My Blog List

Sunday, March 1, 2020

‘ಈ ಶಾಂತಿ ಬೇಕಿಲ್ಲ’: ಅಫ್ಘನ್ ಮಹಿಳೆಯರಿಗೆ ಸ್ವಾತಂತ್ರ್ಯ ನಷ್ಟದ ಭೀತಿ

ಅಫ್ಘನ್ ಮಹಿಳೆಯರಿಗೆ ಸ್ವಾತಂತ್ರ್ಯ ನಷ್ಟದ ಭೀತಿ
ಕಾಬೂಲ್: ಅಮೆರಿಕ ಮತ್ತು ತಾಲೀಬಾನ್ ೧೮ ವರ್ಷಗಳ ಸುದೀರ್ಘ ಸಮರಕ್ಕೆ ತೆರೆ ಎಳೆಯುವ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಅಫ್ಘಾನಿಸ್ಥಾನದ ಮಹಿಳೆಯರು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುವ ಭೀತಿಯಿಂದ ತತ್ತರಿಸುತ್ತಿದ್ದಾರೆ.

ಸಮರಗ್ರಸ್ತ ರಾಷ್ಟ್ರದಲ್ಲಿ ಮತ್ತೆ ತಾಲೀಬಾನ್ ಮುಂಚೂಣಿಗೆ ಬರಲು ಮಹಾದ್ವಾರವನ್ನು ತೆರೆದಿರುವ ಶಾಂತಿ ಒಪ್ಪಂದದ ಹೆಸರಿನಲ್ಲಿ ಅತ್ಯಂತ ಕಷ್ಟದಿಂದ ಸಂಪಾದಿಸಿದ ತಮ್ಮ ಅಲ್ಪ ಕಾಲದ ಸ್ವಾತಂತ್ರ್ಯವು ನಷ್ಟವಾಗಿ ಹೋಗಬಹುದು ಎಂದು ಮಹಿಳೆಯರು ಭಯಭೀತರಾಗಿದ್ದಾರೆ.

೨೦೦೧ರಲ್ಲಿ ಅಮೆರಿಕವು ಆಕ್ರಮಣ ನಡೆಸುವವರೆಗೆ ತಾಲಿಬಾನ್ ಉಗ್ರಗಾಮಿಗಳು ಸುಮಾರು ವರ್ಷಗಳ ಕಾಲ ಅಫ್ಘಾನಿಸ್ಥಾನದ ಅಧಿಕಾರಸೂತ್ರವನ್ನು ಹಿಡಿದಿದ್ದರು. ಷರಿಯಾ ಕಾನೂನಿನ ಕಟ್ಟುನಿಟ್ಟು ಜಾರಿಯ ಹೆಸರಿನಲ್ಲಿ ತಾಲಿಬಾನ್ ಉಗ್ರಗಾಮಿಗಳು ಮಹಿಳೆಯರನ್ನು ವಸ್ತುಶಃ ಸೆರೆಯಾಳುಗಳನ್ನಾಗಿ ಮಾರ್ಪಡಿಸಿದ್ದರು.

ತಾಲಿಬಾನ್ ಪತನದೊಂದಿಗೆ ಅಫ್ಘಾನಿಸ್ಥಾನದಲ್ಲಿ ಮಹಿಳೆಯ ಬದುಕು ಸುಧಾರಿಸಿತ್ತು. ಕಾಬೂಲ್ನಂತಹ ನಗರ ಪ್ರದೇಶಗಳಲ್ಲಿ ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಅಡಿ ಇಟ್ಟಿದ್ದರು.

ಹಿಂಸಾಚಾರ ಕೊನೆಗೊಂಡು ಶಾಂತಿ ಮರುಕಳಿಸಲಿ ಎಂದು ಹಲವಾರು ವರ್ಷಗಳಿಂದ ಕಾದಿದ್ದ ಮಹಿಳೆಯರು ಇದೀಗ ಶಾಂತಿಯ ಹೆಸರಿನಲ್ಲಿ ತಾಲಿಬಾನ್ ಮರುಪ್ರವೇಶ ಸಾಧ್ಯತೆಯಿಂದ ಕಂಗೆಟ್ಟಿದ್ದಾರೆ.

ನಾನು ಕುಟುಂಬವನ್ನು ಹೇಗೆ ಸಾಕಲಿ?

ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದನ್ನು ಅಥವಾ ನೌಕರಿ ಮಾಡುವುದನ್ನು ನಿಷೇಧಿಸಲಾಗಿತ್ತು. ತಾಲಿಬಾನ್ ಪತನದೊಂದಿಗೆ ಹಕ್ಕುಗಳನ್ನು ಪಡೆದಿದ್ದ ಅಫ್ಘನ್ ವೃತ್ತಿ ನಿರತ ಮಹಿಳೆಯರು ಈಗ ಕೆಲಸ ಕಳಕೊಳ್ಳುವ ಭೀತಿಯಲ್ಲಿದ್ದಾರೆ.

ಪಶ್ಚಿಮದ ಹೆರಾತ್ ನಗರದ ಸೇಲ್ಸ್ ವುಮನ್ ಸೆತಾರ ಅಕ್ರಿಮಿ (೩೨) ಶಾಂತಿ ಬಂದರೆ ಮತ್ತು ತಾಲಿಬಾನ್ ನಮ್ಮ ಜನರ ಹತ್ಯೆಯನ್ನು ನಿಲ್ಲಿಸಿದರೆ ನಾನು ಅತ್ಯಂತ ಸಂತಸ ಪಡುತ್ತೇನೆ ಎಂದು ಹೇಳಿದರು.

ಆದರೆ, ತಾಲಿಬಾನ್ ಮತ್ತೆ ಹಳೆಯ ಮನಃಸ್ಥಿತಿಯೊಂದಿಗೆ ಅಧಿಕಾರಕ್ಕೆ ಬಂದರೆ, ಅದು ನನಗೆ ಚಿಂತೆಯ ವಿಷಯವಾಗುತ್ತದೆ ಎಂದು ಮೂರು ಮಕ್ಕಳನ್ನು ಹೊಂದಿರುವ ವಿಚ್ಛೇದಿತ ಮಹಿಳೆ ಆತಂಕ ವ್ಯಕ್ತ ಪಡಿಸಿದರು.

ನನಗೆ ಮನೆಯಲ್ಲಿ ಕುಳಿತುಕೋ ಎಂದು ಅವರು ಹೇಳಿದರೆ, ನಾನು ನನ್ನ ಕುಟುಂಬಕ್ಕಾಗಿ ದುಡಿಯಲು ಸಾಧ್ಯವಾಗುವುದಿಲ್ಲ. ಅಫ್ಘಾನಿಸ್ಥಾನದಲ್ಲಿ ಪ್ರಸ್ತುತ ಸಹಸ್ರಾರು ಮಹಿಳೆಯರ ಸ್ಥಿತಿ ಹೀಗೆಯೇ ಆಗುತ್ತದೆ. ಅವರೆಲ್ಲರೂ ಈಗ ಚಿಂತಿತರಾಗಿದ್ದಾರೆ ಎಂದು ಅವರು ನುಡಿದರು.

ಅಕ್ರಿಮಿ ಅವರ ಆತಂಕವನ್ನು ಕಾಬೂಲ್ ಮೂಲದ ಪಶುವೈದ್ಯೆ ತಹೇರಾ ರೆಝಾಯಿ ಪ್ರತಿಧ್ವನಿಸಿದರು.  ತಾಲಿಬಾನ್ ಮತ್ತೆ ಬಂದರೆ ಮಹಿಳೆಯದ ದುಡಿಯುವ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಸಂಚಕಾರ ಬರುವುದು ಖಂಡಿತ ಎಂದು ಅವರು ನುಡಿದರು.

ತಾಲಿಬಾನಿಗಳ ಮನಃಸ್ಥಿತಿಯಲ್ಲಿ ಯಾವುದೇ ಬದಲಾವಣೆಯೂ ಆಗಿಲ್ಲ ಎಂಬುದಾಗಿ ಆಕೆ ದೃಢವಾಗಿ ನುಡಿದರು.

ಪತ್ರಕರ್ತರು ಮಾತನಾಡಿಸಿದ ಹಲವಾರು ವೃತ್ತಿ ನಿರತ ಮಹಿಳೆಯರೂ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದರು.

ಮಹಿಳೆಯರ ಸ್ವಾತಂತ್ರ್ಯಹರಣ ಮಾಡುವುದಾದರೆ ಶಾಂತಿ ನಮಗೆ ಬೇಕಿರಲಿಲ್ಲ ಎಂದು ಒಬ್ಬ ಮಹಿಳೆ ಹೇಳಿದರು.

No comments:

Advertisement