಷೆಗೊಳಗಾದಾಗ ಕೋವಿಡ್ ೧೯ ಸೋಂಕು vಗುಲಿದ್ದು ಖಚಿತ ಎಂಬುದಾಗಿ ವರದಿ ಹೇಳಿತ್ತು. ಆದರೆ ತೇಜಾ ಇದನ್ನು ನಂಬಿರಲಿಲ್ಲ. ಕೂಡಲೇ ಆತ ಆಸ್ಪತ್ರೆಗೆ ದಾಖಲಾಗಿದ್ದ. ಕಚೇರಿ ಕೆಲಸದ ಮೇಲೆ ದುಬೈಗೆ ಭೇಟಿ ನೀಡಿ ವಾಪಸ್ ಬಂದಾಗ ಕೋವಿಡ್ ೧೯ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ತೇಜಾ ಆಸ್ಪತ್ರೆಯಲ್ಲಿದ್ದ ಆರಂಭದ ಕೆಲವು ದಿನಗಳಲ್ಲಿ, ಕೋವಿಡ್ ೧೯ ಪ್ರಕರಣ ಒಂದೊಂದಾಗಿ ವರದಿಯಾಗುತ್ತಿತ್ತು. ಆದರೆ ವೈದ್ಯರು ಮತ್ತು ನರ್ಸ್ ಧೈರ್ಯ ತುಂಬಿದ್ದರು, ಇದರಿಂದಾಗಿ ತಾನು ಗುಣಮುಖನಾಗುವ ವಿಶ್ವಾಸ ಹೊಂದಿದ್ದೆ ಎಂದು ಅವರು ಪ್ರಧಾನಿಯವರಿಗೆ ತಿಳಿಸಿದ್ದರು.

ಕೋವಿಡ್ ವೈರಸ್ ಸೋಂಕು ತಗುಲಿದ ನಂತರ ಕುಟುಂಬ ವರ್ಗದವರ ಪ್ರತಿಕ್ರಿಯೆ ಹೇಗಿತ್ತು ಎಂದು ಪ್ರಧಾನಿ ಮೋದಿ ಪ್ರಶ್ನಿಸಿದಾಗ, ಮನೆಯವರೆಲ್ಲಾ ತುಂಬಾ ಒತ್ತಡಕ್ಕೆ ಒಳಗಾಗಿದ್ದು, ಭಯಭೀತರಾಗಿದ್ದರು. ಆದರೆ ಅವರನ್ನೆಲ್ಲಾ ಪರೀಕ್ಷಿಸಿದ ಬಳಿಕ ಬಂದ ವರದಿ ಅವರಿಗೆ ಸೋಂಕು ಬಂದಿಲ್ಲ ಎಂಬುದು ಖಚಿತವಾಗಿತ್ತು. ಇದರಿಂದ ದೊಡ್ಡ ನಿರಾಳತೆ ಸಿಕ್ಕಿತ್ತು ಎಂದು ತೇಜಾ ಪ್ರಧಾನಿಯವರಿಗೆ ವಿವರಿಸಿದ್ದರು.

ಕೋವಿಡ್ ೧೯ ಸೋಂಕಿನಿಂದ ಗುಣಮುಖ ಹೊಂದಿದ ಮೇಲೂ, ಪ್ರತ್ಯೇಕವಾಸದ ಅವಧಿ ಮುಗಿದ ಬಳಿಕ ಕೂಡಾ ತೇಜಾ ಪ್ರತಿಯೊಂದು ಸುರಕ್ಷತಾ ಕ್ರಮವನ್ನೂ ಅನುಸರಿಸಿದ್ದಾರೆ. ಸ್ವಯಂ ಐಸೋಲೇಶನ್ ಸೇರಿದಂತೆ ಕೈ ತೊಳೆಯುವುದನ್ನು ಮುಂದುವರಿಸಿದ್ದಾರೆ ಎಂದು ಮೋದಿ ಹೇಳಿದರು.

