Friday, March 6, 2020

ಕೊರೋನಾ ಬೆದರಿಕೆ: ಪ್ರದಾನಿ ಮೋದಿ ಬೆಲ್ಜಿಯಂ ಪ್ರವಾಸ ರದ್ದು

ಕೊರೋನಾ ಬೆದರಿಕೆ: ಪ್ರದಾನಿ ಮೋದಿ ಬೆಲ್ಜಿಯಂ ಪ್ರವಾಸ ರದ್ದು
ಭಾರತ-ಇಯು ಶೃಂಗ ಮುಂದೂಡಿಕೆ, ದೆಹಲಿ ಪ್ರಾಥಮಿಕ ಶಾಲೆಗಳು ಬಂದ್
ನವದೆಹಲಿ: ಭಾರತ- ಐರೋಪ್ಯ ಒಕ್ಕೂಟ (ಇಯು) ಶೃಂಗ ಸಭೆಯನು ಕೊರೋನಾವೈರಸ್ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಕಾರಣ ಬೆಲ್ಜಿಯಂ ರಾಜಧಾನಿ ಬ್ರಸ್ಸೆಲ್ಸ್ ಗೆ ನೀಡಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ರದ್ದು ಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ (ಎಇಎ) 2020 ಮಾರ್ಚ್ 05ರ ಗುರುವಾರ ಪ್ರಕಟಿಸಿತು.

ಇದೇ ವೇಳೆಗೆ ದೆಹಲಿಯ ಆಮ್ ಆದ್ಮಿ ಪಕ್ಷ ಸರ್ಕಾರವು sಸೊಂಕು ಹರಡುವಿಕೆಯನ್ನು ತಡೆಯಲು ದೆಹಲಿಯ ಎಲ್ಲ ಸರ್ಕಾರಿ, ಅನುದಾನಿತ, ಎಂಸಿಡಿ ಮತ್ತು ಎನ್ ಡಿಎಂಸಿ ಪ್ರಾಥಮಿಕ ಶಾಲೆಗಳನ್ನು ತತ್ ಕ್ಷಣದಿಂದ ಮಾರ್ಚ್ ಅಂತ್ಯದವರೆಗೆ ಮುಚ್ಚುವಂತೆ ಆದೇಶ ನೀಡಿತು.
 ಭಾರತ-ಇಯು ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಬೇಕಾಗಿತ್ತು. ಆದರೆ ಉಭಯ ರಾಷ್ಟ್ರಗಳ ಆರೋಗ್ಯ ಅಧಿಕಾರಿಗಳು ಸಧ್ಯದಲ್ಲಿ ಪ್ರವಾಸ ಮಾಡದಿರುವಂತೆ ಸಲಹೆ ಮಾಡಿದ್ದಾರೆ. ಆದ್ದರಿಂದ ಶೃಂಗವನ್ನು ಪರಸ್ಪರರಿಗೆ ಅನುಕೂಲಕರವಾದ ಬೇರೆ ದಿನಾಂಕದಂದು ನಡೆಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಐರೋಪ್ಯ ಒಕ್ಕೂಟ ಮತ್ತು ಭಾರತ ನಡುವಣ ನಿಕಟ ಸಹಕಾರದ ಸ್ಫೂರ್ತಿಯನ್ನು ಅನುಸರಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಉಭಯರೂ ಜಾಗತಿತ ಆರೋಗ್ಯದ ಬಗೆಗಿನ ಬದ್ಧತೆ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದ್ದು, ಸೋಂಕು ಶೀಘ್ರದಲ್ಲೇ ಹತೋಟಿಗೆ ಬರುವುದು ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ ಎಂದು ರವೀಶ್ ಕುಮಾರ್ ನುಡಿದರು.

