My Blog List

Thursday, May 7, 2020

ವಿಶಾಖಪಟ್ಟಣ: ವಿಷಾನಿಲ ಸೋರಿಕೆಗೆ ೧೧ ಬಲಿ, ೫೦೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ವಿಶಾಖಪಟ್ಟಣ:  ವಿಷಾನಿಲ ಸೋರಿಕೆಗೆ ೧೧ ಬಲಿ,  ೫೦೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ವಿಶಾಖ ಪಟ್ಟಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಶಾಖಪಟ್ಟಣದ ಆರ್ ಆರ್ ವೆಂಕಟಾಪುರಂ ಗ್ರಾಮದ ಎಲ್ ಜಿ ಪಾಲಿಮರ್ಸ್ ಕೆಮಿಕಲ್ ಕಾರ್ಖಾನೆಯಲ್ಲಿ 2020 ಮೇ 07ರ ಗುರುವಾರ ವಿಷಾನಿಲ ಸೋರಿಕೆಯಾದ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿದಂತೆ ೧೧ ಮಂದಿ ಸಾವನ್ನಪ್ಪಿದ್ದು, ೫೦೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದರು.  ಸುಮಾರು ೩೦೦ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ತೆಗಳಿಗೆ ದಾಖಲು ಮಾಡಲಾಯಿತು.
ವಿಶಾಖಪಟ್ಟಣದ ಕಾರ್ಖಾನೆಯು ೪೦ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ ಬಳಿಕ ಗುರುವಾರ ಕಾರ್ಖಾನೆ ಪುನಾರಂಭಕ್ಕೆ ಯತ್ನಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಮಹಾ ನಿರ್ದೇಶಕರು ತಿಳಿಸಿದರು.
ಕಣ್ಣುಗಳಲ್ಲಿ ಉರಿ ಹಾಗೂ ಉಸಿರಾಟದ ಸಮಸ್ಯೆಗಳಿಗಾಗಿ ಹಲವಾರು ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಘಟನೆಗೆ ಸಂಬಂಧಿಸಿದಂತೆ ಟಿವಿ ಚಾನೆಲ್ಗಳಲ್ಲಿ ಪ್ರಸಾರಗೊಂಡ ವಿಡಿಯೋಗಳು ರಸ್ತೆಗಳಲ್ಲಿ ಜನರು ಬಹುತೇಕ ಪ್ರಜ್ಞಾಹೀನರಾಗಿ ಬಿದ್ದ ದೃಶ್ಯಗಳನ್ನು ಪ್ರಸಾರ ಮಾಡಿವೆ. ಹಲವರನ್ನು ಆಂಬುಲೆನ್ಸ್ಗಳ ಮೂಲಕ ಆಸ್ಪತ್ರೆಗಳಿಗೆ ಒಯ್ದರೆ, ಇತರ ಹಲವರು ನೆರವಿಗಾಗಿ ಮೊರೆಯಿಡುತ್ತಿದ್ದ ದೃಶ್ಯಗಳು ಕಂಡು ಬಂದವು. ಕೈಗಾರಿಕಾ ಸೈರನ್ ಹಿನ್ನೆಲೆಯಲ್ಲಿ ಮೊಳಗುತ್ತಿದ್ದ ವಿಡಿಯೋ ಒಂದರಲ್ಲಿ ರಸ್ತೆ ವಿಭಜಕದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿಯನ್ನು ಪುಟ್ಟ ಮಗುವೊಂದು ಎಬ್ಬಿಸಲು ಯತ್ನಿಸುತ್ತಿದ್ದ ಹೃದಯ ವಿದ್ರಾವಕ ದೃಶ್ಯ ಪ್ರಸಾರಗೊಂಡಿತು.

ಗ್ರೇಟರ್ ವಿಶಾಖಪಟ್ಟಣಂ ಮುನಿಸಿಪಲ್ ಕಾರ್ಪೋರೇಷನ್ ಟ್ವೀಟ್ ಮೂಲಕ ಘಟನೆಯನ್ನು ದೃಢ ಪಡಿಸಿದ್ದಲ್ಲದೆ, ಕಾರ್ಖಾನೆಗೆ ಸಮೀಪದ ಕಾಲೋನಿಗಳು, ಗ್ರಾಮಗಳಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳುವಂತೆ ಮನವಿ ಮಾಡಿತು.