ನೀವೊಬ್ಬ ಐಟಿ ಉದ್ಯೋಗಿ. ನಿಮ್ಮ ಕಥೆಯನ್ನು ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ, ವ್ಯಾಪಕವಾಗಿ ಪ್ರಸಾರಗೊಳ್ಳುವಂತೆ ಮಾಡಿ. ಇದರಿಂದಾಗಿ ಜನರು ಭಯಭೀತರಾಗುವುದಿಲ್ಲ. ಅಲ್ಲದೇ ಕೋವಿಡ್ ವೈರಸ್ಸನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಮನವರಿಕೆಯಾಗುವುದು ಎಂಬುದಾಗಿ ತೇಜಾ ಅವರಿಗೆ ಸಲಹೆ ನೀಡಿದ್ದೇನೆ ಎಂದು ಮೋದಿ ನುಡಿದರು.

ಇನ್ನೊಂದು ಪ್ರಕರಣ: ಕೋವಿಡ್ ೧೯ ಮಹಾಮಾರಿ ಸೋಂಕಿನಿಂದ ಗುಣಮುಖರಾದ ಆಗ್ರಾದ ಅಶೋಕ್ ಕಪೂರ್ ಎಂಬ ವ್ಯಕ್ತಿಗೂ ತಾನು ಕರೆ ಮಾಡಿದ್ದುದಾಗಿ ಪ್ರಧಾನಿ ಹೇಳಿದರು. ಕಪೂರ್ ಹಾಗೂ ಅವರ ಇಡೀ ಕುಟುಂಬಕ್ಕೆ ಕೋವಿಡ್ ೧೯ ಸೋಂಕು ತಲುಪಿದ್ದು ಪರೀಕ್ಷೆಯಿಂದ ಖಚಿತವಾಗಿತ್ತು. ಕಪೂರ್ ಹಾಗೂ ಅವರ ಇಬ್ಬರು ಮಕ್ಕಳು, ಅಳಿಯ ಶೂ ಮೇಳಕ್ಕಾಗಿ ಇಟಲಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಆಗ್ರಾಕ್ಕೆ ಬಂದ ಮೇಲೆ ಅಳಿಯ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಹೋಗಿದ್ದ. ಆತ ತನ್ನ ಇಬ್ಬರು ಮಕ್ಕಳಿಗೂ ಪರೀಕ್ಷಿಸಿಕೊಳ್ಳುವಂತೆ ಸೂಚಿಸಿದ್ದ. ನಂತರ ಆಗ್ರಾ ಆಸ್ಪತ್ರೆಗೆ ಹೋದಾಗ ವೈದ್ಯರು ಇಡೀ ಕುಟುಂಬ ಸದಸ್ಯರು ಪರೀಕ್ಷೆಗೆ ಒಳಗಾಗಬೇಕು ಎಂದು ಸೂಚಿಸಿದ್ದರು. ಅದರಂತೆ ೭೩ ವರ್ಷದ ಕಪೂರ್, ಅವರ ಪತ್ನಿ,  ಇಬ್ಬರು ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಪರೀಕ್ಷಿಸಿದಾಗ ಇಡೀ ಕುಟುಂಬಕ್ಕೆ ಸೋಂಕು ತಗುಲಿದ್ದು ಖಚಿತವಾಗಿತ್ತು ಎಂದು ಪ್ರಧಾನಿ ವಿವರಿಸಿದರು.

ಎರಡು ಆಂಬುಲೆನ್ಸ್ ನಲ್ಲಿ ಇಡೀ ಕುಟುಂಬ ಸದಸ್ಯರು ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಗೆ ದಾಖಲಾಗಿದ್ದೆವು.  ಇದೀಗ ನಾನು ಆರೋಗ್ಯವಾಗಿದ್ದೇನೆ. ವೇಳೆ ಮೊಣಕಾಲು ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದೇನೆ ಎಂದು ಕಪೂರ್ ಪ್ರಧಾನಿಗೆ ತಿಳಿಸಿದ್ದರು.
ಇವೆರಡೂ ಪ್ರಕರಣಗಳು ಜನರಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಮೋದಿ ಹೇಳಿದರು.

No comments:

Advertisement