ಬ್ರಸ್ಸೆಲ್ಸ್ ನಲ್ಲಿ ಕೆಲಸ ಮಾಡುತ್ತಿರುವ ಐರೋಪ್ಯ ಒಕ್ಕೂಟ ಆಡಳಿತದ ಕನಿಷ್ಠ ಇಬ್ಬರು ಸಿಬ್ಬಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐರೋಪ್ಯ ಅಧಿಕಾರಿಗಳು ಬುಧವಾರ ಹೇಳಿದ್ದರು. ಒಂದು ಪ್ರಕರಣದಲ್ಲಿ ಐರೋಪ್ಯ ರಕ್ಷಣಾ ಸಂಸ್ಥೆಯಲ್ಲಿ (ಇಡಿಎ) ಕೆಲಸ ಮಾಡುತ್ತಿರುವ ವ್ಯಕ್ತಿ ಫೆಬ್ರುವರಿ ೨೩ರಂದು ಇಟಲಿಯಿಂದ ವಾಪಸಾಗಿದ್ದರು ಎಂದು ಅವರು ತಿಳಿಸಿದ್ದರು.

ಎರಡನೇ ವ್ಯಕ್ತಿ ಐರೋಪ್ಯ ಮಂಡಳಿಯ (ಯುರೋಪಿಯನ್ ಕೌನ್ಸಿಲ್) ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಬ್ರಸ್ಟೆಲ್ಸ್ನಲ್ಲಿ ಮೊದಲ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದ ಬಳಿಕ ಸೋಂಕು ತಗುಲಿತು ಎಂದು ಭಾವಿಸಲಾಗಿದೆ.

ಬ್ರಸ್ಸೆಲ್ಸ್ ಮೂಲದ ಇಡಿಎಯ ಕೇಂದ್ರ ಕಚೇರಿಯಲ್ಲಿ ನಡೆಯಬೇಕಾಗಿದ್ದ ಸಭೆಗಳು ಮಾರ್ಚ್ ೧೩ರವರೆಗೆ ರದ್ದಾಗಿವೆ ಎಂದು ಇಡಿಎಯಲ್ಲಿನ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಮುಖ್ಯಸ್ಥ ಎಲಿಸಾಬೆತ್ ಸ್ಕಾಫ್ಮ್ಯಾನ್ ಹೇಳಿದರು.

ಬ್ರಸ್ಸೆಲ್ಸ್ ೨೭ ರಾಷ್ಟ್ರಗಳ ಒಕ್ಕೂಟದ ವಾಸ್ತವಿಕ ರಾಜಧಾನಿಯಾಗಿದ್ದು ಯುರೋಪಿಯನ್ ಕಮಿಷನ್, ಯುರೋಪಿಯನ್ ಕೌನ್ಸಿಲ್,   ಮತ್ತು ಐರೋಪ್ಯ ಸಂಸತ್ತು ಸೇರಿದಂತೆ ಒಕ್ಕೂಟಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳು ಬ್ರಸ್ಸೆಲ್ಸ್ ನಲ್ಲೇ ಇವೆ.

ಸಂಸತ್ತು ಈಗಾಗಲೇ ಬ್ರಸ್ಸೆಲ್ಸ್ ಮತ್ತು ಸ್ಟ್ರಾಸ್ಬರ್ಗ್ನಲ್ಲಿ ಸಾರ್ವಜನಿಕರಿಗೆ ಕಟ್ಟಡ ಪ್ರವೇಶಕ್ಕೆ ಮಿತಿ ವಿಧಿಸಿದೆ.