ಎಲ್ ಜಿ ಪಾಲಿಮರ್ಸ್ ಕೈಗಾರಿಕೆಯು ೧೯೬೧ರಲ್ಲಿ ಹಿಂದುಸ್ಥಾನ ಪಾಲಿಮರ್ಸ್ ಹೆಸರಿನಲ್ಲಿ ೧೯೬೧ರಲ್ಲಿ ಆರಂಭವಾಗಿತ್ತು. ಕಂಪೆನಿಯು ಪಾಲಿಸ್ಟೈರೇನ್ ಮತ್ತು ಸಹ ಪಾಲಿಮರ್ಸ್ನ್ನು ವಿಶಾಖಪಟ್ಟಣದಲ್ಲಿ ಉತ್ಪಾದಿಸುತ್ತಿದೆ. ೧೯೭೮ರಲ್ಲಿ ಕಂಪೆನಿಯು ಮೆಕ್ ಡೊವೆಲ್ ಮತ್ತು ಯುಬಿ ಸಮೂಹದ ಕಂಪೆನಿಯೊಂದಿಗೆ ವಿಲೀನಗೊಂಡಿತ್ತು.

ಒಂದು ಕೋಟಿ ರೂಪಾಯಿ ಪರಿಹಾರ
ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ ರೆಡ್ಡಿ ಅವರು ದುರಂತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ತಲಾ ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ವೆಂಟಿಲೇಟರುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ತಲಾ ೧೦ ಲಕ್ಷ ರೂಪಾಯಿಗಳ ಪರಿಹಾg, ಆಸ್ಪತ್ರೆಗೆ ದಾಖಲಾಗಿರುವ ಆದರೆ ವೆಂಟಿಲೇಟರಿನಲ್ಲಿ ಇಲ್ಲದೇ ಇರುವ ಇತರ ವ್ಯಕ್ತಿಗಳಿಗೆ ಲಕ್ಷ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಎಂದು ಜಗನ್ ಹೇಳಿದರು.

ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ ೨೫,೦೦೦ ರೂಪಾಯಿ ಮತ್ತು ಸುತ್ತಮುತ್ತಣ ಗ್ರಾಮಗಳಲ್ಲಿ ಅನಿಲ ಸೋರಿಕೆಯಿಂದ ತೊಂದರೆಗೆ ಒಳಗಾದ ಪ್ರತಿಯೊಬ್ಬರಿಗೂ ತಲಾ ೧೦,೦೦೦ ರೂಪಾಯಿ ಮತ್ತು ಜಾನುವಾರು ಕಳೆದುಕೊಂಡ ಪ್ರತಿಕುಟುಂಬಗಳಿಗೆ ತಲಾ ೨೦,೦೦೦ ರೂಪಾಯಿ ಹೊರತಾಗಿ ಜಾನುವಾರು ನಷ್ಟದ ಪೂರ್ತಿ ಹಣ ಭರಿಸಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

ಅನಿಲ ಸೋರಿಕೆಯನ್ನು ತಟಸ್ಥಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ದಾಮೋದರ ಗೌತಮ ಸಾವಂಗ್ ವರದಿಗಾರರಿಗೆ ತಿಳಿಸಿದರು.

ಚೆನ್ನಾಗಿ ನೀರು ಕುಡಿಯುವುದು ಮಾತ್ರವೇ ವಿಷಾನಿಲಕ್ಕೆ ಪ್ರತಿವಿಷವಾಗಿದೆ. ಆಸ್ಪತ್ರೆಗೆ ಸೇರಿಸಲಾದ ಸುಮಾರು ೮೦೦ ಮಂದಿಯ ಪೈಕಿ ಬಹುತೇಕರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಘಟನೆ ಹೇಗೆ ಘಟಿಸಿತು ಎಂಬ ಬಗ್ಗೆ ತಿಳಿಯಲು ತನಿಖೆ ನಡೆಸಲಾಗುವುದು ಎಂದು ಸಾವಂಗ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಆಸುಪಾಸಿನ ಕಾಲೋನಿಗಳು ಮತ್ತು ಗ್ರಾಮಗಳ ಜನರು ಗುರುವಾರ ನಿದ್ರಾವಸ್ಥೆಯಲ್ಲಿ ಇದ್ದಾಗ ಗುರುವಾರ ನಸುಕಿನ ಗಂಟೆ ವೇಳೆಗೆ ಗೋಪಾಲಪಟ್ನಂನ ಎಲ್ ಜಿ ಪಾಲಿಮರ್ಸ್ ಲಿಮಿಟೆಡ್ ಘಟಕದಿಂದ ಸ್ಟೈರೇನ್ ವಿಷಾನಿಲವು ಸೋರಿಕೆಯಾಗಿತ್ತು.

