Sunday, March 1, 2020

ಅಫ್ಘಾನಿಸ್ಥಾನ: ಚಾರಿತ್ರಿಕ ಶಾಂತಿ ಒಪ್ಪಂದಕ್ಕೆ ಅಮೆರಿಕ- ತಾಲೀಬಾನ್ ಸಹಿ

ಅಫ್ಘಾನಿಸ್ಥಾನ: ೧೮ ವರ್ಷಗಳ ಸುದೀರ್ಘ ಸಮರಕ್ಕೆ ತೆರೆ
ಚಾರಿತ್ರಿಕ ಶಾಂತಿ ಒಪ್ಪಂದಕ್ಕೆ ಅಮೆರಿಕ- ತಾಲೀಬಾನ್ ಸಹಿ
ಕಾಬೂಲ್/ ದೋಹಾ: ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿದ್ದ ೧೮ ವರ್ಷಗಳ ಸುದೀರ್ಘ ಸಮರವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ತಾಲೀಬಾನ್ 2020 ಫೆಬ್ರುವರಿ 29ರ ಶನಿವಾರ ಚಾರಿತ್ರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು.

ಅಮೆರಿಕ- ತಾಲಿಬಾನ್ ಶಾಂತಿ ಒಪ್ಪಂದವು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ೧೮ ವರ್ಷಗಳ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶವನ್ನು ಹೊಂದಿದೆ.

ಅಂತ್ಯವಿಲ್ಲದ ಯುದ್ಧಗಳಿಂದ ಅಮೆರಿಕವನ್ನು ಹೊರತರುವುದಾಗಿ ನೀಡಿದ್ದ ತಮ್ಮ ಪ್ರಮುಖ ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಒಪ್ಪಂದವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೆರವಾಗಲಿದೆ.

ಒಪ್ಪಂದದ ಪ್ರಕಾರ, ಅಫ್ಘಾನಿಸ್ಥಾನವನ್ನು ಭಯೋತ್ಪಾದಕ ದಾಳಿಗೆ ಉಡಾವಣಾ ತಾಣ ಆಗದಂತೆ ನೋಡಿಕೊಳ್ಳುವ ಬದ್ಧತೆಯನ್ನು ತಾಲೀಬಾನ್ ವ್ಯಕ್ತ ಪಡಿಸಿದೆ. ಇದಕ್ಕೆ ಬದಲಿಯಾಗಿ ಅಮೆರಿಕವು ತನ್ನ ಸಹಸ್ರಾರು ಸೈನಿಕರನ್ನು ಅಫ್ಘಾನಿಸ್ಥಾನದಿಂದ ಹಿಂತೆಗೆದುಕೊಳ್ಳಲು ಪ್ರಾರಂಭಿಸಲಿದೆ.
ತಾಲಿಬಾನ್ ತನ್ನ ಬದ್ಧತೆಗಳನ್ನು ಪೂರೈಸಿದರೆ, ಅಮೆರಿಕದ ಎಲ್ಲ ಪಡೆಗಳು ೧೪ ತಿಂಗಳಲ್ಲಿ ವಾಪಸಾಗಲಿವೆ.

೨೦೦೧ ಸೆಪ್ಟೆಂಬರ್ ೧೧ರಂದು ಸಹಸ್ರಾರು ಮಂದಿಯನ್ನು ಬಲಿ ತೆಗೆದುಕೊಂಡು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಬಳಿಕ ಸಂಭ್ರಮಿಸಿದ್ದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಖೈದಾವನ್ನು ಸಾಕಿ ಬೆಳೆಸಿದ್ದ್ದ ತಾಲಿಬಾನಿನ ಹುಟ್ಟಡಗಿಸುವ ಸಲುವಾಗಿ ಅಮೆರಿಕವು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿತ್ತು.

ದಂಗೆಕೋರರು ತಮ್ಮ ಭದ್ರತಾ ಖಾತರಿಗಳು ಮತ್ತು ಅಫ್ಘಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಬದ್ಧತೆಯನ್ನು ನಿರಾಕರಿಸಿದರೆ ತಾಲಿಬಾನ್ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ರದ್ದುಗೊಳಿಸಲು ಅಮೆರಿಕವು ಹಿಂಜರಿಯುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಹೇಳಿದರು.

"ತಾಲಿಬಾನ್ ತಮ್ಮ ಬದ್ಧತೆಗಳನ್ನು ಗೌರವಿಸುವಲ್ಲಿ ವಿಫಲವಾದರೆ ಅದು ಸಹ ಆಫ್ಘನ್ನರೊಂದಿಗೆ ಕುಳಿತು ದೇಶದ ಭವಿಷ್ಯ ನಿರ್ಮಿಸುವ ಅವಕಾಶವನ್ನು ಕಳೆದುಕೊಳ್ಳುತ್ತದೆ ಎಂದು ಕಾಬೂಲಿಗೆ ಭೇಟಿ ನೀಡಿದ ಎಸ್ತರ್ ಎಚ್ಚರಿಸಿದರು.

ಇಂತಹ ಸಂದರ್ಭ ಬಂದರೆ, ಒಪ್ಪಂದವನ್ನು ರದ್ದುಗೊಳಿಸಲು ಅಮೆರಿಕ ಹಿಂಜರಿಯುವುದಿಲ್ಲ" ಎಂದು ಅವರು ಸ್ಪಷ್ಟ ಪಡಿಸಿದರು.

No comments:

Advertisement