ದೆಹಲಿಯ ಪ್ರಾಥಮಿಕ ಶಾಲೆಗಳು ಬಂದ್:  ಮಧ್ಯೆ, ದೆಹಲಿಯ ಎಲ್ಲ ಸರ್ಕಾರಿ, ಅನುದಾನಿತ, ಎಂಸಿಡಿ ಮತ್ತು ಎನ್ ಡಿಎಂಸಿ ಶಾಲೆಗಳನ್ನು ಕೊರೋನಾವೈರಸ್ ಮಕ್ಕಳಿಗೆ ಹರಡದಂತೆ ತಡೆಯುವ ಸಲುವಾಗಿ ಮಾರ್ಚ್ ೩೧ರವರೆಗೆ ಮುಚ್ಚಲು ಆಮ್ ಆದ್ಮಿ ಸರ್ಕಾರ ಆದೇಶ ನೀಡಿದೆ. ಆದೇಶ ತತ್ ಕ್ಷಣದಿಂದಲೇ ಜಾರಿಗೊಳಿಸಲಾಯಿತು.
ಕೋವಿಡ್ -೧೯ ಹರಡುವ ಸಾಧ್ಯತೆಗಳನ್ನು ತಡೆಗಟ್ಟಲು ಮುಂಜಾಗರೂಕತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಗುರುವಾರ ಟ್ವೀಟ್ ಮಾಡಿದರು.

ಕೋವಿಡ್-೧೯ ಸೋಂಕು ನಮ್ಮ ಮಕ್ಕಳಲ್ಲಿ ಹರಡುವ ಸಾಧ್ಯತೆಯನ್ನು ತಡೆಯುವ ಮುಂಜಾಗರೂಕತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಶಾಲೆಗಳನ್ನು (ಸರ್ಕಾರಿ/ ಅನುದಾನಿತ/ಎಂಸಿಡಿ/ಎನ್ ಡಿಎಂಸಿ) ೩೧/೦೩/೨೦೨೦ದವರೆಗೆ ತತಕ್ಷಣದಿಂದಲೇ ಜಾರಿಯಾಗುವಂತೆ ಮುಚ್ಚಲು ದೆಹಲಿ ಸರ್ಕಾರ ನಿರ್ದೇಶಿಸಿದೆಎಂದು ಮನಿಶ್ ಸಿಸೋಡಿಯಾ ಟ್ವೀಟ್ ಮಾಡಿದರು.

ಭಾರತದಲ್ಲಿ ಕೊರೋನಾವೈರಸ್ ಸೋಂಕು ದೃಢಪಟ್ಟಿರುವ ೩೦ ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಇವುಗಳಲ್ಲಿ ೧೬ ಇಟಲಿ ಪ್ರವಾಸಿಗರೂ ಸೇರಿದ್ದಾರೆ. ೧೬ ಇಟಲಿ ಪ್ರವಾಸಿಗರ ಪೈಕಿ ೧೪ ಮಂದಿಯನ್ನು ದೆಹಲಿಯಲ್ಲಿ ಏಕಾಂಗಿವಾಸದ ವಾರ್ಡಿಗೆ ಸೇರಿಸಲಾಗಿದೆ. ಪ್ರವಾಸಿಗರು ಇಟಲಿಯ ೨೩ ಮಂದಿ ಪ್ರವಾಸಿಗರ ತಂಡದ ಸದಸ್ಯರಾಗಿದ್ದು ಕಳೆದ ತಿಂಗಳು ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಅವರ ಪೈಕಿ ಒಬ್ಬ ವ್ಯಕ್ತಿ ಮತ್ತು ಆತನ ಪತ್ನಿ ಜೈಪರದಲ್ಲಿ ಇದ್ದು ಅವರಿಬ್ಬರಿಗೂ ವೈರಸ್ ಸೋಂಕು ತಗುಲಿದ್ದು ಖಚಿತಪಟ್ಟಿದೆ. ಭಾರತದಲ್ಲಿ ಕೊರೋನಾವೈರಸ್ ತಗುಲಿರುವ ಅತಿದೊಡ್ಡ ಗುಂಪು ಇದಾಗಿದೆ. ಚೀನಾದ ವುಹಾನ್ ನಗರದಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡ ಕೊರೋನಾವೈರಸ್ ವಿಶ್ವಾದ್ಯಂತ ೬೪ ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಒಟ್ಟು ೯೦,೦೦೦ ಜನರಿಗೆ ಸೋಂಕು ತಗುಲಿದೆ ಮತ್ತು ೩೨೦೦ ಮಂದಿ  ಸಾವನ್ನಪ್ಪಿದ್ದಾರೆ.

No comments:

Advertisement