ಘಟನೆಯ ಹಿನ್ನೆಲೆಯಲ್ಲಿ ವಿಶಾಖ ಪಟ್ಟಣದ ಸ್ಥಿತಿಗತಿ ಬಗ್ಗೆ ಮಾಹಿತಿ ಲಭಿಸಿದ ತತ್ ಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ಡಿಎಂಎ) ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್
ಆಂದ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಸಂಭವಿಸಿದ ಸ್ಟೈರೇನ್ ವಿಷಾನಿಲ ಸೋರಿಕೆಯಿಂದ ಜನರ ಸಾವು-ನೋವು  ಸಂಭವಿಸಿದ್ದಕ್ಕೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಆಂದ್ರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.

ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ ರೆಡ್ಡಿ ಅವರು ವಿಶಾಖಪಟ್ಟಣಕ್ಕೆ ತೆರಳಿ, ಸಂತ್ರಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕಿಂಗ್ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿದರು.

ವಿಶಾಖಪಟ್ಟಣದ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ ಎಂದು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಜನರ ಸುರಕ್ಷೆ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎನ್ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಜೊತೆಗೆ ವಿಶಾಖಪಟ್ಟಣದ ಸ್ಥಿತಿಗತಿ ಬಗ್ಗೆ ಮಾತುಕತೆ ನಡೆಸಿದ್ದೇನೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಸತತ ನಿಗಾ ಇರಿಸಲಾಗಿದೆ. ವಿಶಾಖ ಪಟ್ಟಣದಲ್ಲಿನ ಪ್ರತಿಯೊಬ್ಬರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟೀಟ್ ಮಾಡಿದರು.

ಎರಡನೇ ಸೋರಿಕೆ ಆಗಿಲ್ಲ
ಎಲ್ಜಿ ಪಾಲಿಮರ್ಸ್ ಆವರಣದಲ್ಲಿ ಎರಡನೇ ಬಾರಿಗೆ ವಿಷಾನಿಲ ಸೋರಿಕೆಯಾಗಿದೆ ಎಂಬ ವರದಿಗಳು ತಪ್ಪು. ನಿರ್ವಹಣಾ ತಂಡವು ವ್ಯವಸ್ಥೆಯ ದುರಸ್ತಿ ಮಾಡುತ್ತಿದೆ, ಸ್ವಲ್ಪ ಹಬೆ ಉಳಿದಿದೆ. ಆದರೆ ಎರಡನೇ ಸೋರಿಕೆ ಆಗಿಲ್ಲ ಎಂದು ಆಂಧ್ರ ಪ್ರದೇಶ ಪೊಲೀಸರು ಟ್ವೀಟ್ ಮಾಡಿದ್ದಾರೆ.

ವಿಶಾಖಪಟ್ಟಣದ ಘಟನೆ ಆತಂಕಕಾರಿ. ಎನ್ ಡಿಎಂಎ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಪರಿಸ್ಥಿತಿ ಬಗ್ಗೆ ನಿರಂತರ ಮತ್ತು ನಿಕಟ ನಿಗಾ ಇಡಲಾಗಿದೆ. ವಿಶಾಖಪಟ್ಟಣದ ಜನರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಜನರ ಜೀವರಕ್ಷಣೆ ತ್ತಮು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ಸರ್ವ ಕ್ರಮ ಕೈಗೊಳ್ಳುವಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ ರೆಡ್ಡಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಆಂದ್ರ ಪ್ರದೇಶ ಮುಖ್ಯಮಂತ್ರಿ ಜೊತೆ ಪರಿಸ್ಥಿತಿ ಬಗ್ಗೆ ಚರ್ಚಿಸಿದ ಪ್ರಧಾನಿಮೋದಿ ಎಲ್ಲ ನೆರವು ಮತ್ತು ಬೆಂಬಲದ ಭರವಸೆ ನೀಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಘಟನೆ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ’ವಿಶಾಖಪಟ್ಟಣಸಮೀಪದ ಕಾರ್ಖಾನೆಯೊಂದರಿಂದ ಅನಿಲ ಸೋರಿಕೆಯಾದ ಸುದ್ದಿ ತಿಳಿದು ಬೇಸರವಾಯಿತು. ಸೋರಿಕೆಯು ಹಲವಾರು ಪ್ರಾಣಗಳನ್ನು ತೆಗೆದುಕೊಂಡಿದೆ. ಸಂತ್ರಸ್ಥರ ಕುಟುಂಬಗಳಿಗೆ ಸಂತಾಪ ವ್ಯಕ್ತ ಪಡಿಸುತ್ತೇನೆ. ಗಾಯಾಳುಗಳು ಚೇತರಿಕೆ ಮತ್ತು ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ರಾಷ್ಟ್ರಪತಿ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ಘಟನೆಗೆ ದುಃಖ ವ್ಯಕ್ತ ಪಡಿಸಿ, ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸಿದರು.

No comments:

Advertisement