Sunday, April 12, 2020

ಪಂಜಾಬ್: ಎಎಸ್‌ಐ ಕೈಕತ್ತರಿಸಿದ ದುಷ್ಕರ್ಮಿಗಳ ಬಂಧನ

ಪಂಜಾಬ್: ಎಎಸ್‌ಐ ಕೈಕತ್ತರಿಸಿದ ದುಷ್ಕರ್ಮಿಗಳ ಬಂಧನ
ಚಂಡೀಗಢ: ನಾಕಾಬಂದಿಯ ವೇಳೆ 2020 ಏಪ್ರಿಲ್ 12 ಭಾನುವಾರ ಎಎಸ್‌ಐ ಕೈ ಕತ್ತರಿಸಿದ್ದ ಆರೋಪಿಗಳನ್ನು  ಅತ್ಯಂತ  ಕ್ಷಿಪ್ರವಾಗಿ ಪತ್ತೆ ಮಾಡಿವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದರು.

ಪಂಜಾಬಿನ  ಪಟಿಯಾಲ ಜಿಲ್ಲೆಯಲ್ಲಿ ನಿಹಾಂಗ್ ಸಿಖ್ಖರ ಗುಂಪು ಸಹಾಯಕ ಸಬ್ ಇನ್ಸ್ ಪೆಕ್ಟರ್ ಒಬ್ಬರ ಕೈ ಕತ್ತರಿಸಿದ್ದರು. ಈ ಸಂದರ್ಭದಲ್ಲಿ ಆರು ಮಂದಿ ಪೊಲೀಸರಿಗೂ ಗಾಯಗಳಾಗಿದ್ದವು.

ಪ್ರಕರಣಕ್ಕೆ ಸಂಬಂಧಿಸಿದ  ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ಮುಂದುವರರೆದಿದೆ. ರಾಜ್ಯದಲ್ಲಿ ಯಾರೇ ಆಗಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕೂಡಲೆ ಕಠಿಣ ಕ್ರಮ ಕೈಗೊಳ್ಳಿ ಎಂದು  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪೊಲೀಸರಿಗೆ ಸೂಚಿಸಿದರು.

ಬೆಳಿಗ್ಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ಮಂದಿಯ ಗುಂಪನ್ನು ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ತಡೆದಿದ್ದರು. ದಿಗ್ಬಂಧನ (ಲಾಕ್ ಡೌನ್) ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ಸೂಚಿಸಿದ್ದರು. ಆದರೆ, ತಪ್ಪಿಸಿಕೊಳ್ಳಲೆತ್ನಿಸಿದ ಗುಂಪು  ಪೊಲೀಸರತ್ತ ವಾಹನ ನುಗ್ಗಿಸಲು ಯತ್ನಿಸಿತ್ತು. ಬಳಿಕ ಪೊಲೀಸರ ಮೇಲೆಯೇ ದಾಳಿ ನಡೆಸಿತು ಎಂದು ಪಟಿಯಾಲ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ  ಮನ್ ದೀಪ್ ಸಿಂಗ್  ಸಿದು ತಿಳಿಸಿದರು.

ಘಟನೆಯಲ್ಲಿ ಎಎಸ್‌ಐ ಹರ್ಜೀತ್ ಸಿಂಗ್ ಅವರ ಕೈಕತ್ತರಿಸಲಾಗಿದ್ದು, ಅವರನ್ನು ಮೊದಲಿಗೆ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ  ಚಂಡೀಗಡದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಗಳು ಹೇಳಿದವು. ಹರ್ಜೀತ್ ಸಿಂಗ್ ಅವರಿಗೆ ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ನಂತರ ಬಂದ ವರದಿಗಳು ತಿಳಿಸಿದವು.

No comments:

Advertisement